ಶುಕ್ರವಾರ, ಡಿಸೆಂಬರ್ 6, 2019
26 °C

ಚರಂಡಿ ನೀರಲ್ಲೇ ಮಕ್ಕಳ ಓಡಾಟ

ಸಿದ್ದು ತ. ಹತ್ತಳ್ಳಿ Updated:

ಅಕ್ಷರ ಗಾತ್ರ : | |

ಚರಂಡಿ ನೀರಲ್ಲೇ ಮಕ್ಕಳ ಓಡಾಟ

ತಾಂಬಾ: ಶಾಲಾ ಆವರಣದಲ್ಲಿ ಚರಂಡಿ ನೀರು ನಿಂತು, ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗುವ ಜೊತೆಗೆ ಸಾಂಕ್ರಾಮಿಕ ರೋಗಗಳು ಹರಡುತ್ತಿದ್ದರೂ ಸಂಬಂಧಿಸಿದವರು ಪರಿಹಾರ ಕಂಡುಕೊಳ್ಳುವ ಮನಸ್ಸು ಮಾಡುತ್ತಿಲ್ಲ.

ಮಕ್ಕಳ ಆರೋಗ್ಯ, ಶಿಕ್ಷಣಕ್ಕಾಗಿ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಹಣ ಖರ್ಚು ಮಾಡುತ್ತಿದೆ. ಆದರೆ, ಇದಕ್ಕೆ ತದ್ವಿರುದ್ಧ ಎಂಬಂತೆ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಸಕರ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಹಲ ದಿನಗಳಿಂದ ಚರಂಡಿ ನೀರು ಹರಿಯುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಶಾಲೆ ಒಳ ಹೋಗುವ ಮಕ್ಕಳು ಈ ಹೊಲಸು ನೀರಲ್ಲಿಯೇ ಹಾದು ಹೋಗಬೇಕು. ಇದರಿಂದ ಕಾಲೆಲ್ಲ ಕೆಸರಾಗುತ್ತದೆ. ಹಾಗೆಯೇ ಕೋಣೆಯಲ್ಲಿ ಪ್ರವೇಶ ಮಾಡಬೇಕು.

ಜ್ಞಾನ ದೇಗುಲದಲ್ಲಿ ಕೈ ಮುಗಿದು ಹೋಗುವ ಬದಲು ಮೂಗು ಮುಚ್ಚಿಕೊಂಡು ಹೋಗುವ ದುಸ್ಥಿತಿ ನಮ್ಮ ಶಾಲೆಗೆ ಬಂದಿರುವುದು ದುರ್ದೈವದ ಸಂಗತಿ. ಈಗಲಾದರೂ ಎಚ್ಚೆತ್ತುಕೊಂಡು ಸಂಬಂಧಿಸಿದವರು ಸಮಸ್ಯೆಗೆ ಪರಿಹಾರ ಕಂಡುಕೊಂಡು ಮಕ್ಕಳ ಆರೋಗ್ಯ ಕಾಪಾಡಬೇಕು ಎನ್ನುತ್ತಾರೆ ಗ್ರಾಮಸ್ಥ ನಾಗಪ್ಪ ಎಂಬತ್ನಾಳ.

ಶಾಲೆಯ ಪಕ್ಕದಲ್ಲಿಯೇ ಕೈಪಂಪು ಇರುವುದರಿಂದ ಆವರಣದಲ್ಲಿ ನೀರು ನಿಂತು ರಾಡಿಯಾಗುತ್ತಿದೆ. ಇದರಲ್ಲಿ ಹಂದಿಗಳು ಬಂದು ಬೀಳುತ್ತವೆ. ಜೊತಗೆ ಕೊಳಚೆ ನೀರು ಕೂಡ ಸೇರ್ಪಡೆಯಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇದರಿಂದ ಮಕ್ಕಳು ಭಯದಲ್ಲಿಯೇ ಶಾಲೆಗೆ ತೆರಳುತ್ತಿದ್ದಾರೆ. ಅಕ್ಷರ ಕಲಿಯಬೇಕೆಂಬ ಮಹದಾಸೆಯೊಂದಿಗೆ ಬರುವ ಮಕ್ಕಳು ಇಲ್ಲಿಯ ದುರ್ನಾತದಿಂದ ಕಂಗೆಟ್ಟು ಹೋಗಿದ್ದಾರೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷ ವಿಠ್ಠಲ ಮೂಲಿಮನಿ ಅಸಮದಾನ ವ್ಯಕ್ತಪಡಿಸಿದರು.

* * 

ತಾಂಬಾದ ಸರ್ಕಾರಿ ಕನ್ನಡ ಹೆಣ್ಣು ಮಕ್ಕಳ ಶಾಸಕರ ಮಾದರಿ ಪ್ರಾಥಮಿಕ ಶಾಲೆ ಪಕ್ಕದಲ್ಲಿ ಕೊಳಚೆ ನೀರು ಹರಿಯುತ್ತಿರುವುದು ತಮ್ಮ ಗಮನಕ್ಕೆ ಬಂದಿದೆ. ತಕ್ಷಣ ಕ್ರಮ ಕೈಗೊಳ್ಳಲಾಗುವುದು

ಬಿ.ಎಂ.ಉಮದಿ

ಪಿಡಿಓ

 

ಪ್ರತಿಕ್ರಿಯಿಸಿ (+)