ಶುಕ್ರವಾರ, ಡಿಸೆಂಬರ್ 6, 2019
23 °C

‘ಮೀನು ಮಾರುಕಟ್ಟೆಗಿಂತ ಕಡೆಯೇ ಸುಪ್ರೀಂ?’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮೀನು ಮಾರುಕಟ್ಟೆಗಿಂತ ಕಡೆಯೇ ಸುಪ್ರೀಂ?’

ನವದೆಹಲಿ: ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಬಿ.ಎಚ್‌. ಲೋಯ ಸಾವಿನ ಪ್ರಕರಣದ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದಾಗ ವಕೀಲರಾದ ದುಷ್ಯಂತ ದವೆ ಮತ್ತು ಪಲ್ಲವ ಸಿಸೋಡಿಯಾ ನಡುವೆ ತೀವ್ರ ವಾಗ್ಯುದ್ಧ ನಡೆಯಿತು. ಇದರಿಂದ ಅಸಮಾಧಾನಗೊಂಡ ಪೀಠ, ‘ನ್ಯಾಯಾಲಯ ಮೀನು ಮಾರುಕಟ್ಟೆಗಿಂತ ಕಡೆಯಾಯಿತೇ’ ಎಂದು ಪ್ರಶ್ನಿಸಿತು.

2014ರ ಡಿಸೆಂಬರ್‌ನಲ್ಲಿ ಲೋಯ ಮೃತಪಟ್ಟರು. ಈ ಬಗ್ಗೆ ಸ್ವತಂತ್ರ ತನಿಖೆ ನಡೆಯಬೇಕು ಎಂದು ಕೋರಿ ಸಲ್ಲಿಸಲಾದ ಹಲವು ಅರ್ಜಿಗಳ ವಿಚಾರಣೆ ಸೋಮವಾರ ನಡೆಯಿತು. ಬಾಂಬೆ ವಕೀಲರ ಸಂಘದ ಪರವಾಗಿ ದವೆ, ಮತ್ತೊಬ್ಬ ಅರ್ಜಿದಾರ ಮುಂಬೈನ ಪತ್ರಕರ್ತ ಬಿ.ಎಸ್‌.ಲೋನ್‌ ಪರವಾಗಿ ಸಿಸೋಡಿಯಾ ವಾದಿಸುತ್ತಿದ್ದಾರೆ. ವಿಚಾರಣೆಯ ನಡುವೆಯೇ ಈ ಇಬ್ಬರು ಪರಸ್ಪರರನ್ನು ದೂಷಿಸಲಾರಂಭಿಸಿದರು.

‘ನೀವು ನನ್ನ ಮೇಲೆ ಕಿರುಚಾಡುವಂತಿಲ್ಲ. ನ್ಯಾಯಮೂರ್ತಿ ಮಾತನಾಡುವಾಗ ನೀವು ಕೇಳಬೇಕು’ ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಚಂದ್ರಚೂಡ್‌ ಅವರು ಮಧ್ಯಪ್ರವೇಶಿಸಲು ಯತ್ನಿಸಿದರು.

ಆದರೆ, ‘ನಾನು ನಿಮ್ಮ ಮಾತು ಕೇಳುವುದಿಲ್ಲ’ ಎಂದು ದವೆ ಜೋರಾಗಿಯೇ ಹೇಳಿದರು. ಸತ್ಯದ ಧ್ವನಿಯನ್ನು ದಮನಿಸಲು ಯತ್ನಿಸಲಾಗುತ್ತಿದೆ. ಭಾರತೀಯ ವಕೀರಲ ಸಂಘವು ತಮಗೆ ನೋಟಿಸನ್ನೂ ನೀಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ನೀವು ನನ್ನ ಮಾತು ಕೇಳದಿದ್ದರೆ ನಾನು ನಿಮ್ಮ ಮಾತನ್ನೂ ಕೇಳುವುದಿಲ್ಲ. ನ್ಯಾಯಾಲಯವನ್ನು ಮೀನು ಮಾರುಕಟ್ಟೆಗಿಂತ ಕಡೆ ಮಾಡುವುದು ಬೇಡ’ ಎಂದು ಚಂದ್ರಚೂಡ್‌ ತಿರುಗೇಟು ನೀಡಿದರು.

ಈ ಪ್ರಕರಣದಲ್ಲಿ ನ್ಯಾಯ ದೊರೆಯುವುದು ಸಾಧ್ಯವಿಲ್ಲ ಎಂಬ ಪ್ರಾಮಾಣಿಕ ಆತಂಕ ತಮ್ಮಲ್ಲಿದೆ ಎಂದು ದವೆ ಹೇಳಿದ್ದು ಕೂಡ ನ್ಯಾಯಪೀಠಕ್ಕೆ ಸಿಟ್ಟು ತರಿಸಿತು.

‘ಪ್ರಕರಣದ ಎಲ್ಲ ಅಂಶಗಳನ್ನೂ ಪರಿಶೀಲನೆಗೆ ಒಳಪಡಿಸಲಾಗುವುದು. ಆತ್ಮಸಾಕ್ಷಿಯಂತೆ ಕೆಲಸ ಮಾಡುವುದು ಹೇಗೆ ಎಂಬುದನ್ನು ನಮಗೆ ಹೇಳಿಕೊಡಲು ಬರಬೇಡಿ. ಎರಡೂ ಕಡೆಯ ವಕೀಲರ ಕಿರುಚಾಟದಿಂದ ನಾವು ಎದೆಗುಂದುವುದಿಲ್ಲ’ ಎಂದು ಚಂದ್ರಚೂಡ್‌ ಖಾರವಾಗಿಯೇ ಹೇಳಿದರು.

‘ನೀವು ನರಕಕ್ಕೋ, ಸ್ವರ್ಗಕ್ಕೋ ಅಥವಾ ಎಲ್ಲಿಗಾದರೂ ಹೋಗಿ, ನನಗೇನಿಲ್ಲ’ ಎಂದು ದವೆಯವರಿಗೆ ಸಿಸೋಡಿಯಾ ಹೇಳದಾಗಲೂ ಪೀಠ ಅವರನ್ನು ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯದಲ್ಲಿ ಅಸಂಸದೀಯ ಭಾಷೆ ಬಳಸದಂತೆ ತಾಕೀತು ಮಾಡಿತು.

ಕಲಹದ ಆರಂಭ:

ವಿಲಕ್ಷಣವಾದ ಮತ್ತು ವದಂತಿಗಳ ಆಧಾರದ ಸಾಕ್ಷ್ಯಗಳ ಮೇಲೆ ಲೋಯ ಪ್ರಕರಣವನ್ನು ಕಟ್ಟಲಾಗಿದೆ ಎಂದು ಪಲ್ಲವ ಸಿಸೋಡಿಯಾ ಅವರು ಆರೋಪಿಸುವುದರೊಂದಿಗೆ ನ್ಯಾಯಾಲಯದಲ್ಲಿ ವಾಕ್ಸಮರ ಆರಂಭವಾಯಿತು. ಲೋಯ ಪ್ರಕರಣದಿಂದಾಗಿ ನ್ಯಾಯಾಂಗದ ಪ್ರಾಮಾಣಿಕತೆಯ ಬಗ್ಗೆ ಪ್ರಶ್ನೆಗಳೆದ್ದವು ಮತ್ತು ನ್ಯಾಯಮೂರ್ತಿಗಳೇ ಮಾಧ್ಯಮಗೋಷ್ಠಿ ನಡೆಸಿದರು ಎಂದು ಅವರು ಹೇಳಿದರು.

ಸಿಸೋಡಿಯಾ ಅವರು ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರೆ ಎಂದು ದವೆ ಆರೋಪಿಸಿದರು. ಸೊಹ್ರಾಬುದ್ದೀನ್‌ ಶೇಖ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಸಿಸೋಡಿಯಾ ಮತ್ತು ಹರೀಶ್‌ ಸಾಳ್ವೆ ಅವರು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಪರವಾಗಿ ವಾದಿಸಿದ್ದರು. ಹಾಗಾಗಿ ಮಹಾರಾಷ್ಟ್ರ ಸರ್ಕಾರದ ಪರವಾಗಿ ಹಾಜರಾಗಿರುವ ಸಾಳ್ವೆ ಮತ್ತು ಸಿಸೋಡಿಯಾ ಈ ಪ್ರಕರಣದಲ್ಲಿ ವಾದಿಸಬಾರದು ಎಂದು ದವೆ ಆಗ್ರಹಿಸಿದರು.

ಸೊಹ್ರಾಬುದ್ದೀನ್‌ ಎನ್‌ಕೌಂಟರ್‌ ಪ್ರಕರಣದ ವಿಚಾರಣೆಯನ್ನು ಲೋಯ ನಡೆಸಿದ್ದರು. ಈ ಪ್ರಕರಣದಲ್ಲಿ ಅಮಿತ್‌ ಶಾ ಆರೋಪಿಯಾಗಿದ್ದರು.

ಪ್ರತಿಕ್ರಿಯಿಸಿ (+)