ನಗರಸಭೆ: ಅತಿಕ್ರಮಣ ತೆರವಿಗೆ ನಿರ್ಣಯ

7
ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ, ಸದಸ್ಯ ಪ್ರವೀಣ ಭಾಟಲೆ ನಡುವೆ ವಾಗ್ವಾದ

ನಗರಸಭೆ: ಅತಿಕ್ರಮಣ ತೆರವಿಗೆ ನಿರ್ಣಯ

Published:
Updated:

ನಿಪ್ಪಾಣಿ: ಸ್ಥಳೀಯ ಸರ್ವೆ ನಂ.128 ರಲ್ಲಿ ಗ್ರೀನ್‌ ಝೋನ್‌ ಪಾರ್ಕ್‌ ಕಂಪನಿಯು ಹಳ್ಳ ಇರುವ ಜಾಗವನ್ನು ಮಾಡಿಕೊಂಡಿರುವ ಅತಿಕ್ರಮಣ ಸೇರಿದಂತೆ ನಗರಸಭೆ ವ್ಯಾಪ್ತಿಯಲ್ಲಿ ಜನಪ್ರತಿನಿಧಗಳ ಆಸ್ತಿ–ಪಾಸ್ತಿಗಳ ಸರ್ವೆ ನಡೆಸಿ ಅತಿಕ್ರಮಣವಾಗಿದ್ದಲ್ಲಿ ಅವುಗಳನ್ನೂ ಸಹ ತೆರವುಗೊಳಿಸುವ ಕುರಿತು ಶುಕ್ರವಾರ ಜರುಗಿದ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷ ವಿಲಾಸ್‌ ಗಾಡಿವಡ್ಡರ ಮಾತನಾಡಿ, ‘ನಿಯಮಾನುಸಾರ ನದಿ, ಹಳ್ಳ–ಕೊಳ್ಳದಲ್ಲಿ ಹರಿಯುವ ನೀರನ್ನು ತಡೆಯಲು ಬರುವುದಿಲ್ಲ. ಆದರೆ, ನಗರದ ಸರ್ವೆ ನಂ.128ರಲ್ಲಿ ನಿಯಮ ಉಲ್ಲಂಘನೆಯಾಗಿದೆ. ನಗರ ಯೋಜನೆ ಪ್ರಾಧಿಕಾರದನ್ವಯ ಹಳ್ಳದ ಉಲ್ಲೇಖವಿದ್ದು 23 ಗುಂಟೆ ಜಾಗ ಪೋಟ್‌ಖರಾಬ್‌ ಎಂದು ನಮೂದಿಸಲಾಗಿದೆ.

ಆದರೆ, ಈ 23 ಗುಂಟೆ ಜಾಗವನ್ನು ಬಿಟ್ಟುಕೊಡದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿದ್ದು ಇದರಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕಾಗಿದೆ’ ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ವಿರೋಧ ಪಕ್ಷದ ಸದಸ್ಯರಾದ ಪ್ರವೀಣ ಭಾಟಲೆ, ದತ್ತಾ ಜೋತ್ರೆ, ವಿಜಯ ಟವಳೆ, ದೀಪಕ ಮಾನೆ ಮೊದಲಾದವರು ಆಕ್ಷೇಪ ವ್ಯಕ್ತಪಡಿಸಿ ಒಂದೇ ಜಾಗದಲ್ಲಿ ಅತಿಕ್ರಮಣ ತೆರವು ಕಾರ್ಯಾಚರಣೆ ಏಕೆ? ನಗರದ ವಿವಿಧೆಡೆ ನಡೆಯುತ್ತಿರುವ ಅತಿಕ್ರಮಣಗಳನ್ನು ಏಕೆ ತೆರವುಗೊಳಿಸುತ್ತಿಲ್ಲ? ಮಾಜಿ ನಗರಸಭೆ ಅಧ್ಯಕ್ಷ ಜಾಸೂದ, ಅಣ್ಣಾಸಾಹೇಬ ಖೋತ, ಸುಭಾಷ ಶಹಾ ಮೊದಲಾದವರ ಪ್ರಕರಣಗಳಲ್ಲಿ ಯಾರು ಎಷ್ಟು ದುಡ್ಡು ತಿಂದಿದ್ದಿರಾ?’ ಎಂದು ಪ್ರಶ್ನಿಸಿದರು.

ಪ್ರವೀಣ ಭಾಟಲೆ ಅವರು ಪ್ರಭಾರಿ ಪೌರಾಯುಕ್ತರಿಗೆ ಈ ಕುರಿತು ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ಮತ್ತು ಭಾಟಲೆ ಅವರ ನಡುವೆ ವಾಗ್ವಾದ ನಡೆಯಿತು.

ನಗರಸಭೆ ಸದಸ್ಯ ಹಾಗೂ ಸ್ಥಳೀಯ ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ ಅಲ್ಲಿ ಅತಿಕ್ರಮಣವಾಗಿದ್ದರ ಕುರಿತು ಒಪ್ಪಿಕೊಂಡರು.

ಸ್ಥಾಯಿ ಸಮಿತಿ ಸದಸ್ಯರ ಕಾಲಾವಧಿ ಮುಕ್ತಾಗೊಂಡಿದ್ದು ನೂತನ ಸದಸ್ಯರನ್ನೊಳಗೊಂಡ ಪಟ್ಟಿಯನ್ನು ಬಾಳಾಸಾಹೇಬ ದೇಸಾಯಿ ಅವರು ಘೋಷಿಸಿದರು.

ಸಮಿತಿಯಲ್ಲಿ ರವಿಂದ್ರ ಶಿಂಧೆ, ಧನಾಜಿ ನಿರ್ಮಳೆ, ನಿತೀನ ಸಾಳುಂಖೆ, ಅನೀಸ್‌ ಮುಲ್ಲಾ, ಮೀನಾಕ್ಷಿ ಬುರುಡ, ಉಜ್ವಲಾ ಪೋಳ, ರವಿಂದ್ರ ಚಂದ್ರಕುಡೆ, ಲತಾ ಶೇಟಕೆ, ಜಾಯೇದಾ ಬಡೇಘರ, ನೀತಾ ಲಾಟಕರ, ಸಂಜಯ ಸಾಂಗಾವಕರ ಒಳಗೊಂಡಿದ್ದಾರೆ.

ಸಭೆಯಲ್ಲಿ ಮುನ್ಸಿಪಲ್‌ ಪ್ರೌಢಶಾಲೆಯ ಶಿಕ್ಷಕರ ವೇತನ ಹೆಚ್ಚಿಸುವುದು, ಸದಸ್ಯ ರವಿಂದ್ರ ಶಿಂಧೆ ಅವರ ಮನವಿಯಂತೆ ಮರಾಠಾ ಸಮಾಜದ ಕಲ್ಯಾಣ ಸಂಸ್ಥೆಗೆ ಜಾಗ ಕಲ್ಪಿಸುವುದು, ಸದಸ್ಯೆ ಉಜ್ವಲಾ ಪೋಳ ಅವರ ಮನವಿಯಂತೆ ವೀರಶೈವ ಕಕ್ಕಯ್ಯ ಸಮಾಜ ಬಾಂಧವರಿಗಾಗಿ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಜಾಗ ಕಲ್ಪಿಸುವ ಕುರಿತು ಚರ್ಚಿಸಲಾಯಿತು.

ಜೊತೆಗೆ ಸ್ಥಳೀಯ ಸಿಪಿಐ ಕಿಶೋರ ಭರಣಿ ಸಹಿತ ವಿವಿಧ ಪೊಲೀಸ್‌ ಅಧಿಕಾರಿಗಳು ಉದ್ದಟತನ ತೋರುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸುವುದರ ಕುರಿತು ನಿರ್ಣಯಿಸಲಾಯಿತು. ಕೆಲ ವಿಷಯಗಳಿಗೆ ಪ್ರವೀಣ ಭಾಟಲೆ, ಸುಷ್ಮಾ ಭಾಟಲೆ, ವಿಜಯ ಟವಳೆ ಮೊದಲಾದವರು ವಿರೋಧಿಸದ ಘಟನೆಯೂ ಸಭೆಯಲ್ಲಿ ಜರುಗಿತು.

ಸಭೆಯಲ್ಲಿ ಉಪಾಧ್ಯಕ್ಷ ಸುನೀಲ ಪಾಟೀಲ, ರವಿಂದ್ರ ಶಿಂಧೆ, ರಾಜೇಂದ್ರ ಚವಾಣ, ದಿಲೀಪ ಪಠಾಡೆ, ನಜಹತ್‌ ಪರ್ವೀನ ಮುಜಾವರ, ಮೊದಲಾದವರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry