ಬುಧವಾರ, ಡಿಸೆಂಬರ್ 11, 2019
16 °C

ಕೊಳಗಲ್‌: 1 ವರ್ಷದಿಂದ ನಡೆಯದ ಗ್ರಾಮಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳಗಲ್‌: 1 ವರ್ಷದಿಂದ ನಡೆಯದ ಗ್ರಾಮಸಭೆ

ಬಳ್ಳಾರಿ: ‘ತಾಲ್ಲೂಕಿನ ಕೊಳಗಲ್‌ ಗ್ರಾಮ ಪಂಚಾಯಿತಿಯಲ್ಲಿ ಒಂದು ವರ್ಷದಿಂದ ಸಾಮಾನ್ಯ ಸಭೆ ನಡೆದಿಲ್ಲ. ಸಭೆ ನಡೆಸದ ಅಧ್ಯಕ್ಷ ಹಾಗೂ ಸದಸ್ಯರ ವಿರುದ್ಧ ಕ್ರಮ ಕೈಗೊಂಡಿಲ್ಲ. ₹ 60 ಲಕ್ಷ ಅನುದಾನವೂ ಬಳಕೆಯಾಗಿಲ್ಲ. ಪರಿಣಾಮವಾಗಿ ಜನರ ಬವಣೆಗಳೂ ಬೆಳೆಯುತ್ತಿವೆ’ ಎಂದು ತಾಲ್ಲೂಕು ಪಂಚಾಯಿತಿ ಸದಸ್ ಭೋಗರಾಜ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ 9ನೇ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ‘ಸದಸ್ಯರು ಬಹಿರಂಗವಾಗಿಯೇ ತಾವು ಸಭೆಗೆ ಹೋಗುವುದಿಲ್ಲ ಎನ್ನುತ್ತಾರೆ. ಸತತ ಮೂರು ಸಭೆಗೆ ಬಾರದವರನ್ನು ಪಂಚಾಯತ್‌ ರಾಜ್‌ ಕಾಯ್ದೆ ಪ್ರಕಾರ ಸದಸ್ಯ ಸ್ಥಾನದಿಂದ ಅಮಾನತು ಮಾಡಬೇಕು. ಆದರೆ ಇದುವರೆಗೆ ಕಾರ್ಯನಿರ್ವಹಣಾಧಿಕಾರಿಯೂ ಕ್ರಮ ಕೈಗೊಂಡಿಲ್ಲ. ಕಾಂಗ್ರೆಸ್‌ ಬೆಂಬಲಿತ ಸದಸ್ಯರೇ ಹೆಚ್ಚಿರುವುದರಿಂದ ಸರ್ಕಾರವೂ ಕಣ್ಣು ಮುಚ್ಚಿ ಕುಳಿತಿದೆ’ ಎಂದು ಆರೋಪಿಸಿದರು.

‘ಪಂಚಾಯಿತಿಯು ನೀರು, ವಿದ್ಯುತ್‌ ಸೌಕರ್ಯವನ್ನೂ ಸಮರ್ಪಕವಾಗಿ ನೀಡಲಾಗದ ಪರಿಸ್ಥಿತಿಯಲ್ಲಿದೆ. ಹೀಗಾಗಿ ಸಭೆ ನಡೆಸದಿದ್ದರೆ ಆಡಳಿತಾಧಿಕಾರಿಯನ್ನಾದರೂ ನೇಮಿಸಬೇಕು’ ಎಂದು ಆಗ್ರಹಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಂ, ‘ಸಭೆ ನಡೆಸದ ಕುರಿತು ಅಧ್ಯಕ್ಷರು ಮತ್ತು ಅಭಿವೃದ್ಧಿ ಅಧಿಕಾರಿ ವಿರುದ್ಧ ಗ್ರಾಮೀಣಾಭಿವೃದ್ಧಿ ಇಲಾಖೆಗೆ ವರದಿ ಸಲ್ಲಿಸಲಾಗಿದೆ. ಅಕ್ರಮವಾಗಿ ಚೆಕ್‌ಗಳನ್ನು ಪಡೆದ ಸದಸ್ಯರ ವಿರುದ್ಧವೂ ಕ್ರಿಮಿನಲ್‌ ಮೊಕದ್ದಮೆ ಹೂಡಲಾಗುವುದು’ ಎಂದರು.

‘ಸಭೆ ನಿಗದಿಯಾಗಿದ್ದ ದಿನಾಂಕ, ಸಭೆ ನಡೆಸುವ ಕುರಿತು ಸದಸ್ಯರಿಗೆ ನೀಡಿದ ನೋಟಿಸ್‌ಗಳ ದಿನಾಂಕ ಕುರಿತು ಅಭಿವೃದ್ಧಿ ಅಧಿಕಾರಿ ಸಮರ್ಪಕ ಮಾಹಿತಿ ನೀಡಿಲ್ಲ. ಹೀಗಾಗಿ ಸದಸ್ಯರ ವಿರುದ್ಧ ಕ್ರಮ ಕೈಗೊಂಡಿಲ್ಲ. ವಿವರವಾದ ವರದಿಯನ್ನು ಕೊಡುವಂತೆ ಅಭಿವೃದ್ಧಿ ಅಧಿಕಾರಿಗೆ ಸೂಚಿಸಲಾಗಿದೆ. ವರದಿ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಫಲಾನುಭವಿ ಪಟ್ಟಿ ತಿರಸ್ಕೃತ: ‘ಏಳು ಪಂಚಾಯಿತಿಗಳು ಸಮರ್ಪಕವಾಗಿ ಗ್ರಾಮಸಭೆ ನಡೆಸದೆ ಸಲ್ಲಿಸಿದ ಆಶ್ರಯ ಯೋಜನೆ ಫಲಾನುಭವಿಗಳ ಪಟ್ಟಿ ತಿರಸ್ಕರಿಸಲಾಗಿದೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಯೇ ಸಭೆಯ ನಡಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ’ ಎಂದರು.

ಸರ್ವೇ ನಡೆಸದ ತಹಶೀಲ್ದಾರ್‌: ‘ಎಚ್‌.ವೀರಾಪುರದಲ್ಲಿ ಹೊಲಗಳಿಗೆ ತೆರಳಲು ರಸ್ತೆ ಸೌಕರ್ಯ ಇಲ್ಲದಿರುವುದರಿಂದ ಸರ್ವೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಒಂದು ವರ್ಷದಿಂದ ಮನವಿ ಸಲ್ಲಿಸಿದರೂ ತಹಶೀಲ್ದಾರ್‌ ನಿರ್ಲಕ್ಷ್ಯ ವಹಿಸಿದ್ದಾರೆ. ಸರ್ವೆ ಸಿಬ್ಬಂದಿಗೆ ಅವರು ಇದುವರೆಗೆ ಸೂಚನೆಯನ್ನೇ ನೀಡಿಲ್ಲ’ ಎಂದು ಸದಸ್ಯ ಬಸವರಾಜ್‌ ಆಕ್ಷೇಪಿಸಿದರು. ‘ರಸ್ತೆ ನಿರ್ಮಾಣಕ್ಕೆಂದು ಶಾಸಕರು ₨ 5 ಲಕ್ಷ ಅನುದಾನವನ್ನೂ ಬಿಡುಗಡೆ ಮಾಡಿದ್ದರು. ಅದೂ ವಾಪಸ್‌ ಹೋಯಿತು’ ಎಂದು ವಿಷಾದಿಸಿದರು.

ಏತ ನೀರಾವರಿ ಯೋಜನೆ: ತಾಲ್ಲೂಕಿನ ದಮ್ಮೂರು ಮತ್ತು ಕೊರ್ಲಗುಂದಿ ಗ್ರಾಮದ ಕೊನೆಯ ಭಾಗದ ರೈತರ ಜಮೀನುಗಳಿಗೆ ನೀರು ಹರಿಸುವ ಏತನೀರಾವರಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಸದಸ್ಯ ಪಿ.ತಿಮ್ಮಾರೆಡ್ಡಿ ಆಗ್ರಹಿಸಿದರು.

‘ಈ ಗ್ರಾಮಗಳ ಮೇಲ್ಮಟ್ಟದ ಕಾಲುವೆಯ ವಿತರಣೆ ಕಾಲುವೆ 13ರ ಕೊನೆಯ ಭಾಗದಲ್ಲಿರುವ ರೈತರಿಗೆ ಮುಂಗಾರು ಹಂಗಾಮಿನಲ್ಲಿ ಮಾತ್ರ ನೀರು ಪೂರೈಸಲಾಗುತ್ತಿದೆ. ಸುಮಾರು 3,500 ಎಕರೆ ಜಮೀನಿಗೆ ನೀರಿನ ಕೊರತೆಯಿಂದ ಇಳುವರಿ ಕುಸಿದಿದೆ. ಒಂದು ದಶಕದಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದೂರಿದರು.

ಕುರುಗೋಡಿಗೆ ಸೇರಿಸಿ: ಎಮ್ಮಿಗನೂರು ಮತ್ತು ನೆಲ್ಲೂಡಿ ಗ್ರಾಮಗಳನ್ನು ಕಂಪ್ಲಿಗೆ ಸೇರಿಸಿರುವುದು ಸರಿಯಲ್ಲ. ಮೊದಲಿನಂತೆ ಅವುಗಳನ್ನು ಕುರುಗೋಡು ತಾಲ್ಲೂಕಿಗೇ ಸೇರಿಸಬೇಕು ಎಂದು ಸದಸ್ಯ ಎಚ್‌.ಓಬಳೇಶ್‌ ಆಗ್ರಹಿಸಿದರು. ಅಧ್ಯಕ್ಷೆ ರಮೀಜಾಬಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ಅವ್ಯವಹಾರ: ಕ್ರಿಮಿನಲ್‌ ಮೊಕದ್ದಮೆ ಹೂಡಲು ಸೂಚನೆ

ತಾಲ್ಲೂಕಿನ ಕೊಳಗಲ್‌ನಲ್ಲಿರುವ ಪ್ರಾಥಮಿಕ ಕೃಷಿ ತ್ತಿನ ಸಹಕಾರ ಸಂಘದ ಹಿಂದಿನ ಮುಖ್ಯ ಕಾರ್ಯನಿರ್ವಹಾಕ ಕೆ.ಬಸವನಗೌಡ ಅವರು ಬಿಳಿ ಹಾಳೆ ಮೇಲೆ ಸದಸ್ಯರ ಸಹಿ ಪಡೆದು ₹ 36 ಸಾವಿರ ಹಣ ದುರ್ಬಳಕೆ ಮಾಡಿಕೊಂಡಿದ್ದು ಸಾಬೀತಾಗಿರುವುದರಿಂದ ಅವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ಕಾರ್ಯನಿರ್ವಹಣಾಧಿಕಾರಿ ಜಾನಕಿರಾಂ ಸೂಚಿಸಿದರು.

ಪ್ರತಿಕ್ರಿಯಿಸಿ (+)