ಸೋಮವಾರ, ಡಿಸೆಂಬರ್ 9, 2019
25 °C

‘ನಮಗೂ ಕ್ಯಾನ್ಸರ್ ಬಂದಿತ್ತು’

Published:
Updated:
‘ನಮಗೂ ಕ್ಯಾನ್ಸರ್ ಬಂದಿತ್ತು’

‘ನಾನು ಹೈಸ್ಕೂಲಿನಲ್ಲಿದ್ದಾಗ ಆಗಾಗ ತಲೆನೋವು ಬರುತ್ತಿತ್ತು. ಮಾತ್ರೆ ನುಂಗಿ ಸುಮ್ಮನಾಗುತ್ತಿದ್ದೆ. ಬರುಬರುತ್ತಾ ತಲೆನೋವು ಜೋರಾಯಿತು. ನಾಲ್ಕೈದು ದಿನವಾದರೂ ಕಡಿಮೆಯಾಗುತ್ತಿರಲಿಲ್ಲ. ಡಾಕ್ಟರ್ ಹತ್ರ ಹೋದೆ. ಎಲ್ಲ ಪರೀಕ್ಷೆಗಳೂ ಮುಗಿಯಿತು. ತಲೆನೋವು ಕಡಿಮೆಯಾಗಲಿಲ್ಲ. ಡಾಕ್ಟರ್‌ಗಳು ಅಸ್ಥಿಮಜ್ಜೆ ಪರೀಕ್ಷೆ ನಡೆಸಬೇಕು ಎಂದರು.

ಆಗ ನನಗೆ ಬೋನ್‌ ಕ್ಯಾನ್ಸರ್‌ ಇರುವುದು ಗೊತ್ತಾಯಿತು. ಅಲ್ಲಿಂದ ಹತ್ತಾರು ಬಾರಿ ಕಿಮೊಥೆರಪಿ, ರೇಡಿಯೇಶನ್ ಎಲ್ಲಾ ಆಯಿತು. 7–8 ವರ್ಷಗಳ ಕಾಲ ನಿರಂತರವಾಗಿ ಚಿಕಿತ್ಸೆ ಪಡೆದೆ. ಆಗ ವೈದ್ಯರು ಹಾಗೂ ಸಂಬಂಧಿಕರು ನನ್ನಲ್ಲಿ ತುಂಬಿದ ಧೈರ್ಯ ನನ್ನನ್ನು ಗಟ್ಟಿ ಮಾಡಿತು. ವೈದ್ಯರಾದ ಶೋಭಾ, ಶ್ರುತಿ ಅವರು ಮಗುವಿನ ಹಾಗೇ ನನಗೆ ವೈದ್ಯೋಪಚಾರ ಮಾಡಿದರು.

‘ನನಗೆ ಕ್ಯಾನ್ಸರ್‌ ಎಂದು ಗೊತ್ತಾದಾಗ ಎಲ್ಲರೂ ಶಾಲೆಗೆ ಯಾಕೆ ಹೋಗ್ತೀಯಾ? ಎಲ್ಲಾ ಮುಗಿಯಿತು. ನಿಂಗ್ಯಾಕೆ ಶಾಲೆ, ಪಾಠ ಎಂದು ಹೇಳಿ ನನ್ನಲ್ಲಿ ಮತ್ತಷ್ಟು ಕುಸಿಯುವ ಹಾಗೇ ಮಾಡುತ್ತಿದ್ದರು. ಆದರೆ ವೈದ್ಯರು, ಪೋಷಕರು ನನ್ನನ್ನು ಹುರಿದುಂಬಿಸಿ ಶಾಲೆಗೆ ಹೋಗುವಂತೆ ಮಾಡಿದರು. ಈಗ ನಾನು ಓದು ಮುಗಿಸಿ, ಕೆಲಸಕ್ಕೆ ಸೇರಿದ್ದೇನೆ’.

ಹೀಗೆ ನಗುನಗುತ್ತಲೇ ತಮ್ಮ ಕತೆ ಹೇಳಿಕೊಂಡವರು ಬೊಮ್ಮಸಂದ್ರದ ತಸ್ಲೀಮಾ. ನಗರದ ನಾರಾಯಣ ಹೆಲ್ತ್‌ ಸಿಟಿ ಏರ್ಪಡಿಸಿದ್ದ ‘ಕ್ಯಾನ್ಸರ್‌ ರೋಗದಿಂದ ಗುಣಮುಖರಾದವರಿಗೆ ನಮನ’ ಕಾರ್ಯಕ್ರಮದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ 60ಕ್ಕೂ ಹೆಚ್ಚು ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರು ಭಾಗಿಯಾಗಿದ್ದರು.

ಎಲ್ಲಾ ಸದಸ್ಯರ ಮುಖದಲ್ಲೂ ನಗು, ಗೆಲುವು ಎದ್ದು ಕಾಣುತ್ತಿತ್ತು. ‘ಮಾನಸಿಕ ಧೈರ್ಯ ಹಾಗೂ ಸರಿಯಾದ ಚಿಕಿತ್ಸೆ ದೊರೆತಿದ್ದರಿಂದ ನಾವು ಬದುಕಿದ್ದೇವೆ’ ಎಂಬ ಭಾವ ಎಲ್ಲರ ಮಾತಿನಲ್ಲಿತ್ತು.

‘ಬೋನ್‌ ಮ್ಯಾರೋ ಕಸಿಗೆ ನನ್ನ ತಮ್ಮನ ಅಸ್ಥಿಮಜ್ಜೆ ನನಗೆ ಅರ್ಧದಷ್ಟೇ ಹೊಂದುತ್ತಿತ್ತು, ಶಸ್ತ್ರಚಿಕಿತ್ಸೆ ಮಾಡಿದರೂ ವಿಫಲವಾಗುವ ಸಾಧ್ಯತೆಯೇ ಜಾಸ್ತಿ ಇತ್ತು. ಆದರೂ ವೈದ್ಯರು ರಿಸ್ಕ್‌ ತೆಗೆದುಕೊಂಡರು. ಸವಾಲು ಎಂದುಕೊಂಡೇ ಬೋನ್‌ ಮ್ಯಾರೋ ಆಪರೇಷನ್‌ ಮಾಡಿದರು. ಯಶಸ್ವಿಯಾಯಿತು. ಈಗ ನಾನು ಸಹಜ ಬದುಕಿಗೆ ಹಿಂತಿರುಗಿದ್ದೇನೆ. ಯಾವುದೇ ಸುಸ್ತು, ನೋವು ಇಲ್ಲ’ ಎಂದು ಹನಿಗಣ್ಣಾದವರು ವಕೀಲ ನಾಗೇಶ್‌.

‘ವೈದ್ಯರೇ ಈಗ ನನ್ನ ಸ್ನೇಹಿತರು’ ಎಂದು ಅನುಭವ ಹಂಚಿಕೊಂಡವರು ಕಾಲೇಜು ಯುವತಿ ವಿದುಷಿ.

‘ನನಗೆ ವೈದ್ಯರು, ಡಾಕ್ಟರ್‌ಗಳು ಎಂದರೆ ಮೊದಲಿನಿಂದಲೂ ತೀರಾ ಭಯ. ಕ್ಯಾನ್ಸರ್‌ ಎಂದು ಗೊತ್ತಾದಾಗ ಆಸ್ಪತ್ರೆ ಅಲೆದಾಟ. ಇಂಜೆಕ್ಷನ್‌ ನೋವುಗಳನ್ನು ತಡೆಯಲಾಗುತ್ತಿರಲಿಲ್ಲ. ನನಗೆ ಚಿಕಿತ್ಸೆ ಬೇಡ ಎಂದು ಕುಳಿತುಕೊಂಡಿದ್ದೆ. ನಾರಾಯಣ ಹೆಲ್ತ್‌ ಸಿಟಿಯ ವೈದ್ಯರನ್ನು ಮೊದಲ ಬಾರಿ ಭೇಟಿ ಮಾಡಿದವರು ನನ್ನ ಅಪ್ಪ–ಅಮ್ಮ. ಆಗ ನನಗೆ 18 ವರ್ಷ. ವೈದ್ಯರಾದ ಶರತ್‌ ದಾಮೋದರ್‌ ಅವರು ಚಿಕಿತ್ಸೆಗೆ ನನ್ನ ಮನವೊಲಿಸಿದರು. ನನ್ನಲ್ಲಿ ಜೀವನೋತ್ಸಾಹ ಮೂಡಿಸಿ, ಚಿಕಿತ್ಸೆ ಎಷ್ಟು ಅಗತ್ಯ ಎಂದು ಮನದಟ್ಟು ಮಾಡಿದರು. ಒಂದು ವರ್ಷ ನಿರಂತರವಾಗಿ ಚಿಕಿತ್ಸೆ ಮಾಡಿದೆ. ಈಗ ಕಾಲೇಜಿಗೆ ಆರಾಮಾವಾಗಿ ಹೋಗುತ್ತಿದ್ದೇನೆ’ ಎನ್ನುತ್ತಾ ಚಿಕಿತ್ಸಾ ಹಂತವನ್ನು, ನೋವಿನ ದಿನಗಳನ್ನು ಹಂಚಿಕೊಂಡರು.

ಪಟ್ನಾದಲ್ಲೇ ಸರಿಯಾಗಿ ಚಿಕಿತ್ಸೆ ಸಿಗದೇ ಪರದಾಡಿದ್ದ ಜಾನ್‌, ಕ್ಯಾನ್ಸರ್‌ ಕೊನೆಯ ಹಂತದಲ್ಲಿದ್ದರೂ ಆಪರೇಷನ್‌ ಮಾಡಿಸಿಕೊಂಡು ಸಂಪೂರ್ಣ ಗುಣಮುಖರಾಗಿರುವ ಫ್ರೇಜರ್‌ಟೌನ್‌ನ ಶಿಕ್ಷಕಿ ಹೆಲೆನ್‌ ಜೋಸೆಫ್‌, ಬ್ರೈನ್‌ಟ್ಯೂಮರ್‌ನಿಂದ ಬಳಲಿದ್ದ ರಶ್ಮಿ ಮೊದಲಾದವರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಸ್ತನ ಕ್ಯಾನ್ಸರ್‌ನಿಂದ ಈಗ ಗುಣಮುಖರಾಗಿರುವ ಎಲೆಕ್ಟ್ರಾನಿಕ್‌ ಸಿಟಿಯ ವಾಣಿ ಆರ್‌.ವಿ ಅವರ ಪುತ್ರಿ ಅನೀಷಾ ಎಂಬವರು ಕ್ಯಾನ್ಸರ್‌ ರೋಗಿಗಳು ಯಾವಾಗಲೂ ಸಕಾರಾತ್ಮಕವಾಗಿಯೇ ಚಿಂತಿಸಬೇಕು. ಎದೆಗುಂದಬಾರದು ಎಂದು ಹೇಳಿ ಹಿಂದಿಯ ‘ಲವ್‌ ಯೂ ಜಿಂದಾಗಿ’ ಹಾಡನ್ನು ಹಾಡಿದರು.

ನಾರಾಯಣ ಹೆಲ್ತ್‌ ಸಿಟಿಯ ಮಜುಂದಾರ್‌ ಶಾ ಮೆಡಿಕಲ್‌ ಸೆಂಟರ್‌ನ ಕ್ಲಿನಿಕಲ್‌ ಡೈರೆಕ್ಟರ್‌ ಡಾ. ಶರತ್‌ ದಾಮೋದರ್‌ ಅವರು ‘ಕ್ಯಾನ್ಸರ್‌ ಎಂಬುದು ಮಾರಣಾಂತಿಕ ಕಾಯಿಲೆ ಎಂಬ ನಂಬಿಕೆ ಈಗಲೂ ಇದೆ. ಹೀಗಾಗಿ ಕ್ಯಾನ್ಸರ್‌ ರೋಗಕ್ಕೆ ತುತ್ತಾದವರು ಸಹಜವಾದ ಬದುಕು ಸಾಗಿಸಲು ಆಗುವುದಿಲ್ಲ. ಕ್ಯಾನ್ಸರ್‌ ಗುಣವಾಗುವ ಕಾಯಿಲೆ. ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಗುಣವಾಗುತ್ತದೆ. ಚಿಕಿತ್ಸೆ ಕುರಿತು ತಪ್ಪು ಕಲ್ಪನೆ ದೂರವಾಗಬೇಕು ಎಂದು ಹೇಳಿದರು.

‘ನಾರಾಯಣ ಹೆಲ್ತ್‌ ಸಿಟಿ ಸಮಗ್ರ ಕ್ಯಾನ್ಸರ್‌ ತಪಾಸಣಾ ಪ್ಯಾಕೇಜ್‌ ಪರಿಚಯಿಸಿದೆ. ಇದರಲ್ಲಿ ಒಂದು ಬಾರಿ ₹2 ಸಾವಿರ ತೆತ್ತು ಶರೀರದ ಸಂಪೂರ್ಣ ತಪಾಸಣೆ ಮಾಡಿಕೊಳ್ಳಬಹುದು’ ಎಂದು ವೈದ್ಯ ಡಾ. ಶರತ್‌ ದಾಮೋದರ್‌ ವಿವರಿಸಿದರು.

*

ನನ್ನ ಅಮ್ಮನ ತಂಗಿಗೆ ಕ್ಯಾನ್ಸರ್‌ ಕಾಯಿಲೆ ಬಂದಿತ್ತು. ಆದರೆ ಅವರಿಗೆ ಸರಿಯಾದ ಚಿಕಿತ್ಸೆ ಸಿಗಲಿಲ್ಲ. ಅವರು ತೀರಿಕೊಂಡರು. ಕ್ಯಾನ್ಸರ್‌ ರೋಗದ ವಿರುದ್ಧ ಹೋರಾಟ ನಡೆಸಲು ಚಿಕಿತ್ಸೆ ಜೊತೆಗೆ ಮಾನಸಿಕ ಧೈರ್ಯವೂ ಮುಖ್ಯ. ಇಲ್ಲಿರುವ ಎಲ್ಲರೂ ದೇಶ ಕಾಯುವ ಸೈನಿಕರಷ್ಟೇ ಬಲಶಾಲಿಗಳು.

–ಹರ್ಷಿಕಾ ಪೂಣಚ್ಚ, ನಟಿ

ಪ್ರತಿಕ್ರಿಯಿಸಿ (+)