ಶುಕ್ರವಾರ, ಡಿಸೆಂಬರ್ 6, 2019
25 °C

ವಾಹನ ದಟ್ಟಣೆಯಲ್ಲಿ ಸಿಲುಕಿದ ಸವಾರರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನ ದಟ್ಟಣೆಯಲ್ಲಿ ಸಿಲುಕಿದ ಸವಾರರು

ಬೆಂಗಳೂರು: ಪರಿವರ್ತನಾ ರ‍್ಯಾಲಿಯ ಸಮಾರೋಪ ಸಮಾರಂಭದಿಂದಾಗಿ ನಗರದ ಅರಮನೆ ಮೈದಾನವನ್ನು ಸಂಪರ್ಕಿಸುವ ಬಳ್ಳಾರಿ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಭಾನುವಾರ ವಾಹನ ಸಂಚಾರ ದಟ್ಟಣೆ ಉಂಟಾಯಿತು.

ಮೈಸೂರು, ಕನಕಪುರ, ಹಳೇ ಮದ್ರಾಸ್‌ ರಸ್ತೆ, ತುಮಕೂರು ರಸ್ತೆ ಮಾರ್ಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಪಕ್ಷದ ಕಾರ್ಯಕರ್ತರು ಬಸ್‌ ಹಾಗೂ ಖಾಸಗಿ ವಾಹನಗಳಲ್ಲಿ ಮೈದಾನಕ್ಕೆ ಬಂದಿದ್ದರು. ಅವರ ವಾಹನಗಳ ನಿಲುಗಡೆಗೆ ಸರ್ಕಸ್‌ ಮೈದಾನ ಹಾಗೂ ಮಾವಿನಕಾಯಿ ಮಂಡಿ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಗೋಕಾರ್ಟಿಂಗ್ ಕ್ಲಬ್‌ ಆವರಣದಲ್ಲಿ ದ್ವಿಚಕ್ರ ವಾಹನ ನಿಲ್ಲಿಸಲು ಅವಕಾಶವಿತ್ತು. ಆದರೆ, ಹಲವರು ವಾಹನಗಳನ್ನು ರಸ್ತೆಯ ಅಕ್ಕ–ಪಕ್ಕದಲ್ಲಿ ನಿಲ್ಲಿಸಿದ್ದರು. ಇದು ವಾಹನ ಸಂಚಾರ ದಟ್ಟಣೆಗೆ ಕಾರಣವಾಯಿತು.

ಬಳ್ಳಾರಿ ರಸ್ತೆಯ ಒಂದು ಪಾರ್ಶ್ವದಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಇನ್ನೊಂದು ಪಾರ್ಶ್ವದಲ್ಲಿ ಜನರು ನಡೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿತ್ತು. ಮೈದಾನ ಎದುರಿನ ರಸ್ತೆಯ ಅರ್ಧ ಭಾಗದಲ್ಲಿ ಬಸ್‌ಗಳು ನಿಂತುಕೊಂಡಿದ್ದವು. ಇದರಿಂದ ನಗರದಲ್ಲಿ ಬೆಳಿಗ್ಗೆ 10 ಗಂಟೆಯಿಂದಲೇ ದಟ್ಟಣೆ ಕಂಡುಬಂತು.

ನಗರದಿಂದ ವಿಮಾನ ನಿಲ್ದಾಣದತ್ತ ಹೊರಟಿದ್ದ ವಾಹನಗಳು, ವಿಂಡ್ಸರ್‌ ಮ್ಯಾನರ್‌ ಸೇತುವೆಯಿಂದಲೇ ದಟ್ಟಣೆಯಲ್ಲಿ ಸಿಲುಕಿದವು. ನಿಲ್ದಾಣದಿಂದ ನಗರಕ್ಕೆ ಬರುತ್ತಿದ್ದ ವಾಹನಗಳು, ಮೇಖ್ರಿ ವೃತ್ತ ಮತ್ತು ಸಿ.ವಿ.ರಾಮನ್‌ ರಸ್ತೆ ಕೆಳಸೇತುವೆಯಲ್ಲಿ ಗಂಟೆಗಟ್ಟಲೇ ನಿಲ್ಲಬೇಕಾಯಿತು. ವಾಹನಗಳ ಮಧ್ಯೆಯೇ ನಡೆದುಕೊಂಡು ಹೋಗಿ ರಸ್ತೆಯನ್ನು ದಾಟಲು ಜನರು ಪ್ರಯತ್ನಿಸಿದರು. ಸ್ಥಳದಲ್ಲಿದ್ದ ಪೊಲೀಸರು, ಚಲಿಸುತ್ತಿದ್ದ ವಾಹನಗಳನ್ನು ತಡೆದು ರಸ್ತೆ ದಾಟಲು ಜನರಿಗೆ ಅನುಕೂಲ ಮಾಡಿಕೊಟ್ಟರು.‌

ಚಾಲುಕ್ಯ ವೃತ್ತ, ವಿಧಾನಸೌಧದ ಹಿಂಭಾಗ, ವಸಂತನಗರ, ಸದಾಶಿವನಗರ, ಮಲ್ಲೇಶ್ವರ, ಸ್ವಾತಂತ್ರ್ಯ ಉದ್ಯಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲೂ ದೂರದ ಊರುಗಳಿಂದ ಬಂದ ಕೆಲವು ವಾಹನಗಳನ್ನು ನಿಲ್ಲಿಸಲಾಗಿತ್ತು. ಕಾರ್ಯಕರ್ತರು, ಅಲ್ಲಿಂದ ನಡೆದುಕೊಂಡು ಹೋಗಿ ಮೈದಾನ ತಲುಪಿದರು. ಅವರು ಹೋದ ರಸ್ತೆಯಲ್ಲೆಲ್ಲ ವಾಹನ ದಟ್ಟಣೆ ಕಂಡುಬಂತು.

‘ಕೆಲವು ವಾಹನಗಳು ಅಡ್ಡಾದಿಡ್ಡಿಯಾಗಿ ಸಂಚರಿಸಿದ್ದರಿಂದ, ಉಳಿದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು. ಬಳ್ಳಾರಿ ರಸ್ತೆಯಲ್ಲಿ ವಾಹನಗಳು 1 ಕಿ.ಮೀ ಸಂಚರಿಸಲು 50 ನಿಮಿಷ ಬೇಕಾಯಿತು. ನಗರದ ಶೇ 60ರಷ್ಟು ಭಾಗದಲ್ಲಿ ದಟ್ಟಣೆ ಕಂಡುಬಂದು’ ಎಂದು ಸಂಚಾರ ಪೊಲೀಸರು ತಿಳಿಸಿದರು.

ಸಂಜೆ ಹೆಚ್ಚಿನ ದಟ್ಟಣೆ: ಸಮಾರಂಭ ಮುಗಿದ ಬಳಿಕವೂ ನಗರದಲ್ಲಿ ಹೆಚ್ಚಿನ ದಟ್ಟಣೆ ಕಂಡುಬಂತು.

ಕಾರ್ಯಕರ್ತರು, ತರಾತುರಿಯಲ್ಲಿ ತಮ್ಮ ಊರಗಳಿಗೆ ಹೋಗುವುದಕ್ಕಾಗಿ ಏಕಕಾಲದಲ್ಲಿ ಮೈದಾನದಿಂದ ಹೊರಬಂದು ವಾಹನಗಳಲ್ಲಿ ಹೊರಟರು. ಬಳ್ಳಾರಿ ರಸ್ತೆಯಲ್ಲಿ ಸಂಜೆ 6 ಗಂಟೆಯಿಂದ ದಟ್ಟಣೆ ಇತ್ತು. ವಾಹನಗಳು ನಿಂತಲ್ಲಿಂದ ಕದಲಲಿಲ್ಲ. ರಾತ್ರಿ 8 ಗಂಟೆ ಬಳಿಕವೇ ಸಂಚಾರ ವ್ಯವಸ್ಥೆಯಲ್ಲಿ ಸುಧಾರಣೆ ಕಂಡುಬಂತು. ರ‍್ಯಾಲಿಯಿಂದಾಗಿ ಮೈಸೂರು ರಸ್ತೆ, ತುಮಕೂರು ರಸ್ತೆ, ಕನಕಪುರ ರಸ್ತೆ, ದೇವನಹಳ್ಳಿ ರಸ್ತೆಗಳಲ್ಲೂ ವಾಹನ ದಟ್ಟಣೆ ಉಂಟಾಯಿತು.

ಪ್ರಧಾನಿ ಸಲುವಾಗಿ ವಾಹನ ತಡೆದ ಪೊಲೀಸರು

ನವದೆಹಲಿಯಿಂದ ಎಚ್ಎಎಲ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ, ಅಲ್ಲಿಂದ ಹೆಲಿಕಾಪ್ಟರ್‌ನಲ್ಲಿ ಹೆಬ್ಬಾಳದ ವಾಯುನೆಲೆಗೆ  ಬಂದರು. ರಸ್ತೆ ಮಾರ್ಗವಾಗಿ ಅರಮನೆ ಮೈದಾನದತ್ತ ಹೊರಟರು. ಅವರ ಸಂಚಾರಕ್ಕೆ ಅನುಕೂಲ ಕಲ್ಪಿಸಲು ರಸ್ತೆಯುದ್ದಕ್ಕೂ ಸಾರ್ವಜನಿಕರ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದರು. ಪ್ರಧಾನಿಯವರು ಮೈದಾನ ತಲುಪುವವರೆಗೂ ಸಾರ್ವಜನಿಕರು ರಸ್ತೆಯಲ್ಲೇ ಕಾಯುವಂತಾಯಿತು.

ಮೋದಿ ಅವರನ್ನು ನೋಡಲೆಂದು ನೂರಾರು ಮಂದಿ ರಸ್ತೆಯ ಅಕ್ಕ–ಪಕ್ಕದಲ್ಲಿ ನಿಂತುಕೊಂಡಿದ್ದರು. ಮೋದಿ ಕಾರು ಹೋಗುತ್ತಿದ್ದಂತೆ, ಅವರೆಲ್ಲ ರಸ್ತೆಯತ್ತ ಧಾವಿಸಿ ಬಂದರು. ಇದರಿಂದಾಗಿ ವಾಹನ ಸಂಚಾರಕ್ಕೂ ಅಡ್ಡಿಯಾಯಿತು.

ದಟ್ಟಣೆಯಲ್ಲಿ ಸಿಲುಕಿದ್ದ ಚಾಲಕರು, ಕಾರಿನಿಂದ ಇಳಿದು ಸೆಲ್ಫಿ ತೆಗೆದುಕೊಳ್ಳುವಲ್ಲಿ ನಿರತರಾಗಿದ್ದು ಕಂಡುಬಂತು.

‘ಸ್ನೇಹಿತರನ್ನು ಭೇಟಿಯಾಗಲು ಮಧ್ಯಾಹ್ನ 2.30ರ ಸುಮಾರಿಗೆ ಎಂ.ಜಿ.ರಸ್ತೆಗೆ ಬೈಕ್‌ನಲ್ಲಿ ಹೊರಟಿದ್ದೆ. ಮೇಖ್ರಿ ವೃತ್ತಕ್ಕೆ ಬರುತ್ತಿದ್ದಂತೆ ದಟ್ಟಣೆಯಲ್ಲಿ ಸಿಲುಕಿದೆ. ಅದೇ ಮಾರ್ಗವಾಗಿ ಪ್ರಧಾನಿ ಅರಮನೆ ಮೈದಾನದತ್ತ ಹೊರಟಿದ್ದರಿಂದ ಸಾರ್ವಜನಿಕರ ವಾಹನಗಳನ್ನು ಪೊಲೀಸರು ತಡೆದು ನಿಲ್ಲಿಸಿದ್ದರು. ಗಂಟೆಗಟ್ಟಲೇ ಒಂದೇ ಕಡೆ ನಿಲ್ಲುವಂತಾಯಿತು’ ಎಂದು ಆರ್‌.ಟಿ.ನಗರದ ನಿವಾಸಿ ಮೋಹನ್‌ ತಿಳಿಸಿದರು.

‘ಪ್ರಧಾನಿ 4.10ರ ಸುಮಾರಿಗೆ ಮೈದಾನದ ಕಡೆಗೆ ಹೋದರು. ಆ ನಂತರವೂ ದಟ್ಟಣೆ ಕಡಿಮೆ ಆಗಲಿಲ್ಲ. ಹೀಗಾಗಿ ಸಿ.ವಿ.ರಾಮನ್‌ ರಸ್ತೆ ಮಾರ್ಗವಾಗಿ ಯಶವಂತಪುರಕ್ಕೆ ಹೋಗಿ, ಅಲ್ಲಿಯೇ ಬೈಕ್‌ ನಿಲ್ಲಿಸಿ ಮೆಟ್ರೊದಲ್ಲಿ ಎಂ.ಜಿ.ರಸ್ತೆ ತಲುಪಿದೆ. 15 ನಿಮಿಷದಲ್ಲಿ ಎಂ.ಜಿ.ರಸ್ತೆಗೆ ಹೋಗಬೇಕಿದ್ದ ನಾನು, ಎರಡೂವರೆ ತಾಸು ತಡವಾಗಿ ಹೋಗಬೇಕಾಯಿತು’ ಎಂದರು.

‘ಪ್ರಧಾನ ಸೇವಕನ ಮಾತು ನಂಬಲಾಗದು’

‘ದೇಶದ ಯಜಮಾನ ಅಲ್ಲ, ಪ್ರಧಾನ ಸೇವಕ ಎಂದು ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ಹೇಳುತ್ತಾರೆ. ಆ ಮಾತನ್ನು ನಂಬುವ ಪರಿಸ್ಥಿತಿಯನ್ನು ಅವರು ನಿರ್ಮಾಣ ಮಾಡಿಕೊಂಡಿಲ್ಲ’ ಎಂದು ಸಾಹಿತಿ ಚಂದ್ರಶೇಖರ ಪಾಟೀಲ ಹೇಳಿದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು,  ‘ಕರ್ನಾಟಕದ ಯಾವುದೇ ಸಮಸ್ಯೆಗೂ ಅವರು ಸ್ಪಂದಿಸಿಲ್ಲ. ಇದು ವಾಸ್ತವ’ ಎಂದರು.

‘ಪ್ರಧಾನ ಮಂತ್ರಿಯಿಂದ ಪ್ರತಿಕ್ರಿಯೆ ಹಾಗೂ ಪ್ರತಿಸ್ಪಂದನೆಯನ್ನು ನಾವು ಬಯಸುತ್ತಿದ್ದೇವೆ. ಅದು ಸಕಾರಾತ್ಮಕವೇ ಆಗಿರಲಿ ಅಥವಾ ನಕಾರಾತ್ಮಕವಾಗಿರಲಿ. ಅವರು ಮೌನಿಯಾಗಿ ಉಳಿದರೆ, ಅದಕ್ಕೆ ನಮ್ಮ ಧಿಕ್ಕಾರವಿದೆ’ ಎಂದರು.

ನಿರಾಕ್ಷೇಪಣಾ ಪತ್ರ ನೀಡಲಿ:

ಕಳಸಾ ಬಂಡೂರಿ ನಾಲಾ ಮಲಪ್ರಭಾ ಜೋಡಣೆ ಯುವ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಮಾತನಾಡಿ, ‘ಈ ಯೋಜನೆ ಜಾರಿಗೆ ತಕರಾರಿಲ್ಲವೆಂದು ಕೇಂದ್ರ ಸರ್ಕಾರವು ನಿರಾಕ್ಷೇಪಣಾ ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.

‘ಮಹದಾಯಿ ನದಿ ಜೋಡಣೆ ಯೋಜನೆ ವಿವಾದಕ್ಕೆ ಮಾತ್ರ ನ್ಯಾಯಾಧೀಕರಣ ರಚನೆಯಾಗಿದೆ. ಕಳಸಾ, ಬಂಡೂರಿ, ಹಳತಾರ, ಗುರ್ಕಿ, ಚೋರ್ಲಾ, ಫೋಟ್ಲಾ ಹಳ್ಳಗಳನ್ನು ಮಲಪ್ರಭೆಗೆ ಹರಿಸುವ ಯೋಜನೆಗಲ್ಲ. ಈ ಹಳ್ಳಗಳನ್ನು ಜೋಡಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಅದರತ್ತ ಗಮನ ಹರಿಸಬೇಕು. ಮಹದಾಯಿ ವಿವಾದವನ್ನು ಇತ್ಯರ್ಥಪಡಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕೆಲ ಹೋರಾಟಗಾರರಿಗೆ ಯೋಜನೆಯ ಮೂಲ ಉದ್ದೇಶವೇ ಗೊತ್ತಿಲ್ಲ. ವೈಯಕ್ತಿಕ ಹಿತಾಸಕ್ತಿಗಾಗಿ ಹೋರಾಟದ ದಿಕ್ಕು ತಪ್ಪಿಸುತ್ತಿದ್ದಾರೆ. ರಾಜಕೀಯ ಮಾಡುತ್ತಿದ್ದಾರೆ. ಹೀಗಾಗಿ ಈ ವಿವಾದವು ಮತ್ತಷ್ಟು ಜಟಿಲವಾಗುತ್ತಿದೆ’ ಎಂದರು.

ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ:

ಕಪ್ಪು ಬಣ್ಣದ ಬಟ್ಟೆ ಹಾಗೂ ಕೈಪಟ್ಟಿ ಕಟ್ಟಿಕೊಂಡು ವಾಟಾಳ್‌ ನಾಗರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ವಾಟಾಳ್‌ ನಾಗರಾಜ್ ಮಾತನಾಡಿ, ‘ನಾವು ಶಾಂತಿಯುತ ಪ್ರತಿಭಟನೆ ಮಾಡುತ್ತೇವೆ. ಕೇಂದ್ರ ಸರ್ಕಾರ ಇದರಿಂದ ಎಚ್ಚೆತ್ತುಕೊಳ್ಳಬೇಕು. ನಮ್ಮ ಬೇಡಿಕೆಗೆ ಬೆಲೆ ಕೊಟ್ಟು ಪ್ರಧಾನ ಮಂತ್ರಿಯವರು ಸಮಸ್ಯೆ ಇತ್ಯರ್ಥಪಡಿಸುವ ಘೋಷಣೆ ಮಾಡಬೇಕು. ಇಲ್ಲವಾದರೆ ನಮ್ಮ ಹೋರಾಟ ಮುಂದುವರಿಯಲಿದೆ’ ಎಂದರು.

ಪ್ರತಿಕ್ರಿಯಿಸಿ (+)