ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಸೇವೆಗೆ ಆಯುರ್ವೇದ ವೈದ್ಯರು

Last Updated 5 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ದೇಶದ ನಾಗರಿಕರಿಗೆ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವುದಕ್ಕಾಗಿ ದೇಶದಾದ್ಯಂತ ಇರುವ 1.5 ಲಕ್ಷ ಆರೋಗ್ಯ ಉಪ ಕೇಂದ್ರಗಳಲ್ಲಿ ಆಯುರ್ವೇದ ವೈದ್ಯರು, ನರ್ಸಿಂಗ್‌ ಪದವೀಧರರು ಅಥವಾ ಅರ್ಹ ಸಮುದಾಯ ಆರೋಗ್ಯ ಕಾರ್ಯಕರ್ತರನ್ನು ಕೇಂದ್ರ ಸರ್ಕಾರ ನಿಯೋಜಿಸಲಿದೆ.

ಇದಕ್ಕೂ ಮೊದಲು, ಸರ್ಕಾರ ಈ ಎಲ್ಲರಿಗೂ ಆರು ತಿಂಗಳ ವಿಶೇಷ ತರಬೇತಿಯನ್ನು ನೀಡಲಿದೆ.

‘ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಪರಿವರ್ತನೆಗೊಳ್ಳಲಿರುವ ಆರೋಗ್ಯ ಉಪ ಕೇಂದ್ರಗಳು ಹಲವು ಮೂಲಭೂತ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಆರೋಗ್ಯ ವ್ಯವಸ್ಥೆಯನ್ನು ಜನರ ಬಳಿಗೆ ತಲುಪಿಸಲಿವೆ’ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಬಜೆಟ್‌ ಭಾಷಣದಲ್ಲಿ ಹೇಳಿದ್ದರು.

ಈ ಕೇಂದ್ರಗಳು ಅಗತ್ಯ ಔಷಧ ಮತ್ತು ರೋಗ ‍ಪತ್ತೆ ಸೇವೆಗಳನ್ನೂ ಒದಗಿಸಲಿವೆ.

12 ರೀತಿಯ ಸೇವೆ: ವಿವಿಧ ರೀತಿಯ 12 ಮೂಲಭೂತ ಆರೋಗ್ಯ ಸೇವೆಗಳು ಈ ಕೇಂದ್ರಗಳಲ್ಲಿ ಲಭ್ಯವಿರುವಂತೆ ನೋಡಿಕೊಳ್ಳಲು ಕೇಂದ್ರ ಆರೋಗ್ಯ ಸಚಿವಾಲಯ ಯೋಚಿಸುತ್ತಿದೆ.

ಸದ್ಯ, 12ರ ಪೈಕಿ ಆರು ಸೇವೆಗಳನ್ನು ಈ ಉಪ ಕೇಂದ್ರಗಳಲ್ಲಿ ನೀಡಲಾಗುತ್ತಿದೆ.

‘ಈ ಕೇಂದ್ರಗಳಲ್ಲಿ ನಿಯೋಜನೆಗೊಳ್ಳಲಿರುವ ಸಿಬ್ಬಂದಿಗೆ ಗಂಭೀರ ಪ್ರಕರಣಗಳನ್ನು ತಕ್ಷಣ ಗುರುತಿಸಿ, ಹೆಚ್ಚಿನ ಪರಿಶೀಲನೆಗಾಗಿ ಅವುಗಳನ್ನು ಪ್ರಾಥಮಿಕ ಅಥವಾ ಸಮುದಾಯ ಕೇಂದ್ರಗಳಿಗೆ ಶಿಫಾರಸು ಮಾಡುವ ಸಾಮರ್ಥ್ಯ ಇರಬೇಕು. ಪ್ರಪಂಚದ ಎಲ್ಲಿಯೂ ಉಪ ಕೇಂದ್ರಗಳಲ್ಲಿ ವೈದ್ಯರನ್ನು ನೇಮಿಸುವ ಪದ್ಧತಿ ಇಲ್ಲ’ ಎಂದು ಸಚಿವಾಲಯದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಈ ಹಿಂದೆ, ಗ್ರಾಮೀಣ ಭಾಗದ ಆರೋಗ್ಯ ಕೇಂದ್ರಗಳಲ್ಲಿ ಎಂಬಿಬಿಎಸ್‌ಯೇತರ  ಸಿಬ್ಬಂದಿ ನೇಮಿಸುವುದಕ್ಕೆ ವೈದ್ಯರ ಒಕ್ಕೂಟ ವಿರೋಧ ವ್ಯಕ್ತಪಡಿಸಿತ್ತು.

ಯಾರು ಅರ್ಹರು...?

ಈ ಕೇಂದ್ರಗಳಲ್ಲಿ ನಿಯೋಜಿಸುವುದಕ್ಕಾಗಿ ನಾಲ್ಕೂವರೆ ವರ್ಷಗಳ ತರಬೇತಿ ಪಡೆದಿರುವ ಆಯುರ್ವೇದ ಪದವೀಧರರು ಅಥವಾ ನರ್ಸಿಂಗ್‌ ವೃತ್ತಿ ನಡೆಸುವರಿಗೆ ಆರೋಗ್ಯ ಸಚಿವಾಲಯ ಹುಡುಕಾಟ ನಡೆಸಲಿದೆ.

ಸಮುದಾಯ ವೈದ್ಯಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ ಪಡೆದವರನ್ನು ನೇಮಕ ಮಾಡಿಕೊಳ್ಳುವ ಆಯ್ಕೆಯನ್ನೂ ಅದು ಪರಿಶೀಲಿಸುತ್ತಿದೆ.

ಉಪ ಆರೋಗ್ಯ ಕೇಂದ್ರಗಳಲ್ಲಿ ಸೇವೆ ಸಲ್ಲಿಸುವುದಕ್ಕೂ ಮುನ್ನ ಇವರೆಲ್ಲರೂ ಆರು ತಿಂಗಳ ವಿಶೇಷ ತರಬೇತಿಯನ್ನು ಪಡೆಯುವುದು ಕಡ್ಡಾಯ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಈ ತರಬೇತಿ ನೀಡಲಿದೆ.

ಲಭ್ಯವಿರುವ ಮೂಲಭೂತ ಆರೋಗ್ಯ ಸೇವೆ

ತಾಯಿ–ಮಗುವಿಗೆ ಸಂಬಂಧಿಸಿದ ಆರೋಗ್ಯ ಸೇವೆ, ಕಣ್ಣಿನ ಸಮಸ್ಯೆ, ಸಾಂಕ್ರಾಮಿಕ ರೋಗಗಳ ನಿರ್ವಹಣೆ, ಇಎನ್‌ಟಿ (ಕಿವಿ, ಮೂಗು ಮತ್ತು ಗಂಟಲು), ಸಾಂಕ್ರಾಮಿಕ ಅಲ್ಲದ ರೋಗಗಳ ಪತ್ತೆ, ಮಾನಸಿಕ ಆರೋಗ್ಯ, ಗರ್ಭನಿರೋಧಕ, ಸಂತಾನೋತ್ಪತ್ತಿ, ದಂತ ವೈದ್ಯಕೀಯ, ವೃದ್ಧಾಪ್ಯಕ್ಕೆ ಸಂಬಂಧಿಸಿದ ಸೇವೆ.

ಅಂಕಿ–ಅಂಶ

1.5 ಲಕ್ಷ -ದೇಶದಲ್ಲಿರುವ ಆರೋಗ್ಯ ಉಪಕೇಂದ್ರಗಳು

₹1,200 ಕೋಟಿ - ಈ  ಕೇಂದ್ರಗಳನ್ನು ಆರೋಗ್ಯ ಮತ್ತು ಸ್ವಾಸ್ಥ್ಯ ಕೇಂದ್ರಗಳಾಗಿ ಪರಿವರ್ತಿಸಲು ಬಜೆಟ್‌ನಲ್ಲಿ ಮೀಸಲಿಟ್ಟ ಹಣ

₹ 17 ಲಕ್ಷ - ತರಬೇತಿ ಮತ್ತು ಉಪಕರಣ ಖರೀದಿಗಾಗಿ ಪ್ರತೀ ಕೇಂದ್ರಕ್ಕೂ ಮಾಡಬೇಕಾಗಿರುವ ವೆಚ್ಚ

₹25,000 ಕೋಟಿ - ಮುಂದಿನ ಐದು ವರ್ಷಗಳಲ್ಲಿ ಈ ಯೋಜನೆಗೆ ಬೇಕಾಗುವ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT