ಬುಧವಾರ, ಡಿಸೆಂಬರ್ 11, 2019
16 °C

ಮಕ್ಕಳು ಕಣ್ತೆರೆಸಿದರು

Published:
Updated:
ಮಕ್ಕಳು ಕಣ್ತೆರೆಸಿದರು

ದಿನವೂ ಓಡಾಡುವ ರಸ್ತೆಯಲ್ಲಿ ಪರಿಚಯದವರ ಮನೆ. ಪ್ರಾಥಮಿಕ ಶಾಲೆಯ, ಒಂದೇ ಓರಗೆಯ ಮಕ್ಕಳು ಸೇರುವ ಜಾಗವದು. ಅಲ್ಲಿ ಎಲ್ಲರೂ ದಿನವೂ ಸೈಕಲ್ ಕಲಿಯುತ್ತಾರೆ. ಅಲ್ಲೊಬ್ಬ ಪುಟ್ಟ ಬಾಲಕ, ತನ್ನ ಹಳೇ ಸೈಕಲ್‌ನಲ್ಲಿ ಎಲ್ಲಾ ಹುಡುಗರಿಗೂ ಬ್ಯಾಲೆನ್ಸ್ ಮಾಡುವುದು, ಪೆಡಲ್ ತುಳಿಯುವುದು, ಒಟ್ಟಾರೆ ಸೈಕಲ್‌ ಬಿಡಲು ಹೇಳಿಕೊಡುತ್ತಿದ್ದುದನ್ನು ದಿನವೂ ನೋಡುತ್ತಿದ್ದೆ. ಯಾವತ್ತೂ ಅಲ್ಲಿ ಜಗಳವಾಡಿದ್ದು ನೋಡಿಲ್ಲ, ಕಿವಿಗೆ ಬಿದ್ದಿಲ್ಲ.

ಹೇಳಿಕೊಡುವಾತನನ್ನು ತರಬೇತುದಾರನೆಂದರೂ ಅಡ್ಡಿ ಇಲ್ಲ. ಅವನ ಉಸ್ತುವಾರಿಯಲ್ಲಿ ಹಲವು ಬಾಲಕರು ಬೀಳು–ಏಳುಗಳಿಲ್ಲದೇ ಸೈಕಲ್ ಕಲಿತದ್ದೇ ಹೆಗ್ಗಳಿಕೆ. ತನ್ನ ವಯಸ್ಸಿನ ಎಲ್ಲರಿಗೂ ಸೈಕಲ್ ಕಲಿಸುವುದೇ ಆತನ ಹವ್ಯಾಸ. ಆತನ ಬಳಿ ಸೈಕಲ್ ಕಲಿತ ಬಾಲಕರು ಮನೆಯಲ್ಲಿ ‘ಸೈಕಲ್’ಗಾಗಿ ಅರ್ಜಿ ಗುಜರಾಯಿಸಿ ಹೊಸ ಸೈಕಲ್ ಪಡೆದಿದ್ದೂ ಇದೆ. ಅದೇ ತಂಡದಲ್ಲಿದ್ದ ನಮ್ಮ ವಠಾರದ ಬಾಲಕನಿಗೂ ಒಂದು ದಿನ ದೊಡ್ಡ ಮೊತ್ತದ ಸೈಕಲ್ ಬಂತು. ಅಪ್ಪ–ಅಮ್ಮನಂತೂ ‘ಹುಷಾರು, ಸರಿಯಾಗಿ ಬೀಗ ಹಾಕು, ಕೇಳಿದವರಿಗೆಲ್ಲಾ ಕೊಡ್ಬೇಡ’ ಮುಂತಾಗಿ ಮುಂಜಾಗ್ರತೆ ಮಾತು ಹೇಳುತ್ತಿದ್ದರು.

ಆದರೆ ಆ ಬಾಲಕ ಮಾತ್ರ ತನ್ನ ಹೊಸ ಸೈಕಲನ್ನು ತಳ್ಳಿಕೊಂಡೇ ತುಸು ದೂರದಲ್ಲಿರುವ ‘ತರಬೇತುದಾರ’ನ ಮನೆಗೆ ಹೋದ. ‘ಅವನ ಸೈಕಲನ್ನು ನಾನೆಷ್ಟು ಬಾರಿ ತುಳಿದಿಲ್ಲ. ಈಗ ನನ್ನ ಹೊಸ ಸೈಕಲ್ ಅವನೇ ಮೊದಲು ತುಳಿಯಬೇಕು’ ಎಂದು ಗೊಣಗಿದ್ದು ನಮಗೆಲ್ಲಾ ತುಂಬಾ ಕಾಡಿತು. ಕೆಲವೇ ನಿಮಿಷಗಳಲ್ಲಿ ಸೈಕಲ್ ಕಲಿಸಿದವನೊಂದಿಗೆ ಡಬಲ್ ರೈಡ್‌ನಲ್ಲಿ ಇಬ್ಬರೂ ಜಾಲಿ ರೈಡ್ ಬಂದರು.

‘ಅಪ್ಪ ನಾಳೆಯಿಂದ ಶಾಲೆಗೆ ಆಟೊದಲ್ಲಿ ಹೋಗಲ್ಲ, ಗೆಳೆಯನೊಂದಿಗೆ ಒಂದೆರೆಡು ದಿನ ಹೋಗುವೆ. ಸ್ವಲ್ಪ ಹಿಡಿತ ಹಾಗೂ ಧೈರ್ಯ ಬರುವವರೆಗೆ ಅವನೊಂದಿಗೇ ಹೋಗುತ್ತೇನೆ’ ಎಂದಿದ್ದಾನೆ. ಈಗಂತೂ ಆ ಹುಡುಗ ದಿನವೂ ಸೈಕಲ್‌ನಲ್ಲೇ ಹೋಗಿ ಬರುತ್ತಾನೆ. ತರಬೇತುದಾರನಂತೂ ಹೊಸ ಹೊಸ ಹುಡುಗರಿಗೆ ಸೈಕಲ್ ಕಲಿಸುತ್ತಲೇ ಇದ್ದಾನೆ. ನಾವೆಷ್ಟೇ ದೊಡ್ಡವರಾದರೂ ಮಕ್ಕಳಿಂದ ಕಲಿಯುವ ಪಾಠಗಳು ಕಣ್ಣು ತೆರೆಸುತ್ತವೆ.

–ಗುರುದೇವ್ ಭಂಡಾರ್ಕರ್, ಹೊಸನಗರ

ಪ್ರತಿಕ್ರಿಯಿಸಿ (+)