ಭಾನುವಾರ, ಡಿಸೆಂಬರ್ 8, 2019
24 °C

‘ಕಾಂಗ್ರೆಸ್‌ ಸರ್ಕಾರದ್ದು ಸಾಧನೆ, ಬಿಜೆಪಿಯದ್ದು ಹುಸಿ ಭರವಸೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಕಾಂಗ್ರೆಸ್‌ ಸರ್ಕಾರದ್ದು ಸಾಧನೆ, ಬಿಜೆಪಿಯದ್ದು ಹುಸಿ ಭರವಸೆ’

ಅರಕಲಗೂಡು: ಬೂತ್‌ ಮಟ್ಟದ ಕಾರ್ಯಕರ್ತರು ಪಕ್ಷದ ಆಧಾರ ಸ್ತಂಭಗಳಾಗಿದ್ದು ಚುನಾವಣಾ ಗೆಲುವಿನಲ್ಲಿ ಇವರ ಪಾತ್ರ ಅತ್ಯಂತ ಮಹತ್ವದ್ದು ಎಂದು ಕಾಂಗ್ರೆಸ್‌ ಮೈಸೂರು ವಿಭಾಗೀಯ ಉಸ್ತುವಾರಿ ವಿಷ್ಣುನಾದನ್ ತಿಳಿಸಿದರು.

ಪಟ್ಟಣದ ಶಿಕ್ಷಕರ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಬೂತ್ ಮಟ್ಟದ ಅಧ್ಯಕ್ಷರು, ಏಜೆಂಟರು ಹಾಗೂ ಸಂಯೋಜಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯದಲ್ಲಿ 53 ಸಾವಿರ ಬ್ಲಾಕ್‌ಮಟ್ಟದ ಸಭೆಗಳನ್ನು ನಡೆಸಿ ಪಕ್ಷದ ಕಾರ್ಯಕರ್ತರನ್ನು ಚುನಾವಣೆಗೆ ಸಜ್ಜುಗೊಳಿಸಲಾಗಿದೆ. ಮನೆ–ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮದ ಬಳಿಕ ಬೂತ್‌ ಮಟ್ಟದ ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುತ್ತಿದೆ. ಮೈಸೂರು ವಿಭಾಗದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಈ ಕಾರ್ಯಾಗಾರ ಮುಕ್ತಾಯದ ಹಂತ ತಲುಪಿದೆ’ ಎಂದರು.

‘ರಾಜ್ಯ ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ 165 ಭರವಸೆಗಳಲ್ಲಿ 159 ಆಶ್ವಾಸನೆಗಳನ್ನು ಈಡೇರಿಸಿ ನುಡಿದಂತೆ ನಡೆಯುತ್ತಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬರಿ ಹುಸಿ ಭರವಸೆಗಳನ್ನು ನೀಡಿ ದೇಶದ ಜನರ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ನಾಟಕವಾಡುದ್ದಾರೆ’ ಎಂದು ಆರೋಪಿಸಿದರು.

₹ 40ಕ್ಕೆ ಪೆಟ್ರೋಲ್‌ ನೀಡುವುದಾಗಿ ಹೇಳಿದ್ದರು. ಈ ದರಕ್ಕೆ ಈಗ ಅರ್ಧ ಲೀಟರ್‌ ದೊರೆಯುತ್ತಿದೆ. ಕಪ್ಪು ಹಣ ಹೊರತಂದು ಎಲ್ಲರ ಬ್ಯಾಂಕ್ ಖಾತೆಗಳಿಗೆ ತಲಾ ₹ 15 ಲಕ್ಷ ಹಣ ಹಾಕುವುದಾಗಿ ನೀಡಿದ್ದ ಭರವಸೆ ಹುಸಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಸಾಧನೆಗಳಿಗೆ ಹೋಲಿಸಿದರೆ ಕೇಂದ್ರ ಸರ್ಕಾರದ ಸಾಧನೆ ಶೂನ್ಯ’ ಎಂದು ವ್ಯಂಗ್ಯವಾಡಿದರು.

₹ 5 ಬೆಲೆಯ ಮದ್ದೂರು ವಡೆಯ ಮೇಲೂ ಜಿಎಸ್‌ಟಿ ಬರೆ ಹಾಕಲಾಗುತ್ತಿದೆ. ಸಿದ್ದರಾಮಯ್ಯ ಅವರು ಇಂದಿರಾ ಕ್ಯಾಂಟೀನ್‌ ತೆರೆದು ₹ 5ಕ್ಕೆ ಹೊಟ್ಟೆ ತುಂಬಾ ತಿಂಡಿ ನೀಡುತ್ತಿದ್ದಾರೆ. ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭರವಸೆ ನೀಡಿದ್ದ ಪ್ರಧಾನಿ ಅವರನ್ನು ಈ ಕುರಿತು ಪ್ರಶ್ನಿಸಿದರೆ, ‘ನಿರುದ್ಯೋಗಿಗಳು ಪಕೋಡಾ ಮಾರಾಟ ಮಾಡಿ ಉದ್ಯೋಗ ಮಾಡಬಹುದು ಎಂದು ವ್ಯಂಗ್ಯವಾಡುತ್ತಿದ್ದಾರೆ’ ಎಂದು ಟೀಕಿಸಿದರು. ಬರುವ ಚುನಾವಣೆಯಲ್ಲಿ ಮತದಾರರು ಇವೆರಡೂ ಸರ್ಕಾರಗಳು ಕೈಗೊಂಡಿರುವ ಸಾಧನೆಗಳನ್ನು ತುಲನೆ ಮಾಡಲಿದ್ದಾರೆ ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಾವಗಲ್ ಮಂಜುನಾಥ್, ಎಐಸಿಸಿ ಜಿಲ್ಲಾ ಉಸ್ತುವಾರಿ ಗಾಯತ್ರಿ ಶಾಂತೇಗೌಡ ಮಾತನಾಡಿದರು. ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಬ್ಬಳಿಗೆರೆ ಭೈರೇಗೌಡ, ಹಳ್ಳಿಮೈಸೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಂಬಶಿವಪ್ಪ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್,ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಡಾ.ಮಂಥರ್‌ ಗೌಡ ಮಾತನಾಡಿದರು. ಜಿ.ಪಂ ಸದಸ್ಯರಾದ ಬಿ.ಎಂ. ರವಿ, ಪ್ರಸನ್ನ, ಪ.ಪಂ ಅಧ್ಯಕ್ಷ ಕೆ.ಸಿ. ಲೋಕೇಶ್, ಪಟ್ಟಣ ಪ್ರಾಧಿಕಾರದ ಅಧ್ಯಕ್ಷ ಮುತ್ತಿಗೆ ರಮೇಶ್‌, ಮುಖಂಡರಾದ ಶಫಿ ಅಹಮದ್‌, ಪುಟ್ಟೇಗೌಡ ಇದ್ದರು.

ಒಂದು ಮತವನ್ನೂ ನಿರ್ಲಕ್ಷ್ಯಿಸದಿರಿ

ಅರಕಲಗೂಡು: ಮಾರ್ಚ್‌ ತಿಂಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಸನಕ್ಕೆ ಭೇಟಿ ನೀಡಲಿದ್ದಾರೆ ಎಂದು ಕಾಂಗ್ರೆಸ್‌ ಮೈಸೂರು ವಿಭಾಗೀಯ ಉಸ್ತುವಾರಿ ವಿಷ್ಣುನಾಥನ್ ತಿಳಿಸಿದರು.

ಬೂತ್‌ ಮಟ್ಟದ ಕಾರ್ಯಕರ್ತರು ಪ್ರತಿ ಒಂದು ಮತಕ್ಕೂ ಹೆಚ್ಚಿನ ಮಹತ್ವ ನೀಡಬೇಕು. ಚಾಮರಾಜ ನಗರದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಮತದ ಅಂತರದಿಂದ ಗೆಲುವು ಸಾಧಿಸಿದ್ದನ್ನು ಮರೆಯಬಾರದು ಎಂದು ಬೂತ್‌ ಮಟ್ಟದ ಅಧ್ಯಕ್ಷರಿಗೆ ಕಿವಿ ಮಾತು ಹೇಳಿದರು.

* * 

ಮುಖ್ಯಮಂತ್ರಿ ಸಿದ್ದರಾಮಯ್ಯ ಕಪ್ಪು ಚುಕ್ಕೆ ಇಲ್ಲದಂತೆ ಆಡಳಿತ ನಡೆಸಿ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶ್ರಮಿಸಿದ್ದಾರೆ

ಗಾಯತ್ರಿ ಶಾಂತೇಗೌಡ, ಎಐಸಿಸಿ ಜಿಲ್ಲಾ ಉಸ್ತುವಾರಿ

ಪ್ರತಿಕ್ರಿಯಿಸಿ (+)