ರಾಜಕೀಯ ಪ್ರೇರಿತ ಸರಣಿ ಕೊಲೆಗಳ ಬಗ್ಗೆ ರಾಹುಲ್ ಉತ್ತರಿಸಲಿ: ಸಚಿವ ಜಾವಡೇಕರ್

7

ರಾಜಕೀಯ ಪ್ರೇರಿತ ಸರಣಿ ಕೊಲೆಗಳ ಬಗ್ಗೆ ರಾಹುಲ್ ಉತ್ತರಿಸಲಿ: ಸಚಿವ ಜಾವಡೇಕರ್

Published:
Updated:
ರಾಜಕೀಯ ಪ್ರೇರಿತ ಸರಣಿ ಕೊಲೆಗಳ ಬಗ್ಗೆ ರಾಹುಲ್ ಉತ್ತರಿಸಲಿ: ಸಚಿವ ಜಾವಡೇಕರ್

ತುಮಕೂರು: ’ಕರ್ನಾಟಕದಲ್ಲಿ 25ಕ್ಕೂ ಹೆಚ್ಚು ರಾಜಕೀಯ ಪ್ರೇರಿತ ಸರಣಿ ಕೊಲೆಗಳಾಗಿವೆ. ಸಿದ್ದರಾಮಯ್ಯ ಅವರ ನೇತೃತ್ವದ ನಾಲ್ಕುವರೆ ವರ್ಷದ ಸರ್ಕಾರದಲ್ಲಿ ಮೂರು ಸಾವಿರಕ್ಕೂ ಹೆಚ್ಚು ರೈತರ ಆತ್ಮಹತ್ಯೆಗಳಾಗಿವೆ. ಶನಿವಾರ ಈ ರಾಜ್ಯಕ್ಕೆ ಭೇಟಿ ನೀಡಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ತಮ್ಮ ಪಕ್ಷದ ಸರ್ಕಾರ ಇವುಗಳನ್ನು ತಡೆಯಲು ಏನು ಮಾಡಿದೆ ಎಂಬುದನ್ನು ಉತ್ತರಿಸಲಿ’ ಎಂದು ಕೇಂದ್ರ ಮಾನವ ಸಂಪನ್ಮೂಲ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜಕೀಯ ಪ್ರೇರಿತ ಕೊಲೆಗಳಾದರೂ ಸರ್ಕಾರ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದೆ’ ಎಂದು ಆರೋಪಿಸಿದರು.

‘ಸಂಸತ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡುವಾಗ ಕಾಂಗ್ರೆಸ್ ಪಕ್ಷದವರು ಗದ್ದಲ ಗಲಾಟೆ ಮಾಡಿ ಭಾಷಣಕ್ಕೆ ಅಡ್ಡಿಪಡಿಸುವ ಪ್ರಯತ್ನ ಮಾಡಿದರು. ಸಂಸತ್‌ನಲ್ಲಿ ಕಳೆದ 70 ವರ್ಷಗಳಲ್ಲಿ ಈ ರೀತಿ ಗದ್ದಲ ಗಲಾಟೆ ಯಾರೂ ಮಾಡಿರಲಿಲ್ಲ. ಮತ್ತೊಂದೆಡೆ ಕರ್ನಾಟಕಕ್ಕೆ ಪ್ರಧಾನಿ ಬರುತ್ತಿದ್ದಾರೆ ಎಂಬುದು ತಿಳಿದ ತಕ್ಷಣವೇ  ಬಂದ್ ಮಾಡಿಸುವ ಹುನ್ನಾರವನ್ನು ಕಾಂಗ್ರೆಸ್ ಪಕ್ಷ ಮಾಡಿತ್ತು’ ಎಂದು ಆರೋಪಿಸಿದರು.

‘ಅಷ್ಟೇ ಅಲ್ಲ ಮೈಸೂರಿನಲ್ಲಿ ಅಮಿತ್‌ ಷಾ ಅವರು ಪಾಲ್ಗೊಳ್ಳುವ ಕಾರ್ಯಕ್ರಮಕ್ಕೆ ಹೆಚ್ಚಿನ ಜನರು ಸೇರದಂತೆ ಮಾಡಲು ಸಂಘಟನೆಗಳಿಗೆ ಕುಮ್ಮಕ್ಕು ನೀಡಿ ಬಂದ್ ಮಾಡಿಸಿ ಅಡ್ಡಿಪಡಿಸುವ ಹುನ್ನಾರ ನಡೆಸಿತು. ಇದೆಲ್ಲ ಕಾಂಗ್ರೆಸ್ ಪಕ್ಷದವರ ಮಾನಸಿಕ ಸ್ಥಿತಿ ಹೇಗಿದೆ ಎಂಬುದಕ್ಕೆ ಹಿಡಿದ ಕನ್ನಡಿ’ ಎಂದು ಟೀಕಿಸಿದರು.

‘ದೇಶದಲ್ಲಿ ಈಗಾಗಲೇ 19 ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರದಲ್ಲಿದೆ. ಕರ್ನಾಟಕದಲ್ಲಿ ಮಾತ್ರವೇ ಅಧಿಕಾರದಲ್ಲಿರುವ ಕಾಂಗ್ರೆಸ್ ಮೇ ತಿಂಗಳಷ್ಟೊತ್ತಿಗೆ ಇಲ್ಲಿಯೂ ಅಧಿಕಾರ ಕಳೆದುಕೊಳ್ಳುತ್ತದೆ ಎಂದು ಹೇಳಿದರು.

ಮಹಾದಾಯಿ ನೀರು ಕೊಡಲು ಕಾಂಗ್ರೆಸ್‌ಗೆ ಮನಸ್ಸಿಲ್ಲ: ಕಾಂಗ್ರೆಸ್ ಪಕ್ಷಕ್ಕೆ ಮಹದಾಯಿ ನದಿ ನೀರು ಕರ್ನಾಟಕಕ್ಕೆ ಸಿಗಬೇಕು ಎಂಬ ಮನಸ್ಸಿಲ್ಲ. ಯುಪಿಎ ಸರ್ಕಾರ ಅಧಿಕಾರ ಇದ್ದಾಗಲೇ ಸೋನಿಯಾ ಗಾಂಧಿಯವರೇ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡಬಾರದು ಎಂದು ಹೇಳಿದ್ದಾರೆ. ಗೋವಾ ರಾಜ್ಯದಲ್ಲಿ ವಿರೋಧ ಪಕ್ಷದಲ್ಲಿರುವ ಕಾಂಗ್ರೆಸ್ ಪಕ್ಷದವರು ಈಗ ಅದೇ ರೀತಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry