ಜನಸ್ನೇಹಿ ಮಾಡಿ

7

ಜನಸ್ನೇಹಿ ಮಾಡಿ

Published:
Updated:

ನಾನು ಗಮನಿಸಿದಂತೆ ಆರೋಗ್ಯ ಮಂತ್ರಿ ರಮೇಶ ಕುಮಾರ್‌ ಅವರಿಗೆ ಜನಸಾಮಾನ್ಯರ ಬಗ್ಗೆ ಅನುಕಂಪ, ಕಾಳಜಿ ಹೆಚ್ಚು. ಅದಕ್ಕಾಗಿಯೇ ಖಾಸಗಿ ಆಸ್ಪತ್ರೆಗಳ ಸುಲಿಗೆಯನ್ನು ಹತೋಟಿಗೆ ತರಲು ಕೆಲವು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದಾರೆ. ಆದರೆ ಅವರ ಉಸ್ತುವಾರಿಯಲ್ಲೇ ಇರುವ ಸರ್ಕಾರಿ ದವಾಖಾನೆಗಳಲ್ಲಿ ಲಭ್ಯವಿರುವ ಆರೋಗ್ಯ ಸೇವೆ ಅಪೇಕ್ಷೆಗಿಂತಲೂ ಬಹಳ ಕೆಳಮಟ್ಟದಲ್ಲಿದೆ.

ಅನೇಕ ದವಾಖಾನೆಗಳಲ್ಲಿ ತಜ್ಞ ವೈದ್ಯರ ಕೊರತೆ ಇದೆ. ವೈದ್ಯರಿದ್ದರೆ ಉಪಕರಣಗಳ ಕೊರತೆ, ಇದ್ದ ಉಪಕರಣಗಳು ಕೆಲಸ ಮಾಡದ ಸ್ಥಿತಿ. ವೈದ್ಯರ ಹಾಗೂ ಸಿಬ್ಬಂದಿಯ ತಾತ್ಸಾರ ನಡವಳಿಕೆ, ತುರ್ತು ಸಮಯದಲ್ಲಿ ವೈದ್ಯರ ಅನುಪಸ್ಥಿತಿ, ಲಕ್ಷಗಟ್ಟಲೆ ಸಂಬಳ ಪಡೆದರೂ ಅವರದೇ ಆದ ಒಂದು ಖಾಸಗಿ ಕ್ಲಿನಿಕ್... ಈ ಸತ್ಯ ಮಂತ್ರಿಗಳಿಗೆ ಗೊತ್ತಿಲ್ಲ ಎಂದಲ್ಲ. ಇಂದಿನ ಕಲುಷಿತ ವ್ಯವಸ್ಥೆಯಲ್ಲಿ ಇದನ್ನು ಒಮ್ಮೆಲೇ ಸರಿಪಡಿಸುವುದು ಅಷ್ಟು ಸುಲಭದ ಮಾತಲ್ಲ ಎಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.

ಈಚೆಗೆ ಪ್ರಕಟವಾದ ಮಂತ್ರಿಗಳ ಹೇಳಿಕೆ ಸರ್ಕಾರಿ ನೌಕರರಿಗೆ ಆಘಾತ ಮಾಡಿದೆ. ರೋಗಿ ಮೊದಲು ಸರ್ಕಾರಿ ದವಾಖಾನೆಗೆ ಹೋಗಬೇಕು. ಅಲ್ಲಿ  ಚಿಕಿತ್ಸೆಗೆ ಅವಕಾಶ ಇಲ್ಲ ಎಂದಾದರೆ ಮಾತ್ರ ಖಾಸಗಿ ದವಾಖಾನೆಯಲ್ಲಿ ಮಾಡಿದ ಖರ್ಚು ಭರಿಸುವ ಅವಕಾಶವಿದೆ. ನೇರವಾಗಿ ಖಾಸಗಿ ದವಾಖಾನೆಯಲ್ಲಿ ಪಡೆದ ಚಿಕಿತ್ಸೆಯ ವೆಚ್ಚ ಭರಿಸಲು ಅವಕಾಶ ಇಲ್ಲ ಎಂದು ಅವರು ಹೇಳಿದ್ದಾರೆ.

ಅಪಘಾತ, ಹೃದಯಾಘಾತ, ಉಸಿರಾಟದಂತಹ ತೊಂದರೆಗಳಿಗೆ ಬಹುಪಾಲು ಸರ್ಕಾರಿ ದವಾಖಾನೆಗಳಲ್ಲಿ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಇಲ್ಲ. ಸರ್ಕಾರಿ ದವಾಖಾನೆಯಲ್ಲಿ ರೋಗಿಯನ್ನು ದಾಖಲಿಸಬೇಕು. ಅಲ್ಲಿ ಚಿಕಿತ್ಸೆ ಸಿಗದಿದ್ದರೆ, ಖಾಸಗಿ ಆಸ್ಪತ್ರೆಗೆ ಹೋಗಲು ಸಮಯ ಹಿಡಿಯುತ್ತದೆ. ಅಷ್ಟೊತ್ತಿಗೆ ರೋಗಿಯ ಪ್ರಾಣಕ್ಕೆ ಅಪಾಯ ಎದುರಾದರೆ?

ಶಾಸಕರು, ಮಂತ್ರಿಗಳು, ಗೌರವಧನದ ಬದಲು ಸರ್ಕಾರಿ ನೌಕರರಂತೆ, ಸಂಬಳ, ಭತ್ಯೆ, ಸೌಲಭ್ಯ ಪಡೆಯುತ್ತಾರೆ. ಸರ್ಕಾರಿ ನೌಕರರಂತೆ ಇವರಿಗೂ ಈ ಆದೇಶ ಅನ್ವಯವಾಗಬೇಕಲ್ಲವೇ? ಇವರಿಗೆ ಆರೋಗ್ಯ ಸಮಸ್ಯೆಯಾದರೆ, ಹೈಟೆಕ್ ದವಾಖಾನೆ, ಸಿಂಗಪುರದಂತಹ ದೇಶದಲ್ಲಿ ಚಿಕಿತ್ಸೆ, ಏರ್ ಆಂಬುಲೆನ್ಸ್... ಎಲ್ಲವೂ ಉಚಿತ. ಜನರ ತೆರಿಗೆ ಹಣದ ದುಂದುವೆಚ್ಚ. ಇವರದು ಮಾತ್ರ ಜೀವ, ಸರ್ಕಾರಿ ನೌಕರರದ್ದು ಜೀವವಲ್ಲವೇ? ಇವರು ಸ್ವಂತ ಖರ್ಚಿನಲ್ಲಿ ಚಿಕಿತ್ಸೆ ಪಡೆಯಲಾರದಷ್ಟು ಬಡವರೇ?

ಸರ್ಕಾರಿ ದವಾಖಾನೆಗಳಿಗೆ ಉತ್ತಮ ಕಟ್ಟಡ, ದಿನದ 24 ತಾಸು ಲಭ್ಯವಿರುವ ತಜ್ಞ ವೈದ್ಯರು, ನೀರಿನ ವ್ಯವಸ್ಥೆ, ಸುಸ್ಥಿತಿಯಲ್ಲಿರುವ ವೈದ್ಯಕೀಯ ಉಪಕರಣಗಳು... ಒದಗಿಸಬೇಕು. ಸಂಬಳ ಪಡೆಯುವ ಸರ್ಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸದಂತೆ, ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಯು ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸುವಂತೆ ಸರ್ಕಾರ ನೋಡಿಕೊಳ್ಳಬೇಕು. ಸರ್ಕಾರಿ ದವಾಖಾನೆಗಳನ್ನು ಜನಸ್ನೇಹಿ ಮಾಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry