ಮಂಗಳವಾರ, ಡಿಸೆಂಬರ್ 10, 2019
19 °C

ಹೊಸ ವರ್ಷದ ಹಾಡು

Published:
Updated:
ಹೊಸ ವರ್ಷದ ಹಾಡು

ಚಂದನವನದಲ್ಲಿ ಹೊಸಬರಿಗೆ ತಮ್ಮ ಪ್ರತಿಭೆ ಅನಾವರಣಗೊಳಿಸುವ ಹಂಬಲ ಸಹಜ. ಇದಕ್ಕಾಗಿ ಕಿರುಚಿತ್ರ, ಆಲ್ಬಂ ಮೂಲಕ ಜನರ ಮುಂದೆ ಬರಲು ಇಚ್ಛಿಸುತ್ತಾರೆ. ಇಲ್ಲೊಂದು ಹೊಸ ತಂಡ ‘ಹ್ಯಾಪಿ ನ್ಯೂ ಇಯರ್’ ಹೆಸರಿನಡಿ ಐದು ನಿಮಿಷದ ಹಾಡು ಚಿತ್ರೀಕರಿಸಿದೆ.

ಗ್ಯಾರೇಜ್‌ನಲ್ಲಿ ವಿಭಿನ್ನ ರೀತಿಯ ಸೆಟ್‌ ಹಾಕಿ ಹಾಡಿನ ಶೂಟಿಂಗ್ ಮಾಡಲಾಗಿದೆ. ಕಾಲೇಜಿನ ಯೌವನದ ದಿನಗಳು, ಅಪ್ಪ- ಅಮ್ಮನ ಬುದ್ಧಿವಾದ, ಸ್ನೇಹಿತರ ಬಿಂದಾಸ್ ಮೋಜಿನ ಸುತ್ತವೇ ಸಾಹಿತ್ಯ ಸುತ್ತಿದೆ. ಟೌನ್ ಬ್ರದರ್ಸ್‌ ತಂಡದೊಂದಿಗೆ ಅಕ್ಷಯ್‌ ಜೈನ್ ಈ ಆಲ್ಬಂನಲ್ಲಿ ನೃತ್ಯ ಮಾಡಿದ್ದಾರೆ. ಜೊತೆಗೆ, ಅವರೇ ಇದಕ್ಕೆ ಬಂಡವಾಳ ಹೂಡಿದ್ದಾರೆ.

ಹಾಡಿನ ರಚನೆ, ರಾಗ ಸಂಯೋಜನೆ ಮತ್ತು ಗಾಯನ ಮಂಜುಕವಿ ಅವರದ್ದು. ಹರಿಬಾಬು ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಆನಂದ್‌ ಇಳಯರಾಜ ಅವರದ್ದು. ನೃತ್ಯವನ್ನು ಮೈಸೂರು ರಾಜು ನಿರ್ವಹಿಸಿದ್ದಾರೆ.

ಇತ್ತೀಚೆಗೆ ಗ್ರೀನ್‌ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟ ಟೆನಿಸ್‌ ಕೃಷ್ಣ ಈ ಆಲ್ಬಂ ಅನ್ನು ಬಿಡುಗಡೆಗೊಳಿಸಿದರು. ‘ಇಂತಹ ಆಲ್ಬಂಗಳ ಮೂಲಕ ಹೊಸಬರು ಚಿತ್ರರಂಗದಲ್ಲಿ ಬೆಳೆಯಲು ಸಾಧ್ಯವಾಗಲಿದೆ. ಪ್ರತಿಭೆ ಇರುವವರಿಗೆ ಅವಕಾಶ ಮಾಡಿಕೊಡುವುದು ಎಲ್ಲರ ಕರ್ತವ್ಯ. ಹಾಡಿನಲ್ಲಿ ತಂಡದ ಶ್ರಮ ಎದ್ದುಕಾಣಿಸುತ್ತದೆ’ ಎಂದರು.

‘ನನ್ನ ಪುತ್ರ ನಾಗಾರ್ಜುನ ಆಲ್ಬಂ ಮಾಡಲು ಮುಂದಾಗಿದ್ದಾನೆ. ಸೃಷ್ಟಿಕರ್ತ ಹೆಸರಿನಡಿ ಹೊಸ ಆಲ್ಬಂ ತರಲು ನಿರ್ಧರಿಸಿದ್ದೇನೆ. ಕೋಟಿಲಿಂಗೇಶ್ವರದಲ್ಲಿ ಶೀಘ್ರವೇ ಚಿತ್ರೀಕರಣ ನಡೆಸಲಾಗುವುದು’ ಎಂದು ಮಾಹಿತಿ ಹಂಚಿಕೊಂಡರು.

ಪ್ರತಿಕ್ರಿಯಿಸಿ (+)