ಶುಕ್ರವಾರ, ಜೂನ್ 5, 2020
27 °C

ಇದು ‘ಬೀಟ್ ಗುರು’

ನಿಸರ್ಗ ಎಂ.ಎನ್‌ Updated:

ಅಕ್ಷರ ಗಾತ್ರ : | |

ಇದು ‘ಬೀಟ್ ಗುರು’

ಬೀಟ್ ಗುರು ತಂಡ ವೇದಿಕೆ ಏರಿತೆಂದರೆ ಪ್ರೇಕ್ಷಕರ ಹೃದಯ ಬಡಿತ ನಿಧಾನವಾಗಿ ಹೆಚ್ಚುತ್ತದೆ. ಕಾಲುಗಳು ತಾಳ ಹಾಕುತ್ತವೆ. ಚಪ್ಪಾಳೆ, ಹರ್ಷೋದ್ಘಾರ...

ನಗರದಲ್ಲಿ ಜಂಬೆ ತಂಡ ಎಂದೇ ಖ್ಯಾತಿ ಗಳಿಸಿರುವ ‘ಬೀಟ್ ಗುರು’ ಸಂಗೀತ ಗೋಷ್ಠಿಯಲ್ಲಿ ದೇಶ-ವಿದೇಶಗಳಲ್ಲೂ ಸದ್ದು ಮಾಡುತ್ತಿದೆ. ಪಕ್ಷಿ, ಪ್ರಾಣಿಗಳು ಹೊರಡಿಸುವ ಶಬ್ದ, ಯಾವುದೇ ವಸ್ತುವಿನಿಂದ ಹೊರಡುವ ಶಬ್ದವನ್ನು ನೈಜವಾಗಿ ಹೊರಡಿಸುವುದು ಈ ತಂಡದ ವಿಶೇಷ.

ಆಫ್ರಿಕಾ, ಅರೇಬಿಯಾದ ವಾದ್ಯಗಳಾದ ಜಂಬೆ ದರ್ಬೂಕಾ ಹಾಗೂ ಆಸ್ಟ್ರೇಲಿಯಾದ ಡಿಜಿರಿಡು ವಾದ್ಯಗಳನ್ನು ಬಳಸಿ ಇವರು ಭಾರತ- ಆಫ್ರಿಕಾದ ಫ್ಯೂಷನ್ ಸಂಗೀತವನ್ನು ಸೃಜಿಸುತ್ತಾರೆ. ಹಲವಾರು ರಾಷ್ಟ್ರೀಯ, ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ತಂಡ ಪ್ರದರ್ಶನ ನೀಡಿದೆ. ಮಲೇಷ್ಯಾ, ಥಾಯ್ಲೆಂಡ್‍ಗಳಲ್ಲಿ ತಮ್ಮ ಛಾಪು ಮೂಡಿಸಿದೆ.

ಅಂದ ಹಾಗೆ ‘ಬೀಟ್ ಗುರು’ ತಂಡ ಹುಟ್ಟಿದ್ದೇ ಆಕಸ್ಮಿಕ. ಸಾಂಸ್ಕೃತಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಗಣೇಶ ಗೋವಿಂದಸ್ವಾಮಿ ಜಂಬೆ ವಾದ್ಯಕ್ಕೆ ತೆರೆದುಕೊಂಡದ್ದೂ ಆಕಸ್ಮಿಕವೇ. ಜಂಬೆಯಿಂದ ಹೊಮ್ಮುತ್ತಿದ್ದ ವಿಭಿನ್ನ ಧ್ವನಿ ಇವರನ್ನು ಆಯಸ್ಕಾಂತದಂತೆ ಸೆಳೆಯಿತು.

ತಾನೂ ಯಾಕೆ ಕಲಿಯಬಾರದು ಎಂದು ಜಂಬೆ ಕಲಿಯಲು ಆರಂಭಿಸಿದರು. ಲೋಟ, ತಟ್ಟೆ, ಇತರ ವಸ್ತುಗಳು ಉಂಟುಮಾಡುವ ಶಬ್ದಗಳನ್ನು ಜಂಬೆಯಲ್ಲಿ ಪ್ರಯೋಗಿಸಿದರು. ಶಾಲಾ ಕಾಲೇಜುಗಳಲ್ಲಿ ಜಂಬೆ ಸ್ವರಗಳನ್ನು ಪ್ರದರ್ಶಿಸಿದರು. ಎಲ್ಲರಿಂದ ಮೆಚ್ಚುಗೆ ಗಳಿಸಿದರು.

ಕಳೆದ 15 ವರ್ಷಗಳಿಂದ ಆಫ್ರಿಕಾದ ಸಂಗೀತ ವಾದ್ಯ, ಜಂಬೆಯನ್ನು ನುಡಿಸುತ್ತಾರೆ. ಯುರೋಪ್‌ ದೇಶಗಳಾದ ಡೆನ್ಮಾರ್ಕ್, ನಾರ್ವೆ, ನೆದರ್ಲೆಂಡ್‌,  ಜರ್ಮನಿ ಹಾಗೂ ಸಿಂಗಪುರಗಳಲ್ಲಿ ಕಾರ್ಯಾಗಾರ ನಡೆಸಿದ್ದಾರೆ. ‘ಕಾರ್ಯಾಗಾರಗಳಲ್ಲಿ ಹೊಸತನ್ನು ಕಲಿಯಲು ಅವಕಾಶ ಸಿಗುತ್ತದೆ. ಬೇರೆ ಭಾಗಗಳಿಂದ ಕಲಾವಿದರು ಬಂದಿರುತ್ತಾರೆ. ಜಂಬೆಯ ಮೂಲ ಆಫ್ರಿಕಾ. ಅಲ್ಲಿನ ಕಲಾವಿದರಿಂದ ಅದನ್ನು ನುಡಿಸುವ ತಂತ್ರ ಕಲಿತುಕೊಂಡೆ. ಅವರಿಗೂ ನಮ್ಮ ತಮಟೆಯ ರುಚಿ ತೋರಿಸಿದೆ’ ಎನ್ನುತ್ತಾರೆ ಗೋವಿಂದಸ್ವಾಮಿ.

ಡೆಲ್, ಆಕ್ಸೆಂಚರ್, ಐಬಿಎಂ ಮುಂತಾದ ಐಟಿ ಕಂಪೆನಿಗಳಲ್ಲೂ ಇದರ ಝಲಕ್‌ ತೋರಿಸಿದ್ದಾರೆ. ಗಣೇಶ ಹಬ್ಬ, ಕಾಲೇಜು ಸಮಾರಂಭಗಳು, ಇತರ ಸಾಂಸ್ಕೃತಿಕ ಸಮಾರಂಭಗಳಲ್ಲಿ ಇವರ ತಂಡ ಪ್ರದರ್ಶನ ನೀಡುತ್ತದೆ. ಗೋವಿಂದಸ್ವಾಮಿಗೆ ಆರಂಭದಿಂದ ಸಾಥ್‌ ನೀಡಿದ್ದು ಪ್ರಶಾಂತ್. ಇಬ್ಬರ ತಂಡವನ್ನು ‘ಗ್ರೀನ್ ರಿದಮ್’ ಎಂದು ಕರೆದರು.

‘ಬೀಟ್ ಗುರು’ ತಂಡದ ಮತ್ತೊಬ್ಬ ಸದಸ್ಯ ಗಣೇಶ್ ನಾಯಕ್ ಕೂಡಾ ಅಚಾನಕ್ ಆಗಿ ಜಂಬೆ ತಂಡ ಸೇರಿದರು. ‘ನಾನು ಕ್ಯಾಂಟೀನ್ ನಡೆಸುತ್ತೇನೆ. ಜಂಬೆ ಸದ್ದು ಯಾಕೋ ಇನ್ನಿಲ್ಲದಂತೆ ಸೆಳೆಯಿತು. ಕ್ಯಾಂಟೀನ್ ಬಾಗಿಲು ಹಾಕಿ ಜಂಬೆ ಕೇಳಲು ಹೋಗಿ ಬಿಡುತ್ತಿದ್ದೆ. ಗೋವಿಂದಸ್ವಾಮಿ ಅವರ ಜತೆ ಸೇರಿ ಕಲಿಯಲು ಆರಂಭಿಸಿದೆ. ಭಿನ್ನ ಹಾಗೂ ವಿಶಿಷ್ಟವಾದುದನ್ನು ಮಾಡಬೇಕು ಎಂಬುದು ನಮ್ಮ ತುಡಿತ’ ಎನ್ನುತ್ತಾರೆ ಅವರು. ಈಗ ಸುನೀಲ್, ಪ್ರಸಾದ್ ಗೋವಿಂದ್, ಆದರ್ಶ್, ಕನ್ನಯ್ಯ ತಂಡ ಸೇರಿದ್ದಾರೆ. 7 ಜನರ ತಂಡಕ್ಕೆ ಬೀಟ್ ಗುರು ಎಂದು ಮರುನಾಮಕರಣ ಮಾಡಿದ್ದಾರೆ. ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಸುನೀಲ್ 5 ವರ್ಷಗಳಿಂದ ಬೀಟ್ ಗುರು ಜತೆ ಇದ್ದಾರೆ. ‘ನಾನು ಕೊಳಲು ನುಡಿಸುತ್ತೇನೆ. ಕರ್ನಾಟಕ ಸಂಗೀತ ಕಲಿತಿದ್ದೇನೆ. ತಂಡದಲ್ಲಿ ಪ್ರತಿಯೊಬ್ಬರಿಗೂ ಏನಾದರೂ ಹೊಸತನ್ನು ಮಾಡುವ ಬಯಕೆ. ಯಾವುದೇ ಕಾರ್ಯಕ್ರಮ ನೀಡುವ ಮೊದಲು 4-5 ಗಂಟೆ ತಯಾರಿ ನಡೆಸುತ್ತೇವೆ. ಪ್ರಯೋಗಗಳನ್ನು ಮಾಡುತ್ತೇವೆ. ಚರ್ಚಿಸುತ್ತೇವೆ’ ಎನ್ನುತ್ತಾರೆ.

ಪ್ರೇಕ್ಷಕರು ಸುಮ್ಮನೆ ಕಾರ್ಯಕ್ರಮ ನೋಡಿ ಹೋದರೆ ಸಾಲದು. ಅವರೂ ನಮ್ಮ ತಂಡದ ಭಾಗವಾಗಿ, ಹೆಜ್ಜೆ ಹಾಕಬೇಕು. ಹೈವೇ ಟು ಮಡಗಾಸ್ಕರ್‌ ಎಂಬ ಟ್ರ್ಯಾಕ್‌ ಇದೆ. ಜಂಬೆಯನ್ನು ತಾರಕದಲ್ಲಿ ನುಡಿಸುವುದಕ್ಕೆ ಹೀಗೆ ಕರೆಯುತ್ತೇವೆ. ಇದನ್ನು ನುಡಿಸಿದಾಗಲೆಲ್ಲ ಪ್ರೇಕ್ಷಕರು ಖುಷಿಯಿಂದ ಕುಣಿದಿದ್ದಾರೆ’ ಎನ್ನುತ್ತಾರೆ ಸುನೀಲ್.

‘ಜನಪ್ರಿಯ ಸಂಗೀತದ ಮೇಲೆ ಪ್ರಯೋಗ ಮಾಡುತ್ತೇವೆ. ಜನರಿಗೆ ಗೊತ್ತಿರುವ ಹಾಡನ್ನು ಮತ್ತೊಂದು ರೀತಿಯಲ್ಲಿ ನಾವು ನುಡಿಸುತ್ತೇವೆ. ಅವರಿಗೆ ಇಷ್ಟವಾಗಿ ಬಿಟ್ಟರೆ ನಮ್ಮ ಪ್ರಯೋಗ ಯಶ ಕಂಡಂತೆ. ಅದೇ ರೀತಿ ಹೊಸತನ್ನು ಪ್ರಯೋಗ ಮಾಡುತ್ತೇವೆ’ ಎನ್ನುತ್ತಾರೆ ಅವರು.

ಜಂಬೆ ಕುರಿತು: ಜಂಬೆ ದಕ್ಷಿಣ ಆಫ್ರಿಕಾದ ಬುಡಕಟ್ಟು ಜನರು ನಡಿಸುವ ವಿಶಿಷ್ಟ ವಾದ್ಯ. ಬರಿಕೈಗಳಿಂದ ಇದನ್ನು ಬಾರಿಸುತ್ತಾರೆ. ನಮ್ಮಲ್ಲಿ ತಮಟೆ ಇರುವಂತೆ ಅಲ್ಲಿ ಜಂಬೆ. ಅಲ್ಲಿನ ಬುಡಕಟ್ಟು ಜನರು ಕಾಡಿನಲ್ಲಿ ಸಂದೇಶ ರವಾನಿಸಲು, ಪರಸ್ಪರ ಸಂಪರ್ಕ ಸಾಧಿಸಲು ಇದನ್ನು ಬಳಸುತ್ತಿದ್ದರು ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಇದನ್ನು ಬಳಸಿ ಜನಪ್ರಿಯಗೊಳಿಸಿದ ಹೆಗ್ಗಳಿಕೆ ಬೀಟ್ ಗುರು ತಂಡಕ್ಕೆ ಸಲ್ಲುತ್ತದೆ. ಬೀಟ್‌ ಗುರು ತಂಡದ ನೇತೃತ್ವ ವಹಿಸಿರುವ ಗಣೇಶ ಗೋವಿಂದಸ್ವಾಮಿ ಅವರು ಜಂಬೆ ತರಗತಿ ನಡೆಸುತ್ತಾರೆ. ಸದ್ಯ 60 ಮಂದಿ ಇವರಿಂದ ಜಂಬೆ ಕಲಿಯುತ್ತಿದ್ದಾರೆ. ಸಿನಿಮಾಗಳಿಗೂ ಕೆಲಸ ಮಾಡಿದ್ದಾರೆ. ಟ್ರಂಕ್‌ ಎಂಬ ಹೊಸ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಪರ್ಕ: 9632729531

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.