ಮಂಗಳವಾರ, ಡಿಸೆಂಬರ್ 10, 2019
20 °C

ವೈದ್ಯೆ ಮೇಲೆ ಅತ್ಯಾಚಾರ; ಟೆಕಿ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೈದ್ಯೆ ಮೇಲೆ ಅತ್ಯಾಚಾರ; ಟೆಕಿ ಸೆರೆ

ಬೆಂಗಳೂರು: ಮದುವೆ ಆಗುವುದಾಗಿ ನಂಬಿಸಿ ವೈದ್ಯೆ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಸಾಫ್ಟ್‌ವೇರ್ ಉದ್ಯೋಗಿ ಎಸ್.ವೆಂಕಟ ನಾಗಾರ್ಜುನ್ (29) ಎಂಬಾತನನ್ನು ಮಾರತ್ತಹಳ್ಳಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಆಂಧ್ರಪ್ರದೇಶದ ನಾಗಾರ್ಜುನ್, ಪತ್ನಿ ಹಾಗೂ ಒಂದೂವರೆ ವರ್ಷದ ಮಗುವಿನೊಂದಿಗೆ ಮಾರತ್ತಹಳ್ಳಿಯಲ್ಲಿ ನೆಲೆಸಿದ್ದ. ಸಂತ್ರಸ್ತೆ ಕೂಡ ಆಂಧ್ರದವರಾಗಿದ್ದು, ಅಲ್ಲಿನ ಪ್ರತಿಷ್ಠಿತ ಆಸ್ಪತ್ರೆಯೊಂದ ರಲ್ಲಿ ವೈದ್ಯರಾಗಿದ್ದಾರೆ. ಪತಿಯಿಂದ ವಿಚ್ಛೇದನ ಪಡೆದು 10 ವರ್ಷದ ಮಗಳೊಂದಿಗೆ ನೆಲೆಸಿದ್ದ ಅವರು, 2ನೇ ಮದುವೆಯಾಗಲು ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ತಮ್ಮ ಫೋಟೊ ಹಾಗೂ ಸ್ವ–ವಿವರ ಹಾಕಿದ್ದರು.

ಅದೇ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದ ಆರೋಪಿ, ‘ನಾನು ಅವಿವಾಹಿತ. ವಿಚ್ಛೇದಿತ ಮಹಿಳೆಯನ್ನು ವಿವಾಹವಾಗುವ ಇಚ್ಛೆ ಹೊಂದಿದ್ದೇನೆ’ ಎಂದು ಬರೆದುಕೊಂಡಿದ್ದ. ಅದನ್ನು ನೋಡಿದ ಸಂತ್ರಸ್ತೆ, ಆರೋಪಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಪರಿಚಯ ಮಾಡಿಕೊಂಡಿದ್ದರು.

‘2017ರ ಆ.19ರಂದು ಮಾರತ್ತಹಳ್ಳಿಯ ಹೋಟೆಲ್‌ನಲ್ಲಿ ರೂಂ ಬುಕ್ ಮಾಡಿ ನನ್ನನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ ನಾಗಾರ್ಜುನ್, ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಮಾಡಿದ್ದ. ಅದಾದ ವಾರದ ನಂತರ ಆಂಧ್ರಕ್ಕೆ ಬಂದು ಪುನಃ ಲೈಂಗಿಕ ಕ್ರಿಯೆ ನಡೆಸಿದ್ದ. ಅಲ್ಲದೆ, ನನಗೆ ಗೊತ್ತಾಗದಂತೆ ಅದನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದ’ ಎಂದು ಸಂತ್ರಸ್ತೆ ದೂರು ಕೊಟ್ಟಿದ್ದರು.

‘ಆ ನಂತರ ನಮ್ಮ ನಡುವೆ ಸಲುಗೆ ಹೆಚ್ಚಾಯಿತು. ಆತನಿಂದ ನಾನು ಗರ್ಭವತಿಯಾದೆ. ಆಗ ಮಾತು ಬದಲಿಸಿದ ನಾಗಾರ್ಜುನ್, ‘ನನಗೆ ಈಗಾ

ಗಲೇ ಮದುವೆ ಆಗಿದೆ. ₹ 20 ಲಕ್ಷ ಕೊಡುವುದಾದರೆ ನಿನ್ನನ್ನು ಸಹ ವಿವಾಹವಾಗುತ್ತೇನೆ’ ಎಂದು ಹೇಳಿದ. ಹಣ ಕೊಡಲು ಒಪ್ಪದಿದ್ದಾಗ ನನ್ನಿಂದ ಅಂತರ ಕಾಯ್ದುಕೊಂಡ ಆತ, ವಿಷಯ ಬಹಿರಂಗಪಡಿಸಿದರೆ ಲೈಂಗಿಕ ಕ್ರಿಯೆಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಮರ್ಯಾದೆ ತೆಗೆಯುವುದಾಗಿ ಬೆದರಿಸಿದ’ ಎಂದು ದೂರಿದ್ದರು.

‘ಮದುವೆ ಆಗುವುದಾಗಿ ನಂಬಿಸಿ ವಂಚನೆ, ಜೀವಬೆದರಿಕೆ ಹಾಗೂ ಅತ್ಯಾಚಾರ ಆರೋಪಗಳಡಿ ಎಫ್‌ಐಆರ್ ದಾಖಲಿಸಿಕೊಂಡಿ ದ್ದೆವು. ಆರೋಪಿ ನಗರದಲ್ಲಿನ ಮನೆ ಖಾಲಿ ಮಾಡಿ ಆಂಧ್ರದಲ್ಲಿ ತಲೆಮರೆಸಿಕೊಂ ಡಿದ್ದ. ಮೊಬೈಲ್ ಕರೆ ವಿವರ (ಸಿಡಿಆರ್) ಆಧರಿಸಿ ಆತನನ್ನು ಬುಧವಾರ ಪತ್ತೆ ಮಾಡಲಾಯಿತು’ ಎಂದು ಅಧಿಕಾರಿಯೊಬ್ಬರು ಹೇಳಿದರು.‌‌

ಮತ್ತೊಂದು ಪ್ರಕರಣ: ಕಾಣೆಯಾಗಿರುವ ಪತಿಯನ್ನು ಹುಡುಕಲು ನೆರವಾಗುವುದಾಗಿ ನಂಬಿಸಿ 26 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆಟೊ ಚಾಲಕ ಮನೋಜ್ ಮಂಜು (28) ಜೈಲು ಅತಿಥಿಯಾಗಿದ್ದಾನೆ.

ಈ ಸಂಬಂಧ ಜ.30ರಂದು ಮಾರತ್ತಹಳ್ಳಿ ಠಾಣೆಗೆ ದೂರು ಕೊಟ್ಟಿದ್ದ ಸಂತ್ರಸ್ತೆ, ‘ಕೆಲ ದಿನಗಳ ಹಿಂದೆ ಪತಿ ಮನೆ ಬಿಟ್ಟು ಹೋಗಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ಕೊಟ್ಟಿದ್ದೆ. ಜ.11ರಂದು ಫೇಸ್‌ಬುಕ್‌ನಲ್ಲಿ ಪರಿಚಿತನಾದ ಮನೋಜ್ ಮಂಜು ಎಂಬಾತ, ‘ನಿಮ್ಮ ಪತಿ ಇರುವ ಜಾಗ ನನಗೆ ಗೊತ್ತು. ಆ್ಯಪಲ್ ಮೊಬೈಲ್ ಹಾಗೂ ₹ 2 ಸಾವಿರ ಕೊಟ್ಟರೆ ಆ ಜಾಗ ತೋರಿಸುತ್ತೇನೆ’ ಎಂದಿದ್ದ. ಅಂತೆಯೇ ಹಣ ಹಾಗೂ ಮೊಬೈಲ್ ಕೊಟ್ಟಿದ್ದೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

‘ಜ.26ರ ಸಂಜೆ 7.15ರ ಸುಮಾರಿಗೆ ನನ್ನನ್ನು ಕಾಡುಬೀಸನಹಳ್ಳಿಗೆ ಕರೆಸಿಕೊಂಡ ಆತ, ‘ನೀಲಗಿರಿ ತೋಪಿನಲ್ಲಿ ನಿನ್ನ ಗಂಡ ಇದ್ದಾನೆ. ಬಾ ತೋರಿಸುತ್ತೇನೆ’ ಎಂದು ನನ್ನ ಸ್ಕೂಟರ್ ಹತ್ತಿದ. ಆತನ ಮಾತು ನಂಬಿ ಹೊರಟೆ. ತೋಪಿನಲ್ಲಿ ಸಾಗುತ್ತಿದ್ದಾಗ ಬೆನ್ನಿಗೆ ಚಾಕುವಿನಿಂದ ತಿವಿದು ಆತ, ಸ್ಕೂಟರ್ ನಿಲ್ಲಿಸುವಂತೆ ಬೆದರಿಸಿದ.’

‘ವಾಹನ ನಿಲ್ಲಿಸಿದ ಬಳಿಕ ಅತ್ಯಾಚಾರ ಎಸಗಿದ ಮನೋಜ್, ವಿಷಯ ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಸಿ ಹೊರಟು ಹೋದ’ ಎಂದು ದೂರಿದ್ದರು. ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.

ಬಾಲಕಿಗೆ ಲೈಂಗಿಕ ಕಿರುಕುಳ

ಆರು ವರ್ಷದ ಬಾಲಕಿಯ ಬಟ್ಟೆ ಬಿಚ್ಚಲು ಯತ್ನಿಸಿದ ಅನೂಜ್ ಕೊಹ್ಲಿ (22) ಎಂಬ ಸೆಕ್ಯುರಿಟಿ ಗಾರ್ಡ್‌ಗೆ ಅಪಾರ್ಟ್‌ಮೆಂಟ್ ನಿವಾಸಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ.‌‌ ಮುನೆಕೊಳಾಲದ ಅಪಾರ್ಟ್‌ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳದ ಅನೂಜ್, ಫೆ.6ರ ಮಧ್ಯಾಹ್ನ ಚಾಕೊಲೇಟ್‌ನ ಆಮಿಷವೊಡ್ಡಿ ಬಾಲಕಿಯನ್ನು ತನ್ನ ಕೋಣೆಗೆ ಕರೆದೊಯ್ದಿದ್ದ. ಆತ ಬಟ್ಟೆ ಬಿಚ್ಚುತ್ತಿದ್ದಂತೆಯೇ ಬಾಲಕಿ ಅಳಲಾರಂಭಿಸಿದ್ದಾಳೆ. ಅಪಾರ್ಟ್‌ಮೆಂಟ್ ನಿವಾಸಿಗಳು ಕೋಣೆ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆತನಿಗೆ ಥಳಿಸಿ, ನಂತರ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಮಾರತ್ತಹಳ್ಳಿ ಪೊಲೀಸರು, ಆರೋಪಿಯನ್ನು ಠಾಣೆಗೆ ಕರೆದೊಯ್ದಿದ್ದಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೊ) ಅಡಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)