ಶುಕ್ರವಾರ, ಡಿಸೆಂಬರ್ 6, 2019
26 °C
ಸ್ಮೃತಿ, ಜೂಲನ್‌ ಉತ್ತಮ ಆಟ; ದಕ್ಷಿಣ ಆಫ್ರಿಕಾ ವನಿತೆಯರಿಗೆ ನಿರಾಸೆ

ಮೊದಲ ಏಕದಿನ ಪಂದ್ಯ: ಮಿಥಾಲಿ ‍ಪಡೆಯ ಜಯಭೇರಿ

Published:
Updated:
ಮೊದಲ ಏಕದಿನ ಪಂದ್ಯ: ಮಿಥಾಲಿ ‍ಪಡೆಯ ಜಯಭೇರಿ

ಕಿಂಬರ್ಲಿ: ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ (84; 98ಎ, 8ಬೌಂ, 1ಸಿ) ಅವರ ಆಕರ್ಷಕ ಅರ್ಧಶತಕ ಮತ್ತು ಜೂಲನ್‌ ಗೋಸ್ವಾಮಿ (24ಕ್ಕೆ4) ಅವರ ಬಿರುಗಾಳಿ ವೇಗದ ದಾಳಿಯ ನೆರವಿನಿಂದ ಭಾರತ ಮಹಿಳಾ ತಂಡದವರು ದಕ್ಷಿಣ ಆಫ್ರಿಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ 88ರನ್‌ಗಳ ಜಯಭೇರಿ ಮೊಳಗಿಸಿದ್ದಾರೆ. ಇದರೊಂದಿಗೆ ಮಿಥಾಲಿ ರಾಜ್‌ ಬಳಗ 3 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ಗಳಿಸಿದೆ.

ಡೈಮಂಡ್‌ ಓವಲ್‌ ಮೈದಾನದಲ್ಲಿ ಸೋಮವಾರ ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 213ರನ್‌ ಗಳಿಸಿತು. ಸವಾಲಿನ ಗುರಿ ಬೆನ್ನಟ್ಟಿದ್ದ ಹರಿಣಗಳ ನಾಡಿನ ವನಿತೆಯರು ಜೂಲನ್‌ ಮತ್ತು ಶಿಖಾ ಪಾಂಡೆ (23ಕ್ಕೆ3) ದಾಳಿಗೆ ಕಂಗೆಟ್ಟರು. ಆತಿಥೇಯರು 43.2 ಓವರ್‌ಗಳಲ್ಲಿ 125ರನ್‌ಗಳಿಗೆ ಹೋರಾಟ ಮುಗಿಸಿದರು.

ಭದ್ರ ಅಡಿಪಾಯ: ಬ್ಯಾಟಿಂಗ್‌ ಆರಂಭಿ ಸಿದ ಭಾರತ ತಂಡಕ್ಕೆ ಪೂನಮ್‌ ರಾವುತ್‌ (19; 47ಎ, 2ಬೌಂ) ಮತ್ತು ಎಡಗೈ ಬ್ಯಾಟ್ಸ್‌ವುಮನ್‌ ಮಂದಾನ ಭದ್ರ ಅಡಿಪಾಯ ಹಾಕಿಕೊಟ್ಟರು. ಈ ಜೋಡಿ ಮೊದಲ ವಿಕೆಟ್‌ಗೆ 55ರನ್‌ ಕಲೆಹಾಕಿತು. ಅಯಬೊಂಗ ಖಾಕಾ 15ನೇ ಓವರ್‌ನಲ್ಲಿ ಭಾರತಕ್ಕೆ ಮೊದಲ ಆಘಾತ ನೀಡಿದರು. ಕೊನೆಯ ಎಸೆತದಲ್ಲಿ ಖಾಕಾ, ಪೂನಮ್‌ ವಿಕೆಟ್‌ ಉರುಳಿಸಿದರು.

ಆ ನಂತರ ನಾಯಕಿ ಮಿಥಾಲಿ (45; 70ಎ, 2ಬೌಂ) ಮತ್ತು ಮಂದಾನ ಜೊತೆಯಾಟ ರಂಗು ಪಡೆದು ಕೊಂಡಿತು. ಆತಿಥೇಯರ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಇವರು ಕಲಾತ್ಮಕ ಹೊಡೆತಗಳ ಮೂಲಕ ಚೆಂಡನ್ನು ಬೌಂಡರಿ ಗೆರೆ ದಾಟಿಸಿ ತಂಡದ ರನ್‌ ಗಳಿಕೆಗೆ ವೇಗ ಹೆಚ್ಚಿಸಿದರು.

(ಜೂಲನ್‌ ಗೋಸ್ವಾಮಿ)

36ನೇ ಓವರ್‌ನಲ್ಲಿ ಮಂದಾನ ಔಟಾದರು. ಶತಕದ ಹಾದಿಯಲ್ಲಿ ಮುನ್ನುಗ್ಗುತ್ತಿದ್ದ ಅವರನ್ನು ಖಾಕಾ ಪೆವಿಲಿಯನ್‌ಗೆ ಅಟ್ಟಿದರು. ಇದರ ಬೆನ್ನಲ್ಲೇ ಮಿಥಾಲಿ ಕೂಡ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು.

ಆ ನಂತರ ಹರ್ಮನ್‌ಪ್ರೀತ್‌ ಕೌರ್‌ (16; 33ಎ, 1ಬೌಂ) ಮತ್ತು ಸುಷ್ಮಾ ವರ್ಮಾ (15; 21ಎ, 1ಬೌಂ) ತಾಳ್ಮೆಯ ಆಟ ಆಡಿ ತಂಡದ ಮೊತ್ತ 195ರ ಗಡಿ ದಾಟುವಂತೆ ನೋಡಿಕೊಂಡರು.

ಕುಸಿತದ ಹಾದಿ: ಗುರಿ ಬೆನ್ನಟ್ಟಿದ ಹರಿಣಗಳ ನಾಡಿನ ತಂಡ ಕುಸಿತದ ಹಾದಿ ಹಿಡಿಯಿತು. ಆರನೇ ಓವರ್‌ನಲ್ಲಿ ಲೀ (3) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದ ಶಿಖಾ ಪಾಂಡೆ ವಿಕೆಟ್‌ ಬೇಟೆಗೆ ಮುನ್ನುಡಿ ಬರೆದರು.

ಆ ನಂತರ ಜೂಲನ್‌ ಜಾದೂ ನಡೆಯಿತು. ಅವರು ಟ್ರೈಯಾನ್‌ (2), ಶಬನೀಮ್‌ ಇಸ್ಮಾಯಿಲ್‌ (4), ಖಾಕಾ (2) ಮತ್ತು ಕ್ಲಾಸ್‌ (1) ವಿಕೆಟ್‌ ಉರುಳಿಸಿದರು.

ಲೌರಾ ವೊಲ್ವಾಡ್ತ್‌ (21; 43ಎ, 2ಬೌಂ), ನಾಯಕಿ ಡಿ ವ್ಯಾನ್‌ ನೀಕರ್ಕ್‌ (41; 88ಎ, 2ಬೌಂ) ಮತ್ತು ಮರಿಜಾನ್‌ ಕಾಪ್‌  (23;31ಎ, 1ಬೌಂ, 1ಸಿ) ಮಾತ್ರ ಪ್ರತಿರೋಧ ಒಡ್ಡಿದರು.

ಸಂಕ್ಷಿಪ್ತ ಸ್ಕೋರ್‌

ಭಾರತ: 50 ಓವರ್‌ಗಳಲ್ಲಿ 7 ವಿಕೆಟ್‌ಗೆ 213 (ಪೂನಮ್‌ ರಾವುತ್‌ 19, ಸ್ಮೃತಿ ಮಂದಾನ 84, ಮಿಥಾಲಿ ರಾಜ್‌ 45, ಹರ್ಮನ್‌ಪ್ರೀತ್‌ ಕೌರ್‌ 16, ಸುಷ್ಮಾ ವರ್ಮಾ 15; ಮರಿಜಾನ್ ಕಾಪ್‌ 26ಕ್ಕೆ2, ಅಯಬೊಂಗ ಖಾಕಾ 47ಕ್ಕೆ2, ಮಸಬಟಾ ಕ್ಲಾಸ್‌ 36ಕ್ಕೆ1).

ದಕ್ಷಿಣ ಆಫ್ರಿಕಾ: 43.2 ಓವರ್‌ಗಳಲ್ಲಿ 125 (ಲೌರಾ ವೊಲ್ವಾಡ್ತ್‌ 21, ಡಿ ವ್ಯಾನ್‌ ನೀಕರ್ಕ್‌ 41, ಮರಿಜಾನ್‌ ಕಾಪ್‌ 23, ಸುನೆ ಲೂಸ್‌ ಔಟಾಗದೆ 21; ಜೂಲನ್‌ ಗೋಸ್ವಾಮಿ 24ಕ್ಕೆ4, ಶಿಖಾ ಪಾಂಡೆ 23ಕ್ಕೆ3, ರಾಜೇಶ್ವರಿ ಗಾಯಕವಾಡ್‌ 20ಕ್ಕೆ1, ಪೂನಮ್‌ ಯಾದವ್‌ 22ಕ್ಕೆ2).

ಫಲಿತಾಂಶ: ಭಾರತಕ್ಕೆ 88ರನ್‌ಗಳ ಗೆಲುವು ಹಾಗೂ 3 ಪಂದ್ಯಗಳ ಸರಣಿ ಯಲ್ಲಿ 1–0ರ ಮುನ್ನಡೆ.

ಪಂದ್ಯ ಶ್ರೇಷ್ಠ: ಸ್ಮೃತಿ ಮಂದಾನ.

ಪ್ರತಿಕ್ರಿಯಿಸಿ (+)