ಬುಧವಾರ, ಡಿಸೆಂಬರ್ 11, 2019
23 °C

ಓದು, ಬದುಕು ಬದಲಿಸಬಹುದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಓದು, ಬದುಕು ಬದಲಿಸಬಹುದು

ಹಾವೇರಿ: ‘ಓದು, ಬದುಕನ್ನೇ ಬದಲಿಸಬಹುದಾದ ಪ್ರಬಲ ಕ್ರಿಯೆ. ಅದಕ್ಕಾಗಿ ಎಲ್ಲರೂ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್‌ ಎಂ.ವಿ. ಹೇಳಿದರು.

ಇಲ್ಲಿನ ಜಿಲ್ಲಾ ಕೇಂದ್ರೀಯ ಕಾರಾಗೃಹದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ, ಜಿಲ್ಲಾ ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ಮಂಗಳವಾರ ಸಂಜೆ ‘ಗ್ರಂಥಾಲಯ’ ಉದ್ಘಾಟಿಸಿ ಅವರು ಮಾತನಾಡಿದರು.

‘ಕೈದಿಗಳಿಗೆ ಮನ ಪರಿವರ್ತನೆ, ವ್ಯಕ್ತಿತ್ವ ವಿಕಾಸ, ವ್ಯಾಸಂಗಕ್ಕಾಗಿ ಗ್ರಂಥಾಲಯ ಸ್ಥಾಪಿಸಲಾಗಿದೆ’ ಎಂದ ಅವರು, ‘ಸಕಲ ಜೀವರಾಶಿಗಳಲ್ಲಿ ಮನುಷ್ಯನಿಗೆ ವಿಶೇಷ ಸ್ಥಾನವಿದೆ. ಪುಸ್ತಕಗಳಲ್ಲಿ ವ್ಯಕ್ತಿಯ ಅನಿಸಿಕೆ, ಅನುಭವ, ಆವಿಷ್ಕಾರಗಳು ಅಕ್ಷರದ ಮೂಲಕ ದಾಖಲಾಗುತ್ತವೆ ಎಂದರು. ಗ್ರಂಥಾಲಯದಲ್ಲಿ ಆಧ್ಯಾತ್ಮಿಕ, ವೈಜ್ಞಾನಿಕ, ಸಾಂಸ್ಕೃತಿಕ, ಸಾಮಾನ್ಯ ಜ್ಞಾನ ಹಾಗೂ ವಿದ್ಯಾಭ್ಯಾಸಕ್ಕೆ ಪೂರಕವಾದ ಪುಸ್ತಕಗಳಿವೆ ಎಂದರು.

ನಾನಾ ಕಾರಣಗಳಿಂದ ವಿದ್ಯಾಭ್ಯಾಸ ಮೊಟಕುಗೊಳಿಸಿದವರು, ಮುಂದುವರಿಸಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡಿ ಕೊಳ್ಳಬೇಕು. ಓದು, ಉತ್ತಮ ಗುಣ ನಡತೆ ರೂಢಿಸಿಕೊಂಡು ಮುಖ್ಯ ವಾಹಿನಿಗೆ ಬನ್ನಿ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ನ್ಯಾಯಾಧೀಶರಾದ ವೈ.ಎಲ್.ಲಾಡಖಾನ್ ಮಾತನಾಡಿ, ಇಲ್ಲಿ ಸಿಗುವ ಸಮಯದ ಸದುಪಯೋಗ ಪಡೆದುಕೊಂಡು ಜ್ಞಾನ ಸಂಪಾದಿಸಿ ಕೊಳ್ಳಬೇಕು. ಜೈಲಿನಲ್ಲಿ ಇರುವಾಗ ಸ್ವಾತಂತ್ರ್ಯದ ಮಹತ್ವ ಅರಿವಿಗೆ ಬರುತ್ತದೆ. ಇದರ ಮಹತ್ವ ತಿಳಿದು, ಕಾನೂನು ಗೌರವಿಸಬೇಕು’ ಎಂದರು. ‘ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ದೂರು ದಾಖಲಿಸಿ ಕಾನೂನಿನ ಉಚಿತ ಸೇವೆ ಪಡೆಯಬಹುದಾಗಿದೆ’ ಎಂದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಇದೊಂದು ಮಾದರಿ ಕಾರಾಗೃಹವಾಗುತ್ತಿದೆ. ಇಲ್ಲಿ ಸ್ವಚ್ಛತೆ, ಕೈತೋಟ, ಶುದ್ಧ ಕುಡಿಯುವ ನೀರಿನ ಘಟಕವಿದೆ. ಇದೀಗ ಗ್ರಂಥಾಲಯ ಸೌಲಭ್ಯ ದೊರಕಿದೆ. ಮನಪರಿವರ್ತನಾ ಕೇಂದ್ರವಾಗಿ ರೂಪುಗೊಂಡಿದೆ. ನಿಮ್ಮ ಹಸನಾದ ಬದುಕಿಗೆ ಉತ್ತಮ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ತಾವು ಇದರ ಸದುಪಯೋಗ ಪಡೆದುಕೊಂಡು ಒಳ್ಳೆಯ ಪ್ರಜೆಗಳಾಗಿ ಹೊರಹೊಮ್ಮಬೇಕು’ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅಶೋಕ ನೀರಲಗಿ, ಪ್ರಧಾನ ಕಾರ್ಯದರ್ಶಿ ಡಿ.ಎನ್.ನಾಯ್ಡು, ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಬಿ.ಭಜಂತ್ರಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಉಪಾಧ್ಯಕ್ಷ ರೇಣುಕಾ ಗುಡಿಮನಿ, ಮುಖ್ಯ ಗ್ರಂಥಾಲಯ ಅಧಿಕಾರಿ ವಿಶಾಲ ಕುಲಕರ್ಣಿ, ವಕೀಲ ಎಂ.ಎಚ್. ವಾಲೀಕಾರ ಇದ್ದರು.

* * 

ಯಾರಿಗೂ ಹುಟ್ಟಿನಿಂದ ಜ್ಞಾನವಿರುವುದಿಲ್ಲ. ಅನುಭವ ಮತ್ತು ಓದು ಜ್ಞಾನ ನೀಡುತ್ತದೆ. ಉತ್ತಮ ಪುಸ್ತಕವೇ ಶ್ರೇಷ್ಠ ಸ್ನೇಹಿತ

ಡಾ.ವೆಂಕಟೇಶ್ ಎಂ.ವಿ. ಜಿಲ್ಲಾಧಿಕಾರಿ

ಪ್ರತಿಕ್ರಿಯಿಸಿ (+)