ಶುಕ್ರವಾರ, ಡಿಸೆಂಬರ್ 6, 2019
24 °C

ಅಧಿಕ ಶುಲ್ಕ ವಸೂಲಿಗೆ ₹10 ಲಕ್ಷ ದಂಡ: ಸೇಠ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಧಿಕ ಶುಲ್ಕ ವಸೂಲಿಗೆ  ₹10 ಲಕ್ಷ ದಂಡ: ಸೇಠ್

ಬೆಂಗಳೂರು: ಅಧಿಕ ಶುಲ್ಕ ಪಡೆಯುವ ಖಾಸಗಿ ಶಾಲೆಗಳನ್ನು ವಿಚಾರಣೆಗೊಳಪಡಿಸಿ, ತಪ್ಪು ಮಾಡಿದ್ದರೆ ₹ 10 ಲಕ್ಷದವರೆಗೆ ದಂಡ ವಿಧಿಸಲು ಅವಕಾಶ ನೀಡುವ ಕಾಯ್ದೆಗೆ ನಿಯಮಾವಳಿ ರೂಪಿಸಲಾಗುತ್ತಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ  ತನ್ವೀರ್‌ ಸೇಠ್‌ ತಿಳಿಸಿದರು.

ವಿಧಾನಪರಿಷತ್ತಿನಲ್ಲಿ ಶುಕ್ರವಾರ ಕಾಂಗ್ರೆಸ್‌ನ ಪಿ.ಆರ್‌.ರಮೇಶ್‌ ಪ್ರಶ್ನೆಗೆ ಉತ್ತರಿಸಿ, ಈ ಸಂಬಂಧ ಶಿಕ್ಷಣ ಸಂಸ್ಥೆಗಳ ಕಾಯ್ದೆ 1995ರ ನಿಯಮ 16 ಕ್ಕೆ

2017 ರ ಏಪ್ರಿಲ್‌ನಲ್ಲಿ ತಿದ್ದುಪಡಿ ತರಲಾಗಿದೆ ಎಂದು ಅವರು ಹೇಳಿದರು.

ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಲು ನಿಯಮಾವಳಿ ರೂಪಿಸಲಾಗುತ್ತಿದೆ. ಪ್ರಾಧಿಕಾರಕ್ಕೆ ವಿಚಾರಣೆ ನಡೆಸುವ ಮತ್ತು ದಂಡ ವಿಧಿಸುವ ಅಧಿಕಾರ ಕೊಡಲಾಗುತ್ತಿದೆ. ನಿಯಮಾವಳಿ ಅಂತಿಮಗೊಂಡ ಬಳಿಕ ಸಾರ್ವಜನಿಕರ ಅವಗಾಹನೆಗೆ ಕಳುಹಿಸಲಾಗುವುದು ಎಂದರು.

ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ಪಡೆಯಲಾಗುತ್ತಿದೆಯೆಂದು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳು ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡುತ್ತಿದ್ದಾರೆ. ಸದ್ಯಕ್ಕೆ ದಂಡ ವಿಧಿಸುವ ಅವಕಾಶವಿಲ್ಲ. ಈ ಕಾರಣ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು ಎಂಬುದು ಸರ್ಕಾರದ ಉದ್ದೇಶ ಎಂದು ಸಚಿವರು ತಿಳಿಸಿದರು.

ಖಾಸಗಿ ಶಾಲೆಗಳಲ್ಲಿ ಅಧಿಕ ಶುಲ್ಕ ಪಡೆಯುತ್ತಿರುವುದಕ್ಕೆ ಸಂಬಂಧಿಸಿದ ದೂರುಗಳ ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲು ಈಗಾಗಲೇ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರ (DERA) ರಚಿಸಲಾಗಿದೆ. ಇದರಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪಂಚಾಯಿತಿ ಮುಖ್ಯ ಎಂಜಿನಿಯರ್‌, ಪಿಯು ಶಿಕ್ಷಣ ಮಂಡಳಿ ಉಪ ನಿರ್ದೇಶಕರು ಸದಸ್ಯರಾಗಿರುತ್ತಾರೆ. ಡಿಡಿಪಿಐ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ ಎಂದು ಸಚಿವರು ಹೇಳಿದರು.

ಅನುದಾನ ರಹಿತ ಶಾಲೆಗಳಲ್ಲಿ ಶುಲ್ಕ ನಿಗದಿಗೆ ಸಂಬಂಧಿಸಿದಂತೆ 1999 ರಲ್ಲಿ ನಿಯಮ ರೂಪಿಸಲಾಗಿದೆ. ಅದರ ಪ್ರಕಾರ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಶೇ 30 ರಷ್ಟು ವೇತನ, ಶಾಲೆಯ ನಿರ್ವಹಣೆ ಹಾಗೂ ಇತರ ಖರ್ಚು– ವೆಚ್ಚವನ್ನು ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯಿಂದ ಭಾಗಿಸಿ ನಿಗದಿಪಡಿಸಬೇಕು. 2016 ರಲ್ಲಿ ಸರ್ಕಾರ ಹೊರಡಿಸಿರುವ ಇನ್ನೊಂದು ಅಧಿನಿಯಮದ ಪ್ರಕಾರ, ವಿದ್ಯಾರ್ಥಿಗಳಿಂದ ಸಂಗ್ರಹಿಸಲು ಉದ್ದೇಶಿಸಿದ ಒಟ್ಟು ಬೋಧನಾ ಶುಲ್ಕವು ಆಯಾ ವರ್ಷದಲ್ಲಿ ಆಗುವ ಒಟ್ಟು ಶೈಕ್ಷಣಿಕ ಖರ್ಚಿನ ಶೇ 10 ಕ್ಕಿಂತ ಹೆಚ್ಚು ಇರಬಾರದು. ಆದರೆ, ಖಾಸಗಿಯವರು ಇದನ್ನು ಪಾಲಿಸುತ್ತಿಲ್ಲ ಎಂದು ಸಚಿವರು ತಿಳಿಸಿದರು.

ಶಾಲೆಗಳಲ್ಲಿ ಅಧಿಕ ಶುಲ್ಕ ವಿಧಿಸುವುದರ ನಿಯಂತ್ರಣಕ್ಕೆ ಪ್ರತ್ಯೇಕ ಕಾನೂನು ತರಲು ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗುಜರಾತ್‌ ಮತ್ತು ದೆಹಲಿ ರಾಜ್ಯಗಳು ಪ್ರಯತ್ನಿಸಿ ವಿಫಲವಾದವು. ರಾಜ್ಯದಲ್ಲಿ ಸಮಾನ ಶಿಕ್ಷಣ ತರಬೇಕು ಎಂಬ ಉದ್ದೇಶದಿಂದ ಶುಲ್ಕ ನಿಯಂತ್ರಣಕ್ಕೆ ಮುಂದಾಗಿದ್ದೇವೆ ಎಂದರು.

ಕೆಲವು ಶಾಲೆಗಳು ವಿಳಂಬ ಶುಲ್ಕ ವಿಧಿಸುತ್ತಿರುವುದನ್ನು ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ ಸಚಿವರ ಗಮನಕ್ಕೆ ತಂದರು. ‘ಬೋಧನಾ ಶುಲ್ಕ, ವಾಹನ ಶುಲ್ಕ ಇತ್ಯಾದಿಗಳನ್ನು ವಿಳಂಬವಾಗಿ ಪಾವತಿಸಿದರೆ, ಅದಕ್ಕೆ ದಂಡ ವಿಧಿಸಲಾಗುತ್ತಿದೆ. ಇದರಿಂದ ಅನಗತ್ಯವಾಗಿ ಪೋಷಕರ ಮೇಲೆ ಒತ್ತಡ ಹಾಕಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದರು.

ಸಕಾಲದಲ್ಲಿ ಪಠ್ಯ ಪುಸ್ತಕ ವಿತರಣೆ:

ಈ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಠ್ಯ ಪುಸ್ತಕಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಪಠ್ಯ ಪುಸ್ತಕಗಳ ಮುದ್ರಣ ಕಾರ್ಯ ಆರಂಭಿಸಲಾಗಿದೆ ಎಂದರು.

2017–18 ಸಾಲಿನಲ್ಲಿ ಸರ್ಕಾರ ಮುದ್ರಿಸಿದ ಪಠ್ಯ ಪುಸ್ತಕಗಳಲ್ಲಿದ್ದ 240 ಕ್ಕೂ ಹೆಚ್ಚು ಕಾಗುಣಿತ ದೋಷಗಳನ್ನು ಸರಿಪಡಿಸಲಾಗಿದೆ.  ಡಿಟಿಪಿ ವೇಳೆ ಈ ದೋಷಗಳು ಆಗಿದ್ದವು. ಇನ್ನು ಮುಂದೆ ಈ ರೀತಿ ದೋಷಗಳು ಆಗದಂತೆ ಎಚ್ಚರ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಎನ್‌ಸಿಇಆರ್‌ಟಿ ಪುಸ್ತಕ ಅಳವಡಿಕೆ:

2018–19 ರ ಸಾಲಿನಿಂದ 6 ನೇ ತರಗತಿಗೆ ಎನ್‌ಸಿಇಆರ್‌ಟಿಇ ಪ್ರಕಟಿಸಿರುವ ಗಣಿತ ಮತ್ತು ವಿಜ್ಞಾನದ ವಿಷಯಗಳ ಪುಸ್ತಕಗಳನ್ನು ಅಳವಡಿಸಲಾಗುವುದು ಎಂದೂ ತನ್ವೀರ್‌ ಸೇಠ್ ತಿಳಿಸಿದರು.

ಪ್ರತಿಕ್ರಿಯಿಸಿ (+)