ಭಾನುವಾರ, ಡಿಸೆಂಬರ್ 8, 2019
25 °C
ಕರ್ಲಿಂಗ್‌ ಮೂಲಕ ಕ್ರೀಡಾಕೂಟಕ್ಕೆ ಚಾಲನೆ

ಚಳಿಗಾಲದ ಒಲಿಂಪಿಕ್‌ ಕೂಟ ಇಂದಿನಿಂದ

Published:
Updated:
ಚಳಿಗಾಲದ ಒಲಿಂಪಿಕ್‌ ಕೂಟ ಇಂದಿನಿಂದ

ಪೆಂಗ್‌ಯಾಂಗ್: ಹದಿನೆಂಟು ದಿನಗಳ ಕಾಲ ನಡೆಯುವ ಚಳಿಗಾಲದ ಒಲಿಂಪಿಕ್‌ ಕ್ರೀಡಾಕೂಟಕ್ಕೆ ದಕ್ಷಿಣ ಕೊರಿಯಾದ ಗಾಯಕಿ ಜಾಂಗ್‌ ಹೈ ಜಿ ಅವರು ಚಾಲನೆ ನೀಡಲಿದ್ದಾರೆ. ಶುಕ್ರವಾರ ರಾತ್ರಿಯ ತನಕವೂ ಅಧಿಕೃತ ಉದ್ಘಾಟನಾ ಕಾರ್ಯಕ್ರಮ ನಡೆಯುವುದಿಲ್ಲ. ಅದಕ್ಕೂ ಮುನ್ನವೇ ಕರ್ಲಿಂಗ್‌ ಮಿಕ್ಸೆಡ್‌ ಡಬಲ್ಸ್‌ ಪಂದ್ಯ ನಡೆಯಲಿದೆ.

ಗ್ಯಾಂಗ್ನಿಯಾಂಗ್‌ ಕರ್ಲಿಂಗ್‌ ಕೇಂದ್ರದಲ್ಲಿ ನಡೆಯಲಿರುವ ಮೊದಲ ಸುತ್ತಿನಲ್ಲಿ ದಕ್ಷಿಣ ಕೊರಿಯಾದ ಲೀ ಕಿಂಗ್‌ ಜಿಯೊಂಗ್‌, ಜಾಂಗ್‌ ತಂಡವು ಫಿನ್ಲೆಂಡ್‌ನ ಓನಾ ಕೌಸ್ಟೆ , ಟೊಮಿ ರಂಟಾಮೆಕಿ ಅವರನ್ನು ಎದುರಿಸಲಿದ್ದಾರೆ. ಅದೇ ರೀತಿ ಕೆನಡಾ ತಂಡವು ನಾರ್ವೆಯನ್ನು ಎದುರಿಸಲಿದ್ದು, ವಿಶ್ವ ಚಾಂಪಿಯನ್‌ ಸ್ವಿಟ್ಜರ್ಲೆಂಡ್‌ ತಂಡವನ್ನು ಚೀನಾ ಎದುರಿಸಲಿದೆ.

2016ರ ವಿಶ್ವ ಚಾಂಪಿಯನ್‌ ರಷ್ಯಾದ ಅಲೆಕ್ಸಾಂಡರ್‌ ಕ್ರುಶೆಲ್ನಿಟ್ಕಿ, ಅನಸ್ತಾಸಿಯಾ ಬ್ರೈಜ್ಗಾಲೋವಾ (ಪತಿ, ಪತ್ನಿ) ಅವರು ಕರ್ಲಿಂಗ್‌ನ ಮಿಕ್ಸೆಡ್‌ ಡಬಲ್ಸ್‌ನಲ್ಲಿ ಒಲಿಂಪಿಕ್ಸ್‌ ಧ್ವಜದ ಅಡಿಯಲ್ಲಿ ಭಾಗವಹಿಸಲಿದ್ದಾರೆ. 2014ರ ಸೋಚಿ ಕ್ರೀಡಾಕೂಟದಲ್ಲಿ ರಷ್ಯಾದ ಹಲವು ಕ್ರೀಡಾಪಟುಗಳು ಉದ್ದೀಪನಾ ಮದ್ದು ಸೇವನೆಯಲ್ಲಿ ಸಿಕ್ಕಿಬಿದ್ದಿದ್ದು, ಹೀಗಾಗಿ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಭಾನುವಾರದವರೆಗೆ ಏಳು ಸುತ್ತು ಪಂದ್ಯಗಳು ನಡೆಯಲಿದ್ದು, ನಾಲ್ಕು ತಂಡಗಳು ಸೋಮವಾರ ನಡೆಯುವ ಸೆಮಿಸ್‌ಗೆ ಪ್ರವೇಶ ಪಡೆಯಲಿದೆ. ಮಂಗಳವಾರ ಫೈನಲ್‌ ಪಂದ್ಯ ನಡೆಯಲಿದೆ.

ತ್ರಿವರ್ಣಧ್ವಜ ಹಾರಾಟ: ಇಲ್ಲಿನ ಕ್ರೀಡಾಗ್ರಾಮದಲ್ಲಿ ನಡೆದ ಅಧಿಕೃತ ಸ್ವಾಗತ ಕಾರ್ಯಕ್ರಮದಲ್ಲಿ ಭಾರತದ ತ್ರಿವರ್ಣಧ್ವಜವನ್ನು ಹಾರಿಸಲಾಯಿತು. ಲೂಜ್‌ (ಜಾರುಬಂಡಿ) ಸ್ಪರ್ಧಿ ಶಿವ ಕೇಶವನ್‌, ಚೆಫ್‌ ಡೆ ಮಿಷನ್‌ ಹರ್ಜಿಂದರ್‌ ಸಿಂಗ್‌ ಜೊತೆಗೆ ಕ್ರೀಡಾಗ್ರಾಮದ ಮೇಯರ್‌ ಈ ವೇಳೆ ಹಾಜರಿದ್ದರು.

‘ಕ್ರೀಡಾಗ್ರಾಮದಿಂದ ಅಧಿಕೃತ ಆಹ್ವಾನ ದೊರೆತಿದ್ದು, ತ್ರಿವರ್ಣಧ್ವಜವನ್ನು ಹಾರಿಸಲಾಗಿದೆ. ಈ ವೇಳೆ ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆ ಮೂಡಿಸಿದೆ’ ಎಂದರು.

‘ಆಯೋಜಕರು ಅತ್ಯುತ್ತವಾಗಿ ಆಯೋಜಿಸಿದ್ದಾರೆ. ಮೈನಸ್‌20 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಕಡಿಮೆ ತಾಪಮಾನವಿದ್ದು, ಉಳಿದಂತೆ ಯಾವುದೇ ಸಮಸ್ಯೆಗಳಿಲ್ಲ’ ಎಂದು ಅವರು ತಿಳಿಸಿದರು.

ಕ್ರಾಸ್‌ಕಂಟ್ರಿ ಸ್ಕೈಯರ್‌ ಜಗದೀಶ್‌ ಸಿಂಗ್‌ ಅವರು ಇನ್ನಷ್ಟೇ ಆಗಮಿಸಬೇಕಿದ್ದು, ಶುಕ್ರವಾರ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕೇಶವನ್‌ ಜತೆಗೆ ಫೆ.4ರಂದೇ ಭಾರತದಿಂದ ಅವರು ಇಲ್ಲಿಗೆ ಬರಬೇಕಿತ್ತು, ಕೋಚ್‌ ಯಾರು ತೆರಳಲಿದ್ದಾರೆ ಎಂಬ ಬಗ್ಗೆ ಕೊನೇಕ್ಷಣದಲ್ಲಿ ಗೊಂದಲ ಮೂಡಿದ್ದರಿಂದ ಅವರು ಇಲ್ಲಿಗೆ ಬರಲು ವಿಳಂಬವಾಗಿದೆ.

‘ಶಿವ ಅವರು ಈಗಾಗಲೇ ತರಬೇತಿ ಡ್ರಿಲ್‌ನಲ್ಲಿ ಭಾಗವಹಿಸಿದ್ದು, ಇದು ಅವರ ಆರನೇ ಚಳಿಗಾಲದ ಒಲಿಂಪಿಕ್ಸ್’ ಭಾರತೀಯ ಹಾಕಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಹರ್ಜಿಂದರ್‌ ಅವರು ತಿಳಿಸಿದರು.

ರಷ್ಯಾದ ಕ್ರೀಡಾಳುಗಳ ಮೇಲ್ಮನವಿ ತಿರಸ್ಕೃತ: ಉದ್ದೀಪನಾ ಮದ್ದು ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ 47 ಮಂದಿ ಕ್ರೀಡಾಪಟುಗಳು ಸಲ್ಲಿಸಿದ್ದ ಅರ್ಜಿ

ಯನ್ನು ರಷ್ಯಾದ ಕ್ರೀಡಾನ್ಯಾಯಾಲಯವು ತಿರಸ್ಕರಿಸಿದೆ. ಇದರಿಂದ ಒಲಿಂಪಿಕ್ಸ್‌ನಲ್ಲಿ ಭಾಗಿಯಾಗುವ ರಷ್ಯಾದ ಕ್ರೀಡಾಪಟುಗಳ ಕೊನೇಕ್ಷಣದ ಪ್ರಯತ್ನವೂ ವಿಫಲಗೊಂಡಿದೆ.

**

‘ಸಾಲ್ಟ್‌ಲೇಕ್‌ ಸಿಟಿ ಬಿಡ್‌’

ಲಾಸ್‌ ಎಂಜಲೀಸ್‌: 2030ರ ಚಳಿಗಾಲದ ಒಲಿಂಪಿಕ್‌ ಆಯೋಜಿಸಲು ಸಾಲ್ಟ್‌ಲೇಕ್‌ ಸಿಟಿಯೂ ಬಿಡ್ಡಿಂಗ್‌ ನಡೆಸಿದೆ.

‘ಬಿಡ್‌ ನಡೆಸುವ ಸಂಬಂಧ ಬುಧವಾರ ನಡೆದ ಅಧಿವೇಶನದಲ್ಲಿ ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ’ ಎಂದು ಉಠಾ ಪ್ರಾಂತ್ಯದ ಗವರ್ನರ್‌ ಗ್ಯಾರಿ ಹರ್ಬರ್ಟ್‌ ತಿಳಿಸಿದ್ದರು.

**

ಜಿಯೊ ಟಿವಿಯಲ್ಲಿ ಚಳಿಗಾಲದ ಒಲಿಂಪಿಕ್‌ ಪ್ರಸಾರ

ಮುಂಬೈ: ಚಳಿಗಾಲದ ಒಲಿಂಪಿಕ್‌ ಕೂಟದ ಸ್ಪರ್ಧೆಗಳ ಡಿಜಿಟಲ್‌ ಪ್ರಸಾರದ ಹಕ್ಕನ್ನು ಅಂತರರಾಷ್ಟ್ರೀಯ ಒಲಿಪಿಂಕ್‌ ಸಮಿತಿ (ಐಒಸಿ) ಜಿಯೊ ಟಿವಿಗೆ ನೀಡಿದೆ.

ಭಾರತದ ಕ್ರೀಡಾಪ್ರೇಮಿಗಳು ಮೊಬೈಲ್‌ನಲ್ಲೇ ಕೂಟವನ್ನು ವೀಕ್ಷಿಸಬಹುದಾಗಿದ್ದು ಈ ಬಗ್ಗೆ ಐಒಸಿ ಜೊತೆ ಜಿಯೊ ಟಿವಿ ಒಪ್ಪಂದ ಮಾಡಿಕೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಕೀಯಿಂಗ್‌, ಸ್ಕೇಟಿಂಗ್‌, ಲೂಜ್‌, ಸ್ಕೈ ಜಂಪಿಂಗ್‌, ಐಸ್‌ ಹಾಕಿ, ಸ್ನೋ ಬೋರ್ಡಿಂಗ್ ಸೇರಿದಂತೆ 15 ವಿಭಾಗಗಳಲ್ಲಿ 102 ಸ್ಪರ್ಧೆಗಳು ಕೂಟದಲ್ಲಿ ನಡೆಯಲಿವೆ. ಭಾರತ ಸೇರಿದಂತೆ 90 ರಾಷ್ಟ್ರಗಳು ಭಾಗವಹಿಸುತ್ತಿವೆ.

‘ಜಾರುಬಂಡಿಯಲ್ಲಿ ಶಿವ ಕೇಶವನ್‌ ಹಾಗೂ ಕ್ರಾಸ್‌ ಕಂಟ್ರಿ ಸ್ಕೈಯರ್‌ ಜಗದೀಶ್‌ ಸಿಂಗ್‌ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಜಿಯೊ ಟಿವಿ ಮಾತ್ರವಲ್ಲದೇ, ಐಒಸಿಯ ಒಲಿಪಿಂಕ್‌ ಚಾನಲ್‌ನಲ್ಲೂ ನೇರ ಪ್ರಸಾರ ಇದೆ’ ಎಂದು ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)