ಶುಕ್ರವಾರ, ಡಿಸೆಂಬರ್ 6, 2019
24 °C

ಇನ್ನೂ ದುರಸ್ತಿಯಾಗಿಲ್ಲ ಹಳಿ ಬಿರುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇನ್ನೂ ದುರಸ್ತಿಯಾಗಿಲ್ಲ ಹಳಿ ಬಿರುಕು

ಬೆಂಗಳೂರು: ‘ನಮ್ಮ ಮೆಟ್ರೊ’ ಉತ್ತರ–ದಕ್ಷಿಣ ಕಾರಿಡಾರ್‌ನಲ್ಲಿ ಯಲಚೇನಹಳ್ಳಿ ನಿಲ್ದಾಣದ ಬಳಿ ಬಿರುಕುಬಿಟ್ಟ ಹಳಿ ಇನ್ನೂ ದುರಸ್ತಿಗೊಂಡಿಲ್ಲ. ಹಾಗಾಗಿ ಈ ನಿಲ್ದಾಣದಲ್ಲಿ ಶನಿವಾರವೂ ಒಂದೇ ಪ್ಲ್ಯಾಟ್‌ಫಾರ್ಮ್‌ ಬಳಸಲಾಯಿತು.

ಈ ನಿಲ್ದಾಣದ ಪ್ರವೇಶದ ಬಳಿಯೇ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಿರುಕು ಬಿಟ್ಟಿರುವ ಹಳಿಯ ಉಕ್ಕಿನಪಟ್ಟಿಯನ್ನು ಹೊರತೆಗೆದು ಆ ಜಾಗದಲ್ಲಿ ಬೇರೆಯೇ ಪಟ್ಟಿಯನ್ನು ಜೋಡಿಸಬೇಕಾಗುತ್ತದೆ.

ಒಂದೇ ದಿನದಲ್ಲಿ ಈ ಕಾರ್ಯವನ್ನು ಪೂರ್ಣಗೊಳಿಸುವುದು ಕಷ್ಟಸಾಧ್ಯ. ಇದಕ್ಕೆ ಹೆಚ್ಚಿನ ಕಾಲಾವಕಾಶಬೇಕಾ ಗುತ್ತದೆ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಳಿ ನಿರ್ವಹಣಾ ಸಿಬ್ಬಂದಿಯು ಮೆಟ್ರೊ ಸಂಚಾರ ನಿಂತ ಬಳಿಕ ನಿತ್ಯವೂ ರಾತ್ರಿ ಹಳಿಗಳ ಪರಿಶೀಲನೆ ನಡೆಸುತ್ತಾರೆ. ಗುರುವಾರ ರಾತ್ರಿ ಪರಿಶೀಲನೆ ನಡೆಸುವಾಗ ಹಳಿ ಬಿರುಕು ಬಿಟ್ಟಿರುವುದು ಕಂಡುಬಂದಿದೆ.

ಹಳಿಯ ಪಟ್ಟಿಗಳನ್ನು ಒಂದಕ್ಕೊಂದು ಜೋಡಿಸಲು ವೆಲ್ಡಿಂಗ್‌ ಮಾಡಿದ ಜಾಗದಲ್ಲಿ ಬಿರುಕು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದರೆ, ಇಲ್ಲಿ ರೈಲು ಮಾರ್ಗ ಬದಲಾಯಿಸುವುದಕ್ಕೆ(ಕ್ರಾಸ್‌ ಓವರ್) ಅವಕಾಶ ಕಲ್ಪಿಸಿರುವ ಕಡೆ ಪಟ್ಟಿ ತುಂಡಾಗಿದೆ. ಹಾಗಾಗಿ ಈ ಇಡೀ ಪಟ್ಟಿಯನ್ನೇ ಬದಲಿಸಬೇಕಾಗುತ್ತದೆ ಎಂದು ಅಧಿಕಾರಿ ವಿವರಿಸಿದರು.

ಹಳಿಯಲ್ಲಿ ಬಿರುಕು ಕಾಣಿಸಿಕೊಳ್ಳಲು ಕಾರಣ ಏನೆಂಬುದು ಇನ್ನೂ ಖಚಿತ ವಾಗಿಲ್ಲ. ಹಳಿಗೆ ಒಳಸಿದ ಉಕ್ಕಿನ ಪಟ್ಟಿ ಯಲ್ಲಿ ದೋಷವಿದ್ದಿರಬಹುದು. ಹೆಚ್ಚಿನ ಒತ್ತಡದಿಂದಾಗಿಯೂ ಸಂಭವಿಸಿರ ಬಹುದು ಎಂದು ಅವರು ಹೇಳಿದರು.

ಬಿರುಕು ಕಾಣಿಸಿಕೊಂಡ ಬಳಿಕವೂ ಹಳಿಯ ಮೇಲೆ ಮೆಟ್ರೊ ರೈಲು ಓಡಾಟ ಮುಂದುವರಿಸಿದರೆ, ಅದರ ಮೇಲೆ ಇನ್ನಷ್ಟು ಒತ್ತಡ ಬೀಳುತ್ತದೆ. ಹಾಗಾಗಿ ಅದನ್ನು ತಕ್ಷಣ ಬದಲಿಸಲೇಬೇಕಾ ಗುತ್ತದೆ. ಮೆಟ್ರೊ ರೈಲು ಸಂಚಾರ ಇರುವಾಗ ದುರಸ್ತಿ ನಡೆಸಲು ಸಾಧ್ಯವಿಲ್ಲ. ಒಂದೋ, ರಾತ್ರಿ ವೇಳೆ ದುರಸ್ತಿ ಕೆಲಸ ನಿರ್ವಹಿಸಬೇಕು. ಬೆಳಗಿನ ವೇಳೆ ದುರಸ್ತಿ ಕೈಗೊಳ್ಳುವುದಾದರೆ ಜೆ.ಪಿ.ನಗರ ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ಮೆಟ್ರೊ ಸೇವೆ

ತಾತ್ಕಾಲಿಕವಾಗಿ ಸ್ಥಗಿತಗೊಳಿಸ ಬೇಕಾಗಿಯೂ ಬರಬಹುದು ಎಂದು ತಿಳಿಸಿದರು.  

ಹಳಿಯಲ್ಲಿ ಬಿರುಕು ಕಾಣಿಸಿಕೊಂಡರೂ, ಇದರಿಂದ ಮೆಟ್ರೊ ಸಂಚಾರಕ್ಕೆ ಅಡ್ಡಿ ಉಂಟಾಗದಂತೆ ಎಚ್ಚರ ವಹಿಸಲಾಗಿದೆ ಎಂದು ಅವರು

ಸ್ಪಷ್ಟಪಡಿಸಿದರು.

ಹಳಿಯಲ್ಲಿ ಬಿರುಕು ಇದೇ ಮೊದಲಲ್ಲ

‘ನಮ್ಮ ಮೆಟ್ರೊ’ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿದ್ದು ಇದೇ ಮೊದಲಲ್ಲ. ಸುಮಾರು ಮೂರು ವರ್ಷ ಹಿಂದೆ ಪೀಣ್ಯ ಬಳಿ ಹಳಿಯಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಅದು ದುರಸ್ತಿಯಾಗುವವರೆಗೆ ಯಶವಂತಪುರ– ಪೀಣ್ಯ ನಡುವೆ ಒಂದು ಹಳಿಯಲ್ಲಿ ಮಾತ್ರ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು ಎಂದು ಮೆಟ್ರೊ ಅಧಿಕಾರಿ ತಿಳಿಸಿದರು.

2ನೇ ಹಂತ: ಸುರಂಗ ಕಾಮಗಾರಿಗೆ ಕಾರ್ಯಾದೇಶ ಶೀಘ್ರ

‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಗೊಟ್ಟಿಗೆರೆ– ನಾಗವಾರ ಮೆಟ್ರೊ ಮಾರ್ಗದ 13.7 ಕಿ.ಮೀ ಉದ್ದದ ಸುರಂಗ ಕಾಮಗಾರಿಯ ಟೆಂಡರ್‌ ಬಿಡ್‌ಗಳನ್ನು ತೆರೆಯಲಾಗಿದ್ದು ಮುಂದಿನವಾರವೇ ಕಾಮಗಾರಿಯ ಕಾರ್ಯಾದೇಶ ನೀಡುವ ನಿರೀಕ್ಷೆ ಇದೆ.

ಡೇರಿ ವೃತ್ತದಿಂದ ನಾಗವಾರವರೆಗಿನ ಸುರಂಗ ಮಾರ್ಗ ಕಾಮಗಾರಿಯನ್ನು ನಾಲ್ಕು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿದ್ದ ನಿಗಮವು 2017 ಜೂನ್‌ನಲ್ಲಿ ಟೆಂಡರ್‌ ಆಹ್ವಾನಿಸಿತ್ತು. ಹಣಕಾಸು ಬಿಡ್‌ಗಳನ್ನು ತೆರೆಯಲಾಗಿದೆ. ಇವುಗಳ ಮೌಲ್ಯಮಾಪನ ಇನ್ನಷ್ಟೇ ನಡೆಯಬೇಕಿದೆ. ಹಾಗಾಗಿ ಹೆಚ್ಚಿನ ಮಾಹಿತಿಯನ್ನು ಈಗಲೇ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ನಿಗಮದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದರು.

ಪ್ರತಿಕ್ರಿಯಿಸಿ (+)