ಶೀಘ್ರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸಮಾವೇಶ

7

ಶೀಘ್ರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಸಮಾವೇಶ

Published:
Updated:

ದಾವಣಗೆರೆ: ನಗರದಲ್ಲಿ ಫೆಬ್ರುವರಿ ಕೊನೆ ವಾರ ಅಥವಾ ಮಾರ್ಚ್‌ ಮೊದಲ ವಾರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೃಹತ್‌ ಸಮಾವೇಶ ಆಯೋಜಿಸುವ ಚಿಂತನೆ ನಡೆದಿದ್ದು, ಸಮುದಾಯದ ಎಲ್ಲರೂ ಅಗತ್ಯ ದೇಣಿಗೆ, ಸಹಕಾರ ನೀಡಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡ ಎಂ.ಶಿವಕುಮಾರ್‌ ಮನವಿ ಮಾಡಿದರು.

ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಾಗತಿಕ ಲಿಂಗಾಯತ ಮಹಾಸಭಾ ಹಮ್ಮಿಕೊಂಡಿದ್ದ ಲಿಂಗಾಯತ ಧರ್ಮ ಸಾಂವಿಧಾನಿಕ ಮಾನ್ಯತೆಗಾಗಿ ಜನಾಂದೋಲನ ಮುಂದುವರಿದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಶೋಷಿತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಮಾನತೆ ಕಲ್ಪಿಸಿಕೊಡುವ ಉದ್ದೇಶದಿಂದ 12ನೇ ಶತಮಾನದಲ್ಲಿಯೇ ಬಸವಣ್ಣನವರು ಲಿಂಗಾಯತ ಧರ್ಮ ಸ್ಥಾಪನೆ ಮಾಡಿದರು. ಬಸವಣ್ಣನವರ ವಿಚಾರ ಧಾರೆಗಳನ್ನು ಪ್ರಚಾರ ಪಡಿಸುವ ಉದ್ದೇಶದಿಂದ ಮಹಾಸಭಾದ ಬೃಹತ್‌ ಸಮಾವೇಶ ಹಮ್ಮಿಕೊಂಡಿದ್ದೇವೆ ವಿನಾ, ಯಾರ ವಿರುದ್ಧವೂ ಅಲ್ಲ ಎಂದು ಹೇಳಿದರು.

ಬೌದ್ಧ, ಸಿಖ್‌, ಕ್ರಿಶ್ಚಿಯನ್‌ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸರ್ಕಾರದಿಂದ ಹಲವು ಸೌಲಭ್ಯಗಳು ದೊರೆಯುತ್ತಿವೆ. ಲಿಂಗಾಯತ ಧರ್ಮಕ್ಕೂ ಮಾನ್ಯತೆ ದೊರೆಯಬೇಕಿದೆ. ಈ ಹಿನ್ನೆಲೆಯಲ್ಲಿ ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.

ಸಮುದಾಯದವರು ಮೊದಲು ಒಗ್ಗೂಡಬೇಕಿದೆ. ಬಹಿರಂಗವಾಗಿ ಶುದ್ಧವಾದರೆ ಸಾಲದು, ಆಂತರಿಕವಾಗಿಯೂ ಶುದ್ಧಿಯಾಗಬೇಕಿದೆ. ಆಚಾರ, ವಿಚಾರ, ನಡೆ–ನುಡಿಗಳೂ ಶುದ್ಧವಾಗಿರಬೇಕು. ಬಸವಣ್ಣನವರು ಪ್ರಸ್ತಾಪಿಸಿದ ವಚನಗಳು ಪಚನವಾಗಬೇಕು ಆಗ ಮಾತ್ರ ಆರೋಗ್ಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ಫೆ.5 ರಂದು ಅರಸಿಕೆರೆಯಲ್ಲಿ ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಜಾಗತಿಕ ಲಿಂಗಾಯತ ಸಮಾವೇಶ ನಡೆಯಲಿದ್ದು, ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜಾಗತಿಕ ಲಿಂಗಾಯತ ಮಹಾಸಭಾ ಮುಖಂಡ ಡಾ.ಶಶಿಕಾಂತ್‌ ಪಟ್ಟಣ್‌ ಮಾತನಾಡಿ, ‘ಲಿಂಗಾಯತ ಧರ್ಮವು ಜಗತ್ತಿನ ಪ್ರಥಮ ಸಂಸತ್ತನ್ನು (ಅನುಭವ ಮಂಟಪ) ಸ್ಥಾಪಿಸಿದ ಹಾಗೂ ಮಹಿಳೆಯರ ಅಸ್ಮಿತೆಯನ್ನು ಎತ್ತಿಹಿಡಿದ ಧರ್ಮವಾಗಿದೆ’ ಎಂದು ಪ್ರತಿಪಾದಿಸಿದರು.

ಬಸವಣ್ಣನವರು ಅಂದೇ ವರ್ಗರಹಿತ, ವರ್ಣರಹಿತ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸಿದ್ದರು. ಆದರೆ, ಇಂದು ಅವರ ವಿಚಾರಧಾರೆಗಳನ್ನು ಯಾರೂ ಅನುಸರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ದಾವಣಗೆರೆಯು ಲಿಂಗಾಯತ ಸಮುದಾಯದ ರಾಜಧಾನಿಯಾಗಿದೆ. ಇದರಿಂದಾಗಿಯೇ ನಗರದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾದ ಬೃಹತ್‌ ಸಮಾವೇಶ ಆಯೋಜಿಸುವ ಚಿಂತನೆ ನಡೆದಿದೆ. ಲಿಂಗಾಯತ ಧರ್ಮದ ಪೋಷಣೆಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸುವ ಅವಶ್ಯವಿದೆ ಎಂದರು.

ಶ್ರೀಮತ್‌ ಸಾಧು ಸದ್ಧರ್ಮ ವೀರಶೈವ ಸಂಘದ ಅಧ್ಯಕ್ಷ ಕೆ.ಆರ್‌.ಜಯದೇವಪ್ಪ, ಮಾತನಾಡಿ, ‘ಜಾಗತಿಕ ಸಮಾವೇಶದ ಯಶಸ್ವಿಗೆ ಕಮಿಟಿ ರಚನೆಯಾಗಬೇಕು. ಹಣಕಾಸಿನ ವ್ಯವಸ್ಥೆಯಾಗಬೇಕು. ವಿವಿಧ ಸಮುದಾಯದ ಧರ್ಮಗುರುಗಳ ಹಾಗೂ ಮಠಾಧೀಶರ ಆಹ್ವಾನಿಸುವ ಸಂಬಂಧ ಯೋಜನೆ ರೂಪಿಸಬೇಕು ಎಂದು ಸಲಹೆ ನೀಡಿದ ಅವರು, ಸಮಾವೇಶಕ್ಕಾಗಿ ವೈಯಕ್ತಿಕವಾಗಿ ₹ 1 ಲಕ್ಷ ದೇಣಿಗೆ ನೀಡುತ್ತೇನೆ’ ಎಂದು ಘೋಷಿಸಿದರು.

ಎಚ್‌.ಕೆ.ರಾಮಚಂದ್ರಪ್ಪ, ಚಿಕ್ಕೋಳು ಈಶ್ವರಪ್ಪ, ಅನಂತನಾಯ್ಕ, ಕೆ.ಎಸ್‌.ಗೋವಿಂದರಾಜ್‌ ಮಾತನಾಡಿದರು. ಇದೇ ಸಮಯದಲ್ಲಿ ಸಮಾವೇಶದ ಯಶಸ್ವಿಗಾಗಿ ಕೆಲವರು ಆರ್ಥಿಕ ಸಹಾಯ ನೀಡುವುದಾಗಿಯೂ ಘೋಷಿಸಿದರು.

ಸಿದ್ದರಾಮ, ಪುಟ್ಟಸ್ವಾಮಿ, ಚಿಗಟೇರಿ ಜಯಪ್ರಕಾಶ್‌, ಆವರಗೆರೆ ಉಮೇಶ್‌, ಬಾಡದ ಆನಂದರಾಜ್‌, ಸಿದ್ದಲಿಂಗೇಶ್ವರ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾದ ಮುಖಂಡರೂ ಇದ್ದರು. ಅಗಡಿ ಮಾಲತೇಶ್‌ ಸ್ವಾಗತಿಸಿದರು. ಬಸವಬಳಗ ಹಾಗೂ ಕದಳಿ ವೇದಿಕೆ ತಂಡದವರು ವಚನಗೀತೆಗಳನ್ನು ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry