ಮಂಗಳವಾರ, ಡಿಸೆಂಬರ್ 10, 2019
20 °C

‘ಡಿಕ್ಕಿ ಹಬ್ಬ’ದಲ್ಲಿ ಕಿಕ್ಕಿರಿದ ಜನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಡಿಕ್ಕಿ ಹಬ್ಬ’ದಲ್ಲಿ ಕಿಕ್ಕಿರಿದ ಜನ

ಹಿರಿಯೂರು: ತಾಲ್ಲೂಕಿನ ಸಿ.ಎನ್. ಮಾಳಿಗೆ ಗ್ರಾಮದಲ್ಲಿ ಬುಧವಾರ ಡಿಕ್ಕಿ ಹಬ್ಬ ಎಂದೇ ಖ್ಯಾತಿ ಪಡೆದಿರುವ ಅಹೋಬಲ ನರಸಿಂಹಸ್ವಾಮಿಯ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನಡೆಯಿತು.

ಫೆ. 3 ರಂದು ಸಂಜೆ ಹರತಿ ವೀರಭದ್ರಸ್ವಾಮಿ ಮತ್ತು ಆದಿರಾಳು ಗ್ರಾಮದ ರಾಜಾ ವೀರಾಂಜನೇಯಸ್ವಾಮಿ ದೇವರ ಮೂರ್ತಿಗಳನ್ನು ಗ್ರಾಮಕ್ಕೆ ಕರೆತರಲಾಗಿತ್ತು. ಫೆ. 4ರಂದು ಗಂಗಾಪೂಜೆ, ಕೇಲು ಪ್ರತಿಷ್ಠಾಪನೆ, ವಿಗ್ರಹ ಪ್ರಾಣಪ್ರತಿಷ್ಠಾಪನೆ, ಪುಣ್ಯಾಹ, ನವಗ್ರಹ ಪೂಜೆ, ಹೋಮ ನಡೆಸಲಾಗಿತ್ತು. ಫೆ. 5ರಂದು ಹೋಮ, ಪರಿವಾರ ದೇವತಾ ಹೋಮ, ಮಹಾಪೂರ್ಣಾಹುತಿ, ಕಳಸಾಭಿಷೇಕ, ಪಂಚಾಮೃತ ಅಭಿಷೇಕ, ಫೆ. 6ರಂದು ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದವು. ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸ್ವಾಮಿಯ ಉತ್ಸವ ನೆರವೇರಿತು ಎಂದು ಗ್ರಾಮದ ಮುಖಂಡ ಬದ್ರಿ ತಿಳಿಸಿದರು.

ದೇವರ ಸಮ್ಮುಖದಲ್ಲಿ ಅತ್ತೆ–ಸೊಸೆಯಂದಿರು ತಮ್ಮ ಮುಂದಲೆಯನ್ನು ಡಿಕ್ಕಿ (ಪ್ರೀತಿಯಅಪ್ಪುಗೆ) ಮಾಡಿಕೊಳ್ಳುವ ಮೂಲಕ ತಮ್ಮಿಬ್ಬರ ಬಾಂಧವ್ಯಗಳನ್ನು ಹರಕೆ ರೂಪದಲ್ಲಿ ಪ್ರತಿ ವರ್ಷ ಉತ್ಸವದ ಸಂದರ್ಭದಲ್ಲಿ ಅರ್ಪಿಸುವುದು ಬುಡಕಟ್ಟು ಸಂಪ್ರದಾಯದವರು ನಡೆಸಿಕೊಂಡು ಬಂದಿರುವ ಆಚರಣೆ ಎಂದು ಚಿತ್ರದುರ್ಗದ ಪ್ರಾಧ್ಯಾಪಕ ಡಾ. ಕರಿಯಪ್ಪ ಮಾಳಿಗೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಹಳ್ಳಿಗೆ ಸೊಸೆಯರಾಗಿ ಬಂದವರು, ಇಲ್ಲಿಂದ ಬೇರೆ ಊರಿಗೆ ಸೊಸೆಯರಾಗಿ ಹೋದವರು ದೇವರಿಗೆ ಇಂತಹ ಹರಕೆ ಸಲ್ಲಿಸುವ ಮೂಲಕ ಅತ್ತೆ–ಸೊಸೆಯರ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುತ್ತಾರೆ. ತಮ್ಮ ತಮ್ಮಲ್ಲಿ ದ್ವೇಷ, ಸಿಟ್ಟು, ಜಗಳ ಏನೂ ಇರಬಾರದು. ಹೀಗಿದ್ದರೆ ಕುಟುಂಬ, ಊರು ಚನ್ನಾಗಿರುತ್ತದೆ. ಇದೊಂದು ಮಾದರಿ ಹಬ್ಬವಾಗಿದೆ. ಗ್ರಾಮದ ಮಹಿಳೆಯರೆಲ್ಲ ಉತ್ಸವದ ದಿನದಂದು ದೇವಸ್ಥಾನದ ಮುಂದೆ ಸೇರಿ ಪರಸ್ಪರ ಆಲಿಂಗಿಸುವ ದೃಶ್ಯ ಅವರ್ಣನೀಯ’ ಎಂದು ಅವರು ಹೇಳುತ್ತಾರೆ.

ಪ್ರತಿಕ್ರಿಯಿಸಿ (+)