ಮಂಗಳವಾರ, ಡಿಸೆಂಬರ್ 10, 2019
26 °C

ಸ್ವಾಮೀಜಿ ಜತೆ ಚರ್ಚಿಸಿ ನಿರ್ಧಾರ: ಸಚಿವ ಎ.ಮಂಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾಮೀಜಿ ಜತೆ ಚರ್ಚಿಸಿ ನಿರ್ಧಾರ: ಸಚಿವ ಎ.ಮಂಜು

ಹಾಸನ: ಬಾಹುಬಲಿ ಮೂರ್ತಿಗೆ ಅಭಿಷೇಕ ಮಾಡುವ ವೇಳೆ ಸಾರ್ವಜನಿಕರಿಗೂ ಅವಕಾಶ ನೀಡುವ ಸಂಬಂಧ ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜತೆ ಚರ್ಚಿಸಲಾಗುವುದು ಎಂದು ಸಚಿವ ಎ.ಮಂಜು ಹೇಳಿದರು.

‘ಬಾಹುಬಲಿ ದರ್ಶನಕ್ಕೆ ಸಾರ್ವಜನಿಕರಿಗೂ ಅವಕಾಶ ನೀಡಬೇಕು ಎಂಬುದು ನನ್ನ ವೈಯಕ್ತಿಯ ಅಭಿಪ್ರಾಯ. ಸ್ವಾಮೀಜಿ ಮಠದ ಸಂಪ್ರದಾಯ ಪಾಲಿಸುವಂತೆ ಮನವಿ ಮಾಡಿದ್ದಾರೆ. ಪ್ರತಿದಿನ ಬೆಳಗ್ಗೆಯಿಂದ ಮಧ್ಯಾಹ್ನವರೆಗೂ ಕಳಶ ಪಡೆದವರು ಅಭಿಷೇಕ ಮಾಡುತ್ತಾರೆ. ಅಭಿಷೇಕದ ನಂತರ ಸಾರ್ವಜನಿಕರಿಗೆ ಅವಕಾಶ ನೀಡಲಾಗುತ್ತಿದೆ. ಬೆಳಗ್ಗೆಯಿಂದಲೂ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ನೀಡುವಂತೆ ಸ್ವಾಮೀಜಿ ಮನವೊಲಿಸಲಾಗುವುದು’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮಹೋತ್ಸವಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಮೂಲಸೌಲಭ್ಯ ಒದಗಿಸಿದ್ದು, ದೇಶದ ವಿವಿಧ ಭಾಗಗಳಿಂದ 35–50 ಲಕ್ಷ ಜನರು ಭಾಗವಹಿಸುವ ನಿರೀಕ್ಷೆ ಇದೆ. ಪ್ರತಿ ದಿನ 35 ಲಕ್ಷ ಲೀಟರ್‌ ಕುಡಿಯುವ ನೀರು ಪೂರೈಸಲು ಸಿದ್ಧತೆ ಮಾಡಲಾಗಿದೆ. ಬೆಟ್ಟದಲ್ಲಿ ಎರಡು ತಾತ್ಕಾಲಿಕ ಆಸ್ಪತ್ರೆ ಹಾಗೂ 400 ವೈದ್ಯರನ್ನು ನಿಯೋಜಿಸಲಾಗಿದೆ ಎಂದು ವಿವರಿಸಿದರು.

ಉತ್ಸವಕ್ಕೆ ಬರುವ ಭಕ್ತರಿಗೆ 23 ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದ್ದು, ಅಟ್ಟಣಿಗೆಯಲ್ಲಿ 5,500 ಜನರಿಗೆ ಅವಕಾಶ ಕಲ್ಪಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ 400ಕ್ಕೂ ಹೆಚ್ಚು ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಕಳಶ ನಗರ 1 ಮತ್ತು 2 ಬಾಕಿ ಇದ್ದು, ಅದನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಫೆ.7 ರಂದು ಮಹೋತ್ಸವವನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸುವರು. ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಚಿವೆ ಉಮಾಶ್ರೀ ಉದ್ಘಾಟಿಸುವರು. ಬಾಹುಬಲಿಯ ಶಾಂತಿ ಸಂದೇಶವನ್ನು ನಾಡಿನ ಜನರಿಗೆ ತಲುಪಬೇಕು ಎಂದರು.

ಮಹೋತ್ಸವದ ಅಂಗವಾಗಿ ಸರ್ಕಾರ ಪ್ರಾಕೃತ ವಿಶ್ವವಿದ್ಯಾಲಯ ಸ್ಥಾಪನೆ ಮಾಡುತ್ತಿದ್ದು, ಈಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಯಾವುದೇ ಸಮಸ್ಯೆ ಇದ್ದರೂ ಮುಖ್ಯಮಂತ್ರಿ ಜತೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು. ಹಾಗೆಯೇ ಈ ಬಾರಿ ಹೆಲಿ ಟೂರಿಸಂ, ಜಲಸಾಹಸ ಕ್ರೀಡೆ ಸಹ ಆಯೋಜಿಸಲಾಗಿದೆ.  ಈ ಬಾರಿ ಮಹೋತ್ಸವ ಆಕರ್ಷಣೀಯವಾಗಲಿದೆ. ಪ್ರಧಾನಿ ಮೋದಿ ಭಾಗವಹಿಸುವ ಬಗ್ಗೆ ಈವರೆಗೂ ಮಾಹಿತಿ ಬಂದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಾಹುಬಲಿ ಮಹಾಮಸ್ತಕಾಭಿಷೇಕ ಆಗಸ್ಟ್‌ವರೆಗೂ ಇರುವುದರಿಂದ ಅಟ್ಟಣಿಗೆ ತೆಗೆಯುವುದಿಲ್ಲ. ರಸ್ತೆ, ರೈಲಿನ ವ್ಯವಸ್ಥೆ ಇರುವುದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಈಗಾಗಲೇ 12 ಉಪನಗರಗಳಲ್ಲಿ 26 ಸಾವಿರ ಜನರಿಗೆ ವಾಸ್ತವ್ಯ ಕಲ್ಪಿಸಲಾಗಿದೆ ಎಂದು ನುಡಿದರು.

* * 

ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಹಾಸನಾಂಬ ದರ್ಶನವನ್ನು ಮಹೋತ್ಸವಕ್ಕೂ ಮುಂದುವರೆಸುವ ಬಗ್ಗೆ ಚರ್ಚಿಸಲಾಗುವುದು.

ಎ.ಮಂಜು, ಸಚಿವ

ಪ್ರತಿಕ್ರಿಯಿಸಿ (+)