ಬುಧವಾರ, ಡಿಸೆಂಬರ್ 11, 2019
22 °C

ಐತಿಹಾಸಿಕ ಕೆರೆಗೆ ಬೇಕಿದೆ ಕಾಯಕಲ್ಪ

ಕೆ.ವಿ.ನಾಗರಾಜ್ Updated:

ಅಕ್ಷರ ಗಾತ್ರ : | |

ಐತಿಹಾಸಿಕ ಕೆರೆಗೆ ಬೇಕಿದೆ ಕಾಯಕಲ್ಪ

ನರಸಿಂಹರಾಜಪುರ: ಕೆರೆಗಳ ಸಂರಕ್ಷಣೆಗೆ ಹಾಗೂ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡು ತ್ತಿದ್ದರೂ ನರಸಿಂಹರಾಜಪುರದ ಐತಿಹಾ ಸಿಕ ಪ್ರಸಿದ್ಧ ವೀರಮ್ಮಾಜಿ ಕೆರೆಗೆ ಮಾತ್ರ ದುರಸ್ತಿ ಭಾಗ್ಯ ಕೂಡಿಬಂದಿಲ್ಲ.

ಕೆರೆಯ ಐತಿಹಾಸಿಕ ಹಿನ್ನೆಲೆ: ನರಸಿಂಹರಾಜಪುರ ಪಟ್ಟಣದ ಹೃದಯ ಭಾಗದಲ್ಲಿರುವ ವೀರಮ್ಮಾಜಿ ಕೆರೆಯನ್ನು ಸ್ಥಳೀಯವಾಗಿ ಈರಮ್ಮಜ್ಜಿ ಕೆರೆ ಎಂದು ಕರೆಯಲಾಗುತ್ತದೆ. ಇದನ್ನು ಕೆಳದಿ ಅರಸರ ಕಾಲದ ರಾಣಿಯರಾದ ಚೆನ್ನಮ್ಮಾಜಿ (ಕ್ರಿ.ಶ 1671–1697) ಹಾಗೂ ವೀರಮ್ಮಾಜಿ(1757–1763) ಅವರ ಕಾಲದಲ್ಲಿ ನಿರ್ಮಿಸಲಾಯಿತು ಎಂದು ಐತಿಹಾಸಿಕ ದಾಖಲೆಗಳಿಂದ ತಿಳಿದು ಬರುತ್ತದೆ. ಇದಲ್ಲದೆ ಕೆಳದಿ ಅರಸರ ಕಾಲದಲ್ಲಿ ಪಟ್ಟಣದ ವ್ಯಾಪ್ತಿಯಲ್ಲಿ ಆಡಳಿತಾಧಿಕಾರಿಯಾಗಿದ್ದ ಸಂಗಪ್ಪ ಎಂಬವರಿಂದ 7 ಬಾವಿಗಳು ನಿರ್ಮಿತ ವಾಗಿದ್ದವು. ಇವುಗಳಲ್ಲಿ ಕೆಲವು ಈಗಲೂ ಅಸ್ತಿತ್ವದಲ್ಲಿವೆ. ಕೆಲವು ಶಿಥಿಲಗೊಂಡಿವೆ. ಇದಲ್ಲದೆ ಸುಗಪ್ಪಮಠ ಎಂದು ಕರೆಯುವ ಸಂಗಪ್ಪಮಠ ಗುರುಶಾಂತಪ್ಪ ಅವರಿಂದ ಸ್ಥಾಪನೆಯಾಗಿತ್ತು. ಈ ಕೆರೆಯ ಪೂರ್ವ ಭಾಗದಲ್ಲಿರುವ ಈಗಿನ ಹಳೇಪೇಟೆ ಆಗಿನ ವೀರಮ್ಮಾಜಿ ಪೇಟೆಯಾಗಿತ್ತು. ಈ ಐತಿಹಾಸಿಕ ಹಿನ್ನೆಲೆಯ ಜತೆ ಇನ್ನಷ್ಟು ವಿವರಗಳು ಇತಿಹಾಸದ ದಾಖಲೆಗಳಿಂದ ದೊರೆಯುತ್ತವೆ.

ಈ ಕೆರೆಯು ಸುಮಾರು 13.30 ಎಕರೆ ವಿಸ್ತೀರ್ಣ ಹೊಂದಿದ್ದು, ತಾಲ್ಲೂಕಿನಲ್ಲೇ ಎಂದೂ ಬತ್ತದ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂತಹ ಐತಿಹಾಸಿಕ ದಾಖಲೆ ಇರುವ ವೀರಮ್ಮಾಜಿ ಕೆರೆಯಲ್ಲಿ ಪ್ರಸ್ತುತ ಸಾಕಷ್ಟು ಹೊಳು ತುಂಬಿದ್ದು, ಹೆಚ್ಚಿನ ನೀರು ನಿಲ್ಲಲಾರದ ಸ್ಥಿತಿ ನಿರ್ಮಾಣವಾಗಿದೆ.

‘ಐತಿಹಾಸಿಕ ಕೆರೆ ಏರಿಯನ್ನು ವಿಸ್ತರಿಸಿ ಅಭಿವೃದ್ಧಿಪಡಿಸಿದ್ದು, ಸರ್ಕಾರ ಹೆಚ್ಚಿನ ಅನುದಾನ ಬಂದರೆ ಹೂಳೆತ್ತುವ ಮೂಲಕ ಸುತ್ತಲೂ ವಾಕಿಂಗ್ ಪಾಥ್ ನಿರ್ಮಿಸುವ ಮೂಲಕ ಜಾಲರಿ ಅಳವಡಿಸಿ ವಾಯು ವಿಹಾರಕ್ಕೆ ಅನುಕೂಲ ಕಲ್ಪಿಸಲಾವುದು. ಅಲ್ಲದೆ ಕೆರೆಗೆ ಕೊಳಚೆ ನೀರು ಬರದಂತೆ ತಡೆದು ಅದನ್ನು ಶುದ್ಧೀಕರಿಸಿ ಶುದ್ಧ ನೀರು ಸಂಗ್ರಹ ಮಾಡುವ ಉದ್ದೇಶವಿದೆ’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಸದಸ್ಯ ಅಂಜುಮ್.

‘ವೀರಮ್ಮಾಜಿ ಕೆರೆಯನ್ನು ಅಭಿವೃದ್ಧಿ ಪಡಿಸಲು ಪಟ್ಟಣ ಪಂಚಾಯಿತಿ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ವಿಸ್ತೃತ ಯೋಜನಾ ಧಿಕಾರಿಗೆ ಸಲ್ಲಿಸಲಾಗಿದೆ. ಸರ್ಕಾರದಿಂದ ಅನು ಮೋದನೆ ದೊರೆತು ಅನುದಾನ ಬಿಡುಗಡೆಯಾದರೆ ಸಾರ್ವಜನಿಕರಿಗೆ ಅನುಕೂಲಕ್ಕೆ ಬಳಸಿಕೊಳ್ಳಲಾಗುವುದು’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾಕೋಸ್.

ಕೆಳದಿ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಐತಿಹಾಸಿಕ ಕೆರೆಯನ್ನು ಪುರಾತತ್ವ ಇಲಾಖೆಯ ಅಡಿಯಲ್ಲಿಯೇ ಪುನರ್ ನಿರ್ಮಾಣ ಮಾಡಬೇಕು ಕೆರೆಯ ಹೊಳೆತ್ತುವ ಮೂಲಕ ಮಾಲೀನ್ಯವಾಗುವುದನ್ನು ತಡೆಗಟ್ಟಬೇಕು. ಜಿಲ್ಲಾಡಳಿತ, ಜನಪ್ರತಿನಿಧಿಗಳು ಈ ಐತಿಹಾಸಿಕ ಕೆರೆಯ ಕಡೆಗೆ ಗಮನ ಹರಿಸಿ ಕೆಳದಿ ಇತಿಹಾಸ ಫಲಕವನ್ನು ಸ್ಥಾಪಿಸಬೇಕು ಎಂಬುದು ಸಾರ್ವಜನಿಕರ ಆಶಯವಾಗಿದೆ.

ಪ್ರತಿಕ್ರಿಯಿಸಿ (+)