ಬುಧವಾರ, ಡಿಸೆಂಬರ್ 11, 2019
27 °C

ಪಾದಯಾತ್ರಿಗಳಿಗೆ ಮಲೆನಾಡಿಗರ ಉಪಚಾರ

ಕೆ. ವಾಸುದೇವ್‌ Updated:

ಅಕ್ಷರ ಗಾತ್ರ : | |

ಪಾದಯಾತ್ರಿಗಳಿಗೆ ಮಲೆನಾಡಿಗರ ಉಪಚಾರ

ಮೂಡಿಗೆರೆ: ಶಿವರಾತ್ರಿ ಬಂತೆಂದರೆ ಸಾಕು, 15 ದಿನ ಮೊದಲೇ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಜನರು ತಂಡೋಪತಂಡವಾಗಿ ಶಿವನ ಆರಾಧ್ಯ ತಾಣವಾದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೊರಡುತ್ತಾರೆ. ಹಗಲಿನಲ್ಲಿ ಕೇಸರಿಯುಟ್ಟ ಪಾದಯಾತ್ರಿಗಳ ಸಾಲನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಬಗಾಗಿದ್ದರೆ, ಮುಂಜಾನೆ ವೇಳೆಯಲ್ಲಿ ಪರಿಸರಬಾಧೆ  ತೀರಿಸಿಕೊಳ್ಳುವ ಸಲುವಾಗಿ ರಸ್ತೆ ಬದಿಯಲ್ಲಿ, ಮುಳ್ಳು ಪೊದೆಗಳಲ್ಲಿ ಅಡಗಿಕೊಳ್ಳುವ ಮಹಿಳೆಯರ ಸ್ಥಿತಿಯನ್ನು ಕಂಡರೆ ದೇಶದಲ್ಲಿ ದಶಕ ಕಳೆದರೂ ಸ್ವಚ್ಛ ಭಾರತ ಕನಸು ಈಡೇರುವುದಿಲ್ಲೇನೋ ಎಂಬ ಸಂಶಯ ಮೂಡಿಸುತ್ತದೆ.

ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ಮಂಜುನಾಥನ ದರ್ಶನಕ್ಕೆ ಹೊರಡುವ ಮಹಿಳೆಯರು ನೇತ್ರಾವತಿಯಲ್ಲಿ ಮಿಂದೇಳುವವರೆಗೂ ಸ್ನಾನ ಕನಸಿನ ಮಾತಾಗಿರುತ್ತದೆ. ಇಂತಹ ಪರಿಸ್ಥಿತಿಯನ್ನು ಸುಧಾರಿಸುವ ಸಲುವಾಗಿ ಆತಿಥ್ಯಕ್ಕೆ ಹೆಸರಾದ ಮೂಡಿಗೆರೆ ಸಾಮಾಜಿಕ ಸೇವಾ ಸಮಿತಿಯು ಒಂದು ವರ್ಷದ ಹಿಂದೆ ಕಂಕಣಬದ್ಧವಾಗಿ ನಿಂತಿದ್ದು, ಈ ಬಾರಿ ನಾಲ್ಕೇ ದಿನಗಳಲ್ಲಿ 35 ಸಾವಿರಕ್ಕೂ ಅಧಿಕ ಭಕ್ತರಿಗೆ ಊಟ, ವಸತಿ, ಸ್ನಾನ, ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಮಾದರಿ ಕಾರ್ಯನಡೆಸಿ ಸೈ ಎನಿಸಿಕೊಂಡಿದ್ದಾರೆ.

ಪಟ್ಟಣ ಪಂಚಾಯಿತಿ ಸದಸ್ಯ ಕೆ.ವೆಂಕಟೇಶ್‌ ಅಧ್ಯಕ್ಷತೆಯಲ್ಲಿ ಮೂಡಿಗೆರೆ ಸಾಮಾಜಿ ಸೇವಾ ಸಮಿತಿ ಹುಟ್ಟಿಕೊಂಡಿದ್ದು, ತಾಲ್ಲೂಕಿನ ವಿವಿಧ ದಾನಿಗಳ ನೆರವಿನಲ್ಲಿ, ದಿನದ 24 ಗಂಟೆಯೂ ಸುಮಾರು 120ಕ್ಕೂ ಅಧಿಕ ಸ್ವಯಂ ಸೇವಕರ ಸಹ ಯೋಗದಲ್ಲಿ ರಾಷ್ಟ್ರೀಯ ಹೆದ್ದಾರಿ 234 ರ ಚಾರ್ಮಾಡಿಘಾಟಿ ರಸ್ತೆಯ ಬಿದರಹಳ್ಳಿಯ ನೀರುಗಂಡಿ ಸಮೀಪದ ಯೋಗೇಶ್‌ ಜನ್ನಾಪುರ ಅವರ ಜಮೀನಿ ನಲ್ಲಿ ಪಾದಯಾತ್ರಿಗಳಿಗೆ ಉಚಿತವಾಗಿ ಆರೈಕೆ ಮಾಡುತ್ತಿದ್ದಾರೆ.

ಬಗೆ ಬಗೆಯ ಭೋಜನ: ಪಾದಯಾತ್ರಿಗಳಿಗೆ ದಿನದ ಮೂರು ಹೊತ್ತುಗಳ ಕಾಲ ಬಗೆಬಗೆಯ ಭೋಜನವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಮುಂಜಾನೆ 5ರಿಂದ ಪ್ರಾರಂಭವಾಗುವ ತಿಂಡಿ, ಕಾಫಿ ಮಧ್ಯಾಹ್ನ 12 ರವರೆಗೂ ಮುಂದುವರೆಯುತ್ತದೆ. ಮಧ್ಯಾಹ್ನ 12ಕ್ಕೆ ಪ್ರಾರಂಭವಾಗುವ ಊಟ, ರಾತ್ರಿ 12ರವರೆಗೂ ನಿರಂತರವಾಗಿ ನಡೆಯುತ್ತದೆ. ಊಟೋಪಚಾರದ ಜತೆಗೆ ದಣಿದು ಬಂದ ಪಾದಯಾತ್ರಿಗಳಿಗೆ ಉಚಿತ ಕಲ್ಲಂಗಡಿ ಹಣ್ಣಿನ ವ್ಯವಸ್ಥೆ ಮಾಡಲಾಗಿದ್ದು, 35 ಸಾವಿರಕ್ಕೂ ಅಧಿಕ ಭಕ್ತರು  ಆತಿಥ್ಯ ಸ್ವೀಕರಿಸಿದ್ದಾರೆ.

ಕಾಲುನೋವಿಗೆ ಪರಿಹಾರ: ಬೆಂಗಳೂರಿನ ಸದ್ದೀಕ್ಷಾ ಚಾರಿಟೇ ಬಲ್ ಟ್ರಸ್ಟ್‌ ವತಿಯಿಂದ ಪೂನಾಂ ಆಚಾರ್ಯ ನೇತೃತ್ವದಲ್ಲಿ ಉಚಿತ ಚಿಕಿತ್ಸಾ ಕೇಂದ್ರವನ್ನು ತೆರೆದಿದ್ದು, ಕಾಲು ನೋವಿಗೆ ಬಿಸಿನೀರಿನ ಚಿಕಿತ್ಸೆಯನ್ನು ನೀಡಲಾ ಗುತ್ತಿದೆ. ನೂರಾರು ಕಿ.ಮೀ. ದೂರದಿಂದ ನಡೆದು ಕಾಲು ಬಾತುಕೊಂಡಿರುವ ಭಕ್ತರು ಬಿಸಿನೀರಿನ ಚಿಕಿತ್ಸೆ ಪಡೆದು ಸಂತಸ ವ್ಯಕ್ತಪಡಿಸುತ್ತಿದ್ದಾರೆ.

‘9 ಒಂಭತ್ತು ದಿನಗಳ ಹಿಂದೆ ಮಂಜುನಾಥನ ಸನ್ನಿಧಿಗೆ ಪಾದ ಯಾತ್ರೆ ಪ್ರಾರಂಭಿಸಿದ್ದು, ಪಟ್ಟಣ ಕೇಂದ್ರಗಳನ್ನು ಹೊರತು ಪಡಿಸಿ, ಮತ್ತೆಲ್ಲೂ ಶೌಚಾ

ಲಯಗಳಿಲ್ಲದೇ ಪರದಾಡು ವಂತಾಯಿತು. ಆದರೆ ಇಲ್ಲಿ ಶೌಚಾಲಯ, ಸ್ನಾನಗೃಹಗಳಿರುವುದು ಮಹಿಳೆಯರ ಪಾಲಿಗೆ ವರದಾನವಾಗಿದೆ. ಇಲ್ಲಿ ಚಿಕಿತ್ಸೆ ನೀಡುತ್ತಿರುವ ವೈದ್ಯರು, ದಾಸೋಹ ಕಾರ್ಯಕ್ರಮಗಳೆಲ್ಲವೂ ಅತ್ಯಂತ ವ್ಯವಸ್ಥಿತವಾಗಿದ್ದು, ಇಂತಹ ಕಾರ್ಯಗಳು ರಾಜ್ಯದೆಲ್ಲೆಡೆ ಜರುಗಬೇಕು’ ಎಂದು ಶಿಡ್ಲಘಟ್ಟದಿಂದ ಬಂದಿದ್ದ ಲಲಿತಮ್ಮ ಅಭಿಪ್ರಾಯ ಹಂಚಿಕೊಂಡರು.

**

‘ಜನ ಸೇವೆಯೇ ಜನಾರ್ದನ ಸೇವೆ’

ಜನರ ಸೇವೆಯೇ ಜನಾರ್ದನನ ಸೇವೆ ಎಂಬ ಮಾತಿನಂತೆ ಮೂಡಿಗೆರೆ ಸಾಮಾಜಿಕ ಸೇವಾ ಸಮಿತಿಯು ನೂರಾರು ಕಿ.ಮೀ. ದೂರದಿಂದ ಧರ್ಮಸ್ಥಳಕ್ಕೆ ಪಾದಯಾತ್ರೆ ಹೋಗುವ ಮಂಜುನಾಥನ ಭಕ್ತರಿಗೆ ಶೌಚಾ ಲಯ, ವಿಶ್ರಾಂತಿ, ಅನ್ನಸಂತರ್ಪಣೆ ಜತೆಗೆ ಆರೋಗ್ಯ ಸೇವೆಗೆ ಆದ್ಯತೆ ನೀಡಿ ನಾಡಿನುದ್ದಗಲದ ಭಕ್ತರಿಂದ ಮೆಚ್ಚುಗೆಗೆ ಪಾತ್ರವಾಯಿತು

***

ಸೇವಾ ಕಾರ್ಯದಲ್ಲಿ ನಿರತರಾದವರು

ಉದ್ಯಮಿ ಕೆ.ಮಂಚೇಗೌಡ, ಕೆ.ವೆಂಕಟೇಶ್‌, ಯೋಗೇಶ್‌ ಜನ್ನಾಪುರ, ಮನಮೋಹನ್‌, ರಾಧಕೃಷ್ಣಭಟ್‌, ರವಿಕುಮಾರ್‌, ಶ್ರೀಕಾಂತ್‌, ಕಣಚೂರು ಅನಿಲ್‌, ರಮೇಶ್‌ ಭಾರಧ್ವಜ್‌, ಗೋಪಾಲ್, ವಾಸುದೇವ್‌, ಬಿ.ಎನ್‌. ಜಯಂತ್‌, ಪಾಲಾಕ್ಷ, ಪ್ರಶಾಂತ್‌ಬೆಟ್ಟಗೆರೆ, ರಕ್ಷಿತ್‌, ಮಲ್ಲೇಶ್‌, ಪಾಪಕ್ಕ ಸೇರಿದಂತೆ ಅನೇಕರು ಈ ಸೇವಾ ಕಾರ್ಯವನ್ನು ಮುನ್ನೆಡೆಸುತ್ತಿದ್ದು, ಧರ್ಮಸ್ಥಳ ಗ್ರಾಮಾಭೀವೃದ್ಧಿ ಯೋಜನೆಯ ಕಾರ್ಯಕರ್ತರು, ವಿವಿಧ ಮಹಿಳಾ ಸಂಘಟನೆಗಳ ಪದಾಧಿಕಾರಿಗಳು, ಸ್ವಯಂ ಸೇವಕರು ಹಗಲಿರುಳೆನ್ನದೇ ದುಡಿಯುತ್ತಿದ್ದು, ಮಲೆನಾಡಿನ ಆತಿಥ್ಯದ ಪರಿಯನ್ನು ರಾಜ್ಯಕ್ಕೆ ಪಸರಿಸುತ್ತಿದ್ದಾರೆ.

 

 

ಪ್ರತಿಕ್ರಿಯಿಸಿ (+)