7

ಬಿಜೆಪಿ, ಜೆಡಿಎಸ್‌ನಲ್ಲಿ ಪಕ್ಕಾ; ‘ಕೈ’‌ನಲ್ಲಿ ಪೈಪೋಟಿ

Published:
Updated:

ವಿಜಯಪುರ: ಒಂದೂವರೆ ದಶಕದಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕ ರಮೇಶ ಭೂಸನೂರ ಕಣಕ್ಕಿಳಿಸುವ ಉಮೇದು ಕಮಲ ಪಾಳೆಯದ್ದು. ಸಚಿವರಾದ ಬಳಿಕ ಸತತ ನಾಲ್ಕು ಚುನಾವಣೆಗಳಲ್ಲಿ ಸ್ಪರ್ಧಿಸಿ, ಎರಡನೇ ಸ್ಥಾನ ಗಟ್ಟಿ ಮಾಡಿಕೊಂಡಿರುವ ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಂ.ಸಿ.ಮನಗೂಳಿ ಅವರನ್ನೇ ಏಳನೇ ಬಾರಿಗೂ ಸ್ಪರ್ಧೆಗಿಳಿಸುವುದಾಗಿ ಘೋಷಿಸಿದೆ.

ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌, ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ, ಹಿಂದಿನಂತೆಯೇ ಈ ಬಾರಿಯೂ ಸಿಂದಗಿ ಮತ ಕ್ಷೇತ್ರದ ಟಿಕೆಟ್‌ಅನ್ನು ಹಿಂದುಳಿದ ವರ್ಗಕ್ಕೆ ನೀಡಬೇಕು ಎಂಬ ತನ್ನ ಅಚಲ ನಿರ್ಧಾರವನ್ನು ಆಂತರಿಕವಾಗಿ ಈಗಾಗಲೇ ಪ್ರಕಟಿಸಿದೆ.

ಮೂರು ಬಾರಿ ಸ್ಪರ್ಧಿಸಿ ಸೋತಿದ್ದ ಕೋಲಿ (ಗಂಗಾಮತಸ್ಥ) ಸಮಾಜದ ಮುಖಂಡ, ಮಾಜಿ ಶಾಸಕ ಶರಣಪ್ಪ ಸುಣಗಾರ ಬದಲು, ಕುರುಬ ಸಮಾಜಕ್ಕೆ ಈ ಬಾರಿ ಅವಕಾಶ ಒದಗಿಸಬೇಕು ಎಂದು ನಿರ್ಧರಿಸಿದೆ. ಈ ಒಳಮರ್ಮ ಅರಿತ ಆಕಾಂಕ್ಷಿಗಳು ಈಗಾಗಲೇ ಕ್ಷೇತ್ರ ಸುತ್ತುವ ಜತೆ, ಟಿಕೆಟ್‌ಗೆ ತೀವ್ರ ಪೈಪೋಟಿ ನಡೆಸಿದ್ದಾರೆ. ಕುರುಬ ಸಮಾಜಕ್ಕೆ ಸಿಂದಗಿ ಟಿಕೆಟ್‌ ಎಂಬುದು ಕಾಂಗ್ರೆಸ್‌ನ ಆಂತರಿಕ ವಲಯದಲ್ಲಿ ಘೋಷಣೆಯಾಗುತ್ತಿದ್ದಂತೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ ಮೇಟಿ ಪತಿ, ಗೋವಾ ಕನ್ನಡಿಗರ ಸಂಘದ ಅಧ್ಯಕ್ಷ ಸಿದ್ದಣ್ಣ ಮೇಟಿ ‘ಕೈ’ ಟಿಕೆಟ್‌ಗಾಗಿ ಯತ್ನ ನಡೆಸಿದ್ದಾರೆ.

ಈಗಾಗಲೇ ಅಧ್ಯಕ್ಷೆ ಪತ್ನಿ ಜತೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ಸಮಾಜದ ಜತೆ ಬೆಂಬಲಿಗ ಪಡೆ ಸೃಷ್ಟಿಸಿಕೊಂಡು ತಮ್ಮದೇ ಲಾಬಿ ನಡೆಸಿದ್ದಾರೆ. ಬದಲಾದ ಕಾಲಘಟ್ಟದಲ್ಲಿ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದಲ್ಲಿ ವರ್ತೂರು ಪ್ರಕಾಶ್‌ ಕುರುಬ ಸಮಾಜ ಸಂಘಟನೆ ಬಲಪಡಿಸುತ್ತಿದ್ದು, ಇದಕ್ಕೆ ತಿರುಗೇಟು ನೀಡಲು ಶಾಸಕ ಸಿ.ಎಸ್‌.ನಾಡಗೌಡ ಸಿದ್ದಣ್ಣ ಪರ ‘ಹೈಕಮಾಂಡ್‌’ ಮಟ್ಟದಲ್ಲಿ ಪ್ರಬಲ ಬ್ಯಾಟಿಂಗ್‌ ನಡೆಸಿದ್ದಾರೆ ಎನ್ನಲಾಗಿದೆ.

ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಸಂಬಂಧಿ ಡಾ.ಬಿ.ಮಂಜುಳಾ ಗೋವರ್ಧನಮೂರ್ತಿ ಸಹ ಏಳೆಂಟು ತಿಂಗಳಿಂದ ಸಿಂದಗಿಯಲ್ಲಿ ಮನೆ ಮಾಡಿಕೊಂಡು ಸಂಘಟನೆಯಲ್ಲಿ ತಲ್ಲೀನರಾಗಿದ್ದಾರೆ. ಸಾಮಾಜಿಕ ಕೆಲಸಗಳನ್ನು ಸಂಘಟಿಸಿದ್ದಾರೆ. ಶೀಘ್ರದಲ್ಲೇ ಉಚಿತ ಸಾಮೂಹಿಕ ವಿವಾಹವೂ ನಡೆಯಲಿವೆ. ಸಾರಿಗೆ ಸಚಿವರ ಮೂಲಕ ಕ್ಷೇತ್ರದ ಟಿಕೆಟ್‌ ನನಗೆ ಸಿಗುವುದು ಎಂಬ ಹುಮ್ಮಸ್ಸಿನಲ್ಲಿ ಕ್ಷೇತ್ರದಾದ್ಯಂತ ತಿರುಗಾಟ ನಡೆಸಿದ್ದಾರೆ.

ಸಚಿವ ಎಂ.ಬಿ.ಪಾಟೀಲ ಬೆಂಬಲಿಗರಾದ ಅಶೋಕ ವಾರದ, ವಿಠ್ಠಲ ಕೋಳೂರ ಸಹ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಸಚಿವರ ಸಮ್ಮತಿಯ ನಿರೀಕ್ಷೆಯಲ್ಲಿದ್ದಾರೆ. ವಕೀಲರ ಸಂಘ ಸಹ ಪಿಎಲ್‌ಡಿ ಬ್ಯಾಂಕ್‌ ಮಾಜಿ ಅಧ್ಯಕ್ಷ ಅಶೋಕ ಗಾಯಕವಾಡ ಅವರಿಗೆ ಟಿಕೆಟ್‌ ನೀಡಬೇಕು ಎಂಬ ಹಕ್ಕೊತ್ತಾಯ ಮಂಡಿಸಿದೆ.

ಮಾಜಿ ಸಚಿವ ಆರ್‌.ಬಿ.ಚೌಧರಿ ಪುತ್ರ ಡಾ.ಗೌತಮ್‌ ಚೌಧರಿ ಸಹ ಟಿಕೆಟ್‌ಗೆ ಬೇಡಿಕೆಯಿಟ್ಟಿದ್ದಾರೆ. ಸಾಹೇಬ್ರು ಓಕೆ ಅಂದ್ರೇ ನಾನೇ ಸ್ಪರ್ಧಿಸುವೆ ಎಂಬ ಉಮೇದು ಜಿಲ್ಲಾ ಘಟಕದ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡರದ್ದು.

ಉಳಿದಂತೆ ಕುರುಬ ಸಮುದಾಯದವರೇ ಆದ ಮಲ್ಲಣ್ಣ ಸಾಲಿ, ಕೃಷ್ಣಾ ಕಾಡಾ ನಿರ್ದೇಶಕ ಬಸಲಿಂಗಪ್ಪ ಗೊಬ್ಬೂರ, ಎಚ್‌.ಎಂ.ಯಡಗಿ ಪಾಟೀಲ, ಈರಗಂಟಪ್ಪ ಮಾಗಣಗೇರಿ, ಕೆ.ಡಿ.ಪೂಜಾರಿ (ವಕೀಲ) ಸಹ ಟಿಕೆಟ್‌ ಆಕಾಂಕ್ಷಿಗಳು.

ಪಾಟೀಲದ್ವಯರ ‘ಕೈ’ಗೆ ಜವಾಬ್ದಾರಿ

ಬಸವನಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲರ ಹೆಗಲಿಗೆ ಸಿಂದಗಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಯನ್ನು ಕೆಪಿಸಿಸಿ ವಹಿಸಿದೆ. ಉತ್ತರ ಪ್ರದೇಶದ ತಂಡವೊಂದು ಕ್ಷೇತ್ರ ವ್ಯಾಪ್ತಿಯಲ್ಲಿ ಮತದಾರರ ಅಭಿಪ್ರಾಯ ಸಂಗ್ರಹಿಸುತ್ತಿದೆ.

ಕಾಂಗ್ರೆಸ್‌ ಟಿಕೆಟ್‌ ಯಾರ ಪಾಲಾಗಲಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ‘ಆಪರೇಷನ್‌ ಹಸ್ತ’ ನಡೆಸುವ ತಂತ್ರಗಾರಿಕೆ ರೂಪಿಸಿದ್ದರೂ; ಆಪರೇಷನ್‌ ನಡೆಯುವ ಯಾವ ಲಕ್ಷಣಗಳು ಕ್ಷೇತ್ರದಲ್ಲಿ ಇದೂವರೆಗೂ ಗೋಚರಿಸಿಲ್ಲ.

ಸಂಘ ಪರಿವಾರದ ಹಿನ್ನೆಲೆ ಹೊಂದಿರುವ, ಸ್ಥಳೀಯ ಬಿಜೆಪಿ ಮುಖಂಡ ಶಂಭು ಕಕ್ಕಳಮೇಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಒನ್‌ ಮ್ಯಾನ್‌ ಆರ್ಮಿ. ಐದಾರು ತಿಂಗಳಿನಿಂದಲೂ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿ ಹಳ್ಳಿ ಹಳ್ಳಿ ಸುತ್ತಿ ಬಿಜೆಪಿ ಪರ ಪ್ರಚಾರ ನಡೆಸುತ್ತಿದ್ದಾರೆ.

ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಖುದ್ದಾಗಿ ಹೇಳಿದರೂ, ಸುತ್ತಾಟ ನಿಲ್ಲಿಸಿಲ್ಲ. ಸಂಘದ ಹಿರಿಯರ ಆಶೀರ್ವಾದವಿದೆ. ಕೇಂದ್ರ ಸಚಿವ ಅನಂತಕುಮಾರ ಕೃಪಾಕಟಾಕ್ಷದ ನಿರೀಕ್ಷೆಯಲ್ಲಿ ಕೊನೆಯ ಕ್ಷಣದವರೆಗೂ ಶಂಭು ಟಿಕೆಟ್‌ಗೆ ಅತೀವ ಯತ್ನ ನಡೆಸಿದ್ದಾರೆ.

ಮಗನ ಬದಲು ಅಪ್ಪನೇ ಸ್ಪರ್ಧಿ...

ಸತತ ನಾಲ್ಕು ಸೋಲು, ವಯೋಸಹಜ ಕಾರಣದಿಂದ ಈ ಬಾರಿ ಸ್ಪರ್ಧಿಸಲ್ಲ. ನನ್ನ ಮಗ, ವಕೀಲ ಅಶೋಕ ಮನಗೂಳಿ ಕಣಕ್ಕಿಳಿಸುವುದಾಗಿ ಘೋಷಿಸಿದ್ದ ಎಂ.ಸಿ.ಮನಗೂಳಿ ಚುನಾವಣೆ ಹೊಸ್ತಿಲಲ್ಲಿ ತಾವೇ ಜೆಡಿಎಸ್‌ನ ಘೋಷಿತ ಅಭ್ಯರ್ಥಿಯಾಗಿದ್ದಾರೆ. ಈಗಾಗಲೇ ಪ್ರಚಾರ ಆರಂಭಿಸಿದ್ದು, ಎಲ್ಲೆಡೆ ‘ಮನಗೂಳಿ ಸೋತು ಸತ್ತ ಅನ್ನಿಸಬ್ಯಾಡ್ರೀ... ಗೆದ್ದು ಸತ್ತ ಅನ್ನಿಸಿ...’ ಎಂದು ಮತದಾರರಿಗೆ ಮನವಿ ಮಾಡುತ್ತಿದ್ದಾರೆ.

ಇತರರ ಸ್ಪರ್ಧೆ...

ಎಐಎಂಐಎಂನಿಂದ ನಾಗರಹಳ್ಳಿಯ ಶಂಶುದ್ದೀನ್‌ ಮುಲ್ಲಾ, ಬಿಎಸ್‌ಪಿಯಿಂದ ಸಾಸಾಬಾಳದ ಇಮಾಮ್‌ಸಾಬ್‌ ಶೇಖ್‌, ಎಸ್‌ಡಿಪಿಐನಿಂದ ಸಲೀಂ ಹಲ್ದಿ, ಆಲಮೇಲ ಪಟ್ಟಣದ ಮುಸ್ಲಿಂ ಸಮುದಾಯದ ಪ್ರಬಲ ಮುಖಂಡ, ಪಟ್ಟಣ ಪಂಚಾಯಿತಿ ಸದಸ್ಯ ಸಾಧಿಕ್ ಸುಂಬಡ ಪಕ್ಷೇತರರಾಗಿ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ಕ್ಷೇತ್ರ ಇದುವರೆಗೂ ಪಂಚಮಸಾಲಿ, ರಡ್ಡಿ, ಕುಡು ಒಕ್ಕಲಿಗ, ಮುಸ್ಲಿಂ, ಕೋಲಿ (ಗಂಗಾ ಮತಸ್ಥ), ಬಣಜಿಗ, ಗಾಣಿಗೇರ ಸಮುದಾಯದವರಿಗೆ ಶಾಸಕರಾಗಿ ಅಧಿಕಾರ ನಡೆಸುವ ಅವಕಾಶ ಕೊಟ್ಟಿದೆ. ಒಮ್ಮೆಯೂ ಕುರುಬ ಸಮುದಾಯಕ್ಕೆ ಅವಕಾಶ ದೊರಕದಿದ್ದು, ಇದರ ಲಾಭವನ್ನು ಪಡೆಯಲು ಕಾಂಗ್ರೆಸ್ ಚಿಂತನೆ ನಡೆಸಿದೆ.

* * 

ಬಿಜೆಪಿ–ಜೆಡಿಎಸ್‌ ಕ್ಷೇತ್ರದಲ್ಲಿ ಪ್ರಚಾರ ಆರಂಭಿಸಿವೆ. ಕಾಂಗ್ರೆಸ್‌ ಹೊಸ ಮುಖದ ಶೋಧದಲ್ಲಿದೆ. ಅಭ್ಯರ್ಥಿ ಘೋಷಣೆ ಬಳಿಕ ಕ್ಷೇತ್ರದ ಸ್ಪಷ್ಟ ಚಿತ್ರಣ ಸಿಗಲಿದೆ

ಅಮೃತಗೌಡ ಬಿರಾದಾರ ರಾಜಕೀಯ ವಿಶ್ಲೇಷಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry