ಮಂಗಳವಾರ, ಡಿಸೆಂಬರ್ 10, 2019
21 °C

ಟ್ವೀಟ್ ಸಮರ: ಸಿದ್ದರಾಮಯ್ಯ ಸವಾಲಿಗೆ ಪ್ರಶ್ನೆಗಳನ್ನೇ ಉತ್ತರವಾಗಿಸಿದ ಯಡಿಯೂರಪ್ಪ

Published:
Updated:
ಟ್ವೀಟ್ ಸಮರ: ಸಿದ್ದರಾಮಯ್ಯ ಸವಾಲಿಗೆ ಪ್ರಶ್ನೆಗಳನ್ನೇ ಉತ್ತರವಾಗಿಸಿದ ಯಡಿಯೂರಪ್ಪ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಮಾಡಿರುವ ಭ್ರಷ್ಟಾಚಾರದ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ಷೇಪ ವ್ಯಕ್ತಪಡಿಸಿದ್ದು, ಟ್ವಿಟರ್‌ನಲ್ಲಿ ಚರ್ಚೆಗೆ ಆಹ್ವಾನ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಇಬ್ಬರು ನಾಯಕರ ನಡುವಣ ಟ್ವೀಟ್ ಸಮರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.

ನಗರದ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರು ಐದು ವಿಷಯಗಳನ್ನು ಮುಂದಿಟ್ಟುಕೊಂಡು ಪ್ರಧಾನಿಯವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.

‘ಪ್ರಧಾನಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿರುವುದು ಸಂತಸ ತಂದಿದೆ. ಈಗ ಅವರನ್ನು ಚರ್ಚೆಗೆ ಆಹ್ವಾನಿಸುತ್ತಿದ್ದೇನೆ.

1. ಲೋಕಪಾಲ ನೇಮಕಾತಿ ಮಾಡಿ

2. ನ್ಯಾಯಾಧೀಶ ಲೋಯಾ ಅವರ ಸಾವಿನ ತನಿಖೆ ಮಾಡಿ

3. ಜಯ್‌ಶಾ ಅವರ ಸಂಪತ್ತಿನಲ್ಲಿ ದಿಢೀರ್ ಏರಿಕೆಯಾಗಿರುವ ಬಗ್ಗೆ ತನಿಖೆ ನಡೆಸಿ

4. ಕಳಂಕವಿರದ ವ್ಯಕ್ತಿಯನ್ನು ನಿಮ್ಮ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿ

ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರಿಗೆ ಯಡಿಯೂರಪ್ಪ ಮೂರು ಪ್ರಶ್ನೆಗಳನ್ನು ಕೇಳಿದ್ದಾರೆ. ಅವರು ಕೇಳಿರುವ ಪ್ರಶ್ನೆಗಳು ಹೀಗಿವೆ:

‘ಪ್ರಶ್ನೆ 1: ಡಿಯರ್ #10PercentCM @siddaramaiah ನೀವು ಈ ಚರ್ಚೆ ಆರಂಭಿಸಿದ್ದು ನನಗೂ ಸಂತಸ ತಂದಿದೆ. ನೀವು ದೆಹಲಿಯತ್ತ ಮುಖಮಾಡುವ ಮುನ್ನ ಇಲ್ಲಿನ ಕೆಲವು ಪ್ರಶ್ನೆಗಳಿಗೆ ಯಾಕೆ ಉತ್ತರಿಸಬಾರದು:

ಯಾಕೆ ನೀವು ಲೋಕಾಯುಕ್ತದ ಎಲ್ಲ ಅಧಿಕಾರವನ್ನು ರದ್ದುಗೊಳಿಸಿ ಹಲ್ಲಿಲ್ಲದಂತೆ ಮಾಡಿದಿರಿ? ಉತ್ತರಿಸುವ ಧೈರ್ಯ ತೋರಿ (#Dare2Answer)’

‘ಪ್ರಶ್ನೆ 2: ಡಿಯರ್ #10PercentCM @siddaramaiah ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಎಫ್‌ಐಆರ್‌ನಲ್ಲಿ ಮೊದಲ ಆರೋಪಿ ಎಂದು ಪರಿಗಣಿಸಲಾಗಿರುವ ಕೆ.ಜೆ. ಜಾರ್ಜ್ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ? ಯಾಕೆ ಅಂತಹ ಸಚಿವರ ಪರ ನಿಂತಿದ್ದೀರಿ?  ಅಂತ ಕಳಂಕಿತರಿಂದ ನಿಮ್ಮ ಸಚಿವಸಂಪುಟಕ್ಕೆ ಏನು ಅರ್ಹತೆ ದೊರೆಯಲಿದೆ? ಉತ್ತರಿಸುವ ಧೈರ್ಯ ತೋರಿ (#Dare2Answer)’.

‘ಪ್ರಶ್ನೆ 3: ಡಿಯರ್ #10PercentCM @siddaramaiah ನಿಯಮಗಳನ್ನು ಉಲ್ಲಂಘಿಸಿ ಯೋಜನೆಗಳಿಗೆ ಅನುಮತಿ ನೀಡುವುದಕ್ಕಾಗಿ ಉದ್ಯಮಿಯೊಬ್ಬರಿಂದ ₹ 70 ಲಕ್ಷದ ಹ್ಯೂಬ್ಲೊ ವಾಚ್ ಪಡೆದುಕೊಂಡಿರುವುದನ್ನು ನಿಮಗೆ ನೆನಪಿಸುತ್ತಿದ್ದೇನೆ. ಭ್ರಷ್ಟಾಚಾರಕ್ಕೆ ಸಾಕ್ಷ್ಯ ಸಾಕಲ್ಲವೇ? ಉತ್ತರಿಸುವ ಧೈರ್ಯ ತೋರಿ (#Dare2Answer)’.

ಪ್ರತಿಕ್ರಿಯಿಸಿ (+)