ಮಡಿವಾಳರು ಅಸ್ಪೃಶ್ಯರು!

7

ಮಡಿವಾಳರು ಅಸ್ಪೃಶ್ಯರು!

Published:
Updated:

‘ಸ್ಪೃಶ್ಯರ ಸೇರ್ಪಡೆ ಸಲ್ಲ’ ಎಂಬ ಪತ್ರದಲ್ಲಿ (ವಾ.ವಾ., ಫೆ. 5) ರಘೋತ್ತಮ ಹೊ.ಬ. ಅವರು ‘ಮಡಿವಾಳರನ್ನು ಎಸ್‌.ಸಿಗೆ ಸೇರ್ಪಡೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿರುವುದು ದುರದೃಷ್ಟಕರ... ಅಸ್ಪೃಶ್ಯರ ಹಕ್ಕುಗಳನ್ನು ಕಿತ್ತುಕೊಳ್ಳುವ ಇಂತಹ ಹುನ್ನಾರಗಳನ್ನು ಎಲ್ಲರೂ ವಿರೋಧಿಸಬೇಕಿದೆ’ ಎಂದಿದ್ದಾರೆ.

ಕೊಳಕು ಬಟ್ಟೆ ತೊಳೆಯುವ ಮಡಿವಾಳರನ್ನು ಸ್ವತಃ ಅಂಬೇಡ್ಕರ್ ಅವರೇ ಅಸ್ಪೃಶ್ಯರೆಂದು ಪರಿಗಣಿಸಿ, ಪರಿಶಿಷ್ಟರ ಪಟ್ಟಿಯಲ್ಲಿ 3ನೇ ಸಾಲಿನಲ್ಲಿ ಸೂಚಿಸಿ ಅನುಮೋದಿಸಿರುತ್ತಾರೆ. ಕರ್ನಾಟಕದಲ್ಲಿ ಮಡಿವಾಳರೆಂದು, ಆಂಧ್ರದಲ್ಲಿ ಸಾಕಲವಾಡು ಎಂದು, ಮಹಾರಾಷ್ಟ್ರದಲ್ಲಿ ಪರೀಟ ಎಂದು... ಹೀಗೆ ಬೇರೆ ಬೇರೆ ಹೆಸರುಗಳಿಂದ ಕರೆದದ್ದು ಉತ್ತರ ಭಾರತದ ಅಧಿಕಾರಿಗಳಿಗೆ ಆ ಸಂದರ್ಭದಲ್ಲಿ ಅರ್ಥವಾಗದೇ ಹೋಗಿ, ಮಡಿವಾಳರನ್ನು ಪರಿಶಿಷ್ಟರ ಪಟ್ಟಿಯಿಂದ ಕೈಬಿಡಲಾಯಿತು.

1976ರಲ್ಲಿ ಇದನ್ನು ಸರಿಪಡಿಸಲು ತಿದ್ದುಪಡಿಗೆ ಪ್ರಯತ್ನ ಮಾಡಲಾಯಿತಾದರೂ ಅದು ಸಫಲ ಆಗಲಿಲ್ಲ. ಅದೇ ಬೇಡಿಕೆಯನ್ನು ಇಂದೂ ಮಡಿವಾಳರು ಮುಂದಿಟ್ಟಿದ್ದಾರೆ. ಸರ್ಕಾರವೇನಡೆಸಿದ್ದ ಅಧ್ಯಯನದ ಪರಿಣಾಮವಾಗಿ ಬಂದಿದ್ದ ‘ಅನ್ನಪೂರ್ಣ ವರದಿ’ಯನ್ನು ಜಾರಿಗೊಳಿಸಲು ಕೇಳುತ್ತಿದ್ದಾರೆ.

ಚಿತ್ರದುರ್ಗ, ಕೊಪ್ಪಳ, ರಾಯಚೂರು ಮುಂತಾದ ಕಡೆ ಆಳ್ವಿಕೆ ನಡೆಸಿದ ನಾಯಕ ಸಮುದಾಯದವರನ್ನು ಪರಿಶಿಷ್ಟ ಪಂಗಡದವರೆಂದು ಪರಿಗಣಿಸಿರುವುದು ತಿಳಿದಿಲ್ಲವೇ? ಲಂಬಾಣಿಗಳು ಇಡೀ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿ ಬೇರೆ ಯಾವ ರಾಜ್ಯದಲ್ಲಿಯೂ ಎಸ್‌.ಸಿಗಳಲ್ಲ. ಹಾಗೆಯೇ ತೆಲುಗು ಮೂಲದ ವಡ್ಡರು– ಭೋವಿಗಳು ಆಂಧ್ರದಲ್ಲಿ ಹಿಂದುಳಿದ ಜಾತಿ, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ. ಈಗ ರಾಷ್ಟ್ರಪತಿಯಾಗಿರುವ ರಾಮನಾಥ ಕೋವಿಂದ್‌‌ ಅವರು ಉತ್ತರಪ್ರದೇಶ ರಾಜ್ಯದ ನೇಕಾರ ಜಾತಿಯವರಾಗಿದ್ದರೂ ಪರಿಶಿಷ್ಟರು.

ಮಡಿವಾಳರು ಭಾರತದ 17 ರಾಜ್ಯಗಳಲ್ಲಿ ಮತ್ತು ಕೆಲವು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರಿಶಿಷ್ಟರ ಪಟ್ಟಿಯಲ್ಲಿದ್ದಾರೆ. ‘ಹರಿದು ಹಂಚಿ ಹೋಗಿರುವ ಅಸ್ಪೃಶ್ಯರನ್ನು ಎಲ್ಲಾ ರಾಜ್ಯಗಳಲ್ಲಿಯೂ ಸಮಾನವಾಗಿ ಎಸ್‌.ಸಿ ಎಂದು ಪರಿಗಣಿಸಬೇಕು’ ಎಂದು ಮಂಡಲ್ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದು ಸ್ವತಃ ಮುಖ್ಯಮಂತ್ರಿಯೇ ಒಪ್ಪಿಕೊಂಡಿರುತ್ತಾರೆ.

ವೀರಶೈವ ಸಮುದಾಯದ ‘ಬೇಡ ಜಂಗಮರನ್ನು’ ಪರಿಶಿಷ್ಟರೆಂದು ಪರಿಗಣಿಸುವಂತೆ ಹಾವನೂರು ವರದಿಯಲ್ಲಿ ಸೂಚಿಸಿದ್ದರಿಂದ ಈ ಪಂಗಡದವರು ಎಸ್‌.ಸಿ ಆದರು. ಅದರಂತೆ ಎಸ್‌.ಸಿಗೆ ಮಾಡಿವಾಳರ ಸೇರ್ಪಡೆಯೂ ನ್ಯಾಯಸಮ್ಮತವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry