ಗುರುವಾರ , ಡಿಸೆಂಬರ್ 12, 2019
25 °C

ಗುರುಕರಜಾತರು

Published:
Updated:
ಗುರುಕರಜಾತರು

ನಮ್ಮ ಭಾರತೀಯ ಪರಂಪರೆಯಲ್ಲಿ ವ್ಯಕ್ತಿಗೆ ಎರಡು ಜನ್ಮಗಳನ್ನು ಪ್ರತಿಪಾದಿಸಲಾಗಿದೆ. ಒಂದು ತಂದೆ-ತಾಯಿಗಳಿಂದಾದ ದೈಹಿಕ ಜನ್ಮವಾದರೆ ಮತ್ತೊಂದು ಗುರುವಿನಿಂದ ಪ್ರಾಪ್ತವಾದ ಆಧ್ಯಾತ್ಮಿಕ ಜನ್ಮ. ಈ ಕಾರಣಕ್ಕಾಗಿಯೇ ಭಾರತೀಯ ಶ್ರುತಿ ಮತ್ತು ಸ್ಮೃತಿಗಳಲ್ಲಿ ’ದ್ವಿಜ’ ಎಂಬ ಶಬ್ದವು ಪ್ರಚಲಿತವಾಗಿದೆ. ದ್ವಿಜ ಎಂದರೆ ಎರಡು ಬಾರಿ ಹುಟ್ಟಿದವನು ಎಂದರ್ಥ.

ಸ್ಮೃತಿಗಳನುಸಾರ ಚತುರ್ವರ್ಣಗಳಲ್ಲಿ ಮೊದಲ ಮೂರು ವರ್ಣದವರು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ದ್ವಿಜರು. ಇವರಿಗೆ ಮಾತ್ರ ಗುರುಗಳಿಂದ ಉಪನಯನ ಹೊಂದುವ ಅಧಿಕಾರವಿರುವುದರಿಂದ ಎರಡು ಜನ್ಮಗಳು ಸಾಧ್ಯ. ಆದರೆ ದ್ವಿಜ ಶಬ್ದವು ಕಾಲಾಂತರದಲ್ಲಿ ಬ್ರಾಹ್ಮಣ ವರ್ಣದವರಿಗೆ ಮಾತ್ರ ಸೀಮಿತವಾದಂತೆ ತೋರುತ್ತದೆ. ವೈದಿಕ ಧರ್ಮಗಳಲ್ಲಷ್ಟೇ ಅಲ್ಲ, ಅವೈದಿಕ ಧರ್ಮಗಳಲ್ಲಿಯೂ ಗುರುಪುತ್ರರಾಗಿ ಆಧ್ಯಾತ್ಮಿಕ ಜನ್ಮಹೊಂದುವ ಅವಕಾಶವಿರುವುದನ್ನು ಕಾಣಬಹುದು.

’ಗುರುವಿನಿಂದ ಉಪದೇಶವ ಪಡೆದು ಗುರುಪುತ್ರನೆನಿಸಿಕೊಂಡ ಬಳಿಕ ಪೂರ್ವದ ತಾಯಿ-ತಂದೆ ಎಂದು, ಬಂಧುಬಳಗವೆಂದು ಮಲಸಂಬಂಧವ ನೆನೆಯಲಾಗದು, ನೆನೆದರೆ ಶಿವದ್ರೋಹ ತಪ್ಪದಯ್ಯಾ, ಎಂದು ಹೇಳಿರುವ ತೋಂಟದ ಸಿದ್ಧಲಿಂಗ ಯತಿಗಳ ದೃಷ್ಟಿಯಲ್ಲಿ ಲೌಕಿಕ ತಂದೆ-ತಾಯಿಗಳಿಂದ ಜನ್ಮ ಪಡೆದ ವ್ಯಕ್ತಿಯು ಗುರುವಿನಿಂದ ಉಪದೇಶ ಹೊಂದಿ ಗುರುಪುತ್ರನಾಗುವ ಮೂಲಕ ಆಧ್ಯಾತ್ಮಿಕ ಜನ್ಮವನ್ನು ಹೊಂದಬಹುದು.

ಇಂಥವರನ್ನು ಗುರುಕರಜಾತರು ಅಥವಾ ಗುರುಕರ ಸಂಜಾತರು ಎಂದು ಹೇಳುವ ಪರಿಪಾಠವು ಲಿಂಗಾಯತ ಧರ್ಮೀಯರಲ್ಲಿದೆ. ಗುರು ತನ್ನ ಕರುಣೆಯ ಹಸ್ತದಿಂದ ವ್ಯಕ್ತಿಯ ಸಾಂಸಾರಿಕ ವಿಷಯ ವ್ಯಾಮೋಹಗಳನ್ನು ತೊಡೆದು ಹಾಕಿ ಅವನನ್ನು ಮಾಯಾ ಪ್ರಪಂಚದಿಂದ ಮುಕ್ತಗೊಳಿಸುತ್ತಾನೆ. ಭೌತಿಕ ದೇಹವನ್ನು ಶೋಧಿಸಿ ಅದನ್ನು ಚಿನುಮಯಲಿಂಗವಾಗಿಸುವ ಗುರು, ಮನವನ್ನು ಶೋಧಿಸಿ ಮನವನ್ನು ಘನಲಿಂಗವಾಗಿಸುತ್ತಾನೆ. ಕರಣಂಗಳ ಕಳೆದು ಲಿಂಗಕರಣಂಗಳನ್ನಾಗಿಸಿ ವ್ಯಕ್ತಿಗೆ ಹೊಸ ಜನ್ಮವನ್ನು ಕೊಡುವವನೆ ಶ್ರೀಗುರು. ಹಾಗಾಗಿ ವ್ಯಕ್ತಿಗೆ ಗುರುವೇ ತಾಯಿ, ಗುರುವೇ ತಂದೆ ಎನಿಸುವನು.

ಘನಮಠದ ನಾಗಭೂಷಣ ಶಿವಯೋಗಿಗಳು ಗುರುವಿನಿಂದ ಸಂಸ್ಕಾರ ಹೊಂದಿ ಗುರುವಿನ ಹಸ್ತದಲ್ಲಿ ಹುಟ್ಟಿದ ಪುಣ್ಯಜೀವಿಗಳನ್ನು ಕುರಿತು- ’ಗುರುಕರಜಾತರು ನಮ್ಮವರು ಭವಮರಣವ ಗೆಲಿದರು ನಮ್ಮವರು. ನಿತ್ಯ ನಿರ್ಮಲರು ನಮ್ಮವರು, ಬಲು ಸತ್ಯವಾಚರು ನಮ್ಮವರು’ ಎಂದು ಮುಂತಾಗಿ ವರ್ಣಿಸಿದ್ದಾರೆ. ಹುಟ್ಟು-ಸಾವುಗಳ ಚಕ್ರದಿಂದ ಗುರುಕರಜಾತರು ಮುಕ್ತರಾಗಿರುತ್ತಾರೆ.

ಅವರು ನಿತ್ಯನಿರ್ಮಲರು, ಸತ್ಯಭಾಷಿಗಳು, ಶರಣರು ಶುಭದಾಚರಣರು ಘನಮಹಿಮಾಶಾಲಿಗಳು. ಭಗವಂತನ ಪಾದದಲ್ಲಿ ಬೆರೆದು ಸುಖಿಸುವ ಪುಣ್ಯಚರಿತರು ಎಂದು ಗುರುಕರಜಾತರನ್ನು ಕರೆದಿರುವ ಅವರು ಗುರುಕರಜಾತರು ಅನುಸರಿಸಬೇಕಾದ ಕೆಲವು ನಿಯಮಗಳನ್ನು ವಿಧಿಸಿದ್ದಾರೆ. ‘ದಾರಿತಪ್ಪಿ ಚರಿಸಿಪ್ಪ ಮಾನವರ ಕೇರಿಯ ಮೆಟ್ಟರು ನಮ್ಮವರು, ಧರೆಯೊಳು ಸುರೆಮಾಂಸವ ಭುಂಜಿಪ ದುರ್ನರರನು ಕೂಡರು ನಮ್ಮವರು’ ಎಂದು ಹೇಳುತ್ತ ಗುರುಕರಜಾತರ ಇರುವಿಕೆಯನ್ನು ವಿವರಿಸುತ್ತಾರೆ. ಇಂಥ ಗುರುಕರಜಾತರು ನಮ್ಮ ಶರಣರ ಸಲ್ಲಲಿತ ಸನ್ಮಾರ್ಗಕ್ಕೆ ಸಲ್ಲುವರು.

ಪ್ರತಿಕ್ರಿಯಿಸಿ (+)