ಶುಕ್ರವಾರ, ಡಿಸೆಂಬರ್ 6, 2019
25 °C
ಅನಿಲ್ ಚಿಕ್ಕಮಾದು ಅವರಿಗೆ ಟಿಕೆಟ್ ನೀಡಲು ವಿರೋಧ

ಎಚ್.ಡಿ.ಕೋಟೆ; ಕಾಂಗ್ರೆಸ್‌ನಲ್ಲಿ ಭಿನ್ನಮತ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಡಿ.ಕೋಟೆ; ಕಾಂಗ್ರೆಸ್‌ನಲ್ಲಿ ಭಿನ್ನಮತ?

ಎಚ್.ಡಿ.ಕೋಟೆ: ಕ್ಷೇತ್ರದಿಂದ ಅನಿಲ್ ಚಿಕ್ಕಮಾದು ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಲಾಗುತ್ತದೆ ಎಂದು ಸುದ್ದಿ ತಿಳಿಯುತ್ತಿದ್ದಂತೆ ಪಕ್ಷದಲ್ಲಿ ಬಂಡಾಯ ಸ್ಫೋಟಗೊಂಡಿದೆ. ಇದಕ್ಕೆ ಪೂರಕವಾಗಿ ಕೆಲವು ಮುಖಂಡರು ಹಾಗೂ ಕಾರ್ಯಕರ್ತರು ಶನಿವಾರ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಸಭೆ ಸೇರಿ ಚರ್ಚಿಸಿದರು.

ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಅಥವಾ ಸಮಾಜ ಸೇವಕ ಕೃಷ್ಣ ನಾಯಕ ಅವರಿಗೆ ಟಿಕೆಟ್ ನೀಡಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಲಕ್ಷ್ಮಣ್ ಮಾತನಾಡಿ, ‘ತಾಲ್ಲೂಕಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದೆ. ಪ್ರಮುಖ ಮುಖಂಡರಿಗೆ ಟಿಕೆಟ್ ನೀಡಿದರೆ ಮಾತ್ರ ಪಕ್ಷದ ಜಯಗಳಿಸಬಹುದು’ ಎಂದರು.

‘ಅನಿಲ್ ಅವರಿಗೆ ಯಾವುದೇ ಕಾರಣಕ್ಕೂ ಟಿಕೆಟ್ ನೀಡಬಾರದು. ಪಕ್ಷಕ್ಕೆ ಅವರ ಕೊಡುಗೆ ಶೂನ್ಯ. ರಾಜಕೀಯ ಅನುಭವ ಕೂಡ ಕಡಿಮೆ. ಇದರಿಂದ ಪಕ್ಷದ ಹಿರಿಯರು ಮತ್ತು ನಿಷ್ಠಾವಂತರಿಗೆ ಮುಜುಗರ ಉಂಟಾಗಲಿದೆ’ ಎಂದರು.

‘ಪಕ್ಷ ಸಂಘಟನೆ ಹಾಗೂ ಅಭ್ಯರ್ಥಿ ಗೆಲುವಿಗಾಗಿ ಯಾವುದೇ ಪಕ್ಷದ ಮುಖಂಡರು ಬಂದು ದುಡಿಯಲಿ. ಆದರೆ, ಕೇವಲ ಟಿಕೆಟ್ ಗಾಗಿ ಪಕ್ಷಕ್ಕೆ ಬರುವುದು ಸೂಕ್ತವಲ್ಲ. ಕಾರ್ಯಕರ್ತರು ಹಾಗೂ ಮುಖಂಡರ ಅಭಿಪ್ರಾಯ ಪಡೆದು ನಂತರ ಟಿಕೆಟ್ ಘೋಷಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಐದು ಸಾವಿರಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಡಲು ಮಂಗಳವಾರ ಅಂಬೇಡ್ಕರ್ ಭವನದಲ್ಲಿ ಮತ್ತೊಮ್ಮೆ ಸಭೆ ಕರೆಯಲಾಗಿದೆ’ ಎಂದು ಹೇಳಿದರು.

ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಮಚಂದ್ರ ಮತ್ತು ಸಮಾಜ ಸೇವಕ ಕೃಷ್ಣನಾಯಕ ಮಾತನಾಡಿ, ‘ಕಾರ್ಯಕರ್ತರು ಹಾಗೂ ಮುಖಂಡರು ತೆಗೆದುಕೊಳ್ಳುವ ನಿರ್ಧಾರಕ್ಕೆ ನಾವು ಬದ್ಧವಾಗಿದ್ದೇವೆ. ಸಂಸದ ಆರ್.ಧ್ರುವನಾರಾಯಣ ಟಿಕೆಟ್ ಕೊಡಿಸುವ ಭರವಸೆ ನೀಡಿದ್ದರಿಂದ ತಾಲ್ಲೂಕಿನಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿದ್ದೇವೆ’ ಎಂದು ಹೇಳಿದರು.

ಜಿ.ಪಂ ಮಾಜಿ ಸದಸ್ಯ ಬಿ.ವಿ.ಬಸವರಾಜು, ಮುಖಂಡರಾದ ಸಿದ್ದರಾಜು, ಸಿದ್ದಪ್ಪ, ಯತೀಶ್, ನಟರಾಜ್, ನಾಗೇಶ್, ಸಿದ್ದರಾಜು, ಗುಣಪಾಲ, ಶಿವಯ್ಯ, ನರಸಿಂಹ ಮೂರ್ತಿ, ಶಿವಣ್ಣ, ಬಸವರಾಜು, ಪಾಂಡು, ವೈಕುಂಠ ನಾಯಕ, ಬಾಲರಾಜು, ರಮೇಶ, ಸರಗೂರು ಶ್ರೀನಿವಾಸ ಸೇರಿದಂತೆ ಐನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)