ಬುಧವಾರ, ಡಿಸೆಂಬರ್ 11, 2019
16 °C

ರೈಲು ಮಾರ್ಗದ ವಿರುದ್ಧ ಕಾನೂನು ಸಮರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೈಲು ಮಾರ್ಗದ ವಿರುದ್ಧ ಕಾನೂನು ಸಮರ

ಮಡಿಕೇರಿ: ಕೊಡಗು ಜಿಲ್ಲೆಯ ಮೂಲಕ ಹಾದು ಹೋಗಲಿರುವ ರೈಲು ಮಾರ್ಗ ವಿರೋಧಿಸಿ ಕಾನೂನು ಹೋರಾಟ ನಡೆಸಲು ಕೂರ್ಗ್‌ ವೈಲ್ಡ್‌ಲೈಫ್‌ ಸೊಸೈಟಿ, ರೈಲು ವಿರೋಧಿ ಹೋರಾಟ ವೇದಿಕೆ ಹಾಗೂ ಜಿಲ್ಲೆಯ ವಿವಿಧ ಕೊಡವ ಸಮಾಜಗಳು ನಿರ್ಧರಿಸಿವೆ.

ಇಲ್ಲಿನ ಕೊಡವ ಸಮಾಜದಲ್ಲಿ ಬುಧವಾರ ಮಾತನಾಡಿದ ಕೂರ್ಗ್ ವೈಲ್ಡ್‌ಲೈಫ್‌ ಸೊಸೈಟಿ ಅಧ್ಯಕ್ಷ ಸಿ.ಪಿ. ಮುತ್ತಣ್ಣ, ‘ಜಿಲ್ಲೆಯ ಮೂಲಕ ಕೇರಳದ ತಲಚೇರಿಗೆ ರೈಲು ಮಾರ್ಗವು ಹಾದು ಹೋದರೆ ಕೊಡಗಿನ ಪರಿಸರಕ್ಕೆ ಧಕ್ಕೆಯಾಗಲಿದೆ. ಜಿಲ್ಲೆಗೆ ಸಂಬಂಧಿಸಿದ ರೈಲ್ವೆ ಮಾರ್ಗ ವಿರೋಧಿಸಿ ಕಾನೂನು ಹೋರಾಟಕ್ಕೂ ಸಿದ್ಧತೆ ಮಾಡಿಕೊಂಡಿದ್ದು, ಸದ್ಯದಲ್ಲೇ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸುತ್ತೇವೆ’ ಎಂದು ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರ ಹಾಗೂ ನೈರುತ್ಯ ರೈಲು ಮಂಡಳಿಯ ಗಮನ ಸೆಳೆಯುವ ಉದ್ದೇಶದಿಂದ ಫೆ. 18ರಂದು ಮೈಸೂರಿನ ರೈಲು ನಿಲ್ದಾಣ ಎದುರಿನ ಮೈದಾನದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 10.30ಕ್ಕೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಬಳಿಕ ಜೆ.ಕೆ. ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ. ಕೊಡಗಿನ ಸಾವಿರಾರು ಮಂದಿ ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ’ ಎಂದು ಮುತ್ತಣ್ಣ ಮಾಹಿತಿ ನೀಡಿದರು.

‘ಕೇರಳ ಹಾಗೂ ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿಗಳು ರೈಲು ಮಾರ್ಗ ವಿಚಾರದಲ್ಲಿ ಸಭೆ ನಡೆಸಿರುವುದು, ಯೋಜನೆ ವಿಸ್ತೃತ ವರದಿ ತಯಾರಿಸಲು ತಾತ್ವಿಕ ಅನುಮತಿ ನೀಡಿರುವ ದಾಖಲೆಗಳು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದುಕೊಳ್ಳಲಾಗಿದೆ. ಕೊಡಗು ಪುಟ್ಟ ಜಿಲ್ಲೆ. ಈ ಜಿಲ್ಲೆಯನ್ನು ಅವಲಂಬಿಸಿ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಜನರು ಬದುಕುತ್ತಿದ್ದಾರೆ. ಪರಿಸರ ನಾಶವಾದರೆ ವನ್ಯಜೀವಿಗಳಿಗೂ ಆಪತ್ತು. ಕಾವೇರಿ ಉಪ ನದಿಗಳೂ ಬತ್ತಿಹೋಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

ಯುನೈಟೆಡ್‌ ಕೊಡವ ಆರ್ಗನೈಸೇಷನ್‌ (ಯುಕೊ) ಸಂಚಾಲಕ ಮಂಜು ಚಿಣ್ಣಪ್ಪ ಮಾತನಾಡಿ, ‘ರೈಲು ಮಂಡಳಿಯು ಜಿಲ್ಲೆಯಲ್ಲಿ ಒಟ್ಟು ಐದು ಮಾರ್ಗಗಳನ್ನು ಗುರುತಿಸಿದೆ. ಒಂದಲ್ಲಾ ಒಂದು ಮಾರ್ಗದಲ್ಲಿ ರೈಲು ಮಾರ್ಗಕ್ಕೆ ಹುನ್ನಾರ ನಡೆಯುತ್ತಿದೆ. ಮೈಸೂರಿನಲ್ಲಿ ನಡೆಯುವ ಪ್ರತಿಭಟನೆಗೆ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು’ ಎಂದು ಕೋರಿದರು.

‘ರೈಲು ಮಾರ್ಗದ ವಿರುದ್ಧ ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮೂಲ ನಿವಾಸಿಗಳು ಅಸ್ತಿತ್ವ ಕಳೆದುಕೊಳ್ಳುವ ಸಾಧ್ಯತೆಯಿದೆ. ರೈಲು ಬಂದರೆ ಹೊರಗಿನವರು ಜಿಲ್ಲೆಯ ಒಳಕ್ಕೆ ಸುಲಭವಾಗಿ ಬಂದು ಸೇರಿಕೊಳ್ಳಲಿದ್ದಾರೆ. ನಮ್ಮ ಸಾಮಾಜಿಕ ಹಾಗೂ ನೈಸರ್ಗಿಕ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ’ ಎಂದು ಎಚ್ಚರಿಸಿದರು.

ಮುಖಂಡ ಎಂ. ರವೀಂದ್ರ ಮಾತನಾಡಿ, ‘ಮೈಸೂರು– ಕೊಯಿಕೋಡು ವಿದ್ಯುತ್‌ ಮಾರ್ಗದಲ್ಲಿ ಹೋರಾಟ ನಡೆಸಿದರೂ ಸೋಲಾಯಿತು. ಜಿಲ್ಲೆಯ ಗಡಿಭಾಗಕ್ಕೆ ವಿದ್ಯುತ್‌ ಮಾರ್ಗ ಬಂದ ಬಳಿಕ ನಾವು ಎಚ್ಚೆತ್ತುಕೊಂಡೆವು. ಆದರೆ, ರೈಲು ಮಾರ್ಗದ ವಿರುದ್ಧ ಬಹುಬೇಗ ಧ್ವನಿ ಮೊಳಗುತ್ತಿದ್ದು, ಜಯ ಲಭಿಸಲಿದೆ’ ಎಂದು ಪ್ರತಿಪಾದಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಂಚಾಲಕ ಚಂದ್ರಮೋಹನ್‌ ಮಾತನಾಡಿ, ‘ಅತ್ಯಂತ ವೇಗವಾಗಿ ಕೊಡಗಿನ ಮೂಲಕ ಸ್ವರೂಪ ಬದಲಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹೋರಾಟಕ್ಕೆ ಕೇರಳ ಹಾಗೂ ತಮಿಳುನಾಡು ರಾಜ್ಯದಿಂದಲೂ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ಎಲ್ಲರೂ ಒಗ್ಗಟ್ಟಿನಿಂದ ಹೋರಾಟ ನಡೆಸಬೇಕು. ಆಗ ಮಾತ್ರ ಪರಿಸರ ಉಳಿಯಲಿದೆ’ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ರಾಜೀವ್‌ ಬೋಪಯ್ಯ ಕೋರಿದರು.

ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ. ಮುತ್ತಪ್ಪ, ‘ಅಭಿವೃದ್ಧಿ ಹೆಸರಿನಲ್ಲಿ ಜಿಲ್ಲೆಯ ಪರಿಸರವನ್ನು ಹಾಳು ಮಾಡಲಾಗುತ್ತಿದೆ. ಹಿಂದೆ ವಾರ್ಷಿಕ ಸರಾಸರಿ 300 ಇಂಚು ಮಳೆ ಬೀಳುತ್ತಿತ್ತು. ಈಗ 50 ಇಂಚು ಮಳೆಯಾಗುತ್ತಿದೆ’ ಎಂದು ಆತಂಕದಿಂದ ನುಡಿದರು.

ಮುಖಂಡ ಚೀ.ನಾ. ಸೋಮೇಶ್‌ ಮಾತನಾಡಿ, ‘ಕೊಡಗಿನಲ್ಲಿ ಹೋರಾಟ ಮನೋಭಾವ ಸತ್ತು ಹೋಗುತ್ತಿದ್ದು ಆತ್ಮಾವಲೋಕನ ಅಗತ್ಯ. ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಬೇಕು. ಹೋರಾಟದ ನೇತೃತ್ವ ವಹಿಸಿರುವ ಮುಖಂಡರು ದಾಖಲೆ ಸಮೇತ ಜನರಿಗೆ ಅರಿವು ಮೂಡಿಸಬೇಕು’ ಎಂದು ಹೇಳಿದರು. ಸಭೆಯಲ್ಲಿ ಬೊಳ್ಳಜೀರ ಅಯ್ಯಪ್ಪ, ನಿವೃತ್ತ ತಹಶೀಲ್ದಾರ್‌ ತಮ್ಮಯ್ಯ ಮೊದಲಾದವರು ಹಾಜರಿದ್ದರು.

ನಾಲ್ಕು ಪರ್ಯಾಯ ಮಾರ್ಗ

ಮೈಸೂರು– ತಲಚೇರಿ ನಡುವೆ ರೈಲು ಸಂಪರ್ಕಕ್ಕೆ ರೈಲ್ವೆ ಮಂಡಳಿ ಗುರುತಿಸಿರುವ ನಾಲ್ಕು ಪರ್ಯಾಯ ಮಾರ್ಗಗಳ ವಿವರ ಇಂತಿದೆ.

1) ಮೈಸೂರು– ಪಿರಿಯಾಪಟ್ಟಣ– ತಿತಿಮತಿ– ಕೋಣನಕಟ್ಟೆ– ಬಾಳೆಲೆ– ಕಾನೂರು – ಕುಟ್ಟ – ತಲಚೇರಿ

2) ತಿತಿಮತಿ – ಗೋಣಿಕೊಪ್ಪಲು– ಕುಟ್ಟ – ಮಟ್ಟನೂರು – ತಲಚೇರಿ

3) ತಿತಿಮತಿ – ಮಾಯಮುಡಿ – ಪೊನ್ನಂಪೇಟೆ – ಬೇಗೂರು – ಹುದಿಕೇರಿ – ಬಿರುನಾಣಿ– ತಲಚೇರಿ

4) ವಿರಾಜಪೇಟೆ – ಭಾಗಮಂಡಲ – ಕರಿಕೆ – ಕಾಸರಗೋಡು ಮೂಲಕ ತಲಚೇರಿ

* * 

ಕೊಡಗಿನ ಪರಿಸರವನ್ನೇ ನಾಶಪಡಿಸುವ ರೈಲು ಮಾರ್ಗದ ಅಗತ್ಯತೆ ನಮಗೆ ಇಲ್ಲ. ಅದಕ್ಕೆ ಅವಕಾಶವನ್ನೂ ನೀಡುವುದಿಲ್ಲ. ಮಂಜು ಚಿಣ್ಣಪ್ಪ

ಸಂಚಾಲಕ, ಯುಕೊ

ಪ್ರತಿಕ್ರಿಯಿಸಿ (+)