ಶುಕ್ರವಾರ, ಡಿಸೆಂಬರ್ 6, 2019
24 °C

ಮಾಲ್ಡೀವ್ಸ್‌ಗೆ ಬೆಂಗಳೂರು ಎಫ್‌ಸಿ ಪ್ರಯಾಣ

Published:
Updated:
ಮಾಲ್ಡೀವ್ಸ್‌ಗೆ ಬೆಂಗಳೂರು ಎಫ್‌ಸಿ ಪ್ರಯಾಣ

ನವದೆಹಲಿ: ಮಾಲ್ಡೀವ್ಸ್‌ಗೆ ಪ್ರಯಾಣ ಮಾಡದಂತೆ ಸರ್ಕಾರ ಎಚ್ಚರಿಕೆ ನೀಡಿದ್ದರೂ ಬೆಂಗಳೂರು ಎಫ್‌ಸಿ ತಂಡ ಭಾನುವಾರ ಅಲ್ಲಿಗೆ ಪ್ರಯಾಣ ಮಾಡಿದೆ.

ಮಾಲ್ಡೀವ್ಸ್‌ನಲ್ಲಿ ಎದುರಾಗಿರುವ ರಾಜಕೀಯ ಬಿಕ್ಕಟ್ಟಿನ ಕಾರಣದಿಂದ ಅಲ್ಲಿಗೆ ಪ್ರಯಾಣ ಮಾಡದಂತೆ ಭಾರತ ಸರ್ಕಾರ ಎಚ್ಚರಿಕೆ ನೀಡಿತ್ತು. ಬಿಎಫ್‌ಸಿ ತಂಡದ ಆಟಗಾರರು ಫೆಬ್ರುವರಿ 13ರಂದು ಆಯೋಜನೆಗೊಂಡಿದ್ದ ಎಎಫ್‌ಸಿ ಕಪ್‌ನ ಮೊದಲ ಲೆಗ್‌ ಪ್ಲೇ ಆಫ್‌ ಪಂದ್ಯದಲ್ಲಿ ಆಡಲು ಮಾಲ್ಡೀವ್ಸ್‌ಗೆ ತೆರಳಿದೆ.

ರಾಜಧಾನಿ ಮಾಲೆಯ ರಾಸ್‌ಮೀ ಧಂಡು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಮೂಲಗಳ ಪ್ರಕಾರ, ಭಾರತದ ವಿದೇಶಾಂಗ ಇಲಾಖೆಯು ಪ್ರವಾಸವನ್ನು ಮುಂದೂಡುವಂತೆ  ಬೆಂಗಳೂರು ಎಫ್‌ಸಿ ತಂಡದ ಶ್ರೀನಿವಾಸ್‌ಮೂರ್ತಿ ಅವರಿಗೆ ಪತ್ರ ಬರೆದು ತಿಳಿಸಿತ್ತು.

‘ಈ ಪಂದ್ಯವನ್ನು ಮುಂದೂಡಲು ಸಾಧ್ಯವೇ ಏಷ್ಯನ್‌ ಫುಟ್‌ಬಾಲ್ ಒಕ್ಕೂಟ (ಎಎಫ್‌ಸಿ)ಗೆ ಕೇಳಿದ್ದೆವು. ಇದಕ್ಕೆ ಉತ್ತರಿಸಿದ್ದ ಅವರು (ಎಎಫ್‌ಸಿ) ಬೆಂಗಳೂರು ಎಫ್‌ಸಿ ಭಾಗವಹಿಸದಿದ್ದರೆ, ತಂಡವು ದಂಡ ತೆರುವುದರ ಜೊತೆಗೆ ಪಾಯಿಂಟ್‌ ಕಳೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿತ್ತು. ಈ ಕಾರಣದಿಂದ ಮಂಗಳವಾರ ನಡೆಯುವ ಪಂದ್ಯದಲ್ಲಿ ಬೆಂಗಳೂರು ಆಡಲು, ಮಾಲೆಗೆ ತೆರಳಿದೆ’ ಎಂದು ಎಐಎಫ್‌ಎಫ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ದಂಡ ತೆರುವ ಬದಲಾಗಿ ಮಾಲ್ಡೀವ್ಸ್‌ಗೆ ತೆರಳಲು ನಿರ್ಧಾರ ತೆಗೆದುಕೊಳ್ಳಲಾಯಿತು’ ಎಂದು ಬೆಂಗಳೂರು ಎಫ್‌ಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಪಂದ್ಯ ನಡೆಯುವ ವೇಳೆ ಮಾಲ್ಡೀವ್ಸ್‌ನ ರಾಷ್ಟ್ರೀಯ ರಕ್ಷಣಾ ಪಡೆ ಪೂರ್ಣ ಪ್ರಮಾಣದಲ್ಲಿ ಭದ್ರತೆ ನೀಡುವುದಾಗಿ ಎಎಫ್‌ಸಿ ಆಯೋಜಕರಿಗೆ ತಿಳಿಸಿದೆ’ ಎಂದರು.

ಪ್ರತಿಕ್ರಿಯಿಸಿ (+)