ಶುಕ್ರವಾರ, ಡಿಸೆಂಬರ್ 13, 2019
27 °C
ಕಿರಿಯರ ತಂಡದ ವ್ಯವಸ್ಥಾಪಕ ನದೀಮ್ ಖಾನ್ ಹೇಳಿಕೆ

ಭಾರತದ ‘ಮಾಂತ್ರಿಕ ಆಟ’ಕ್ಕೆ ಬೇಸ್ತು ಬಿದ್ದ ಪಾಕಿಸ್ತಾನ!

ಪಿಟಿಐ Updated:

ಅಕ್ಷರ ಗಾತ್ರ : | |

ಭಾರತದ ‘ಮಾಂತ್ರಿಕ ಆಟ’ಕ್ಕೆ ಬೇಸ್ತು ಬಿದ್ದ ಪಾಕಿಸ್ತಾನ!

ಕರಾಚಿ: ಪಾಕಿಸ್ತಾನ ತಂಡ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋಲಲು ಭಾರತ ಯುವಪಡೆಯ ‘ಮಾಂತ್ರಿಕ ಆಟ’ವೇ ಕಾರಣ ಎಂದು ಪಾಕ್‌ ಕೋಚ್‌ ಮಹಮ್ಮದ್‌ ನದೀಮ್ ಖಾನ್‌ ಅಭಿಪ್ರಾಯಪಟ್ಟಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಜನವರಿ 30ರಂದು ನಡೆದ ನಾಲ್ಕರ ಘಟ್ಟದ ಪಂದ್ಯದಲ್ಲಿ ಪಾಕಿಸ್ತಾನವನ್ನು ಭಾರತ 203 ರನ್‌ಗಳಿಂದ ಮಣಿಸಿತ್ತು. ಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಪ್ರಶಸ್ತಿ ಗಳಿಸಿತ್ತು.

ಪಾಕಿಸ್ತಾನ ತಂಡ ಸೋಮವಾರ ತಾಯ್ನಾಡಿಗೆ ವಾಪಸಾಯಿತು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ನದೀಮ್‌ ಖಾನ್‌ ‘ಭಾರತದ ವಿರುದ್ಧ ನಮ್ಮ ತಂಡ ಆಡಿದ ರೀತಿ ಗಮನಿಸಿದರೆ ಮಾಂತ್ರಿಕ ಆಟಕ್ಕೆ ಬಲಿಯಾದರು ಎಂದೇ ಅನಿಸುತ್ತದೆ’ ಎಂದರು.

‘ಪಂದ್ಯದಲ್ಲಿ ಪ್ರಬಲ ಪೈಪೋಟಿ ಎದುರಾಗುವ ನಿರೀಕ್ಷೆ ಇತ್ತು. ಆದರೆ ನಮ್ಮ ತಂಡ ನೀರಸ ಬ್ಯಾಟಿಂಗ್ ಮಾಡಿತು. ಅದು ಅತ್ಯಾಶ್ಚರ್ಯ ಉಂಟು ಮಾಡಿತು. ಎದುರಾಳಿ ಬೌಲ ರ್‌ಗಳ ದಾಳಿಗೆ ಬ್ಯಾಟ್ಸ್‌ಮನ್‌ಗಳು ಬೆಕ್ಕಸ ಬೆರಗಾದಂತೆ ಕಂಡಿತು. ಏನು ಮಾಡ ಬೇಕೆಂದು ತೋಚದೆ ಅವರು ವಿಕೆಟ್ ಕಳೆದುಕೊಂಡರು.

ಒತ್ತಡಕ್ಕೆ ಸಿಲುಕಿ ಪಂದ್ಯವನ್ನು ಕೈಚೆಲ್ಲಿದರು’ ಎಂದು ನದೀಮ್‌ ಹೇಳಿದರು.

‘ಪಾಕಿಸ್ತಾನದಲ್ಲಿ ಯುವ ಕ್ರಿಕೆಟ್‌ ಬೆಳವಣಿಗೆಗೆ ಸಾಕಷ್ಟು ಶ್ರಮಿಸಬೇಕಾದ ಅಗತ್ಯವಿದೆ. ಇಂಥ ಸಂದರ್ಭದಲ್ಲೂ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ತಂಡ ಸೆಮಿಫೈನಲ್ ತಲುಪಿದ್ದು ಖುಷಿ ತಂದಿದೆ. ಹಾಗೆಂದು ಇದು ತೃಪ್ತಿಕರ ಸಾಧನೆ ಎಂದು ಹೇಳಲಾರೆ’ ಎಂದ ಅವರು ‘ಭಾರತ ತಂಡದ ಕೋಚ್‌ ರಾಹುಲ್ ದ್ರಾವಿಡ್‌ ಅನುಸರಿಸುವ ಮಾದರಿಯನ್ನು ನಾವು ಕೂಡ ಅಳವಡಿಸಿಕೊಳ್ಳಬಹುದಾಗಿದೆ’ ಎಂದರು.

**

ನದೀಮ್ ಖಾನ್ ಯಾರು?

48 ವರ್ಷದ ನದೀಮ್ ಖಾನ್‌ ಪಾಕಿಸ್ತಾನ ಪರ ತಲಾ ಎರಡು ಟೆಸ್ಟ್ ಮತ್ತು ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಎಡಗೈ ಸ್ಪಿನ್ನರ್ ಮತ್ತು ಬಲಗೈ ಬ್ಯಾಟ್ಸ್‌ಮನ್‌ ಆಗಿರುವ ಅವರು ಟೆಸ್ಟ್‌ನಲ್ಲಿ 34 ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಎರಡು ರನ್ ಗಳಿಸಿದ್ದಾರೆ. ಟೆಸ್ಟ್‌ನಲ್ಲಿ ಎರಡು ವಿಕೆಟ್ ಕೂಡ ಕಬಳಿಸಿದ್ದಾರೆ. 1999ರಲ್ಲಿ ಭಾರತದ ವಿರುದ್ಧ ಚೆನ್ನೈನಲ್ಲಿ ನಡೆದ ಟೆಸ್ಟ್‌ನಲ್ಲಿ ಆಡಿದ್ದರು. ಮೊದಲ ಇನಿಂಗ್ಸ್‌ನಲ್ಲಿ ಅನಿಲ್ ಕುಂಬ್ಳೆ ಎಸೆತದಲ್ಲಿ ದ್ರಾವಿಡ್‌ಗೆ ಕ್ಯಾಚ್‌ ನೀಡಿದ್ದರು.

ಪ್ರತಿಕ್ರಿಯಿಸಿ (+)