ಶುಕ್ರವಾರ, ಡಿಸೆಂಬರ್ 6, 2019
25 °C
19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌: ಔಟಾಗದೇ ಶತಕ ಸಿಡಿಸಿದ ಮನ್‌ಜೋತ್ ಕಾರ್ಲಾ

ಭಾರತಕ್ಕೆ ದಾಖಲೆ ಜಯ

Published:
Updated:
ಭಾರತಕ್ಕೆ ದಾಖಲೆ ಜಯ

ಮೌಂಟ್‌ ಮಾಂಗನೂಯಿ, ನ್ಯೂಜಿಲೆಂಡ್‌: ಸೋಲಿಲ್ಲದೆ ಫೈನಲ್ ತಲುಪಿದ ಭಾರತ ತಂಡ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಶನಿವಾರ ಹೊನಲು ಬೆಳಕಿನಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಎಂಟು ವಿಕೆಟ್‌ಗಳಿಂದ ಬಗ್ಗು ಬಡಿದ ಪೃಥ್ವಿ ಶಾ ಬಳಗ ನಾಲ್ಕನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ದಾಖಲೆ ಬರೆಯಿತು. ಆಸ್ಟ್ರೇಲಿಯಾ ಮೂರು ಬಾರಿ ವಿಶ್ವಕಪ್ ಗೆದ್ದಿದೆ.

ಗುಂಪು ಹಂತದಲ್ಲಿ ಆಸ್ಟ್ರೇಲಿಯಾವನ್ನು 100 ರನ್‌ಗಳಿಂದ ಮಣಿಸಿ ಟೂರ್ನಿಯಲ್ಲಿ ಅಭಿಯಾನ ಆರಂಭಿಸಿದ ಭಾರತ ಅದೇ ತಂಡವನ್ನು ಫೈನಲ್‌ನಲ್ಲೂ ಮಣಿಸಿತು. ರಾಹುಲ್ ದ್ರಾವಿಡ್ ಗರಡಿಯಲ್ಲಿ ಪಳಗಿದ ತಂಡ ಎಲ್ಲ ವಿಭಾಗಗಳಲ್ಲೂ ಶ್ರೇಷ್ಠ ಆಟ ಆಡಿತು. ಆದರೆ ಔಟಾಗದೆ ಅಮೋಘ ಶತಕ ಗಳಿಸಿದ ಆರಂಭಿಕ ಬ್ಯಾಟ್ಸ್‌ಮನ್‌ ಮನ್‌ಜೋತ್ ಕಾರ್ಲಾ ಗೆಲುವಿನ ರೂವಾರಿಯಾದರು; ದೇಶದ ಕಣ್ಮಣಿಯಾದರು.

ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ಭಾರತದ ವೇಗಿ ಮತ್ತು ಸ್ಪಿನ್ ಬೌಲಿಂಗ್ ಬಲೆಯಲ್ಲಿ ಸಿಲುಕಿ ಕೇವಲ 216 ರನ್‌ ಗಳಿಸಿತು. ಟೂರ್ನಿಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತ ಬಂದಿದ್ದ ಭಾರತಕ್ಕೆ ಈ ಗುರಿ ಬೆನ್ನತ್ತುವುದು ಯಾವ ಸಂದರ್ಭದಲ್ಲೂ ಕಠಿಣವಾಗಲಿಲ್ಲ. 67 ಎಸೆತಗಳು ಬಾಕಿ ಇರುವಾಗಲೇ ತಂಡ ಗೆಲುವಿನ ದಡ ಸೇರಿತು.

ಸರಣಿಯುದ್ದಕ್ಕೂ ಭಾರತಕ್ಕೆ ಅತ್ಯಪೂರ್ವ ಆರಂಭ ಒದಗಿಸಿದ ನಾಯಕ ಪೃಥ್ವಿ ಶಾ ಫೈನಲ್‌ನಲ್ಲಿ ಶುಭಮನ್‌ ಗಿಲ್ ಬದಲಿಗೆ ಗಮನ್‌ಜೋತ್ ಕಾರ್ಲಾ ಅವರೊಂದಿಗೆ ಕ್ರೀಸ್‌ಗೆ ಇಳಿದಿದ್ದರು. ಮೊದಲ ವಿಕೆಟ್‌ಗೆ ಇವರಿಬ್ಬರು 71 ರನ್‌ ಸೇರಿಸಿ ತಂಡದ ಗೆಲುವಿಗೆ ಬುನಾದಿ ಹಾಕಿದರು. 131 ರನ್‌ಗಳಿಗೆ ಪೃಥ್ವಿ ಶಾ ಮತ್ತು ಮೂರನೇ ಕ್ರಮಾಂಕದ ಶುಭಮನ್ ಗಿಲ್‌ ಅವರನ್ನು ಕಳೆದುಕೊಂಡ ತಂಡಕ್ಕೆ ಮನ್‌ಜೋತ್ ಆಸರೆಯಾದರು. ಮೂರನೇ ವಿಕೆಟ್‌ಗೆ ಅವರು ಹಾರ್ವಿಕ್ ದೇಸಾಯಿ ಜೊತೆಗೂಡಿ 89 ರನ್‌ ಸೇರಿಸಿದರು.

ಕಾರ್ಲಾ ಕರಾಮತ್ತು: ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 86 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದ್ದ ಮನ್‌ಜೋತ್ ಕಾರ್ಲಾ ಶನಿವಾರ ಮನಮೋಹಕ ಆಟ ಆಡಿದರು. ಸ್ಪಿನ್ನರ್‌ಗಳನ್ನು ಭರ್ಜರಿ ಸಿಕ್ಸರ್‌ಗೆ ಎತ್ತಿದ ಅವರು ವೇಗಿಗಳ ಎಸೆತಗಳನ್ನು ಸೊಗಸಾಗಿ ಡ್ರೈವ್‌ ಮಾಡಿ ಬೌಂಡರಿ ಗಳಿಸಿದರು. ಪಂದ್ಯದ ಕೊನೆಯ (39) ಓವರ್‌ನಲ್ಲಿ ಅವರು ಮೂರಂಕಿ ಮೊತ್ತ ದಾಟಿದರು. ಸುದರ್ಲೆಂಡ್ ಹಾಕಿದ ಈ ಓವರ್‌ನ ಐದನೇ ಎಸೆತವನ್ನು ಹಾರ್ವಿಕ್‌ ದೇಸಾಯಿ ಪಾಯಿಂಟ್ ಕಡೆಯಿಂದ ಬೌಂಡರಿಗೆ ಅಟ್ಟುತ್ತಿದ್ದಂತೆ ಸಹ ಆಟಗಾರರು ಕ್ರೀಸ್‌ನತ್ತ ಧಾವಿಸಿ ಕೇಕೆ ಹಾಕಿದರು. ಭಾರತದ ಬೆಂಬಲಿಗರು ಕುಣಿದು ಕುಪ್ಪಳಿಸಿದರು.ವಿಕೆಟ್ ಕಬಳಿಸಿದ ಸಂಭ್ರಮದಲ್ಲಿ ಭಾರತದ ಕಮಲೇಶ್ ನಾಗರಕೋಟಿ

ಸವಾಲಾದ ಮೆರ್ಲೊ: 32 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ನಂತರ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳು ಭಾರತಕ್ಕೆ ಸುಲಭ ತುತ್ತಾದರು. ಆದರೆ ನಾಲ್ಕನೇ ಕ್ರಮಾಂಕದ ಜೊನಾಥನ್ ಮೆರ್ಲೊ ದಿಟ್ಟ ಉತ್ತರ ನೀಡಿ ಅರ್ಧಶತಕ ಗಳಿಸಿದರು. ನಾಲ್ಕು ವಿಕೆಟ್‌ಗಳಿಗೆ 183 ರನ್‌ ಗಳಿಸಿದ್ದಾಗ ತಂಡ ಸುಲಭವಾಗಿ 250 ರನ್‌ಗಳ ಗಡಿ ದಾಟಲಿದೆ ಎಂದೇ ಲೆಕ್ಕ ಹಾಕಲಾಗಿತ್ತು. ಆದರೆ ಸ್ಪಿನ್ ಬಲೆಯಲ್ಲಿ ಸಿಲುಕಿದ ತಂಡ ಕೊನೆಯ ಆರು ವಿಕೆಟ್‌ಗಳನ್ನು 33 ರನ್‌ಗಳಿಗೆ ಕಳೆದುಕೊಂಡಿತು.

ಸಂಕ್ಷಿಪ್ತ ಸ್ಕೋರ್‌

ಆಸ್ಟ್ರೇಲಿಯಾ: 47.2 ಓವರ್‌ಗಳಲ್ಲಿ 216 (ಜಾಕ್‌ ಎಡ್ವರ್ಡ್ಸ್‌ 28, ಜೊನಾಥನ್ ಮೆರ್ಲೊ 76, ಪರಮ್‌ ಉಪ್ಪಲ್‌ 34, ಮೆಕ್‌ಸ್ವೀನಿ 23; ಇಶಾನ್ ಪೊರೆಲ್‌ 30ಕ್ಕೆ2, ಶಿವ ಸಿಂಗ್ 36ಕ್ಕೆ2, ಕಮಲೇಶ್‌ ನಾಗರಕೋಟಿ 41ಕ್ಕೆ2, ಅನುಕೂಲ್‌ ರಾಯ್‌ 32ಕ್ಕೆ2); ಭಾರತ: 38.5 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 220 (ಪೃಥ್ವಿ ಶಾ 29, ಮನ್‌ಜೋತ್ ಕಾರ್ಲಾ 101, ಶುಭಂ ಗಿಲ್‌ 31, ಹಾರ್ವಿಕ್ ದೇಸಾಯಿ 47). ಫಲಿತಾಂಶ: ಭಾರತಕ್ಕೆ 8 ವಿಕೆಟ್‌ಗಳ ಜಯ; ವಿಶ್ವಕಪ್ ಪ್ರಶಸ್ತಿ. ಪಂದ್ಯಶ್ರೇಷ್ಠ: ಮನ್‌ಜೋತ್ ಕಾರ್ಲಾ (ಭಾರತ), ಟೂರ್ನಿಯ ಶ್ರೇಷ್ಠ ಆಟಗಾರ: ಶುಭ್‌ಮನ್ ಗಿಲ್‌ (ಭಾರತ).

***ಕರ್ನಾಟಕದ ರಾಹುಲ್‌ ದ್ರಾವಿಡ್‌ಗೆ ಒಲಿದ ಭಾಗ್ಯ

ವಿಶ್ವ ಕ್ರಿಕೆಟ್‌ನ ‘ಗೋಡೆ’ ಎಂದೇ ಕರೆಯಲಾಗುವ ಬ್ಯಾಟಿಂಗ್ ದೈತ್ಯ ರಾಹುಲ್‌ ದ್ರಾವಿಡ್‌ ಅವರಿಗೆ ಇದು ಮಹತ್ವದ ಗೆಲುವು. ತಮ್ಮ ವೃತ್ತಿ ಜೀವನದಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗದಿದ್ದ ದ್ರಾವಿಡ್ ಕಳೆದ ಬಾರಿಯೂ ಭಾರತ ತಂಡದ ಕೋಚ್ ಆಗಿದ್ದರು. ಆದರೆ ತಂಡದ ರನ್ನರ್‌ ಅಪ್‌ ಆಗಿತ್ತು.

‘ತಂಡದ ಆಟಗಾರರ ಬಗ್ಗೆ ಅಪಾರ ಹೆಮ್ಮೆ ಇದೆ. ಟೂರ್ನಿಯುದ್ದಕ್ಕೂ ಅವರು ಅಪೂರ್ವ ಆಟ ಆಡಿದ್ದಾರೆ. ಅವರಿಗೆ ಉಜ್ವಲ ಭವಿಷ್ಯ ಇದೆ’ ಎಂದು ಪಂದ್ಯದ ನಂತರ ದ್ರಾವಿಡ್ ಹೇಳಿದರು.

‘ರಾಹುಲ್ ದ್ರಾವಿಡ್ ಅವರಂಥ ಮಹಾನ್ ಕ್ರಿಕೆಟಿಗನಿಂದ ತರಬೇತಿ ಪಡೆಯಲು ಸಾಧ್ಯವಾದುದೇ ಮಹತ್ವದ್ದು. ಕಳೆದ ಎರಡು ವರ್ಷಗಳಿಂದ ಅವರು ವಿಶೇಷ ಕಾಳಜಿ ವಹಿಸಿ ತಂಡವನ್ನು ಸಜ್ಜುಗೊಳಿಸಿದ್ದಾರೆ. ಗೆಲುವಿನ ಶ್ರೇಯಸ್ಸಿನಲ್ಲಿ ಬಹುಪಾಲು ಅವರಿಗೇ ಸಲ್ಲಬೇಕು’ ಎಂದು ನಾಯಕ ಪೃಥ್ವಿ ಶಾ ಅಭಿಪ್ರಾಯಪಟ್ಟರು.

**ಭಾವನೆಗಳನ್ನು ಮಾತಿನಲ್ಲಿ ಬಣ್ಣಿಸಲಾರೆ

‘ಇದು ಅಪೂರ್ವ ಕ್ಷಣ. ಈಗ ನನ್ನಲ್ಲಿ ಮೂಡಿರುವ ಭಾವನೆಗಳನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ತುಂಬ ಸಂತಸವಾಗಿದೆ. ಈ ಟೂರ್ನಿ ನೆನಪಿನ ಬುತ್ತಿಯನ್ನೇ ಕಟ್ಟಿಕೊಟ್ಟಿದೆ ಎಂದಷ್ಟೇ ಹೇಳಬಲ್ಲೆ’ ಎಂದು ಭಾರತ ತಂಡದ ನಾಯಕ ಪೃಥ್ವಿ ಶಾ ಹೇಳಿದರು.

‘ವಿಶ್ವ ಕಪ್ ಗೆಲ್ಲುವುದೆಂದರೆ ದೊಡ್ಡ ಸಾಧನೆ. ತಂಡವನ್ನು ಸಮರ್ಥವಾಗಿ ಮುನ್ನಡೆಸಿದ ಸಾರ್ಥಕತೆ ಇದೆ. ನಾನು ಒತ್ತಡಕ್ಕೆ ಒಳಗಾದಾಗಲೆಲ್ಲ ಸಹ ಆಟಗಾರರು ನನ್ನನ್ನು ಸುತ್ತುವರಿದು ಹೊಸ ತಂತ್ರಗಳನ್ನು ಹೆಣೆಯಲು ನೆರವಾಗಿದ್ದಾರೆ’ ಎಂದು ಅವರು ಹೇಳಿದರು.

**ಗಾಯದ ನೋವಿನಲ್ಲೂ ಆಡಿದ ಇಶಾನ್ ಪೊರೆಲ್‌

ಕೋಲ್ಕತ್ತ : ‘ಪಾದದಲ್ಲಿ ಕಾಣಿಸಿಕೊಂಡ ಗಾಯದಿಂದಾಗಿ ಭಾರತ ತಂಡದ ಇಶಾನ್ ಪೊರೆಲ್‌ ಅವರ ವಿಶ್ವಕಪ್‌ನಲ್ಲಿ ಆಡುವ ಆಸೆ ಕಮರಿ ಹೋಗಿತ್ತು. ಆದರೆ ನೋವಿನಲ್ಲೂ ಆಡಲು ಮುಂದಾದ ಅವರು ಹೆಮ್ಮೆ ತಂದಿದ್ದಾರೆ’ ಎಂದು ಅವರ ಕೋಚ್‌ ಬಿಭಾಷ್ ದಾಸ್ ತಿಳಿಸಿದರು.

‘ಪೊರೆಲ್ ಅವರ ಎಡಗಾಲಿನ ಪಾದದಲ್ಲಿ ಗಾಯಗೊಂಡ ಅವರಿಗೆ ಮೂರು ವಾರಗಳ ವಿಶ್ರಾಂತಿ ಬೇಕಾಗಿತ್ತು. ಆದರೆ ಕೇವಲ 12 ದಿನಗಳಲ್ಲಿ ಅವರು ಆಡಲು ಸಜ್ಜಾಗಿದ್ದರು’ ಎಂದು ಅವರು ವಿವರಿಸಿದರು. ಪಾಕಿಸ್ತಾನ ವಿರುದ್ಧ ನಾಲ್ಕು ವಿಕೆಟ್ ಉರುಳಿಸಿ ತಂಡವನ್ನು ಫೈನಲ್‌ಗೆ ತಲುಪಿಸಲು ಪೊರೆಲ್‌ ನೆರವಾಗಿದ್ದರು. ಫೈನಲ್‌ನಲ್ಲೂ ಎರಡು ವಿಕೆಟ್ ಕಬಳಿಸಿದ್ದರು.

ಪ್ರತಿಕ್ರಿಯಿಸಿ (+)