ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಮಸ್ತಕಾಭಿಷೇಕಕ್ಕೆ ಚಾಲನೆ

ರಾಷ್ಟ್ರಪತಿ ಕೋವಿಂದ್ ಉದ್ಘಾಟನೆ: ಲಕ್ಷಾಂತರ ಭಕ್ತರ ಸಾಕ್ಷಿ
Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಜೈನಕಾಶಿ ಶ್ರವಣಬೆಳಗೊಳದಲ್ಲಿ ವೈರಾಗ್ಯಮೂರ್ತಿ ಬಾಹುಬಲಿಗೆ ಶತಮಾನದ ಎರಡನೇ ಮಹಾಮಸ್ತಕಾಭಿಷೇಕ ಮಹೋತ್ಸವ ಕಾರ್ಯಕ್ರಮಗಳು ಬುಧವಾರ ವಿಧ್ಯುಕ್ತವಾಗಿ ಆರಂಭವಾದವು.

ಗೊಮ್ಮಟೇಶ್ವರನ 88ನೇ ಮಸ್ತಕಾಭಿಷೇಕಕ್ಕೆ ಪಂಚಕಲ್ಯಾಣ ನಗರದಲ್ಲಿನ ಚಾವುಂಡರಾಯ ಸಭಾ ಮಂಟಪದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪತ್ನಿ ಸವಿತಾ ಕೋವಿಂದ್ ಚಾಲನೆ ನೀಡಿದರು. ಬಾಹುಬಲಿ ಪುತ್ಥಳಿ ಅನಾವರಣಗೊಳಿ ಧಾರ್ಮಿಕ, ವಿಧಿ-ವಿಧಾನಗಳಿಗೆ ಕೈಜೋಡಿಸಿದರು.

ಜೈನ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ವರ್ಧಮಾನ ಸಾಗರ ಮಹಾರಾಜರ ಸಾನ್ನಿಧ್ಯದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯಪಾಲ ವಜುಭಾಯ್‌ ವಾಲಾ, ಸಂಸದ ಎಚ್‌.ಡಿ.ದೇವೇಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಮಹೋತ್ಸವ ಸಮಿತಿ ರಾಷ್ಟ್ರೀಯ ಅಧ್ಯಕ್ಷೆ ಸರಿತಾ ಜೈನ್‌ ಭಾಗಿಯಾಗಿದ್ದರು.

ಸಹಸ್ರಾರು ಸಂಖ್ಯೆಯ ಭಕ್ತರು, ಯಾತ್ರಾರ್ಥಿಗಳು, ಪ್ರವಾಸಿಗರು ಹಾಗೂ ದೇಶದ ವಿವಿಧ ಭಾಗಗಳಿಂದ ಬಂದಿರುವ ಜೈನ ಮುನಿಗಳು, ಮಾತಾಜಿಗಳು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.

ಇಂದಿನಿಂದ ಗೊಮ್ಮಟಮೂರ್ತಿಗೆ ಪೂಜೆ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅಧಿಕೃತವಾಗಿ ಆರಂಭವಾದವು. ಫೆ. 8ರಿಂದ 16ರ ವರೆಗೆ ಪಂಚಕಲ್ಯಾಣ ಮಹೋತ್ಸವ ನಡೆಯಲಿದೆ. ಫೆ. 17ರಂದು ಬಾಹುಬಲಿಗೆ ಮಹಾಮಜ್ಜನ ನೆರವೇರಲಿದೆ. ಅಂದು ಮೂರ್ತಿಗೆ 108 ಕಳಶಗಳ ಅಭಿಷೇಕ ಇರುತ್ತದೆ. ಫೆ. 18ರಿಂದ 26ರ ವರೆಗೆ ಪ್ರತಿ ದಿನ 1008 ಕಳಶಗಳ ಅಭಿಷೇಕ ಜರುಗಲಿದೆ.

ಉತ್ಸವಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಸಹೋದರ, ಸಹೋದರಿಯರಿಗೆ ನಮಸ್ಕಾರ ಎಂದು ಕನ್ನಡದಲ್ಲೇ ಮಾತು ಆರಂಭಿಸಿದರು. ‘ಬೆಳಗೊಳ ಶಾಂತಿ, ಅಹಿಂಸೆ ಮತ್ತು ಕರುಣೆಯ ನೆಲೆ. ಭೋಗ ಜೀವನ ತ್ಯಜಿಸಿ ತ್ಯಾಗಮಯಿಯಾದ ಬಾಹುಬಲಿ ಮೂರ್ತಿ ಕೆತ್ತಿಸಿದ ಚಾವುಂಡರಾಯ, ಮಸ್ತಕಾಭಿಷೇಕ ಪರಂಪರೆಗೂ ನಾಂದಿ ಹಾಡಿದ್ದಾರೆ. ಬಾಹುಬಲಿ ಮುಖದ ಮಂದಸ್ಮಿತದಲ್ಲಿ ಆತಂಕವನ್ನು ದೂರ ಮಾಡುವ ಶಕ್ತಿ, ಭಾವನೆ ಅಡಗಿದೆ. ಪ್ರತಿಪಾದಿಸಿದ ಶಾಂತಿ, ಅಹಿಂಸೆ ಮತ್ತು ತ್ಯಾಗ ವಿಶ್ವ ಕಲ್ಯಾಣದ ಮಾರ್ಗೋಪಾಯಗಳು. ಬಾಹುಬಲಿ ತತ್ವ, ಸಂದೇಶಗಳು ಎಂದೆಂದಿಗೂ ಮಾದರಿ. ಇದರಿಂದ ವಿಶ್ವಶಾಂತಿ ನೆಲೆಸಲಿದೆ’ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ‘ಇಂತಹ ಉತ್ಸವದಲ್ಲಿ ಭಾಗಿಯಾಗಿರುವುದು ಪುಣ್ಯದ ಘಳಿಗೆ. ಗೊಮ್ಮಟನ ವಿಚಾರಧಾರೆಗಳನ್ನು ಕೇವಲ ಸ್ಮರಣೆ ಮಾಡುವುದು, ಗೌರವಿಸುವುದು ಮಾತ್ರವಲ್ಲ, ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಆಗ ಮಾತ್ರ ವಿರಾಗಿಗೆ ಗೌರವ ಸಲ್ಲಿಸಿದಂತಾಗುತ್ತದೆ’ ಎಂದರು.

‘ಸಮಾಜದಲ್ಲಿ ಇಂದು ಅಶಾಂತಿ ಕಾಣುತ್ತಿದೆ. ಧರ್ಮ-ಧರ್ಮ, ಜಾತಿ-ಜಾತಿಗಳ ನಡುವೆ ಸಂಘರ್ಷ ನಡೆಯುತ್ತಿದೆ. ಎಲ್ಲಿಯವರೆಗೆ ಇದು ತೊಲಗುವುದಿಲ್ಲವೋ ಅಲ್ಲಿಯವರೆಗೂ ಶಾಂತಿ ನೆಲೆಸುವುದು ಕಷ್ಟ’ ಎಂದರು.

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಉದ್ಘಾಟಿಸಿದ ಕ್ಷಣ ಸುವರ್ಣಾಕ್ಷರದಲ್ಲಿ ಬರೆದಿಡಬಹುದಾದ ದಿನ
–ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಜೈನ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT