ಗುರುವಾರ , ಡಿಸೆಂಬರ್ 12, 2019
24 °C

ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದ ಬಿಡಿಎ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದ ಬಿಡಿಎ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎರಡನೇ ಹಂತದ ನಿವೇಶನ ಹಂಚಿಕೆ ಪ್ರಕ್ರಿಯೆಗೆ ನಿರೀಕ್ಷಿತ ಪ್ರತಿಕ್ರಿಯೆ ಬಂದಿಲ್ಲ. ಈ ಕಾರಣದಿಂದಾಗಿ ಅರ್ಜಿ ಸಲ್ಲಿಕೆ ಅವಧಿಯನ್ನು ಬಿಡಿಎ ಇದೇ 23ರವರೆಗೆ ವಿಸ್ತರಿಸಿದೆ.

ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು 2017ರ ಡಿ. 29ರಿಂದ ಅವಕಾಶ ಕಲ್ಪಿಸಲಾಗಿತ್ತು. ಫೆಬ್ರುವರಿ 9ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

‘ಗುರುವಾರದವರೆಗೆ ಒಟ್ಟು 15,650 ಅರ್ಜಿಗಳು ಮಾರಾಟವಾಗಿದ್ದವು. ಅರ್ಜಿ ನಮೂನೆಗಳನ್ನು ಪಡೆದಿರುವ ಅನೇಕರು ಪ್ರಾರಂಭಿಕ ಠೇವಣಿ ಪಾವತಿಗೆ ಇನ್ನಷ್ಟು ಕಾಲಾವಕಾಶ ಕೋರಿದ್ದರು. ಹಾಗಾಗಿ ಅರ್ಜಿ ಸಲ್ಲಿಕೆಗೆ ಕಾಲಾವಕಾಶ ನೀಡಲು ನಿರ್ಧರಿಸಿದ್ದೇವೆ’ ಎಂದು ಬಿಡಿಎ ಆಯುಕ್ತ ರಾಕೇಶ್‌ ಸಿಂಗ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಗುರುವಾರದವರೆಗೆ 1,390 ಮಂದಿ ಮಾತ್ರ ಪ್ರಾರಂಭಿಕ ಠೇವಣಿಯನ್ನು ಪಾವತಿಸಿದ್ದರು. ಇದರಿಂದ ₹ 21 ಕೋಟಿ ಸಂಗ್ರಹವಾಗಿತ್ತು. ಶುಕ್ರವಾರ ಎಷ್ಟು ಮಂದಿ ಪ್ರಾರಂಭಿಕ ಶುಲ್ಕ ಪಾವತಿಸಿದ್ದಾರೆ ಎಂಬ ಮಾಹಿತಿ ಇನ್ನೂ ಲಭ್ಯವಾಗಿಲ್ಲ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಈ ಬಡಾವಣೆಯಲ್ಲಿ ಮೊದಲ ಹಂತದಲ್ಲಿ 5,000 ನಿವೇಶನ ಹಂಚಿಕೆಗೆ ವಿವಿಧ ಬ್ಯಾಂಕ್‌ಗಳಲ್ಲಿ ಒಟ್ಟು 53,462 ಅರ್ಜಿಗಳು ಮಾರಾಟವಾಗಿದ್ದವು. 31,349 ಮಂದಿ ಪ್ರಾರಂಭಿಕ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಿದ್ದರು. ನಿವೇಶನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ 495 ಮಂದಿ ನಿವೇಶನ ಹಿಂತಿರುಗಿಸಿದ್ದರು.

‘ಕಳೆದ ಬಾರಿ ಅನೇಕರು ನಿವೇಶನಗಳನ್ನು ಹಿಂತಿರುಗಿಸಲು ಪ್ರಮುಖ ಕಾರಣ ನೋಟು ರದ್ದತಿ. ಅದರ ಪರಿಣಾಮಗಳು ಈಗಲೂ ಮುಂದುವರಿದಂತಿದೆ. ನಾವು 25 ಸಾವಿರ ಅರ್ಜಿಗಳಾದರೂ ಬರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿದ್ದೆವು. ಈಗಿನ ಬೆಳವಣಿಗೆ ನೋಡಿದರೆ ಅಷ್ಟು ಅರ್ಜಿಗಳು ಬರುವುದು ಸಂದೇಹ’ ಎನ್ನುತ್ತಾರೆ ಅಧಿಕಾರಿಗಳು.

2015 ನವೆಂಬರ್‌ 1ರಂದು ಈ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಮೊದಲ ಬಾರಿ ಅಧಿಸೂಚನೆ ಹೊರಡಿಸಲಾಗಿತ್ತು. ಆಗ ಅರ್ಜಿ ಸಲ್ಲಿಸಲು ಐದು ತಿಂಗಳು ಕಾಲಾವಕಾಶ ನೀಡಲಾಗಿತ್ತು. ಈ ಬಾರಿ ಐದು ವಾರವಷ್ಟೇ ಕಾಲಾವಕಾಶ ನೀಡಲಾಗಿತ್ತು. ನೀರಸ ಪ್ರತಿಕ್ರಿಯೆಗೆ ಇದೂ ಕೂಡಾ ಕಾರಣ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಈ ಬಡಾವಣೆಯಲ್ಲಿ ನನಗೆ ಹಂಚಿಕೆಯಾದ ನಿವೇಶನವನ್ನು ಹಿಂತಿರುಗಿಸಿದ್ದೇನೆ. ಅಲ್ಲಿ ಭೂಮಿಯ ಮಾರುಕಟ್ಟೆ ದರ ಬಿಡಿಎ ನಿಗದಿ ಮಾಡಿರುವಷ್ಟು ಇಲ್ಲ. ನೋಟು ರದ್ದತಿ ಬಳಿಕ ಖಾಸಗಿ ನಿವೇಶನಗಳ ಮಾರುಕಟ್ಟೆ ಮೌಲ್ಯವೂ ಕುಸಿದಿದೆ. ಹಾಗಾಗಿ ಬಿಡಿಎ ಇಲ್ಲಿ ನಿವೇಶನಗಳ ದರವನ್ನು ಕಡಿಮೆ ಮಾಡಿದರೆ ಒಳ್ಳೆಯದು. ಆಗ ಹೆಚ್ಚು ಮಂದಿ ನಿವೇಶನ ಖರೀದಿಸಲು ಮುಂದೆ ಬರಬಹುದು’ ಎನ್ನುತ್ತಾರೆ ಕುಮಾರಸ್ವಾಮಿ ಹಿರೇಮಠ್‌.

ದುರ್ಬಲ ವರ್ಗದವರಿಗೆ ಹಂಚಿಕೆ ಮಾಡುವ ನಿವೇಶನಗಳಿಗೆ ಬಿಡಿಎ ನಿಗದಿಪಡಿಸಿದ ದರ ಹೆಚ್ಚೇನಲ್ಲ. ಆದರೆ, ಉಳಿದ ನಿವೇಶನಗಳ ದರ ದುಬಾರಿ. ವಿಸ್ತೀರ್ಣ ಹೆಚ್ಚಾದಂತೆ ಪ್ರತಿ ಚದರ ಅಡಿಗೆ ನಿಗದಿಪಡಿಸಿದ ದರವೂ ಹೆಚ್ಚಾಗುತ್ತದೆ. ಇದು ಅವೈಜ್ಞಾನಿಕ ಕ್ರಮ. ಇಂತಹ ಲೋಪಗಳನ್ನು ಬಿಡಿಎ ಮೊದಲು ಸರಿಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ಈ ಬಡಾವಣೆಯ ನಿವೇಶನಗಳಿಗೆ ಇನ್ನು ಮುಂದೆಯೂ ಬೇಡಿಕೆ ಸೃಷ್ಟಿಯಾಗದು ಎಂದರು.

‘ಸಾಮಾನ್ಯವಾಗಿ ಬಂಗಲೆಗಳನ್ನು ನಿರ್ಮಿಸುವವರು ಹೆಚ್ಚು ವಿಸ್ತೀರ್ಣದ ನಿವೇಶನಗಳನ್ನು ಖರೀದಿಸುತ್ತಾರೆ. ಅವರಿಗೆ ದರದಲ್ಲಿ ರಿಯಾಯಿತಿ ನೀಡುವುದರಲ್ಲಿ ಅರ್ಥವಿಲ್ಲ. ಅಂತಹ ನಿವೇಶನಗಳ ಸಂಖ್ಯೆಯೂ ಕಡಿಮೆ ಇರುತ್ತದೆ. ದುರ್ಬಲ ವರ್ಗದವರಿಗೆ ಹಾಗೂ ಮಧ್ಯಮ ವರ್ಗದವರಿಗೆ ರಿಯಾಯಿತಿ ದರದಲ್ಲಿ ನಿವೇಶನ ಒದಗಿಸುವುದು ನಮ್ಮ ಆದ್ಯತೆ. ಈ ವರ್ಗದ ಜನ ಹೆಚ್ಚಾಗಿ 600 ಚದರ ಅಡಿ ಅಥವಾ 1200 ಚದರ ಅಡಿಯ ನಿವೇಶನಗಳನ್ನು ಬಯಸುತ್ತಾರೆ. ಈ ನಿವೇಶನಗಳಿಗೆ ಸಾಧ್ಯವಾದಷ್ಟು ಕಡಿಮೆ ದರವನ್ನು ನಿಗದಿಪಡಿಸಿದ್ದೇವೆ’ ಎನ್ನುತ್ತಾರೆ ಬಿಡಿಎ ಅಧಿಕಾರಿಗಳು.

ಅರ್ಕಾವತಿ ಬಡಾವಣೆಯಲ್ಲಿ ನಿವೇಶನ ಪಡೆದವರು ಡಿನೋಟಿಫಿಕೇಷನ್‌ ಹಾಗೂ ರಿಡೂ ಪ್ರಕ್ರಿಯೆಗಳಿಂದಾಗಿ ಭಾರಿ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲಿ ಇನ್ನೂ ಮೂಲಸೌಕರ್ಯ ಕಲ್ಪಿಸಿಲ್ಲ. ಕೆಂಪೇಗೌಡ ಬಡಾವಣೆಗೂ ಇನ್ನಷ್ಟೇ ಮೂಲಸೌಕರ್ಯ ಕಲ್ಪಿಸಬೇಕಾಗಿದೆ. ಈ ಹಿಂದೆ ಜನರು ಬಿಡಿಎ ನಿವೇಶನಗಳು ಸುರಕ್ಷಿತ ಎಂಬ ಭಾವನೆ ಹೊಂದಿದ್ದರು. ಆ ವಿಶ್ವಾಸ ಈಗ ಉಳಿದಿಲ್ಲ. ಇದು ಕೂಡಾ ಬಡಾವಣೆಯ ನಿವೇಶನಗಳಿಗೆ ಬೇಡಿಕೆ ಕುಸಿಯಲು ಕಾರಣ ಎನ್ನುತ್ತಾರೆ ಅರ್ಕಾವತಿ ನಿವೇಶನದಾರರ ಸಂಘಟನೆಯ ಅಧ್ಯಕ್ಷ ಜಿ.ಶಿವಪ್ರಕಾಶ್‌.

ಕೆಂಪೇಗೌಡ ನಿವೇಶನದ ಬಳಿಯೇ ಬಿಡಿಎ ನಿಗದಿಪಡಿಸಿದ ದರಕ್ಕಿಂತ ಗಿಂತ ಕಡಿಮೆ ದರದಲ್ಲಿ ನಿವೇಶನ ಸಿಗುತ್ತದೆ. ಬಿಡಿಎ ನಿವೇಶನ ನೋಂದಣಿ ಮಾಡಿಸಿಕೊಳ್ಳಲು 10 ವರ್ಷ ಕಾಯಬೇಕು. ನಿವೇಶನವನ್ನು ರಾಜಕಾರಣಿಗಳು ಯಾವಾಗ ಡಿನೋಟಿಫೈ ಮಾಡಿಸುತ್ತಾರೊ ಎಂಬ ಆತಂಕ ಜನರಲ್ಲಿದೆ ಎಂದರು.

ಯಾವ ನಿವೇಶನಕ್ಕೆ ಎಷ್ಟು ಶುಲ್ಕ?

ವಿಸ್ತೀರ್ಣ (ಅಡಿ), ಸಂಖ್ಯೆ, ನಿವೇಶನದ ಮೌಲ್ಯ (₹ ಲಕ್ಷಗಳಲ್ಲಿ ) , ನೋಂದಣಿ ಶುಲ್ಕ (₹ಗಳಲ್ಲಿ) ,ಪ್ರಾರಂಭಿಕ ಠೇವಣಿ ಪರಿಶಿಷ್ಟ ಜಾತಿ, ಪ.ಪಂಗಡ, ಪ್ರವರ್ಗ 1 (₹ ಗಳಲ್ಲಿ), ಇತರರಿಗೆ, ಪ್ರತಿ ಚದರ ಅಡಿ ದರ (₹ಗಳಲ್ಲಿ)


20x30, 1000, 5.23, 500, 26,200, 65,500,  87220x30, 500, 10.46, 1000, 52,400, 1.31 ಲಕ್ಷ, 1744


30x40, 2500, 23.25, 2000, 1.16 ಲಕ್ಷ, 2.91 ಲಕ್ಷ, 193860x40, 700, 52.31, 4000, 2.62 ಲಕ್ಷ, 6.54 ಲಕ್ಷ, 2180


50x80, 300, 96.88, 5000, 4.84 ಲಕ್ಷ, 12.11 ಲಕ್ಷ, 2422ಮಾಹಿತಿಗೆ: ಬಿಡಿಎ ವೆಬ್‌ಸೈಟ್‌ www.bdabangalore.org.

‘ಪಾರದರ್ಶಕ ವ್ಯವಹಾರ’

ಬಿಡಿಎ ನಿವೇಶನ ಖರೀದಿಸುವವರು ಅದರ ಪೂರ್ತಿ ಹಣವನ್ನು ಚೆಕ್‌, ಪೇ–ಆರ್ಡರ್‌ ಅಥವಾ ಡಿ.ಡಿ ಮೂಲಕವೇ ‍ಪಾವತಿಸಬೇಕು. ಕಪ್ಪುಹಣದ ವ್ಯವಹಾರಕ್ಕೆ ಇಲ್ಲಿ ಅವಕಾಶ ಇಲ್ಲ. ಹಣ ಹೊಂದಿರುವವರು ಕೂಡಾ ಇಲ್ಲಿ ಜಾಗಕ್ಕೆ ಹೂಡಿಕೆ ಮಾಡಲು ಹಿಂದೇಟು ಹಾಕುತ್ತಾರೆ. ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನಕ್ಕ ಬೇಡಿಕೆ ಕಡಿಮೆ ಆಗಿರುವುದಕ್ಕೆ ಇದು ಕೂಡಾ ಕಾರಣ ಎಂದು ಹೆಸರು ಹೇಳಲು ಇಚ್ಛಿಸದ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಅವಧಿ ವಿಸ್ತರಿಸಿರುವುದರಿಂದ ಇನ್ನಷ್ಟು ಮಂದಿ ಅರ್ಜಿ ಸಲ್ಲಿಸಬಹುದು. ಇದುವರೆಗೆ ಮಾರಾಟವಾಗಿರುವ ಅರ್ಜಿಗಳಲ್ಲಿ ಶೇ 30 ರಷ್ಟು ಮಂದಿ ಪ್ರಾರಂಭಿಕ ಠೇವಣಿ ಕಟ್ಟಿದರೂ ಇಲ್ಲಿ ನಿವೇಶನ ಹಂಚಿಕೆಗೆ ಸಮಸ್ಯೆ ಇಲ್ಲ ಎಂದು ಅವರು ತಿಳಿಸಿದರು.

ವಾರದಲ್ಲಿ ಕಾರ್ಯಾದೇಶ

ಕೆಂಪೇಗೌಡ ಬಡಾವಣೆಗೆ ಅತ್ಯುತ್ತಮ ಮೂಲಸೌಕರ್ಯ ಕಲ್ಪಿಸಲಾಗುತ್ತದೆ. ಇದರ ಟೆಂಡರ್‌ ಪ್ರಕ್ರಿಯೆ ಮುಗಿದಿದೆ. ಒಂದು ವಾರದಲ್ಲಿ ₹2,000 ಕೋಟಿ ಮೊತ್ತದ ಕಾಮಗಾರಿಗೆ ಕಾರ್ಯಾದೇಶ ನೀಡಲಾಗುತ್ತದೆ ಎಂದು ರಾಕೇಶ್‌ ಸಿಂಗ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)