ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ಜನಾಶೀರ್ವಾದ ಯಾತ್ರೆಗೆ ಹೊಸಪೇಟೆ ಸಜ್ಜು

1.25 ಲಕ್ಷ ಆಸನ ವ್ಯವಸ್ಥೆ; ಕಾರ್ಯಕರ್ತರನ್ನು ಕರೆತರಲು ಏಳು ಸಾವಿರ ವಾಹನ
Last Updated 9 ಫೆಬ್ರುವರಿ 2018, 20:36 IST
ಅಕ್ಷರ ಗಾತ್ರ

ಹೊಸಪೇಟೆ: ಪ್ರದೇಶ ಕಾಂಗ್ರೆಸ್‌ನ ಜನಾಶೀರ್ವಾದ ಯಾತ್ರೆಗೆ ಇಲ್ಲಿನ ಮುನ್ಸಿಪಲ್‌ ಮೈದಾನ ಸಕಲ ರೀತಿಯಲ್ಲಿ ಸಜ್ಜುಗೊಂಡಿದೆ.

ರಾಹುಲ್‌ ಗಾಂಧಿ ಎ.ಐ.ಸಿ.ಸಿ. ಅಧ್ಯಕ್ಷರಾದ ನಂತರ ಮೊದಲ ಬಾರಿಗೆ ರಾಜ್ಯದ ಗಣಿ ನಾಡಿಗೆ ಬರುತ್ತಿದ್ದಾರೆ. ಅವರಿಗೆ ಸ್ವಾಗತ ಕೋರಲು ಶುಕ್ರವಾರ ಅಂತಿಮ ಸಿದ್ಧತೆ ಮಾಡಿಕೊಳ್ಳಲಾಯಿತು. ಇಲ್ಲಿನ ಕಾಲೇಜು ರಸ್ತೆ ಸಂಪೂರ್ಣ ಕಾಂಗ್ರೆಸ್‌ಮಯವಾಗಿದೆ. ಎಲ್ಲೆಡೆ ಕಾಂಗ್ರೆಸ್‌ ಧ್ವಜಗಳು, ಹಸ್ತದ ಚಿಹ್ನೆ ಹೊಂದಿರುವ ತೋರಣಗಳು, ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ.

ರಾಹುಲ್ ಇಂದು ಮಧ್ಯಾಹ್ನ 1ಕ್ಕೆ (ಫೆ.10) ಸಮಾವೇಶಕ್ಕೆ ಚಾಲನೆ ನೀಡುವರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಡಾ. ಜಿ.ಪರಮೇಶ್ವರ್ ಸೇರಿದಂತೆ ಪಕ್ಷದ ಇತರ ಮುಖಂಡರು ಭಾಗವಹಿಸಲಿದ್ದಾರೆ.

4.60 ಲಕ್ಷ ಚದರ ಅಡಿ ಜಾಗದಲ್ಲಿ ಪೆಂಡಾಲ್‌ ಹಾಕಲಾಗಿದೆ. ವೇದಿಕೆ ಮುಂಭಾಗದಲ್ಲಿ 1.25 ಲಕ್ಷ ಆಸನಗಳಿಗೆ ವ್ಯವಸ್ಥೆ ಮಾಡಲಾಗಿದೆ. 10 ಬೃಹತ್‌ ಹಾಗೂ 25 ಮಧ್ಯಮ ಗಾತ್ರದ ಎಲ್‌.ಇ.ಡಿ. ಪರದೆಗಳನ್ನು ಹಾಕಲಾಗಿದೆ. ಒಂದು ಕಿ.ಮೀ.ವರೆಗೆ ಭಾಷಣ ಕೇಳಿಸುವಂತೆ ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ.

‘ಕಾರ್ಯಕರ್ತರನ್ನು ಕರೆತರಲು ಮೂರು ಸಾವಿರ ಬಸ್ಸು, ನಾಲ್ಕು ಸಾವಿರ ಕ್ರೂಸರ್‌ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ಮುಖಂಡರ ಭಾವಚಿತ್ರ ಹೊಂದಿರುವ ಒಂದು ಲಕ್ಷ ಲೀಟರ್‌ ನೀರಿನ ಬಾಟಲಿಗಳನ್ನು ವಿತರಿಸಲಾಗುತ್ತದೆ. ಹೆಚ್ಚುವರಿಯಾಗಿ 12 ಲಕ್ಷ ಲೀಟರ್‌ ಟ್ಯಾಂಕರ್‌ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಸುಮಾರು ಎರಡು ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಶುಕ್ರವಾರ ಮಧ್ಯಾಹ್ನ ಸಿದ್ಧತೆ ಪರಿಶೀಲಿಸಿದ ನಂತರ ಸಚಿವ ಸಂತೋಷ್‌ ಲಾಡ್‌ ಸುದ್ದಿಗಾರರಿಗೆ ತಿಳಿಸಿದರು.

ಬಿಗಿ ಭದ್ರತೆ: ಕಾರ್ಯಕ್ರಮ ನಡೆಯಲಿರುವ ಸ್ಥಳದಲ್ಲಿ ಬಿಗಿ ಪೊಲೀಸ್‌ ಭದ್ರತೆಗೆ ವ್ಯವಸ್ಥೆ ಮಾಡಲಾಗಿದೆ. ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಸಚಿವ ಡಿ.ಕೆ.ಶಿವಕುಮಾರ್‌ ಸಮಾವೇಶದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಕೊನೆಯ ಹಂತದ ಸಿದ್ಧತೆ ಪರಿಶೀಲಿಸಿದರು.

*

ಹಂಪಿ ಭೇಟಿಯಿಲ್ಲ; ಮೆರವಣಿಗೆ ಮೊಟಕು

‘ಕಾಂಗ್ರೆಸ್‌ ಯುವ ಕಾರ್ಯಕರ್ತರು ಬೈಕ್‌ ರ‍್ಯಾಲಿಯಲ್ಲಿ ರಾಹುಲ್‌ ಅವರನ್ನು ವೇದಿಕೆಗೆ ಕರೆತರಲು ಯೋಜಿಸಲಾಗಿತ್ತು. ಅವರು ಹಂಪಿಗೆ ಭೇಟಿ ನೀಡಬೇಕಿತ್ತು. ಕಲಶ ಹೊತ್ತ ಮಹಿಳೆಯರ ಮೆರವಣಿಗೆಯನ್ನೂ ಆಯೋಜಿಸಲಾಗಿತ್ತು. ಆದರೆ, ಭದ್ರತೆಯ ಕಾರಣಕ್ಕೆ ಇವೆಲ್ಲವನ್ನೂ ಕೈಬಿಡಲಾಗಿದೆ. ರಾಹುಲ್‌ ಹೆಲಿಪ್ಯಾಡ್‌ನಿಂದ ನೇರವಾಗಿ ವೇದಿಕೆಗೆ ಬರುವರು’ ಎಂದು ಸಂತೋಷ್‌ ಲಾಡ್‌ ತಿಳಿಸಿದರು.

*

ಎರಡು ಗಂಟೆ ಸಮಾವೇಶ ನಡೆಯಲಿದೆ. ರಾಹುಲ್‌ ಗಾಂಧಿ ಸೇರಿದಂತೆ ಕೆಲ ಪ್ರಮುಖ ಮುಖಂಡರಷ್ಟೇ ಮಾತನಾಡುವರು. ನಂತರ ಎಲ್ಲರೂ ಸಂಜೆ ಕೊಪ್ಪಳದ ಹುಲಿಗಿಯ ಹುಲಿಗೆಮ್ಮ ದೇಗುಲಕ್ಕೆ ಭೇಟಿ ಕೊಡುವರು
–ಸಂತೋಷ್‌ ಲಾಡ್‌, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT