ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವ ಚಿತ್ರಣ ಕಳವಳಕಾರಿ

Last Updated 4 ಫೆಬ್ರುವರಿ 2018, 20:31 IST
ಅಕ್ಷರ ಗಾತ್ರ

ಬೆಂಗಳೂರು: 2018–19ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಗ್ರಾಮೀಣ ಭಾರತಕ್ಕೆ ಕೊಡುಗೆಗಳ ಮಹಾಪೂರ ಹರಿಸಲಾಗಿದೆ ಎನ್ನುವ ಆರಂಭಿಕ ಸಂಭ್ರಮ ತಣ್ಣಗಾಗುತ್ತಿದ್ದಂತೆ, ಬಜೆಟ್‌ ಪ್ರಸ್ತಾವಗಳಲ್ಲಿನ ಕಳವಳಕಾರಿ ವಾಸ್ತವ ಚಿತ್ರಣ ಒಂದೊಂದಾಗಿ ಅನಾವರಣಗೊಳ್ಳುತ್ತಿದೆ.

ಒಂದೆಡೆ ಸರ್ಕಾರ ವಿತ್ತೀಯ ಕೊರತೆಯ ಗುರಿ ತಲುಪಲು ವಿಫಲಗೊಂಡಿದ್ದರೆ, ಇನ್ನೊಂದೆಡೆ 2018–19ನೇ ಹಣಕಾಸು ವರ್ಷದ ವಿತ್ತೀಯ ಕೊರತೆಗೆ ಕಡಿವಾಣ ಹಾಕಲು ತಾತ್ಕಾಲಿಕ ಕ್ರಮಗಳನ್ನಷ್ಟೇ ನೆಚ್ಚಿಕೊಳ್ಳಲಾಗಿದೆ.

2018ರ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದ ಒಟ್ಟು ವೆಚ್ಚ ₹ 21.57 ಲಕ್ಷ ಕೋಟಿಗಳಷ್ಟು ಇರಲಿದೆ ಎಂದು ಪರಿಷ್ಕರಿಸಲಾಗಿದೆ. ಬಜೆಟ್‌ ಅಂದಾಜು ₹ 21.47 ಲಕ್ಷ ಕೋಟಿಗಳಷ್ಟಿತ್ತು. ಈ ಮೂಲಕ ವಿತ್ತೀಯ ಕೊರತೆ ಗುರಿಯಲ್ಲಿ ಶೇ 0.30ರಷ್ಟು ಉಲ್ಲಂಘನೆಯಾಗಿದೆ.  ವಿತ್ತೀಯ ಕೊರತೆಯನ್ನು ‘ಜಿಡಿಪಿ’ಯ ಶೇ 3.2ರ ಬದಲಿಗೆ ಶೇ 3.5ಕ್ಕೆ ಹೆಚ್ಚಿಸಲಾಗಿದೆ.

ಗ್ರಾಮೀಣ ಭಾರತಕ್ಕೆ ಹೆಚ್ಚಿಸಿರುವ ಅನುದಾನವು ವಾಸ್ತವದಲ್ಲಿ ಗಮನಾರ್ಹ ಪ್ರಮಾಣದಲ್ಲೇನೂ ಇಲ್ಲ. ಸರ್ಕಾರದ ವರಮಾನ ವೃದ್ಧಿಯನ್ನು ಜಿಡಿಪಿಯ ಶೇ 0.20ರಷ್ಟಕ್ಕೆ  ನಿಗದಿಪಡಿಸಿರುವುದು ಕೂಡ ಆರ್ಥಿಕ ವೃದ್ಧಿಗೆ ಹೆಚ್ಚೇನೂ ಒತ್ತು ನೀಡುವುದಿಲ್ಲ ಎಂದು ವಿಶ್ವದ ಮುಂಚೂಣಿ ಸಂಪತ್ತು ನಿರ್ವಹಣಾ ಸಂಸ್ಥೆ ಯುಬಿಎಸ್‌ ತನ್ನ ಸಂಶೋಧನಾ ವರದಿಯಲ್ಲಿ ಹೇಳಿದೆ.

ಮುಂದಿನ  ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ₹ 5.94 ಲಕ್ಷ ಕೋಟಿಯಿಂದ ₹ 6.23 ಲಕ್ಷ ಕೋಟಿಗೆ ಪರಿಷ್ಕರಣೆ ಮಾಡಿರುವುದರಿಂದ  (‘ಜಿಡಿಪಿ’ಯ ಶೇ 3.3) ಹಣದುಬ್ಬರ ಹೆಚ್ಚಳಕ್ಕೆ ಕಾರಣವಾಗಲಿದೆ ಎಂದೂ ‘ಯುಬಿಎಸ್‌’ ವಿಶ್ಲೇಷಿಸಿದೆ.

ಪ್ರಧಾನಿಯ ಮೆಚ್ಚಿನ ಕಾರ್ಯಕ್ರಮ ‘ಭಾರತದಲ್ಲಿಯೇ ತಯಾರಿಸಿ’ ಆಂದೋಲನಕ್ಕೆ ಬಜೆಟ್‌ನಲ್ಲಿ ಹೆಚ್ಚಿನ ಆದ್ಯತೆ ಸಿಕ್ಕಿಲ್ಲ. ಕೆಲ ಸರಕುಗಳ ಮೇಲೆ ಕಸ್ಟಮ್ಸ್‌ ಸುಂಕ ವಿಧಿಸಿರುವುದು ಈ ಕಾರ್ಯಕ್ರಮಕ್ಕೆ ಕೆಲಮಟ್ಟಿಗೆ ಉತ್ತೇಜನ ನೀಡಲಿದೆಯಷ್ಟೆ.  ಮೊಬೈಲ್‌, ಟಿವಿಗಳ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ 15ರಿಂದ ಶೇ 20ಕ್ಕೆ ಹೆಚ್ಚಿಸಲಾಗಿದೆ. ದೇಶವು ಡಿಜಿಟಲ್‌ ಹಾದಿಯಲ್ಲಿ ಸಾಗುತ್ತಿರುವುದಕ್ಕೆ ಇದು ಅಡಚಣೆ ಒಡ್ಡಲಿದೆ.

ಹೊಸ ಉದ್ಯೋಗ ಅವಕಾಶಗಳ ಸೃಷ್ಟಿ ಬಗ್ಗೆಯೂ ಬಜೆಟ್‌ನಲ್ಲಿ ಹೆಚ್ಚಿನ ವಿವರಗಳಿಲ್ಲ. ಒಟ್ಟಾರೆ ಜನಸಂಖ್ಯೆಯ ಶೇ 51ರಷ್ಟು ಜನರಿಗೆ ಕೃಷಿ ವಲಯವು ಉದ್ಯೋಗ ಅವಕಾಶ ಕಲ್ಪಿಸಿಕೊಟ್ಟಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಈ ವಲಯದ ಕೊಡುಗೆ ಶೇ 12ರಿಂದ ಶೇ 13ರಷ್ಟು ಮಾತ್ರ ಇದೆ.

ಹೀಗಾಗಿ ಈ ವಲಯದಲ್ಲಿ ಮರೆಮಾಚಿದ ನಿರುದ್ಯೋಗ ಗಮನಾರ್ಹ ಪ್ರಮಾಣದಲ್ಲಿ ಇರುವುದು ಇದರಿಂದ ಸಾಬೀತಾಗುತ್ತದೆ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ರೈತರು, ಬಡವರು ಮತ್ತು ಮಧ್ಯಮವರ್ಗದವರಿಗೆ ಹೆಚ್ಚಿನ ಕೊಡುಗೆ ನೀಡದೇ ಅವರೆಲ್ಲರನ್ನು ಸಂತೃಪ್ತಗೊಳಿಸಲು  ತೋರಿಕೆಯ ಭಾರಿ ಕಸರತ್ತು ನಡೆಸಿರುವುದು ಕಂಡು ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT