ಬುಧವಾರ, ಡಿಸೆಂಬರ್ 11, 2019
22 °C

ವ್ಯಸನಮುಕ್ತಿಗೆ ಹೆಸರಾದ ‘ರೋಷನಿ’

ಮಾರುತಿ ಪೇಟಕರ Updated:

ಅಕ್ಷರ ಗಾತ್ರ : | |

ವ್ಯಸನಮುಕ್ತಿಗೆ ಹೆಸರಾದ ‘ರೋಷನಿ’

ಹಾನಗಲ್: ದುಶ್ಚಟಗಳಿಗೆ ಬಲಿಯಾಗಿ ಕುಟುಂಬ ಮತ್ತು ಸಮಾಜದಿಂದ ತಾತ್ಸಾರಕ್ಕೆ ತುತ್ತಾಗುವ ವ್ಯಸನಿಗಳ ಬದುಕಿಗೆ ಬೆಳಕಾಗಿ ವ್ಯಸನದ ದಾರಿದ್ರ್ಯದಿಂದ ಬಿಡುಗಡೆಗೊಳಿಸುವ ಮಹತ್ತರ ಕಾರ್ಯದಲ್ಲಿ ತೊಡಗಿರುವ ಇಲ್ಲಿನ ರೋಷನಿ ಸಮಾಜ ಸೇವಾ ಸಂಸ್ಥೆಯ ವ್ಯಸನಮುಕ್ತಿ ಮತ್ತು ಪುನರ್ವಸತಿ ಕೇಂದ್ರಕ್ಕೆ ಈಗ ದಶಕದ ಸಂಭ್ರಮ.

ಜ. 26, 2008ರಂದು ಆರಂಭಗೊಂಡ ವ್ಯಸನಮುಕ್ತಿ ಕೇಂದ್ರವು ರೋಷನಿ ಸಂಸ್ಥೆಯ ಅಂದಿನ ನಿರ್ದೇಶಕಿ ಸಿಸ್ಟರ್‌ ದುಲ್ಸಿನ್‌ ಕ್ರಾಸ್ತಾ ಅವರ ಇಚ್ಛಾ ಶಕ್ತಿಯಿಂದ ಸ್ಥಾಪನೆಯಾಗಿ ನಿರಂತರ 10 ವರ್ಷ ವ್ಯಸನಮುಕ್ತಿ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುವ ಮೂಲಕ ಸಾಕಷ್ಟು ಕುಟುಂಬಗಳಿಗೆ ಸಹಾಯ ನೀಡಿದೆ.

ಮುಖ್ಯವಾಗಿ ಮದ್ಯ, ತಂಬಾಕು, ಗಾಂಜಾ ಮತ್ತಿತರ ವ್ಯಸನಗಳನ್ನು ದೂರ ಮಾಡಿ ಕೌಟುಂಬಿಕ ಸ್ವಾಸ್ಥ್ಯ ಕಾಪಾಡುವ ಕೆಲಸವನ್ನು ರೋಷನಿ ಸಂಸ್ಥೆ ಮಾಡುತ್ತಿದೆ. ಈತನಕ ಕೇಂದ್ರ 1,206 ಜನರನ್ನು ವ್ಯಸನಮುಕ್ತಗೊಳಿಸಿದೆ.

ದುಶ್ಚಟ ಬಿಡಿಸುವಂತೆ ಕುಟುಂಬದ ಸದಸ್ಯರು ವ್ಯಸನಿಯನ್ನು ಇಲ್ಲಿ ದಾಖಲಿಸಿದಾಗ ಆರಂಭದಲ್ಲಿ ವ್ಯಸನಿಯನ್ನು ಸಂಭಾಳಿಸುವುದು ತುಂಬಾ ಕಷ್ಟಕರವಾಗಿರುತ್ತದೆ. ಆದರೂ ಇಲ್ಲಿಯ ಸಿಬ್ಬಂದಿ ಮಮತೆ, ಯೋಗ, ಧ್ಯಾನ, ಆಪ್ತ ಸಮಾಲೋಚನೆ, ಕೌಟುಂಬಿಕ ಸಮಾಲೋಚನೆ, ಗುಂಪು ಸಭೆ, ಮನರಂಜನೆ ಆಟಗಳ ಮೂಲಕ ವ್ಯಸನಿಯನ್ನು ನಿಯಂತ್ರಣಕ್ಕೆ ತರುತ್ತಾರೆ.

ಒಬ್ಬ ಮನೋವೈದ್ಯ, ಒಬ್ಬರು ಜನರಲ್‌ ಫಿಜಿಷಿಯನ್‌ ವೈದ್ಯ ಸೇರಿ 12 ಸಿಬ್ಬಂದಿ ಈ ಕೇಂದ್ರದ ಚಿಕಿತ್ಸಾ ಕಾರ್ಯದಲ್ಲಿ ತೊಡಗುತ್ತಾರೆ. ಕೇಂದ್ರದಲ್ಲಿ 25 ಜನರನ್ನು ಸೇರ್ಪಡೆ ಮಾಡಿಕೊಳ್ಳುವಷ್ಟು ವ್ಯವಸ್ಥೆ ಇದೆ, ವ್ಯಸನಿಯ ಊಟದ ಖರ್ಚಿಗಾಗಿ ಹಣ ಪಡೆಯುವ ರೋಷನಿ ಸಂಸ್ಥೆ ಮಿಕ್ಕೆಲ್ಲ ಖರ್ಚನ್ನು ಭರಿಸುತ್ತದೆ.

ಒಂದು ತಿಂಗಳವರೆಗೆ ವ್ಯಸನಿಗಳನ್ನು ಕೇಂದ್ರದಲ್ಲಿ ಇಟ್ಟುಕೊಂಡು ಚಿಕಿತ್ಸೆ, ಮಾರ್ಗದರ್ಶನ ನೀಡಲಾಗುತ್ತದೆ. ನಂತರ ಮುಂದಿನ 2 ವರ್ಷದವರೆಗೆ ವ್ಯಸನಮುಕ್ತರಾದವರು ಹಾಗೂ ಅವರ ಕುಟುಂಬದ ಜತೆ ಸಂಪರ್ಕದಲ್ಲಿ ಇದ್ದು, ಪ್ರತಿ ತಿಂಗಳ 3ನೇ ಸೋಮವಾರ ಅವರನ್ನು ಕೇಂದ್ರಕ್ಕೆ ಕರೆಸಿಕೊಂಡು ಆಪ್ತ ಸಮಾಲೋಚನೆ ನಡೆಸಲಾಗುತ್ತದೆ.

‘ನಾನು ಮದ್ಯ ವ್ಯಸನಿಯಾಗಿದ್ದೆ. 2009ರಲ್ಲಿ ರೋಷನಿ ಸಂಸ್ಥೆಯ ವ್ಯಸನಮುಕ್ತಿ ಕೇಂದ್ರಕ್ಕೆ ಕುಟುಂಬದವರು ಸೇರಿಸಿದರು. ಅಲ್ಲಿಂದ ಹೊರಗೆ ಬಂದ ನಂತರ ಈತನಕ ಮದ್ಯ ಮುಟ್ಟಿಲ್ಲ. ಸಂಸಾರದೊಂದಿಗೆ ಆರೋಗ್ಯಯುತ, ಸುಂದರ ನಜೀವನ ನಡೆಸುತ್ತಿದ್ದೇನೆ. ಮನೆಯಲ್ಲೂ ನನಗೆ ಪ್ರೀತಿ, ಗೌರವ ಮರಳಿ ಸಿಕ್ಕಿದೆ’ ಎಂದು ಹಾವಣಗಿ ಗ್ರಾಮದ ಮಲ್ಲಿಕಾರ್ಜುನಗೌಡ ಪಾಟೀಲ ಹೇಳಿದರು.

ಹಾನಗಲ್‌ ಸೇರಿ ರಾಜ್ಯದ 15 ಜಿಲ್ಲೆಗಳು ಮತ್ತು ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ ರಾಜ್ಯದ ವ್ಯಸನಿಗಳು ಇಲ್ಲಿ ದಾಖಲಾಗಿ ವ್ಯಸನಮುಕ್ತರಾಗಿದ್ದಾರೆ. ಮಾದಕ ವಸ್ತು ವಿರುದ್ಧ ಜಾಗೃತಿಗಾಗಿ ಉಚಿತ ಶಿಬಿರ, ಶಾಲೆ–ಕಾಲೇಜುಗಳಲ್ಲಿ ಅಭಿಯಾನವನ್ನು ಈ ಸಂಸ್ಥೆ ಕೈಗೊಳ್ಳುತ್ತದೆ. ಸಂಸ್ಥೆಯ ಕುರಿತು ಮಾಹಿತಿಗೆ ದೂ: 08379–262996 ಸಂಪರ್ಕಿಸಿ.

ಕೇಂದ್ರ ಸರ್ಕಾರದ ಅನುದಾನ

ವ್ಯಕ್ತಿಯನ್ನು ವ್ಯಸನಮುಕ್ತಗೊಳಿಸುವುದು ಪುಣ್ಯದ ಕಾರ್ಯ. ನಮ್ಮ ಕೇಂದ್ರದ ಸಹಕಾರದಿಂದ ಹಲವರು ವ್ಯಸನಮುಕ್ತರಾಗಿ ಸಮಾಜದಲ್ಲಿ ಗೌರವಯುತ ಜೀವನ ನಡೆಸುತ್ತಿದ್ದಾರೆ. ಅವರನ್ನು ಆಮಂತ್ರಿಸಿ, ಪ್ರತಿವರ್ಷ ಸನ್ಮಾನಿಸಿ, ಪ್ರೋತ್ಸಾಹಿಸಲಾಗುತ್ತದೆ. 2014–15ರಿಂದ ನಮ್ಮ ಕೇಂದ್ರಕ್ಕೆ ಕೇಂದ್ರ ಸರ್ಕಾರದ ಅನುದಾನ ಬರುತ್ತಿದೆ ಎಂದು ರೋಷನಿ ಸಂಸ್ಥೆ ನಿರ್ದೇಶಕಿ ಸಿ.ಡಿಂಪಲ್‌ ಡಿಸೋಜಾ ತಿಳಿಸಿದರು.

ದಶಮಾನೋತ್ಸವ ಸಮಾರಂಭ ಇಂದು

ದಶಮಾನೋತ್ಸವ ಸಮಾರಂಭ ಫೆ. 10ರಂದು ಶನಿವಾರ ಬೆಳಿಗ್ಗೆ 10.30 ಕ್ಕೆ ಇಲ್ಲಿನ ರೋಷನಿ ಸಂಸ್ಥೆಯ ಎದುರಿನ ಆವರಣದಲ್ಲಿ ನಡೆಯಲಿದೆ. ಮಂಗಳೂರು ಅರ್ಸುಲಾಯ್ನ ಸಂಸ್ಥೆಯ ಮೇಲಾಧಿಕಾರಿ ಸಿ. ಸುಶೀಲ ಸ್ವಿಕ್ವೇರ, ಮನೋವೈದ್ಯ ಡಾ.ಎಸ್‌.ಸಿ.ಕುಲಕರ್ಣಿ, ಸಿಪಿಐ ರೇವಣ್ಣ ಕಟ್ಟಿಮನಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.

 

ಪ್ರತಿಕ್ರಿಯಿಸಿ (+)