ಭಾನುವಾರ, ಡಿಸೆಂಬರ್ 8, 2019
25 °C
ವಿಧಾನಮಂಡಲ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ

ಭ್ರಷ್ಟಾಚಾರ ವಿರುದ್ಧ ಸರ್ಕಾರದ ಹೋರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭ್ರಷ್ಟಾಚಾರ ವಿರುದ್ಧ ಸರ್ಕಾರದ ಹೋರಾಟ

ಬೆಂಗಳೂರು: ರಾಜ್ಯ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ಮುಂದುವರಿಸಿದ್ದು, ಇ–ಆಡಳಿತ ಉಪಕ್ರಮಗಳ ಮೂಲಕ ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಸೋಮವಾರ ಬಣ್ಣಿಸಿದರು.

‘ಎಲ್ಲದರಲ್ಲೂ ಶೇ 10ರಷ್ಟು ಕಮಿಷನ್ ಪಡೆಯುವ ಸರ್ಕಾರ ಕರ್ನಾಟಕದಲ್ಲಿದೆ, ಕೊಲೆಗಳ ಸ್ನೇಹಿ ಸರ್ಕಾರ ಇದು’ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ವಾಗ್ದಾಳಿ ನಡೆಸಿದ್ದ ಬೆನ್ನಲ್ಲೇ, ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಜ್ಯಪಾಲರು, ಭ್ರಷ್ಟಾಚಾರ ತೊಲಗಿಸಲು ಸರ್ಕಾರ ಕೈಗೊಂಡ ಕ್ರಮಗಳನ್ನು ವಿವರಿಸಿದರು.

ಭ್ರಷ್ಟಾಚಾರ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಲಾಗಿದೆ. ಎಸಿಬಿ ರಚನೆಯಾದ ನಂತರ 278 ಟ್ರ್ಯಾಪ್‌, 65 ದಾಳಿ, 61 ಇತರೆ ಪ್ರಕರಣಗಳು ಸೇರಿ 404 ಪ್ರಕರಣಗಳು ದಾಖಲಾಗಿವೆ. ವಿಚಾರಣೆಗೆ ಅನುಮತಿ ಕೋರಿ ಸಲ್ಲಿಕೆಯಾಗಿದ್ದ 106 ಪ್ರಕರಣಗಳಲ್ಲಿ 72 ಪ್ರಕರಣಗಳಿಗೆ ಮಂಜೂರಾತಿ ನೀಡಲಾಗಿದೆ. ದೂರು ಸ್ವೀಕರಿಸಿದ ಕೂಡಲೇ ವಿಳಂಬವಿಲ್ಲದಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಕೋಮು ಸೌಹಾರ್ದ ಕಾಪಾಡಿ, ಸಾರ್ವಜನಿಕ ಭದ್ರತೆಯನ್ನು ಸರ್ಕಾರ ಖಾತ್ರಿ ಪಡಿಸಿದೆ. ಹಠಾತ್ತನೆ ಸಂಭವಿಸುವ ಕೋಮು ಹಿಂಸಾ ಘಟನೆಗಳ ಬಗ್ಗೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಮಹದಾಯಿ ನೀರಿನ ಪಾಲಿಗಾಗಿ ಹೋರಾಟ

ಮಹದಾಯಿ ಜಲಾನಯನ ಪ್ರದೇಶದಿಂದ ಕರ್ನಾಟಕದ ಜನರಿಗೆ ಸಿಗಬೇಕಾದ ಹಕ್ಕಿನ ಪಾಲನ್ನು ದೊರಕಿಸಿಕೊಡುವಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನು ಸರ್ಕಾರ ಮುಂದುವರಿಸಲಿದೆ ಎಂದು ರಾಜ್ಯಪಾಲರು ಪ್ರತಿಪಾದಿಸಿದರು.

ಕಾವೇರಿ ಮತ್ತು ಕೃಷ್ಣಾ ಕಣಿವೆಯ ಜಲಾನಯನ ಪ್ರದೇಶಗಳ ತನ್ನ ಪಾಲಿನ ನೀರಿಗಾಗಿ ನ್ಯಾಯಯುತ ಬೇಡಿಕೆಗಳನ್ನು ಮಂಡಿಸುವಲ್ಲಿ, ರಾಜ್ಯಕ್ಕೆ ನ್ಯಾಯ ಒದಗಿಸುವಲ್ಲಿ ತನ್ನ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸುತ್ತದೆ ಎಂದೂ ಅವರು ಹೇಳಿದರು.

ಜಿಎಸ್‌ಟಿಯಿಂದ ತೆರಿಗೆ ಸಂಗ್ರಹ ಏರಿಳಿತ

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪದ್ಧತಿಯಲ್ಲಿ ಬದಲಾವಣೆಗಳು ಆಗುತ್ತಿರುವುದರಿಂದ ತೆರಿಗೆ ಸಂಗ್ರಹದಲ್ಲಿ ಏರಿಳಿತವಾಗುತ್ತಿದೆ ಎಂದು ರಾಜ್ಯಪಾಲರು ಹೇಳಿದರು.

ತೆರಿಗೆ ಸಂಗ್ರಹದಲ್ಲಿ ತೊಂದರೆಯಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಬರಬೇಕಾದ ನಷ್ಟ ಪರಿಹಾರದ ಮೂಲಕ ಈ ಕೊರತೆಯನ್ನು ನೀಗಿಸಬಹುದು ಎಂದು ನಿರೀಕ್ಷಿಸಲಾಗಿದೆ ಎಂದರು.

ಜಿಎಸ್‌ಟಿ ಅಡಿಯಲ್ಲಿ ರೂಪಿಸಿರುವ ಕಾನೂನು ಅವಶ್ಯಕತೆಗಳನ್ನು ಆನ್‌ಲೈನ್‌ನಲ್ಲಿಯೇ ಮಾಡಬೇಕಾಗಿದೆ. ತಂತ್ರಜ್ಞಾನದ ಸಮಸ್ಯೆಯಿಂದಾಗಿ ತೆರಿಗೆದಾರರು ಹಲವು ಸವಾಲುಗಳನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಶುಲ್ಕ ಪರಿಷ್ಕರಣೆ:

ತೆರಿಗೆಯೇತರ ಮೂಲದಿಂದ ಆದಾಯ ಸಂಗ್ರಹಣೆ ಹೆಚ್ಚಿಸಲು ವಿವಿಧ ಸೇವೆಗಳಿಗೆ ನೀಡುತ್ತಿರುವ ಶುಲ್ಕವನ್ನು ಪರಿಷ್ಕರಿಸಲಾಗುವುದು ಎಂದು ವಾಲಾ ಹೇಳಿದರು.

ಶುಲ್ಕ ಪರಿಷ್ಕರಣೆ ಅನೇಕ ವರ್ಷಗಳಿಂದ ಬಾಕಿ ಇದೆ. ಪರಿಷ್ಕರಿಸುವ ಕೆಲಸವನ್ನು ಇಲಾಖೆಗಳು ಮಾಡುತ್ತಿವೆ. ಇಂತಹ ಕ್ರಮಗಳು ರಾಜ್ಯದ ಆರ್ಥಿಕತೆಗೆ ಲಾಭ ತರಲಿವೆ ಎಂದೂ ಹೇಳಿದರು.

ಒಂದು ಗಂಟೆ ಹಿಂದಿಯಲ್ಲಿ ಮಾತನಾಡಿದ ರಾಜ್ಯಪಾಲರ ಭಾಷಣದ ಮುಖ್ಯಾಂಶಗಳು

*ಕಳೆದ ಐದು ವರ್ಷಗಳಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಿ, ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ಗಮನಾರ್ಹ ಹೆಜ್ಜೆ

*ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ನೇರ ನೇಮಕಾತಿಯಡಿ 18,993 ಹುದ್ದೆಗಳ ಭರ್ತಿ

*ಹೈ–ಕ ಪ್ರದೇಶಕ್ಕೆ ಮಂಜೂರಾದ 12,696 ಕಾಮಗಾರಿಗಳಲ್ಲಿ 6,064 ಕಾಮಗಾರಿಗಳು ಪೂರ್ಣ. ಇದಕ್ಕಾಗಿ ₹3,750 ಕೋಟಿ ಮೀಸಲು

*1.90 ಲಕ್ಷ ಕೃಷಿ ಹೊಂಡ ನಿರ್ಮಾಣ. ಕೃಷಿ ಭಾಗ್ಯ ಯೋಜನೆಗಾಗಿ ₹1,898 ಕೋಟಿ ವೆಚ್ಚ

‌*2016ರಲ್ಲಿ ಬೆಳೆ ವಿಮೆಗೆ 10.46 ಲಕ್ಷ ರೈತರ ನೋಂದಣಿ. 6.25 ಲಕ್ಷ ರೈತರಿಗೆ ಬೆಳೆ ವಿಮೆ ಪರಿಹಾರ ಒಟ್ಟು ₹1,005 ಕೋಟಿ ಸಂದಾಯ

*2016ರಲ್ಲಿ 23.45 ಲಕ್ಷ ರೈತರಿಗೆ ₹11,902 ಕೋಟಿ ಸಾಲ ನೀಡಿಕೆ

*ಪಶುಭಾಗ್ಯ ಯೋಜನೆಯಡಿ 21,399 ರೈತರಿಗೆ ಪ್ರಯೋಜನ

*ಕ್ಷೀರ ಧಾರೆ ಯೋಜನೆಯಡಿ 8.97 ಲಕ್ಷ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ ಹಾಲಿಗೆ ₹5 ರಂತೆ ನಾಲ್ಕು ವರ್ಷಗಳಲ್ಲಿ ₹1,206 ಕೋಟಿ ವೆಚ್ಚ

*ಐದು ವರ್ಷಗಳಲ್ಲಿ ಬೃಹತ್‌ ನೀರಾವರಿ ಯೋಜನೆಗೆ ₹58,393 ಕೋಟಿ ಹಂಚಿಕೆ. ಇಲ್ಲಿಯವರೆಗೆ ₹43,348 ಕೋಟಿ ಖರ್ಚು

*ಪರಿಶಿಷ್ಟ ಜಾತಿ ಉಪಯೋಜನೆ, ಗಿರಿಜನ ವಿಶೇಷ ಘಟಕ ಯೋಜನೆಯಡಿ 2017ರಲ್ಲಿ ₹27,703 ಕೋಟಿ ಮೀಸಲು

*ಸ್ವ ಉದ್ಯೋಗ ಯೋಜನೆಯಡಿ 3.80 ಲಕ್ಷ ಫಲಾನುಭವಿಗಳಿಗೆ ₹1,089 ಕೋಟಿ ನೆರವು

*ಮಾತೃಪೂರ್ಣ ಯೋಜನೆಯಡಿ 8.31 ಲಕ್ಷ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೌಷ್ಟಿಕ ಬಿಸಿಯೂಟ

*1.4 ಕೋಟಿ ಕುಟುಂಬಗಳಿಗೆ ಆರೋಗ್ಯ ಸೇವೆ ಒದಗಿಸಲು ಆರೋಗ್ಯ ಭಾಗ್ಯ ಯೋಜನೆ

*2018ರ ಮಾರ್ಚ್‌ ಒಳಗೆ ಎರಡು ಕೋಟಿ ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು 13,000 ಶುದ್ಧ ಕುಡಿಯುವ ನೀರು ಘಟಕ ಸ್ಥಾಪನೆ

*ಗಾಂಧಿ ಪಥ–ಗ್ರಾಮ ಪಥ ಯೋಜನೆಯಡಿ 9,983 ಕಿ.ಮೀ ರಸ್ತೆ ನಿರ್ಮಾಣ

*ರಾಜ್ಯದ ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರ, ನಗರ ಪ್ರದೇಶಗಳು ಸೇರಿ ಒಟ್ಟು 247 ಇಂದಿರಾ ಕ್ಯಾಂಟೀನ್ ಆರಂಭಿಸಲು ಕ್ರಮ

*ಐದು ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯ ಅಡಿ 13.7 ಲಕ್ಷ ಫಲಾನುಭವಿಗಳಿಗೆ ಮನೆ ನಿರ್ಮಾಣ

*ಐದು ವರ್ಷಗಳಲ್ಲಿ 8,246 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಳ. 3,707 ಕಿ.ಮೀ ಉದ್ದದ ವಿದ್ಯುತ್ ವಿತರಣಾ ಜಾಲಗಳ ವಿಸ್ತರಣೆ

*2018ರ ಮಾರ್ಚ್‌ನಲ್ಲಿ ಕಲಬುರ್ಗಿ ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳಲಿದೆ

*ಬಂಡವಾಳ ಹೂಡಿಕೆಯಲ್ಲಿ 2013ರಲ್ಲಿ 11 ಸ್ಥಾನದಲ್ಲಿದ್ದ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ಏರಿಸಲಾಗಿದೆ

*ಬೃಹತ್ ಕೈಗಾರಿಕೆ ವಲಯದಲ್ಲಿ 1.89 ಲಕ್ಷ, ಸಣ್ಣ, ಮಧ್ಯ ಕೈಗಾರಿಕಾ ವಲಯದಲ್ಲಿ 11.36 ಲಕ್ಷ ಉದ್ಯೋಗ ಸೃಷ್ಟಿ.

ಪ್ರತಿಕ್ರಿಯಿಸಿ (+)