ಮಂಗಳವಾರ, ಡಿಸೆಂಬರ್ 10, 2019
20 °C
ವಿಧಾನಪರಿಷತ್ತಿನಲ್ಲಿ ಕಾವೇರಿದ ಚರ್ಚೆ‌

ಮಠ– ಮಂದಿರಗಳ ಸ್ವಾಧೀನ ಇಲ್ಲ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಠ– ಮಂದಿರಗಳ ಸ್ವಾಧೀನ ಇಲ್ಲ: ಸಿದ್ದರಾಮಯ್ಯ

ಬೆಂಗಳೂರು: ‘ಮಠ– ಮಂದಿರಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಲು ಹೊರಡಿಸಿರುವ ಪ್ರಕಟಣೆ ಹಿಂದಕ್ಕೆ ಪಡೆಯಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದರು.

ವಿಧಾನಪರಿಷತ್ತಿನಲ್ಲಿ ಗುರುವಾರ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ನಿಲುವಳಿ ಸೂಚನೆ ಮಂಡಿಸುವ ಸಂದರ್ಭದಲ್ಲಿ ಸಿದ್ದರಾಮಯ್ಯ ಸ್ವಯಂಪ್ರೇರಿತರಾಗಿ ಉತ್ತರ ನೀಡಿ ಸರ್ಕಾರದ ತೀರ್ಮಾನ ಪ್ರಕಟಿಸಿದರು.

ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ಮಠ ಮತ್ತು ದೇವಸ್ಥಾನಗಳನ್ನು ಒಳಪಡಿಸುವ ಪ್ರಕಟಣೆ ವಿರೋಧಿಸಿ ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ನಿಲುವಳಿ ಸೂಚನೆ ಮಂಡಿಸಲು ನಿಂತರು.

ಅದಕ್ಕೆ ಅವಕಾಶ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಮಠ ಅಥವಾ ದೇವಸ್ಥಾನಗಳನ್ನು ಸರ್ಕಾರ ವಶಕ್ಕೆ ತೆಗೆದುಕೊಳ್ಳುತ್ತದೆ ಎಂಬುದು ತಪ್ಪು ಮಾಹಿತಿ. ಮಠಗಳು, ಅವುಗಳಿಗೆ ಸೇರಿದ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಧಾರ್ಮಿಕ ದತ್ತಿ ಕಾಯ್ದೆ ಅಡಿ ಸೇರಿಸುವ ಬಗ್ಗೆ ಸಾರ್ವಜನಿಕರಿಂದ ಸಲಹೆ ಕೇಳಲು ಪ್ರಕಟಣೆ ಹೊರಡಿಸಲಾಗಿತ್ತು. ಆದರೆ, ಸರ್ಕಾರ ಸುತ್ತೋಲೆ ಹೊರಡಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

2006 ರಲ್ಲಿ ಹೈಕೋರ್ಟ್‌ ವಿಭಾಗೀಯ ಪೀಠ ಧಾರ್ಮಿಕ ದತ್ತಿ ಕಾಯ್ದೆಯನ್ನು ರದ್ದು ಪಡಿಸಿ, ಹೊಸ ಕಾನೂನು ರೂಪಿಸುವಂತೆ ಸೂಚನೆ ನೀಡಿತ್ತು. ಈ ಬಗ್ಗೆ ಅಭಿಪ್ರಾಯ ಕೇಳಲು ಪ್ರಕಟಣೆ ಹೊರಡಿಸಲಾಗಿದೆ. ಇದರಿಂದ ತಪ್ಪು ಸಂದೇಶ ಹೋಗಿರುವುದು ನಿಜ. ಆದರೆ, ಇಂತಹದ್ದೇ ಪ್ರಕಟಣೆಯನ್ನು ನ್ಯಾ.ರಾಮಾಜೋಯಿಸ್‌ ಅಧ್ಯಕ್ಷತೆಯ ಸಮಿತಿ ನಿಮ್ಮ ಅಧಿಕಾರದ ಅವಧಿಯಲ್ಲೂ ಹೊರಡಿಸಿತ್ತು. ಆಗ ಏಕೆ ಸುಮ್ಮನಿದ್ದಿರಿ’ ಎಂದು ಸಿದ್ದರಾಮಯ್ಯ ಅಂದಿನ ಪ್ರಕಟಣೆ ಪ್ರದರ್ಶಿಸಿ ಪ್ರಶ್ನಿಸಿದರು.

‘ಹಳೇ ಪ್ರಕಟಣೆಯಲ್ಲಿ ಏನಿದೆಯೋ ಅದೇ ಅಂಶಗಳು ಇದರಲ್ಲೂ ಇವೆ. ನೀವು ಹಿಂದೂ ಧರ್ಮವನ್ನು ಗುತ್ತಿಗೆ ಪಡೆದವರಂತೆ ವರ್ತಿಸುತ್ತಿದ್ದೀರಿ. ನಾನೂ ಹಿಂದೂ. ನಮಗೂ ಮಠ– ಮಂದಿರಗಳು, ದೇವರ ಬಗ್ಗೆ ಗೌರವವಿದೆ. ಪ್ರಕಟಣೆಗೆ ಸಂಬಂಧಿಸಿದ ವಿಷಯ ಕಾನೂನು ಇಲಾಖೆ ಅಧಿಕಾರಿ ಚರ್ಚೆ ಮಾಡುವವರೆಗೆ ತಡೆ ಹಿಡಿಯುತ್ತೇನೆ’ ಎಂದು ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ಹೇಳಿದರು. ರಾಜ್ಯ ಸರ್ಕಾರ ಎಲ್ಲ ಮಠಗಳು ಮತ್ತು ದೇವಸ್ಥಾನಗಳಿಗೆ ಪ್ರಕಟಣೆಯ ಪ್ರತಿಗಳನ್ನು ಕಳುಹಿಸಿದೆ.

ಇದರಿಂದ ಎಲ್ಲರಲ್ಲೂ ಆತಂಕ ಮನೆ ಮಾಡಿದೆ. ಸರ್ಕಾರದ ಉದ್ದೇಶದ ಬಗ್ಗೆ ಎಲ್ಲ ಮಠಾಧೀಶರೂ ಆತಂಕ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಾಲಯ 2007ರಲ್ಲಿ ಹೊಸ ಕಾನೂನು ಮಾಡಲು ಹೇಳಿತ್ತು. ಇಲ್ಲಿಯವರೆಗೆ ಏಕೆ ನಿದ್ದೆ ಮಾಡುತ್ತಿದ್ದಿರಿ.

ನ್ಯಾ.ರಾಮಾಜೋಯಿಸ್‌ ಸಮಿತಿ ಪ್ರಕಟಣೆ ಹೊರಡಿಸಿರಬಹುದು. ಅದು ಸಮಿತಿಯ ಪ್ರಕಟಣೆ. ಆದರೆ, ಈಗ ಪ್ರಕಟಣೆ ಹೊರಡಿಸಿರುವುದು ರಾಜ್ಯ ಸರ್ಕಾರ ಎಂದು ವಿರೋಧ ಪಕ್ಷದ ನಾಯಕ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು. ಇದರಿಂದ ರೊಚ್ಚಿಗೆದ್ದ ಕಾಂಗ್ರೆಸ್‌ ಸದಸ್ಯರು ಒಕ್ಕೊರಲಿನಿಂದ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

‘ರಾಜ್ಯ ಸರ್ಕಾರ ಹಿಂದೂ ವಿರೋಧಿ. ನಾವು ಮಠ ಮತ್ತು ದೇವಸ್ಥಾನಗಳ ವಿಚಾರದಲ್ಲಿ ಹಸ್ತಕ್ಷೇಪ ನಡೆಸಲು ಬಿಡುವುದಿಲ್ಲ. ಪ್ರಕಟಣೆಯಿಂದ ಮಠಾಧಿಪತಿಗಳಿಗೆ ಆಘಾತ ಆಗಿದೆ. ಸ್ವಾಮೀಜಿಗಳು ನಮ್ಮ ದೇವರು. ಸರ್ಕಾರ ಮಾಡಲಾಗದ ಎಷ್ಟೋ ಕೆಲಸಗಳನ್ನು ಮಠಗಳು ಮಾಡುತ್ತಿವೆ. ಅವುಗಳನ್ನು ಆತಂಕಕ್ಕೆ ದೂಡಿದ ನೀವು ರಾಜ್ಯದ ಜನರ ಕ್ಷಮೆ ಕೇಳಬೇಕು’ ಎಂದು ಈಶ್ವರಪ್ಪ ಆಗ್ರಹಿಸಿದರು.

ಇದಕ್ಕೆ ತಿರುಗೇಟು ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜಕೀಯ ಆಘಾತ ಆಗಿರುವುದು ನಿಮಗೆ. ಈ ವಿಷಯವನ್ನು ದುರುದ್ದೇಶಕ್ಕೆ ಬಳಸಿಕೊಳ್ಳಲು ಮುಂದಾಗಿದ್ದೀರಿ. ನಿಮ್ಮ ಆಟ ನಡೆಯುವುದಿಲ್ಲ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಕೆ.ಎಸ್. ಈಶ್ವರಪ್ಪ, ‘ಇಂಥ ವಿಚಾರ ಇಲ್ಲಿ ಚರ್ಚೆಗೆ ಬರಬಾರದಿತ್ತು. ಧಾರ್ಮಿಕ ಸಂಸ್ಥೆಗಳು, ದೇವಸ್ಥಾನಗಳು ಸಮಾಜಕ್ಕೆ ಸಾಕಷ್ಟು ಉತ್ತಮ ಕೆಲಸಗಳನ್ನು ಮಾಡುತ್ತಿವೆ. ಇಂತಹ ಸಂಸ್ಥೆಗಳನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಚಿಂತನೆ ಮಾಡುವುದು ಸರಿಯಲ್ಲ. ಆದರೆ ನೀವು ಏನೂ ಮಾಡಲೇ ಇಲ್ಲ ಎನ್ನುತ್ತೀರಿ. ಇದು ಸರಿಯಲ್ಲ’ ಎಂದು ಹೇಳಿದರು.

ಈಶ್ವರಪ್ಪ ಅವರು ಸಭಾತ್ಯಾಗ ಮಾಡಿದರು. ಬಿಜೆಪಿ ಸದಸ್ಯರು ಅವರನ್ನು ಹಿಂಬಾಲಿಸಿದರು. ‘ಮಠಾಧೀಶರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ಆಗಬಾರದು’ ಎಂದು ಜೆಡಿಎಸ್‌ನ ಶ್ರೀಕಂಠೇಗೌಡ ಮತ್ತಿತರ ಸದಸ್ಯರೂ ಸಭಾತ್ಯಾಗ ಮಾಡಿದರು.

**

ಮುಖ್ಯಮಂತ್ರಿ ಎಂದರೆ ಮೊದಲ ಮಂತ್ರಿ, ಆದರೆ ಎಲ್ಲರೂ ಸಮಾನರು. –ಸಿದ್ದರಾಮಯ್ಯ, ಮುಖ್ಯಮಂತ್ರಿ

*

ಸಿದ್ದರಾಮಯ್ಯ ತುಘಲಕ್‌ನಂತೆ ವರ್ತಿಸುತ್ತಿದ್ದಾರೆ. 

– ಕೆ.ಎಸ್‌.ಈಶ್ವರಪ್ಪ, ವಿರೋಧ ಪಕ್ಷದ ನಾಯಕ

ಪ್ರತಿಕ್ರಿಯಿಸಿ (+)