ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖವಾಡಗಳ ಆಟ

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಭಾನುವಾರ ರಾಜ್ಯದ ಮೇಲೆ ಹೇರಲು ಕೆಲವರು ಹವಣಿಸಿದ್ದ ಬಂದ್ ಅದೃಷ್ಟವಶಾತ್ ರದ್ದಾಯಿತು. ಶಿಕ್ಷಣ ಸಂಸ್ಥೆಯೊಂದು ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಬಂದ್ ಅಸಾಂವಿಧಾನಿಕ ಎಂದು ಹೈಕೋರ್ಟ್‌ ತೀರ್ಪಿತ್ತು ಈ ಬಂದ್ ನಡೆಯದಂತೆ ನೋಡಿಕೊಂಡಿರುವುದರಿಂದಾಗಿ ರಾಜ್ಯದ ಜನ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಬಹುಶಃ ರಾಷ್ಟ್ರದಲ್ಲೇ ಅತ್ಯಂತ ಹೆಚ್ಚು ಬಂದ್‍ಗಳಿಗೆ ಈಡಾಗುವ ರಾಜ್ಯ ಕರ್ನಾಟಕ. ಇತ್ತೀಚಿನ ದಿನಗಳಲ್ಲಿ ಬಂದ್‍ಗಳ ಸರಮಾಲೆಯಿಂದ ತತ್ತರಿಸಿಹೋಗಿತ್ತು. ನಿಜ, ಬಂದ್ ಎನ್ನುವುದು ಅನ್ಯಾಯವನ್ನು ಪ್ರತಿಭಟಿಸಲು ಜನರು ರೂಪಿಸಿಕೊಂಡು ಬಳಸಲು ಕಂಡುಕೊಂಡಿರುವ ಒಂದು ಪ್ರಜಾಸತ್ತಾತ್ಮಕ ಅಸ್ತ್ರ. ಆದರೆ ಅದರ ರಾಜಕೀಯ ದುರುಪಯೋಗ ಅಸಾಂವಿಧಾನಿಕ ಮಾತ್ರವಲ್ಲ, ಜನವಿರೋಧಿಯೂ ಹೌದು.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಈ ಬಂದ್‍ಗೆ ಕರೆಕೊಡುತ್ತಿರುವುದು ಹೆಚ್ಚಾಗಿ ನಮ್ಮ ಕನ್ನಡ ಚಳವಳಿಯ ವಿವಿಧ ಗುಂಪುಗಳ ನಾಯಕರು. ಭಾನುವಾರದ ಬಂದ್‍ಗೆ ಕರೆಕೊಟ್ಟವರು ‘ವುಟ್ಟು ಓರಾಟಗಾರ’ರೆಂದೇ ಪ್ರಸಿದ್ಧರಾದ ಇಂತಹ ಒಬ್ಬ ಹಿರಿಯ ನಾಯಕರು. ಇವರು ಕಳೆದ ಮೂರು ವಿಧಾನಸಭಾ ಚುನಾವಣೆಗಳಿಗೆ ಬೇರೆ ಬೇರೆ ಕಡೆಗಳಿಂದ ಸ್ಪರ್ಧಸಿ ಠೇವಣಿ ಕಳೆದುಕೊಂಡ ನಂತರ ವಿಧಾನ ಪರಿಷತ್ ಚುನಾವಣೆಗೂ ಸ್ಪರ್ಧಿಸಿ ಮುಖಭಂಗಕ್ಕೆ ಒಳಗಾದವರು. ಇದರಿಂದ ದಣಿವಾಗದ ಇವರು ತಾವು ಆಚರಿಸುವ ರಾಜ್ಯೋತ್ಸವ ಸಮಾರಂಭಗಳಲ್ಲಿ ಮುಖ್ಯಮಂತ್ರಿಗೆ ಬೆಳ್ಳಿ ಗದೆ ವಗೈರೆಗಳನ್ನು ನೀಡಿ ಆಡಳಿತ ವಲಯಕ್ಕೆ ಸೇರಿಕೊಳ್ಳಲು ಹರಸಾಹಸ ಮಾಡುತ್ತಿರುವವರು. ಇಂತಹ ನಿರಂತರ ಪ್ರಯತ್ನ ಏಕೆಂದು ಇವರ ಚಳವಳಿಗಳ ವೈಯಕ್ತಿಕ ‘ಸಾಧನೆ’ಗಳ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಈ ಅನಿವಾರ್ಯ ಪ್ರಯತ್ನದ ಮುಂದುವರೆದ ಭಾಗವಾಗಿಯೇ ಭಾನುವಾರದ ಬಂದ್ ಕರೆಯಾಗಿತ್ತು ಎಂಬುದು ಈಗ ಗುಟ್ಟಾಗೇನೂ ಉಳಿದಿಲ್ಲ.

ಒಂದು ವಾರದ ಹಿಂದಷ್ಟೇ ಯಾವ ವಿಷಯಕ್ಕಾಗಿ ರಾಜ್ಯ ಬಂದ್‍ಗೆ ಕರೆ ಕೊಡಲಾಗಿತ್ತೋ ಆ ವಿಷಯವನ್ನೇ ಬೇರೊಂದು ರೂಪದಲ್ಲಿ ನೆಪವಾಗಿಟ್ಟುಕೊಂಡು ಈ ಬಂದ್‍ಗೆ ಕರೆಕೊಡಲಾಗಿತ್ತು ಎಂಬ ಅಂಶವೇ ಪ್ರಧಾನಿ ಭಾಗವಹಿಸಲಿದ್ದ, ರಾಜ್ಯದ ಪ್ರಮುಖ ವಿರೋಧ ಪಕ್ಷವೊಂದು ಏರ್ಪಡಿಸಿದ್ದ ಸಭೆಯನ್ನು ವಿಫಲಗೊಳಿಸುವುದೇ ಈ ಬಂದ್ ಕರೆಯ ಉದ್ದೇಶವಾಗಿತ್ತು.

ಹಾಗಿರುವಾಗ ರಾಜ್ಯದ ಜನರ ಹಿತ ಕಾಪಾಡುವ ಹೊಣೆ ಹೊತ್ತ ಸರ್ಕಾರವೇ ಈ ಬಂದ್ ವಿರುದ್ಧ ಧ್ವನಿ ಎತ್ತಬೇಕಿತ್ತು. ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷವಾದರೂ ವಿರೋಧ ಪಕ್ಷದ ಪ್ರಜಾಸತ್ತಾತ್ಮಕ ಹಕ್ಕನ್ನು ಮೊಟಕುಗೊಳಿಸಲು ಹವಣಿಸಿದ ಈ ಬಂದ್ ಪ್ರಯತ್ನವನ್ನು ವಿರೋಧಿಸಬೇಕಿತ್ತು. ಆಗ ಈ ಪಕ್ಷದ ಘನತೆಯೂ ಹೆಚ್ಚಿ, ಯಾವ ಪರೋಕ್ಷ ಕಾರಣಕ್ಕಾಗಿ ಇವರ ಏಜೆಂಟರು ಬಂದ್‍ಗೆ ಕರೆಕೊಟ್ಟಿದ್ದರೋ ಆ ಚುನಾವಣಾ ಲಾಭ ಇವರಿಗೆ ಅನಾಯಾಸವಾಗಿ ದಕ್ಕುತ್ತಿತ್ತು. ಅಷ್ಟೇ ಅಲ್ಲ, ಈ ಕಾರಣದಿಂದಾಗಿಯೇ ಜೆಡಿಎಸ್ ಕೂಡ ಈ ಬಂದ್‍ನ್ನು ವಿರೋಧಿಸಬೇಕಿತ್ತು.

ಈ ಬಂದ್‍ನಿಂದ ತೊಂದರೆಗೊಳಗಾಗಬಹುದಾಗಿದ್ದ ಬಿಜೆಪಿಯೂ ಪ್ರಜಾಸತ್ತೆಯ ಹಿತದೃಷ್ಟಿಯ ಕಾರಣ ಮುಂದೊಡ್ಡಿ ಇದೇ ಕೆಲಸ ಮಾಡಬೇಕಿತ್ತು. ಆದರೆ ಜನರ ನಾಡಿ ಮಿಡಿತದ ಕಡೆ ಗಮನವೇ ಇರದೆ ಬರೀ ವೋಟಿನ ಚಿಂತೆಯಲ್ಲಿರುವ ರಾಜಕೀಯ ಪಕ್ಷಗಳು ಧೈರ್ಯವಾಗಿ ಸತ್ಯವನ್ನು ಹೇಳುವುದನ್ನೇ ಮರೆತುಬಿಟ್ಟಿವೆ. ಹಾಗಾಗಿಯೇ ಎಲ್ಲೆಲ್ಲೂ ಏಜೆಂಟರ ಕಾಟ ಮತ್ತು ಮುಖವಾಡಗಳ ಆಟವೇ ಜಾಸ್ತಿಯಾಗಿ ಜನರ ಮೂಲಭೂತ ಹಕ್ಕುಗಳಿಗೆ ಅಪಾಯ ತಂದೊಡ್ಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT