‘ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ’

7

‘ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ’

Published:
Updated:

ಕಾರಟಗಿ: ಸರ್ಕಾರಿ ಶಾಲೆಯ ಶಿಕ್ಷಕರು ಎಸ್‌ಡಿಎಂಸಿ ಸದಸ್ಯರು ಮತ್ತು ದಾನಿಗಳ ನೆರವಿನಿಂದ ಶಾಲೆ ಅಭಿವೃದ್ಧಿಗೆ ಮುಂದಾಗಿರುವುದು ಶ್ಲಾಘನೀಯ ಎಂದು ತಲೇಖಾನ ಮಠದ ವೀರಭದ್ರ ಶರಣರು ಹೇಳಿದರು. ಸಿದ್ದಲಿಂಗನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮುಖ್ಯಗುರು ತೋಟಯ್ಯ ಅಂಗಡಿ, ಶಿಕ್ಷಕ ಹೇಮಂತಕುಮಾರ ಅವರು ಶಾಲೆಯ ಅಭಿವೃದ್ಧಿ ಜೊತೆಗೆ ಕೃಷಿ ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಕೆಲಸ ಮಾಡುತ್ತಿದ್ದಾರೆ. ಇದು ಇತರ ಶಾಲೆಗಳಿಗೆ ಮಾದರಿಯಾಗಿದೆ ಎಂದರು.

ನಲಿ ಕಲಿ ಕಲಿಕಾ ಸಾಮಗ್ರಿಗೆ ₹12 ಸಾವಿರ ನೀಡಿದ ನಾಗರಾಜ್ ಸಜ್ಜನ್, ಶಾಲಾ ಆವರಣದಲ್ಲಿ ಬಂಡೆ ಹಾಕಿಸಲು ₹6,500 ನೀಡಿದ ಪನ್ನಾಪುರ ಗ್ರಾಮದ ಹನುಮಂತಪ್ಪ ವಾಲಿಕಾರ, ನಲಿ ಕಲಿಯ ಗೋಡೆ ಬರಹಕ್ಕೆ ತಲಾ ₹5 ಸಾವಿರ ನೀಡಿದ ಮಲ್ಲನಗೌಡ ಸಿಂಗಾಪುರ, ಚಂದ್ರಶೇಖರಗೌಡ ಮಾನ್ವಿ ಮಾಲಿಪಾಟೀಲ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಶಿಕ್ಷಕ ತೋಟಯ್ಯ ಅಂಗಡಿ, ಶಿಕ್ಷಕ ಹೇಮಂತಕುಮಾರ ಮಾತನಾಡಿ, ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬುದು ನಮ್ಮ ಆಶಯ. ದಾನಿಗಳು ಕೇಳಿದಷ್ಟು ದೇಣಿಗೆ ನೀಡಿ, ನಮಗೆ ಪ್ರೋತ್ಸಾಹ ನೀಡುತ್ತಿರುವುದು ನಮ್ಮ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು. ಶಾಲಾ ಆವರಣದಲ್ಲಿ ಹಾವು ಏಣಿ ಆಟದ ವ್ಯವಸ್ಥೆಗೆ ತಲೇಖಾನ ಮಠದ ವೀರಭದ್ರ ಶರಣರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಅಧ್ಯಕ್ಷತೆ ವಹಿಸಿದ್ದರು. ಕಾರಟಗಿ ಪಶ್ಚಿಮ ವಲಯದ ಸಿಆರ್‌ಪಿ ತಿಮ್ಮಣ್ಣ, ಪ್ರಮುಖರಾದ ಜೆ. ರಾಮರಾವ್, ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry