ಮಂಗಳವಾರ, ಡಿಸೆಂಬರ್ 10, 2019
20 °C
ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಶುರುವಾದ ಜಗಳ

ವಿದ್ಯಾರ್ಥಿನಿ ಆತ್ಮಹತ್ಯೆ; ರ‍್ಯಾಗಿಂಗ್‌ ವಿಡಿಯೊ ಲಭ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿದ್ಯಾರ್ಥಿನಿ ಆತ್ಮಹತ್ಯೆ; ರ‍್ಯಾಗಿಂಗ್‌ ವಿಡಿಯೊ ಲಭ್ಯ

ಬೆಂಗಳೂರು: ಕುಮಾರಸ್ವಾಮಿ ಲೇಔಟ್‍ನ ದಯಾನಂದ ಸಾಗರ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಮೇಘನಾ (18) ಆತ್ಮಹತ್ಯೆ ಸಂಬಂಧ ತನಿಖೆ ಕೈಗೊಂಡಿರುವ ಪೊಲೀಸರಿಗೆ ರ‍್ಯಾಗಿಂಗ್ ವಿಡಿಯೊ ಗುರುವಾರ ಲಭ್ಯವಾಗಿದೆ.

‘ಕಾಲೇಜು ಆವರಣದಲ್ಲಿ ಎದುರಾಳಿ ಗುಂಪಿನ ವಿದ್ಯಾರ್ಥಿಗಳು, ಮೇಘನಾಳನ್ನು ಸುತ್ತುವರಿದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅದೇ ವಿಡಿಯೊ ಆಧರಿಸಿ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಹಾಗೂ ಕೆಲ ಸಹಪಾಠಿಗಳನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯುತ್ತಿದ್ದೇವೆ’ ಎಂದು ರಾಜರಾಜೇಶ್ವರಿನಗರ ಪೊಲೀಸರು ತಿಳಿಸಿದರು.

‘ಚನ್ನಸಂದ್ರದ ಶಬರಿ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಪೋಷಕರ ಜತೆ ವಾಸವಿದ್ದ ‌‌ಮೇಘನಾ, ಫೆ. 5ರಂದು ಮನೆಯಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾಲೇಜಿನಲ್ಲಾದ ರ‍್ಯಾಗಿಂಗ್‌ ಅದಕ್ಕೆ ಕಾರಣ ಎಂದು ಪೋಷಕರು ದೂರು ನೀಡಿದ್ದಾರೆ. ಅದೇ ಆಯಾಮದಲ್ಲಿ ತನಿಖೆ ಮುಂದುವರಿಸಿದ್ದೇವೆ. ವಾಟ್ಸ್‌ಆ್ಯಪ್‌ನಲ್ಲಿ ಶುರುವಾದ ಜಗಳ, ನಂತರ ಮುಖಾಮುಖಿಯಾಗಿ ನಡೆದಿತ್ತು ಎಂಬ ಮಾಹಿತಿ ಸಿಕ್ಕಿದೆ’ ಎಂದರು.

‘ನಾಲ್ವರು ಯುವತಿಯರು ಹಾಗೂ ಎಂಟು ಯುವಕರಿದ್ದ ಗುಂಪು, ಕಾಲೇಜಿನ ಆವರಣದಲ್ಲಿ ಮೇಘನಾಳ ಜತೆ ಜಗಳ ಮಾಡಿದೆ. ಇದರ ದೃಶ್ಯವನ್ನು ಎದುರಾಳಿ ಗುಂಪಿನವರೇ ಸೆರೆ ಹಿಡಿದಿದ್ದಾರೆ. ಎದುರಾಳಿ ವಿದ್ಯಾರ್ಥಿನಿಯು ಬೈದಿದ್ದನ್ನು ಮೇಘನಾ ಪ್ರಶ್ನಿಸಿದ್ದಳು. ಕೋಪಗೊಂಡ ವಿದ್ಯಾರ್ಥಿನಿಯು ಆಕೆ ಮೇಲೆಯೇ ಹಲ್ಲೆ ನಡೆಸಲು ಯತ್ನಿಸುತ್ತಿರುವುದು ವಿಡಿಯೊದಲ್ಲಿದೆ. ಜಗಳದ ವೇಳೆ ಮೇಘನಾ ಒಬ್ಬಂಟಿಯಾಗಿದ್ದಳು’

‘ಜಗಳದ ನಂತರ ಎದುರಾಳಿ ಗುಂಪಿನವರು, ಒಂದೆಡೆ ಸೇರಿ ಚರ್ಚೆ ನಡೆಸಿದ್ದರು. ‘ವಿರಾಮ ಪಡೆಯಿರಿ. ಮತ್ತೊಂದು ಕೈ ನೋಡಿಕೊಳ್ಳೋಣ’ ಎಂದು ರ‍್ಯಾಗಿಂಗ್‌ ಬಗ್ಗೆ ಪರಸ್ಪರ ಮಾತನಾಡಿಕೊಂಡಿದ್ದರು. ಅದರ ವಿಡಿಯೊ ಸಹ ಸಿಕ್ಕಿದೆ. ಈ ಎರಡೂ ವಿಡಿಯೊಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದೇವೆ’ ಎಂದು ಪೊಲೀಸರು ತಿಳಿಸಿದರು.

ಮೇಘನಾ ತಂದೆ ಚಂದ್ರಶೇಖರ್, ‘ಮಗಳ ಜತೆ ಸ್ನೇಹಿತರು ಜಗಳ ಮಾಡಿದ್ದಾರೆ. ಹಲ್ಲೆ ಮಾಡಲು ಯತ್ನಿಸಿದ್ದಾರೆ. ಇದರಿಂದ ಮನನೊಂದು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಕಾಲೇಜು ಆಡಳಿತ ಮಂಡಳಿಯಲ್ಲಿ ಒಳ್ಳೆಯ ಪದ್ಧತಿ ಇಲ್ಲ. ಮಗಳ ಶವ ನೋಡಲು ಯಾರೊಬ್ಬರೂ ಬಂದಿಲ್ಲ. ಸಾಲ ಮಾಡಿ ಶುಲ್ಕ ಕಟ್ಟಿದ್ದೆವು. ನನ್ನ ಮಗಳಿಗೆ ನೋಟ್ಸ್‌ ಕೊಡಬೇಡಿ ಎಂದು ವಿಭಾಗದ ಮುಖ್ಯಸ್ಥ ರಾಜ್‌ಕುಮಾರ್‌ ಹೇಳಿದ್ದರು. ಮಗಳಿಗೆ ಬಂದ ಸ್ಥಿತಿ ಬೇರೆ ಯಾವ ಬಡ ಹೆಣ್ಣು ಮಕ್ಕಳಿಗೂ ಬರಬಾರದು’ ಎಂದರು.

ಸಹೋದರಿ ಭಾವನಾ, ‘ಸಹಪಾಠಿಗಳು ನೀಡುತ್ತಿದ್ದ ಮಾನಸಿಕ ಕಿರುಕುಳದ ಬಗ್ಗೆ ಮುಖ್ಯಸ್ಥರಿಗೆ ನನ್ನ ತಂಗಿ ದೂರು ನೀಡಿದ್ದಳು. ಅದಕ್ಕೆ ಅವರು ಸ್ಪಂದಿಸದಿದ್ದರಿಂದ ಸಾಕಷ್ಟು ನೊಂದಿದ್ದಳು’ ಎಂದರು.

ಕಾಲೇಜು ಪ್ರಾಂಶುಪಾಲ ಪ್ರಕಾಶ್‌, ‘ರ‍್ಯಾಗಿಂಗ್‌ ವಿಡಿಯೊ ನೋಡಿದ್ದೇವೆ. ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಿದ್ದೇವೆ.  ಅದರ ವರದಿ ಆಧರಿಸಿ ಕ್ರಮ ಕೈಗೊಳ್ಳಲಿದ್ದೇವೆ’ ಎಂದರು.

ತಪ್ಪು ಮಾಹಿತಿ ನೀಡಿದರೆ ಎಫ್‌ಐಆರ್‌

‘ರ‍್ಯಾಗಿಂಗ್‌ ನಡೆದಿಲ್ಲವೆಂದು ಕಾಲೇಜಿನ ಆಡಳಿತ ಮಂಡಳಿ ಹೇಳಿದೆ. ಈಗ ವಿಡಿಯೊ ಸಿಕ್ಕಿದೆ. ಅದರ ಪರಿಶೀಲನೆ ನಡೆಸುತ್ತಿದ್ದೇವೆ. ಆಕಸ್ಮಾತ್‌, ಕಾಲೇಜಿನವರು ತಪ್ಪು ಮಾಹಿತಿ ನೀಡಿರುವುದು ತನಿಖೆಯಲ್ಲಿ ಗೊತ್ತಾದರೆ, ಅವರ ವಿರುದ್ಧ ಪ್ರತ್ಯೇಕ ಎಫ್‌ಐಆರ್‌ ದಾಖಲಿಸುತ್ತೇವೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)