ಶುಕ್ರವಾರ, ಡಿಸೆಂಬರ್ 6, 2019
25 °C

ಅಗ್ನಿಶಾಮಕ ಠಾಣೆ ಕಟ್ಟಡ ಉದ್ಘಾಟನೆಗೆ ಸಜ್ಜು

ಆರ್‌.ಜಿತೇಂದ್ರ Updated:

ಅಕ್ಷರ ಗಾತ್ರ : | |

ಅಗ್ನಿಶಾಮಕ ಠಾಣೆ ಕಟ್ಟಡ ಉದ್ಘಾಟನೆಗೆ ಸಜ್ಜು

ರಾಮನಗರ: ಜಿಲ್ಲಾ ಕೇಂದ್ರವಾಗಿ ಹತ್ತು ವರ್ಷ ಕಳೆದ ಬಳಿಕ ಕಡೆಗೂ ರಾಮನಗರ ಅಗ್ನಿಶಾಮಕ ಠಾಣೆಗೆ ಸ್ವಂತ ಕಟ್ಟಡದ ಭಾಗ್ಯ ಕೂಡಿಬಂದಿದೆ. ಬೆಂಗಳೂರು ಮೈಸೂರು ಹೆದ್ದಾರಿಯ ಮಗ್ಗಲಿಗೆ ನಿರ್ಮಿಸಿರುವ ಹೊಸ ಕಟ್ಟಡವು ಉದ್ಘಾಟನೆಗೆ ಸಜ್ಜುಗೊಂಡಿದೆ.

ತಾಲ್ಲೂಕಿನ ಅಗ್ನಿಶಾಮಕ ಠಾಣೆಯ ಜೊತೆಗೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಕಚೇರಿಗೂ ಈ ಹೊಸ ಕಟ್ಟಡದಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿವಿಧ ಸಾಮರ್ಥ್ಯದ ಐದು ವಾಹನಗಳ ನಿಲುಗಡೆಗೆ ಇಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿದೆ. ಈಗಾಗಲೇ ಕಟ್ಟಡದ ನಿರ್ಮಾಣ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟಿಸಲು ಯೋಜಿಸಲಾಗಿದೆ.

2007ರ ಆಗಸ್ಟ್‌ 23ರಂದು ರಾಮನಗರವು ಜಿಲ್ಲಾ ಕೇಂದ್ರವಾಗಿ ಘೋಷಣೆಯಾಯಿತು. ತದನಂತರದಲ್ಲಿ ವಿವಿಧ ಸರ್ಕಾರಿ ಇಲಾಖೆಗಳಿಗೆ ಭವನಗಳನ್ನು ನಿರ್ಮಿಸಲಾಯಿತು. ಪೊಲೀಸ್‌ ಠಾಣೆಗಳಿಗೂ ಹೊಸ ಕಟ್ಟಡದ ಭಾಗ್ಯ ಕೂಡಿಬಂತು. ಆದರೆ, ಅಗ್ನಿಶಾಮಕ ಠಾಣೆ ಮಾತ್ರ ಗೌಸಿಯಾ ಕಾಲೇಜು ಬಳಿ ರೇಷ್ಮೆ ಇಲಾಖೆಗೆ ಸೇರಿದ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಲೇ ಬಂದಿದೆ. ಇದೇ ತಿಂಗಳ ಒಳಗೆ ಅಲ್ಲಿಂದ ಹೊಸ ಕಟ್ಟಡಕ್ಕೆ ಠಾಣೆ ಸ್ಥಳಾಂತರಗೊಳ್ಳಲಿದೆ.

ಏನಿದರ ವಿಶೇಷ: 1ಎಕರೆ 30 ಗುಂಟೆಯಷ್ಟು ಸರ್ಕಾರಿ ಜಮೀನಿನಲ್ಲಿ ಅಗ್ನಿಶಾಮಕ ದಳಕ್ಕೆ ಅನುಕೂಲವಾಗುವ ವಿನ್ಯಾಸದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದೆ. ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಜೊತೆಗೆ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ, ನಿಸ್ತಂತು ಕೊಠಡಿ, ಸಂಗ್ರಹಣಾ ಕೊಠಡಿ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಹಾಗೂ ಠಾಣಾಧಿಕಾರಿ ಕಚೇರಿಗಳನ್ನು ಇದು ಒಳಗೊಂಡಿದೆ. ಇದಲ್ಲದೆ ಸಿಬ್ಬಂದಿ ಹಾಗೂ ಆಸಕ್ತರಿಗಾಗಿ ತರಬೇತಿಗಾಗಿ ಪ್ರತ್ಯೇಕ ಕೊಠಡಿಯೊಂದನ್ನು ನಿರ್ಮಿಸಲಾಗಿದೆ.

ಸಿಬ್ಬಂದಿಗಾಗಿ ವಿಶ್ರಾಂತಿ ಗೃಹ: ಕಚೇರಿಯ ಪಕ್ಕದಲ್ಲಿಯೇ ಅಗ್ನಿಶಾಮಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಾಗಿ ಪ್ರತ್ಯೇಕ ವಸತಿ ಗೃಹಗಳನ್ನೂ ನಿರ್ಮಿಸಲಾಗಿದೆ. ಒಟ್ಟು 15 ಮನೆಗಳು ನಿರ್ಮಾಣವಾಗಿದ್ದು, ಇದರಲ್ಲಿ 3 ಅಧಿಕಾರಿಗಳಿಗೆ ಮೀಸಲಾಗಿದ್ದರೆ, ಉಳಿದ 12 ಅನ್ನು ಸಿಬ್ಬಂದಿಯ ಉಪಯೋಗಕ್ಕಾಗಿ ನೀಡಲು ನಿರ್ಧರಿಸಲಾಗಿದೆ.

‘ಸಿಬ್ಬಂದಿಯ ವಸತಿಗೃಹಗಳನ್ನೂ ವ್ಯವಸ್ಥಿತವಾಗಿ ಕಟ್ಟಲಾಗಿದೆ. ಪ್ರತಿಯೊಂದು ಮನೆಯೂ ಮಾಸ್ಟರ್‌ ಬೆಡ್‌ರೂಮ್‌ ಅನ್ನು ಒಳಗೊಂಡಿರುವುದು ಇಲ್ಲಿನ ವಿಶೇಷ. ಇದರೊಟ್ಟಿಗೆ ಮಾಡ್ಯುಲರ್‌ ಕಿಚನ್‌ ಸೌಲಭ್ಯವೂ ಇದೆ. ಒಟ್ಟಾರೆ ವ್ಯವಸ್ಥಿತ ರೂಪದ ಮನೆಗಳು ಸಿಬ್ಬಂದಿಗೆ ದೊರೆಯಲಿವೆ’ ಎನ್ನುತ್ತಾರೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಂಜುನಾಥ್‌.

ಪೊಲೀಸ್‌ ಗೃಹ ನಿರ್ಮಾಣ ನಿಗಮವು ಈ ಎಲ್ಲ ಕಾಮಗಾರಿಯ ನಿರ್ಮಾಣದ ಹೊಣೆ ಹೊತ್ತಿದೆ. ಇದಕ್ಕಾಗಿ ಸರ್ಕಾರವು ₹5.64 ಕೋಟಿ ಅನುದಾನ ನೀಡಿದೆ. ಬಂಡೆಗಳಿಂದ ಕೂಡಿದ್ದ ಭೂಮಿಯನ್ನು ಹದಕ್ಕೆ ತಂದು, ರಾಜಕಾಲುವೆಯನ್ನು ಹಾಗೆಯೇ ಉಳಿಸಿಕೊಂಡು ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ರಾಮನಗರ ಅಗ್ನಿಶಾಮಕ ಠಾಣೆಯಲ್ಲಿ ಸದ್ಯ ಎಂಆರ್‌ವಿ, ಕ್ಯೂಆರ್‌ವಿ ಹಾಗೂ ವಾಟರ್ ಟ್ಯಾಂಕ್ ರಕ್ಷಣಾ ವಾಹನಗಳಿವೆ. 33 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.

ಹೊಸ ಕಟ್ಟಡಕ್ಕೆ ಸ್ಥಳಾಂತರ

ಗೊಂಡ ಬಳಿಕ ಟಾಸ್ಕ್‌ಫೋರ್ಸ್‌ ಸದಸ್ಯರಿಗೆ ವಾರಾಂತ್ಯದಲ್ಲಿ ತರಬೇತಿ ನೀಡುವ ಮೂಲಕ ಸ್ವಯಂಸೇವಕರ ಪಡೆಯನ್ನು ಕಟ್ಟಲು ಅಗ್ನಿಶಾಮಕ ದಳ ಯೋಜಿಸಿದೆ. ವಾರವಿಡೀ ಕೆಲಸ ಇರದಿದ್ದಲ್ಲಿ ಒಂದು ದಿನವಾದರೂ ವಾಹನಗಳನ್ನು ಹೊರತೆಗೆದು ಡ್ರಿಲ್‌ ಮಾಡಿ ಎಲ್ಲವನ್ನೂ ಪರೀಕ್ಷಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಅದನ್ನೇ ಬಳಸಿಕೊಂಡು ಆಸಕ್ತರಿಗೆ ತರಬೇತಿಯನ್ನೂ ನೀಡಲಾಗುವುದು. ಇಲ್ಲಿ ಅದಕ್ಕೆ ಸಿಗುವ ಪ್ರತಿಕ್ರಿಯೆ ನೋಡಿಕೊಂಡು ಜಿಲ್ಲೆಯ ಉಳಿದ ಮೂರು ಠಾಣೆಗೂ ವಿಸ್ತರಿಸಲಾಗುವುದು ಎಂದು ಮಂಜುನಾಥ್‌ ಹೇಳಿದರು.

* * 

ಅಗ್ನಿಶಾಮಕ ಠಾಣೆ ಹಾಗೂ ವಸತಿಗೃಹಗಳ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಇದೇ ತಿಂಗಳಲ್ಲಿ ಉದ್ಘಾಟನೆ ಮಾಡಲು ಯೋಜಿಸಲಾಗಿದೆ

ಮಂಜುನಾಥ್‌

ಜಿಲ್ಲಾ ಅಗ್ನಿಶಾಮಕ ಅಧಿಕಾರಿ

ಪ್ರತಿಕ್ರಿಯಿಸಿ (+)