ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕೋಡಾವಾಲಾ ಅಂಡ್ ಸನ್ಸ್

Last Updated 9 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಅಲ್ಲಿ ಮೋದಿಜೀ ಎಂದಿನಂತೆ ಬಾಯಿಯನ್ನು ಹನ್ನೆರಡು ಇಂಚಿನಷ್ಟು ತೆರೆದು ಆರ್ಭಟಿಸುತ್ತಿರಲಿಲ್ಲ. ಟಿ.ವಿ.ಯೊಳಗೆ ಬಹಳ ತಣ್ಣಗೆ ಮಾತನಾಡುತಿದ್ದರು. ಆದರೆ ಅವರು ಹೇಳಿದ ತಣ್ಣಗಿನ ಆ ಹೇಳಿಕೆ ಮಾತ್ರ ರಾಷ್ಟ್ರದಾದ್ಯಂತ ಬಿಸಿ ಬಿಸಿ ಪಕೋಡಾದಂತೆ ಖರ್ಚಾಗಿಬಿಟ್ಟಿತು. ಅಷ್ಟಕ್ಕೂ ಅವರು ಹೇಳಿದ ವಿಷಯ ಪಕೋಡಾದ ಬಗ್ಗೆ! ‘ರಸ್ತೆ ಬದಿಯಲ್ಲಿ ಪಕೋಡಾ ಮಾರಿ ಇನ್ನೂರು ರೂಪಾಯಿ ಸಂಪಾದನೆ ಮಾಡುವುದು ಕೂಡಾ ಉದ್ಯೋಗವೇ’. ಇದನ್ನು ಪ್ರಧಾನ ಮಂತ್ರಿ ಒಂದು ಕಣ್ಣು ಮಿಟುಕಿಸಿ ಹೇಳಿದ್ದಾರೋ ಗೊತ್ತಿಲ್ಲ.

ಆದರೆ ಅವರ ಈ ನಿರ್ಭೀತಿಯ ಮಾತಿನಿಂದಾಗಿ ಅನೇಕರು ಒಮ್ಮೆ ಬಿಸಿ ಎಣ್ಣೆಗೆ ಬಿದ್ದ ಪಕೋಡಾದಂತಾಗಿರುವುದು ಮಾತ್ರ ಸತ್ಯ. ಪ್ರಧಾನಿಯವರು ಹಾಗೆ ಹೇಳಿದಾಗ ಅವರಲ್ಲಿ ಎಲ್ಲೋ ಒಂದು ಕಡೆ ಕೃತಾರ್ಥ ಭಾವನೆಯಿದ್ದಂತಿತ್ತು. ತನಗೆ ‘ಪ್ರಧಾನ ಸೇವಕ’ ಉದ್ಯೋಗವನ್ನು ಜನ ಒದಗಿಸಿದರೆ ದೇಶದ ಸುಮಾರು ಒಂದು ಕೋಟಿ ಯುವಜನರಿಗೆ ಉದ್ಯೋಗ ಕೊಡಿಸುತ್ತೇನೆ ಎಂಬ ಭರವಸೆ ತಾನು ನಿರೀಕ್ಷಿಸಿದ್ದಕ್ಕಿಂತ ಮೊದಲೇ ಈಡೇರಿದೆ ಎಂದು ಮೋದಿಜೀ ತಿಳಿದುಕೊಂಡಂತಿತ್ತು. ದೇಶದಲ್ಲಿ ಶೇ 46.6 ರಷ್ಟು ಜನ ಸ್ವಉದ್ಯೋಗಿಗಳೇ (ಪಕೋಡಾವಾಲರು ಸೇರಿ) ಇದ್ದಾರೆ ಎಂದು ಅವರು ಒತ್ತಿ ಹೇಳಿದ್ದರು. ಎಷ್ಟು ಒತ್ತಿ ಹೇಳಿದ್ದರು ಎಂದರೆ ನನಗೆ ಇದರ ಅನ್ವೇಷಣೆ ಮಾಡಲೇಬೇಕೆಂದೆನಿಸಿತು.

ಸರಿ, ಎಲ್ಲೆಲ್ಲಿ ಎಂಥೆಂಥ ಸ್ವ ಉದ್ಯೋಗಿಗಳಿದ್ದಾರೆ ಎಂದು ತಡಕಾಡಲು ಆರಂಭಿಸಿಯೇಬಿಟ್ಟೆ. ಅಬ್ಬಬ್ಬಾ! ಏನಾಶ್ಚರ್ಯ! ನಮ್ಮ ದೇಶದಲ್ಲಿ ಎಂಥೆಂಥ ಸ್ವ ಉದ್ಯೋಗ ಮಾಡುವವರಿದ್ದಾರಲ್ಲಪ್ಪಾ! ನನ್ನ ಕೈಯಲ್ಲಿದ್ದ ಸ್ವ ಉದ್ಯೋಗಿಗಳ ಪಟ್ಟಿ ನೋಡಿ ನಮ್ಮ ಪ್ರಧಾನ ಮಂತ್ರೀಜಿಗೆ ಒಂದು ದೊಡ್ಡ ಸೆಲ್ಯೂಟ್ ಹೊಡೆದೆ. ಮೊತ್ತ ಮೊದಲನೆಯದಾಗಿ ನನಗೆ ಸಿಕ್ಕಿದ್ದೇ ‘ಪಕೋಡಾವಾಲಾ ಅಂಡ್ ಸನ್ಸ್’. ಈ ಅಪ್ಪ– ಮಕ್ಕಳು ಸೇರಿ ಪಕೋಡಾ ತಯಾರಿಕೆಯನ್ನು ಪುಟ್ಟ ಸ್ವ ಉದ್ಯೋಗವೆಂದು ಪ್ರಾರಂಭಿಸಿದರೂ ಅದಕ್ಕೆ ದೊಡ್ಡ ಕಂಪನಿಯ ಹೆಸರನ್ನೇ ಕೊಟ್ಟಿದ್ದರು.

1964ರಲ್ಲಿ ಪ್ರಾರಂಭವಾದ ಈ ಕಂಪನಿಯನ್ನು ಅಂದಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಬಿಸಿ ಬಿಸಿ ಪಕೋಡಾ ತಿಂದು ಉದ್ಘಾಟಿಸಿದ್ದರು ಎಂದು ‘ಪಕೋಡಾವಾಲಾ ಅಂಡ್ ಸನ್ಸ್’ನ ಈಗಿನ ಸಿಇಒ ಹೇಳುತ್ತಾರೆ. ಹೀಗೆ ದೇಶಕ್ಕೆ ಸ್ವಾತಂತ್ರ್ಯ ಯಾವಾಗ ಸಿಕ್ಕಿತೋ ಅಂದಿನಿಂದ ಇಂದಿನವರೆಗೆ ಬಹಳಷ್ಟು ಸ್ವ ಉದ್ಯೋಗಿಗಳು ತುಂಬಾ ಸುಂದರ ಹೆಸರುಗಳನ್ನಿಟ್ಟುಕೊಂಡು ಕಂತ್ರಿ ಕಂಪನಿಗಳನ್ನು ತೆರೆದಿದ್ದರು! ಅವುಗಳಲ್ಲಿ ಮೂವತ್ತು ನಲವತ್ತು ವರ್ಷಗಳ ಹಿಂದೆ ಸ್ಥಾಪಿಸಿದ ‘ಗೋಲ್‌ಮಾಲ್ ಕಂಪನಿ’, ‘ಸ್ಮಗ್ಲಿಂಗ್ ಶಿಪ್ಪಿಂಗ್ ಕಾರ್ಪೊರೇಷನ್’, ‘ಡಾಕೂ ಮಂಗಲ್ ಸಿಂಗ್ ಅಂಡ್‌ ಕೊ’, ‘ಚಂಬಲ್ ಪ್ರೈವೇಟ್ ಲಿಮಿಟೆಡ್’ ಮತ್ತು ಮುಖ್ಯವಾಗಿ ದಾವೂದ್ ಭಾಯಿಯ ‘ಡಿ-ಕಂಪನಿ’ ಈಗ ಬರೀ ನೆನಪಾಗಿ ಉಳಿದಿರುವುದು ಬೇರೆ ಸಂಗತಿ ಬಿಡಿ.

ಮೋದಿ ಗದ್ದುಗೆಗೇರಿದ ಮೇಲಂತೂ ನಮ್ಮ ದೇಶದಲ್ಲಿ ಅಂತಹ ಚಂಡ ಪ್ರಚಂಡ ‘ಕಂಪನಿ’ಗಳು ಆರಂಭವಾಗಿವೆ. ಅವುಗಳತ್ತ ಒಮ್ಮೆ ನೋಟ ಬೀರಿದರೆ, ಎಷ್ಟು ಜನ ಸ್ವ ಉದ್ಯೋಗದಲ್ಲಿ ನಿರತರಾಗಿದ್ದಾರಲ್ಲ ಎಂದು ಮಹಾನ್ ಭಾರತದ ಬಗ್ಗೆ ತುಂಬಾ ಹೆಮ್ಮೆಯಾಗುತ್ತದೆ. ಯುಪಿಎ ಕಾಲದಲ್ಲೂ ಇಂತಹ ಸ್ವ ಉದ್ಯೋಗಿಗಳು ಇದ್ದರು. ಆದರೆ ಯಾವಾಗ ಮೋದಿಜೀ ಸ್ಟಾರ್ಟ್ ಅಪ್ ಕಂಪನಿಗಳನ್ನು ಆರಂಭಿಸುವುದಕ್ಕೆ ಹುರಿದುಂಬಿಸಿದರೋ, ಅಂದಿನಿಂದ ಸ್ವ ಉದ್ಯೋಗ ಮಾಡುವವರ ಸಂಖ್ಯೆ ಏರುತ್ತಲೇ ಹೋಯಿತು ನೋಡಿ! ಅದಕ್ಕೇ ಮೊನ್ನೆ ಪ್ರಧಾನಿಯವರು ನಮ್ಮ ದೇಶದಲ್ಲಿ ಈಗ ಶೇ 46.6 ರಷ್ಟು ಮಂದಿ ಸ್ವ ಉದ್ಯೋಗದಲ್ಲಿ ನಿರತರಾಗಿದ್ದಾರೆ ಎಂದು ತನ್ನ 56 ಇಂಚು ಎದೆ ತಟ್ಟಿ ಹೇಳಿದ್ದು.

ಇಂದಿನ ಕೆಲವು ಸ್ವ ಉದ್ಯೋಗಿಗಳನ್ನು ಭೇಟಿಯಾದಾಗ ಕಂಡು ಬಂದ ಸತ್ಯಾಂಶಗಳು ಇಲ್ಲಿವೆ:

ಮರ್ಡರ್ ಸೊಲ್ಯೂಷನ್ಸ್: ಸುಪಾರಿ ಎಂದೇ ಖ್ಯಾತವಾಗಿದ್ದ ಈ ಸಂಸ್ಥೆಗೆ ಈಗ ಹೊಸ ಹೆಸರು ಕೊಟ್ಟು ರೀಲಾಂಚ್ ಮಾಡಿದ್ದಾರೆ. ಇದು ಯಾರನ್ನಾದರೂ ಖಲಾಸ್ ಅಥವಾ ಸಾಯಿಸುವುದಕ್ಕೆಂದೇ ಹುಟ್ಟಿಕೊಂಡ ಕಂಪನಿ. ಇಲ್ಲಿ ಕೈ, ಕಾಲು ಮಾತ್ರ ಮುರಿಯುವುದಾದರೆ ಅದಕ್ಕೆ ಬೇರೆ ಬೇರೆ ದರ (+ ಜಿಎಸ್‌ಟಿ ಶೇ 18). ಅವರ ಕಚೇರಿಯಲ್ಲಿ ‘ಸಾಲ ಇಲ್ಲ’ ಎಂಬ ಬೋರ್ಡ್ ನೇತಾಡಿಸಿದ್ದಾರೆ.

ಹೈಜಾಕ್ ಸರ್ವಿಸಸ್: ಕಲಿಯಲು ಹೋಗದ ಕಾಲೇಜು ಯುವಕರು ಕೂಡಿ ಆರಂಭಿಸಿದ ಅಪಹರಣಕಾರರ ತಂಡ ಇಲ್ಲಿ ಕಾರ್ಯನಿರ್ವಹಿಸುತ್ತಿದೆ.

ಮೊಬೈಲ್ ಥೀಫ್ ಕಾರ್ಪೊರೇಷನ್ ಆಫ್ ಇಂಡಿಯಾ (ಎಂಟಿಸಿಒಐ): ಇವರು ದಿನಕ್ಕೆ ಕನಿಷ್ಠ 200ರಿಂದ 500 ಮೊಬೈಲ್ ಫೋನ್ ಕಳವು ಮಾಡುತ್ತಿರುವುದರಿಂದ ಇವರ ವ್ಯಾಪಾರ ಏರುಗತಿಯಲ್ಲಿ ಸಾಗಿದೆ. ಬೆಂಗಳೂರಿನ ಎಂಟಿಸಿಒಐ ಅನೇಕ ಮೊಬೈಲ್ ಮಾರಾಟಗಾರರೊಂದಿಗೆ ‘ಟೈ-ಅಪ್ ’ ಮಾಡಿಕೊಂಡಿದೆ.

ಸತ್ಯಂ ಬ್ರದರ್ಸ್: ಇಲ್ಲಿ ನಿಮಗೆ ನಕಲಿ ಡಿಗ್ರಿ ಸರ್ಟಿಫಿಕೇಟುಗಳು, ನಕಲಿ ಸೈಟ್ ದಾಖಲೆ, ನಕಲಿ ಫ್ಲ್ಯಾಟ್ ದಾಖಲೆ, ನಕಲಿ ನೋಟುಗಳು, ನಕಲಿ ಪಾಸ್‌ಪೋರ್ಟ್, ನಕಲಿ ಬಿಪಿಎಲ್ ಕಾರ್ಡ್ ಇತ್ಯಾದಿ... ಇತ್ಯಾದಿ... ಸಿಗುತ್ತವೆ. ಇವರು ಕೆಲವೊಮ್ಮೆ ನಕಲಿ ಪೊಲೀಸ್, ನಕಲಿ ಐಟಿ ಅಧಿಕಾರಿಗಳಂತೆಯೂ ದುಡಿಯುವುದಿದೆ.

ಎಟಿಎಂ ರಾಬರ್ ಟೆಕ್ನಾಲಜಿಸ್: ಇವರ ಮುಖ್ಯ ಕಚೇರಿ ನೋಯ್ಡಾ. ದೇಶದಾದ್ಯಂತ ಇವರ ನೆಟ್‌ವರ್ಕ್ ಎಷ್ಟು ಚೆನ್ನಾಗಿದೆ ಎಂದರೆ ನೋಯ್ಡಾದ ಎಟಿಎಂನಿಂದಲೇ ನಿಮ್ಮ ಕಾರ್ಡ್‌ನಲ್ಲಿರುವ ಹಣ ಗುಳುಂ ಮಾಡಬಲ್ಲರು. ಇವರ ಫ್ರಾಂಚೈಸ್‌ನಲ್ಲಿ ಕೆಲಸ ಮಾಡುವವರು ಬೇರೆ ಬೇರೆ ರಾಜ್ಯಗಳಲ್ಲಿ ಇದ್ದಾರೆ. ಇವರ ತಿಂಗಳ ‘ಟಾರ್ಗೆಟ್ ’ ದೊಡ್ದದಾಗಿದ್ದರೆ ಎಟಿಎಂ ಯಂತ್ರವನ್ನೇ ಹೊತ್ತೊಯ್ಯುತ್ತಾರೆ.

ಹ್ಯಾಕಿಂಗ್ ಬ್ಯಾಂಕಿಂಗ್: ಇದೊಂದು ಕ್ಯಾಷ್‌ಲೆಸ್ ಅವ್ಯವಹಾರ ನಡೆಸುವ ಆನ್ ಲೈನ್ ಕಂಪನಿ. ಒಂದೆರಡು ನಿಮಿಷಗಳಲ್ಲಿ ಲಕ್ಷಗಟ್ಟಲೆ ದುಡ್ಡು ಸಂಪಾದಿಸುವ ತಾಕತ್ತು ಇವರಿಗಿದೆ.

ಬಂದ್ ಅನ್‌ಲಿಮಿಟೆಡ್: ಬಂದ್ ಮಾಡುವುದಕ್ಕೇ ಹುಟ್ಟಿದ್ದೇವೆ ಎಂದು ಭಾವಿಸಿಕೊಂಡಿರುವ ‘ಹುಟ್ಟು ಹೋರಾಟಗಾರರು’ ಇದನ್ನೇ ವೃತ್ತಿಯನ್ನಾಗಿಸಿಕೊಂಡು, ವಿಲಾಸಿ ಜೀವನ ಸಾಗಿಸುತ್ತಿದ್ದಾರೆ. ಈ ಕಂಪನಿಯ ಉದ್ದೇಶ ಬಂದ್‌ನಿಂದ ಯಾವುದೇ ಲಾಭ ಪಡೆಯುವುದಲ್ಲ. ಆದರೆ ರಾಜ್ಯದ ಬೊಕ್ಕಸಕ್ಕೆ, ವ್ಯಾಪಾರಿಗಳಿಗೆ ಮತ್ತು ಇತರ ಉದ್ಯಮಗಳಿಗೆ ನಷ್ಟ ಉಂಟು ಮಾಡುವುದು.

ಡೇಲೈಟ್ ಮಾರ್ಕೆಟಿಂಗ್: ಈ ಕಂಪನಿಯಲ್ಲಿರುವವರಿಗೆ ಬೈಕ್ ಸವಾರಿ ಗೊತ್ತಿರಬೇಕು. ಯಾಕೆಂದರೆ ಅವರು ಸರಗಳ್ಳತನ ಮಾಡಬೇಕು.

ಇಮ್ಮೋರಲ್ ಪೊಲೀಸ್ ಡಿಪಾರ್ಟ್‌ಮೆಂಟ್: ಅಂದರೆ ಅನೈತಿಕ ಆರಕ್ಷಕರು. ಇವರು ಮೊದಲು, ಒಂದು ಧರ್ಮದ ಹುಡುಗರು ಇನ್ನೊಂದು ಧರ್ಮದ ಹುಡುಗಿಯರ ಹಿಂದೆ ಹೋದರೆ ಹಿಡಿದು ಚಮ್ಡಾ ಬಾರಿಸುವ ಡ್ಯೂಟಿ ಮಾಡುತ್ತಿದ್ದರು. ಈಗ ಇವರೆಲ್ಲ ಗೋರಕ್ಷಣೆಯ ಡ್ಯೂಟಿಯಲ್ಲಿ ಹೆಚ್ಚು ಆಸಕ್ತಿ ವಹಿಸುತ್ತಿದ್ದಾರೆ. ಇವರು ಗೋರಕ್ಷಣೆ ಎಂದು ಹೇಳಿಕೊಂಡು ಗೋರಕ್ಷಣೆ ಮಾಡದೆ (ಕಸಾಯಿಖಾನೆಗೆ ಹೋಗುವ ದಾರಿಗೆ ಅಡ್ಡಬಾರದೆ) ಚೆನ್ನಾಗಿ ಸಂಪಾದಿಸುತ್ತಾರೆ.

ಟಾರ್ಗೆಟ್ ಇವೆಂಟ್ ಗ್ರೂಪ್: ಪಾರ್ಟಿ ನಡೆಸಬೇಕಾದರೆ ಇವರು ಬೇಕೇ ಬೇಕು.

ಕ್ರೌಡ್ ಮ್ಯಾನೇಜ್‌ಮೆಂಟ್ ಲಾಜಿಸ್ಟಿಕ್ಸ್: ಯಾವುದೇ ಪಕ್ಷಗಳ ರ‍್ಯಾಲಿಗೂ ಇವರು ಕಿಕ್ಕಿರಿಯುವಷ್ಟು ಜನರನ್ನು ಒದಗಿಸಬಲ್ಲರು. ಮೋದಿಜೀ ರ‍್ಯಾಲಿಗೆ ಭಕ್ತರು ಬೇಕಿದ್ದರೆ ಫೀಸು ಜಾಸ್ತಿ.

ಬೆಟ್ಟಿಂಗ್ ನೆಟ್‌ವರ್ಕ್: ಕೊಹ್ಲಿಯಷ್ಟೇ ಸಂಪಾದನೆ ಮಾಡಬೇಕೆಂಬ ಛಲವುಳ್ಳವರು ಈ ಸ್ವ ಉದ್ಯೋಗ ಮಾಡುತ್ತಿದ್ದಾರೆ.

ಗ್ಲೋಬಲ್ ಮಾಲ್ಸ್: ಇದನ್ನು ‘ಗೋಲ್‌ಮಾಲ್’ ಎಂದು ಓದಿಕೊಂಡರೂ ಅಡ್ಡಿಯಿಲ್ಲ. ಇಲ್ಲಿ ನಿಮಗೆ ಜಗತ್ತಿನ ಹೆಸರಾಂತ ಬ್ರ್ಯಾಂಡ್‌ಗಳ ಷರ್ಟು, ಪ್ಯಾಂಟುಗಳು ಸಿಗುತ್ತವೆ! ಆದರೆ ಎಲ್ಲವೂ ನಕಲಿ. ಅಸಲಿಗೆ ಶೇ 20 ಜಿಎಸ್‌ಟಿ ಇದೆ.

ಇಷ್ಟೇ ಅಲ್ಲ. ಇಂತಹ ಇನ್ನೆಷ್ಟೋ ಸ್ವ ಉದ್ಯೋಗಿಗಳು ನಮ್ಮಲ್ಲಿದ್ದಾರೆ. ಹೀಗಿರುವಾಗ ಆಡಳಿತ ನಡೆಸುವ ನಮ್ಮ ಪ್ರಭುಗಳಿಗೆ ನಿರುದ್ಯೋಗ ಸಮಸ್ಯೆ ಎಲ್ಲಿ ಕಾಣುತ್ತದೆ ಹೇಳಿ! ಆದರೆ ಮೊನ್ನೆ ಬಿಜೆಪಿಯ ಶೆಹನ್ ಶಾ ‘ಭಿಕ್ಷಾಟನೆಗಿಂತ ಪಕೋಡಾ ಮಾರುವುದು ಒಳ್ಳೆಯದು’ ಅಂದಿದ್ದು ಮಾತ್ರ ಸರಿಯಲ್ಲ. 

ಭಿಕ್ಷಾಟನೆಯಂತಹ ವೃತ್ತಿಯನ್ನು ಶಾ ಅವಮಾನಿಸಿದ್ದಾರೆ ಎಂದು ಯಾವ ಕಾಂಗ್ರೆಸ್ಸಿಗನೂ ಖಂಡಿಸದೇ ಇದ್ದದ್ದು ಆಶ್ಚರ್ಯ! ಭಾರತ ದೇಶದಲ್ಲಿ ಭಿಕ್ಷಾಟನೆಗೆ ಬಹಳ ಮಹತ್ವವಿದೆ. ಅದಕ್ಕೆ ಅದರದ್ದೇ ಆದ ಇತಿಹಾಸವೂ ಇದೆ.

‘ಭವತಿ ಭಿಕ್ಷಾಂ ದೇಹಿ’ ಎಂದು ಹೇಳುತ್ತಾ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದ ಋಷಿಮುನಿಗಳನ್ನು ಶಾ ಮರೆತರೇ? ಹೋಗಲಿ, ಹಿಂದೆ ಗುರುಕುಲದಲ್ಲಿ ಗುರುಗಳು ಶಿಷ್ಯಂದಿರಿಗೆ ಭಿಕ್ಷಾಪಾತ್ರೆ ಕೊಟ್ಟು, ಭಿಕ್ಷಾಟನೆ ಇಂಟರ್ನ್ ಶಿಪ್‌ಗೆ ಕಳುಹಿಸುತಿದ್ದುದು ಒಬ್ಬ ಹಿಂದುತ್ವ ಪಕ್ಷದವರಾಗಿ ಶಾಗೆ ಗೊತ್ತಿರಬೇಕಿತ್ತಲ್ಲವೇ? ಅದೆಲ್ಲಾ ಏನೇ ಇರಲಿ, ‘ಲಕ್ಷ ಸಂಪಾದಿಸುವ ಸಾಮರ್ಥ್ಯ ನಮ್ಮ ಭಿಕ್ಷುಕರಿಗಿದೆ. ಪಕೋಡಾ ವ್ಯಾಪಾರಕ್ಕಿಂತ ಭಿಕ್ಷಾಟನೆ ದೊಡ್ದ ವೃತ್ತಿ’ ಎಂದು ‘ಬೆಗ್ಗರ್ಸ್ ಪ್ರೈವೇಟ್ ಲಿಮಿಟೆಡ್’ನ ಆಡಳಿತ ನಿರ್ದೇಶಕರಂತೂ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT