ಭಾನುವಾರ, ಡಿಸೆಂಬರ್ 8, 2019
24 °C
ವಿಧ್ವಂಸಕ ಕೃತ್ಯಕ್ಕೆ ಅಕ್ರಮ ಹಣ ವರ್ಗಾವಣೆ ಆರೋಪ

ಲಷ್ಕರ್ ಉಗ್ರ ಬಿಲಾಲ್‌ಗೆ ಏಳು ವರ್ಷ ಜೈಲು ಶಿಕ್ಷೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಲಷ್ಕರ್ ಉಗ್ರ ಬಿಲಾಲ್‌ಗೆ ಏಳು ವರ್ಷ ಜೈಲು ಶಿಕ್ಷೆ

ಬೆಂಗಳೂರು: ಲಷ್ಕರ್–ಇ–ತೊಯ್ಬಾ(ಎಲ್‌ಇಟಿ) ಸಂಘಟನೆ ಸದಸ್ಯ ಬಿಲಾಲ್ ಅಹಮದ್ ಕೋಟಾ ಅಲಿಯಾಸ್ ಇಮ್ರಾನ್ ಜಲಾಲ್‌ಗೆ(45) ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ(ಇ.ಡಿ) ವಿಶೇಷ ನ್ಯಾಯಾಲಯ ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದೆ.

ವಿಧಾನಸೌಧ ಮತ್ತು ಪ್ರಮುಖ ಸಾಫ್ಟ್‌ವೇರ್ ಕಂಪನಿಗಳ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಿಲಾಲ್ ಈಗಾಗಲೇ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ವಿದೇಶದ ಉಗ್ರ ಸಂಘಟನೆಗಳಿಂದ ಬಿಲಾಲ್‌ ಖಾತೆಗೆ ಹಣ ಸಂದಾಯವಾಗಿರುವ ಬಗ್ಗೆ ದೊರೆತ ದಾಖಲೆಗಳ ಪ್ರಕಾರ 2009ರಲ್ಲಿ ಲೇವಾದೇವಿ ನಿಯಂತ್ರಣ ಕಾಯ್ದೆಯಡಿ ಇ.ಡಿ ಪ್ರಕರಣ ದಾಖಲಿಸಿತ್ತು. 9 ವರ್ಷಗಳ ವಿಚಾರಣೆ ಬಳಿಕ ಶಿಕ್ಷೆ ಹಾಗೂ ₹ 50,000 ದಂಡ ವಿಧಿಸಲಾಗಿದೆ.

ಹಿನ್ನೆಲೆ: ಬಳ್ಳಾರಿಯ ಹೊಸಪೇಟೆಯಿಂದ 2007 ಜ. 5ರಂದು ಖಾಸಗಿ ಬಸ್‍ನಲ್ಲಿ ನಗರಕ್ಕೆ ಬರುತ್ತಿದ್ದಾಗ ಗೊರಗುಂಟೆಪಾಳ್ಯದಲ್ಲಿ ಬಿಲಾಲ್‌ನನ್ನು ಬಂಧಿಸಿದ್ದ ಸಿಸಿಬಿ ‍ಪೊಲೀಸರು, ಎ.ಕೆ–47 ರೈಫಲ್, 200 ಸುತ್ತು ಜೀವಂತ ಗುಂಡುಗಳು, ಉಗ್ರ ಸಂಘಟನೆಗೆ ಸೇರಿದ ಪುಸ್ತಕ, ವಾರ ಪತ್ರಿಕೆಗಳು, ಬೆಂಗಳೂರು ನಕ್ಷೆ, 5 ಸಿಮ್ ಕಾರ್ಡ್, ₹ 38 ಸಾವಿರ ನಗದು ವಶಕ್ಕೆ ಪಡೆದಿದ್ದರು. ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಸೆಷನ್ಸ್ ನ್ಯಾಯಾಲಯ 2016 ಅ.6ರಂದು ಬಿಲಾಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.

ಪಾಕಿಸ್ತಾನದಲ್ಲಿ ತರಬೇತಿ

ಶ್ರೀನಗರದ ಖಾಸಗಿ ಕಂಪನಿಯೊಂದರ ಗುಮಾಸ್ತನ ಮಗನಾದ ಬಿಲಾಲ್, ಜಮ್ಮು- ಕಾಶ್ಮೀರ ವಿಮೋಚನಾ ಸಂಘಟನೆ ಹಾಗೂ ಲಷ್ಕರ್–ಇ-ತೊಯ್ಬಾದ ಸದಸ್ಯನಾಗಿದ್ದ. ಇಮ್ರಾನ್ ಜಲಾಲ್ ಹೆಸರಿನಲ್ಲಿ ನಕಲಿ ಪಾಸ್‍ ಪೋರ್ಟ್ ಮಾಡಿಸಿಕೊಂಡು ಎರಡು ಬಾರಿ ಪಾಕಿಸ್ತಾನಕ್ಕೆ ತೆರಳಿ ಭಯೋತ್ಪಾಕ ಶಿಬಿರಗಳಲ್ಲಿ ತರಬೇತಿ ಪಡೆದಿದ್ದ ಎಂಬ ಅಂಶವನ್ನು ಸಿಸಿಬಿ ಪೊಲೀಸರು ಬಯಲಿಗೆಳೆದಿದ್ದರು.

ಎಲ್‍ಇಟಿ ಮುಖ್ಯಸ್ಥರ ಸೂಚನೆಯಂತೆ ಐದು ಬಾರಿ ಬೆಂಗಳೂರಿಗೆ ಬಂದು ಹೋಗಿದ್ದ ಬಿಲಾಲ್, ವಿಮಾನ ನಿಲ್ದಾಣ, ಸಾಫ್ಟ್‌ವೇರ್ ಕಂಪನಿಗಳ ಬಳಿ ಸುತ್ತಾಡಿ ಮಾಹಿತಿ ಸಂಗ್ರಹಿಸಿದ್ದ. ಬಿಲಾಲ್ ಬಳಿ ಸಿಕ್ಕ ಬೆಂಗಳೂರಿನ ನಕ್ಷೆಯಲ್ಲಿ ವಿಧಾನಸೌಧ, ಹೈಕೋರ್ಟ್ ಸೇರಿ ಪ್ರಮುಖ ಸ್ಥಳಗಳನ್ನು ಮಾರ್ಕ್ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)