ಗುರುವಾರ , ಡಿಸೆಂಬರ್ 12, 2019
26 °C

ಹಳ್ಳಿ ಹುಡುಗಿ ಸಮಂತಾ

Published:
Updated:
ಹಳ್ಳಿ ಹುಡುಗಿ ಸಮಂತಾ

ಅಕ್ಕಿನೇನಿ ಕುಟುಂಬದ ನಾಗಚೈತನ್ಯ ಅವರನ್ನು ಮದುವೆಯಾದ ನಂತರ ಖುಷಿಖುಷಿ ಬದುಕಿನ ಚಿತ್ರಗಳು, ಸಿಹಿಸಿಹಿ ಸುದ್ದಿಗಳನ್ನೇ ಹರಿಬಿಡುತ್ತಿದ್ದ ನಟಿ ಸಮಂತಾಗೆ ಈಚೆಗೆ ಮುಂಗೋಪ ತುಸು ಹೆಚ್ಚಾಗಿದೆ.

ಸಮುದ್ರಕಿನಾರೆಯಲ್ಲಿ ಇಳಿಬಿದ್ದ ತೂಗುಮಂಚದ ಮೇಲೆ ಟೂಪೀಸ್ ಧರಿಸಿ ಮಲಗಿರುವ ಚಿತ್ರವೊಂದನ್ನು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡು, ‘ಸಖತ್ ಸುಸ್ತಾಗಿತ್ತು, ವಿಶ್ರಾಂತಿ ಬೇಕಿತ್ತು’ ಎಂದು ಬರೆದುಕೊಂಡಿದ್ದರು.

‘ಮದುವೆಯಾದರೂ ಬುದ್ಧಿ ಬಂದಿಲ್ವಾ? ಮೊದ್ಲು ಸರಿಯಾಗಿ ಬಟ್ಟೆ ಹಾಕ್ಕೊಳಮ್ಮಾ’ ಎಂದೆಲ್ಲಾ ಟ್ರೋಲ್‌ವೀರರು ಕಿಚಾಯಿಸಿದ್ದು ಸುಂದರಿಯ ಮೂಗು ಕೆಂಪೇರುವಂತೆ ಮಾಡಿತ್ತು. ‘ಸಶಕ್ತ ಮಹಿಳೆಯರು ಬೇರೆಯವರು ಅಂದುಕೊಳ್ಳುವುದನ್ನು ಮಾಡುವುದಿಲ್ಲ. ನನ್ನ ಬದುಕಿನ ನಿಯಮಗಳನ್ನು ನಾನು ಬರೆದುಕೊಳ್ಳುತ್ತೇನೆ’ ಎಂದು ಟ್ರೋಲ್‌ವೀರರಿಗೆ ಉತ್ತರ ಕೊಟ್ಟಿದ್ದರು ಸಮಂತಾ.

ಇದಾದ ಸ್ವಲ್ಪ ಹೊತ್ತಿಗೇ ‘ರಂಗಸ್ಥಳಂ’ ಚಿತ್ರದ ಮೊದಲ ಟೀಸರ್ ಯುಟ್ಯೂಬ್‌ಗೆ ಅಪ್‌ಲೋಡ್ ಆಯಿತು ನೋಡಿ, ಸಮಂತಾ ಫುಲ್ ಖುಷ್. ಅಭಿಮಾನಿಗಳಂತೂ ‘ಸುಂದರಿ ಸಮಂತಾ, ನೀನು ‘ಪದಹಾರೇಳ್ಳ ವಯಸುಲು’ ಚಿತ್ರದ ಶ್ರೀದೇವಿ ಥರ ಕಾಣ್ತಿದ್ದಿ’ ಎಂದೆಲ್ಲಾ ಕೊಂಡಾಡಿದರು. 28 ಸೆಕೆಂಡ್‌ನ ಈ ಟೀಸರ್‌ನಲ್ಲಿ ರಾಮಲಕ್ಷ್ಮಿಯಾಗಿ ಕಾಣಿಸಿಕೊಂಡಿರುವ ಸಮಂತಾ ಲಂಗದಾವಣಿ ತೊಟ್ಟು ಮಿಂಚಿದ್ದಾರೆ.

ವೈಯ್ಯಾರ ಮಾಡುತ್ತಾ ಕೆರೆಗೆ ನೀರು ತರಲು ಹೋಗುವ, ಸೈಕಲ್ ತುಳಿಯುವ, ತಲೆಮೇಲೆ ಹೊರೆಹೊತ್ತು ಸಾಗುವ ದೃಶ್ಯಗಳು ಎಂಥವರಿಗೂ ಖುಷಿಕೊಡುವಂತಿವೆ. ಬಟ್ಟೆ ತೊಳೆಯುವ ಕೆರೆಕಲ್ಲಿನ ಮೇಲೆ ಒಂದುಕಾಲಿಟ್ಟು, ಸೊಂಟದ ಮೇಲೆ ಕೈ ಇರಿಸಿಕೊಂಡು ಕೊಡುವ ವಿಶಿಷ್ಟ ಲುಕ್ ಮಾತ್ರ ನೋಡಿದವರು ಎಂದಿಗೂ ಮರೆಯಲಾರರು ಎಂಬಂತೆ ಇದೆ. ಅಪ್‌ಲೋಡ್ ಆದ ಕೇವಲ ಐದು ಗಂಟೆಗಳಲ್ಲಿ 14 ಲಕ್ಷ ಮಂದಿ ಟೀಸರ್ ನೋಡಿ ಮೆಚ್ಚಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)