ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಶಾಡಳಿತದ ಶಕ್ತಿ, ಮಠಗಳ ಭಕ್ತಿ

Last Updated 11 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪರ್ಯಾಯ ರಾಜಕಾರಣದ ನೆಲೆ ಒದಗಿಸಿಕೊಟ್ಟ ಮಧ್ಯ ಕರ್ನಾಟಕ ಈಗ ಕುಟುಂಬದ ರಾಜಕಾರಣದಲ್ಲಿ ಮುಳುಗೇಳುತ್ತಿದೆ. ಶಾಂತವೇರಿ ಗೋಪಾಲಗೌಡರ ಶಿಷ್ಯರ ಆಡಳಿತ ಮುಕ್ತಾಯದ ಅಂಚಿನಲ್ಲಿದೆ. ಜನತಾ ಪರಿವಾರದ ಪಳೆಯುಳಿಕೆಗಳು ಅಲ್ಲಲ್ಲಿ ಚದುರಿಹೋಗಿವೆ. ಕಾಂಗ್ರೆಸ್ ಕ್ರಿಯಾತ್ಮಕ ನಾಯಕತ್ವದ ಕೊರತೆಯಿಂದ ನಲುಗುತ್ತಿದೆ. ಬಿಜೆಪಿಯ ಮುಷ್ಟಿ ಬಲವಾಗುತ್ತಿದೆ. ಜೊತೆ ಜೊತೆಗೆ ಒಳಬಂಡಾಯದ ಕೆಂಡ ಸೆರಗಿನಲ್ಲೇ ಇದೆ.

* ದಾವಣಗೆರೆ – ಕುಟುಂಬ ರಾಜ್ಯಭಾರಕ್ಕೆ ಹೆಸರಾಗಿದೆ ಈ ವಾಣಿಜ್ಯ ನಗರಿ

ದಾವಣಗೆರೆ: ಮಧ್ಯ ಕರ್ನಾಟಕದ ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಗಳ ಜನ ಕೃಷಿ ಹಾಗೂ ಕುಡಿಯುವ ನೀರಿಗೆ ಹೆಚ್ಚಾಗಿ ಆಶ್ರಯಿಸಿರುವುದು ಒಂದೇ ನದಿ; ಅದು ಭದ್ರಾ. ಆದರೆ, ಮೂರೂ ಜಿಲ್ಲೆಗಳ ಸಂಸ್ಕೃತಿ, ಸಿದ್ಧಾಂತ ಬೇರೆ ಬೇರೆ. ಈ ಮಧ್ಯ ಕರ್ನಾಟಕವನ್ನು ರಾಜಕೀಯವಾಗಿ ಕೆಲವು ದಶಕಗಳ ಕಾಲ ಪ್ರಭಾವಿಸಿದ್ದು ಎಸ್‌.ಬಂಗಾರಪ್ಪ. ಈಗ ಬಿ.ಎಸ್‌.ಯಡಿಯೂರಪ್ಪ ಪಾಳಿ.

ಬಿಜೆಪಿಯಲ್ಲಿ ಉಳಿದುಕೊಂಡಿರುವ ಕೆಜೆಪಿ ಕಹಿ, ಕಾಂಗ್ರೆಸ್‌ನಲ್ಲಿ ಕಾಣದ ಪಕ್ಷ ಸಂಘಟನೆಯ ಚುರುಕುತನ, ಸಮರ್ಥ ನಾಯಕರಿಲ್ಲದೆ ದಿಕ್ಕುತೋಚದ ಸ್ಥಿತಿಯಲ್ಲಿರುವ ಜೆಡಿಎಸ್‌–ಇದು ಮಧ್ಯ ಕರ್ನಾಟಕದ ಸದ್ಯದ ರಾಜಕೀಯ ಸ್ಥಿತಿ.

ರಾಜಕೀಯ ರಂಗದಲ್ಲಿ ಸದಾ ಹೊಸತನಕ್ಕೆ ತುಡಿಯುವ ಮನಸ್ಥಿತಿ ಶಿವಮೊಗ್ಗ ಜನರದ್ದು. ಕಾಂಗ್ರೆಸ್‌, ಬಿಜೆಪಿಗೆ ಪರ್ಯಾಯ ಸಿಗದೆ ಒದ್ದಾಡುತ್ತಿರುವ ದಾವಣಗೆರೆ ಜನರು ಇನ್ನೊಂದು ಕಡೆ. ಈ ಮಧ್ಯೆ ಎಲ್ಲಾ ಪಕ್ಷಗಳನ್ನು ನಂಬಿ ಮೋಸ ಹೋಗುತ್ತಿರುವ ಚಿತ್ರದುರ್ಗದ ಮುಗ್ಧ ಮತದಾರರು. ಬಗರ್‌ಹುಕುಂ ರೈತರಿಗೆ ಹಕ್ಕುಪತ್ರ, ನೀರಾವರಿ ಯೋಜನೆಗಳ ಅನುಷ್ಠಾನ ಈ ಭಾಗದ ಪ್ರಮುಖ ಬೇಡಿಕೆಗಳು. ಇದುವರೆಗೂ ಅಧಿಕಾರ ನಡೆಸಿದ ಪಕ್ಷಗಳು ಈ ಬೇಡಿಕೆಗಳನ್ನು ಈಡೇರಿಸಲು ಅಲ್ಪಸ್ವಲ್ಪ ಪ್ರಯತ್ನ ಮಾಡಿವೆ. ಆದರೆ, ಅವು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ.

ಮಧ್ಯ ಕರ್ನಾಟಕದಲ್ಲಿ ವೀರಶೈವ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರ ಉರುಳಿಸಿದ ಸ್ವತಂತ್ರ ಧರ್ಮದ ದಾಳ ಈ ಭಾಗದಲ್ಲಿ ಮಠಗಳ ನಡುವಿನ ಸಂಘರ್ಷ ಆಗಿದೆಯೇ ಹೊರತು ಮತ ಕ್ರೋಡೀಕರಣ ಅಥವಾ ವಿಭಜನೆಯ ಸಾಧನವಾಗಿ ಕಂಡಿಲ್ಲ. ಕೆಲವು ಮಠಗಳು ಸ್ವತಂತ್ರ ಧರ್ಮದ ಬಗ್ಗೆ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದರೂ ಅದನ್ನು ಗಟ್ಟಿಧ್ವನಿಯಲ್ಲಿ ಹೇಳಲು ಸಿದ್ಧವಿಲ್ಲ. ಶ್ರೇಷ್ಠತೆಯ ವ್ಯಸನದಲ್ಲಿ ಮುಳುಗಿದ ಕೆಲವು ಮಠಗಳು ಎಂದಿಗೂ ಕಾಂಗ್ರೆಸ್‌ ಬೆಂಬಲಿಸಿದ ಉದಾಹರಣೆ ಈ ಭಾಗದಲ್ಲಿ ಇಲ್ಲ.

ದಾವಣಗೆರೆ ಸಮಾರಂಭದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಮಾತುಕತೆ. (ಸಂಗ್ರಹ ಚಿತ್ರ)

* ಶಿವಮೊಗ್ಗ – ಸಮಾಜವಾದಿ ಚಿಂತನೆ ಮೊಳಕೆಯೊಡೆದ ಈ ನೆಲದಲ್ಲಿ ಈಗ ವಂಶಪಾರಂಪರ್ಯದ ಪಾರುಪತ್ಯ

ಕಾಂಗ್ರೆಸ್‌ಗೆ ಪರ್ಯಾಯ ರೂಪಿಸಿದ ಶಿವಮೊಗ್ಗ

ಕಾಂಗ್ರೆಸ್‌ಗೆ ರಾಜ್ಯದಲ್ಲೇ ಪರ್ಯಾಯ ರಾಜಕೀಯ ಸಿದ್ಧಾಂತವೊಂದನ್ನು ರೂಪಿಸಿದ್ದೇ ಶಿವಮೊಗ್ಗ. ಸಮಾಜವಾದಿ ಚಿಂತನೆಯನ್ನು ಹುಟ್ಟುಹಾಕಿ ಶಿಷ್ಯರ ದೊಡ್ಡ ಪಡೆ ಕಟ್ಟಿದವರು ಶಾಂತವೇರಿ ಗೋಪಾಲಗೌಡರು. ನಂತರದಲ್ಲಿ ಜೆ.ಎಚ್‌.ಪಟೇಲ್, ಎಸ್‌.ಬಂಗಾರಪ್ಪ, ಕಾಗೋಡು ತಿಮ್ಮಪ್ಪ ಬೇರೆ ಬೇರೆ ಪಕ್ಷಗಳಲ್ಲಿ ಸೇರಿಹೋದರೂ ಅವರ ಆಶಯಗಳು ಎಂದಿಗೂ ಸಮಾಜವಾದವೇ ಆಗಿದ್ದವು. ಜನಸಂಘ ಬೆಳೆಯಲು ಕಾರಣವಾಗಿದ್ದು ಇದೇ ನೆಲ. ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಮೊದಲು ಖಾತೆ ತೆರೆದಿದ್ದು ಶಿವಮೊಗ್ಗದಲ್ಲಿ. ಜನತಾ ಪರಿವಾರಕ್ಕೂ ಒಂದು ಕಾಲದಲ್ಲಿ ನೆಲೆ ಒದಗಿಸಿದ್ದು ಇದೇ ಭೂಮಿ. ಚನ್ನಗಿರಿ ಶಿವಮೊಗ್ಗ ಜಿಲ್ಲೆಯಲ್ಲಿದ್ದಾಗಲೇ ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದರು.

ಶಾಂತವೇರಿ ಗೋಪಾಲಗೌಡ

ಹೆಮ್ಮರವಾದ ವಂಶಾಡಳಿತ: ಇಂತಹ ನೆಲದಲ್ಲಿ ಈಗ ವಂಶಾಡಳಿತ ಪರಂಪರೆ ಆರಂಭವಾಗಿದೆ. ಬಂಗಾರಪ್ಪ ಅವರ ಮಕ್ಕಳು ರಾಜಕೀಯ ಕ್ಷೇತ್ರದಲ್ಲಿ ಮುಂದುವರಿದಿದ್ದರೂ, ಅಣ್ಣ–ತಮ್ಮ ಇಬ್ಬರದು ಈಗ ಪರಸ್ಪರ ವಿರುದ್ಧ ದಿಕ್ಕು. ಕಳೆದ ಲೋಕಸಭೆ ಚುನಾವಣೆಯ ವೇಳೆ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಬಂಗಾರಪ್ಪ ಅವರ ಪುತ್ರಿ ಗೀತಾ ಶಿವರಾಜ್‌ಕುಮಾರ್ ಮತ್ತೆ ಕಾಣಿಸಿಕೊಂಡು ರಾಜಕೀಯವಾಗಿ ಪುನಃ ಸಕ್ರಿಯರಾಗುವ ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ಯಡಿಯೂರಪ್ಪ ಮತ್ತು ಅವರ ಪುತ್ರ, ಶಾಸಕ ಬಿ.ವೈ.ರಾಘವೇಂದ್ರ. ಇದರೊಂದಿಗೆ ಕೆ.ಎಸ್‌.ಈಶ್ವರಪ್ಪ, ಡಿ.ಎಚ್‌.ಶಂಕರಮೂರ್ತಿ ಮತ್ತು ಅವರ ಮಕ್ಕಳು. ಈ ಪಟ್ಟಿಗೆ ಈಗ ಸೇರ್ಪಡೆ ಕಾಗೋಡು ತಿಮ್ಮಪ್ಪ ಮತ್ತು ಅವರ ಪುತ್ರಿ.

ಬಿಜೆಪಿ ಹಿಂದೆ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಭಿವೃದ್ಧಿ ಮಂತ್ರ ಜಪಿಸಿದಾಗ ಹಿಂದುತ್ವದ ಹೆಸರಿನಲ್ಲಿ ಶಿವಮೊಗ್ಗದ ಜನ ಒಟ್ಟಾಗಿದ್ದಿದೆ. ಇಲ್ಲಿನ ಜನ ಜಾತಿವಾದಿಗಳಾ ಎಂದರೆ ಅದೂ ಅಲ್ಲ. ಇಲ್ಲದಿದ್ದರೆ ತೀರ್ಥಹಳ್ಳಿಯಲ್ಲಿ ಕೋಣಂದೂರು ಲಿಂಗಪ್ಪ, ಶಿವಮೊಗ್ಗ ನಗರದಿಂದ ಕೆ.ಎಸ್‌.ಈಶ್ವರಪ್ಪ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ, ನಾಯಕರು ರಾಜಕೀಯವಾಗಿ ಅಹಂಕಾರ ಪ್ರದರ್ಶಿಸಿದಾಗಲೆಲ್ಲ ಇಲ್ಲಿನ ಜನ ಸರಿಯಾದ ಪೆಟ್ಟು ಕೊಟ್ಟಿದ್ದಾರೆ. ಬಂಗಾರಪ್ಪ, ಯಡಿಯೂರಪ್ಪ, ಕಾಗೋಡು ತಿಮ್ಮಪ್ಪ, ಈಶ್ವರಪ್ಪ ಎಲ್ಲರೂ ನೋವುಂಡವರೇ.

* ಚಿತ್ರದುರ್ಗ – ಈ ‘ಮಠಗಳ ನಗರಿ’ಯಲ್ಲಿ ನೀರಾವರಿಗಾಗಿ ನಿರಂತರ ಹೋರಾಟ ನಡೆದೇ ಇದೆ

ಜನರನ್ನು ಸೇರಿಸುವ ಸ್ವಾಮೀಜಿಗಳು

ಚಿತ್ರದುರ್ಗ ದಟ್ಟ ಬುಡಕಟ್ಟು ಸಂಸ್ಕೃತಿ ಹೊಂದಿರುವ, ಅತಿ ಹೆಚ್ಚು ಮಠಗಳಿರುವ ವಿಶೇಷವಾದ ನಗರ. ಏಕೀಕೃತ ಕರ್ನಾಟಕದ ಪ್ರಥಮ ಮುಖ್ಯಮಂತ್ರಿಯಾಗಿದ್ದವರು ಇದೇ ಜಿಲ್ಲೆಯ ಎಸ್‌.ನಿಜಲಿಂಗಪ್ಪ. ಅವರ ಕಾಲದಿಂದಲೂ ನೀರಾವರಿಗಾಗಿ ಹೋರಾಟ ನಡೆದೇ ಇದೆ. ಇಲ್ಲಿ ಈಚೆಗೆ ಆಗಾಗ್ಗೆ ಆಯೋಜಿಸುತ್ತಿರುವ ಹಿಂದೂ ಸಮಾಜೋತ್ಸವಗಳಿಗೆ ಲಕ್ಷಾಂತರ ಜನರನ್ನು ಸೇರಿಸುವ ಕೆಲವು ಸ್ವಾಮೀಜಿಗಳು, ನೀರಾವರಿ ಹೋರಾಟಗಳಿಗೆ ಏಕೆ ಅವರನ್ನು ಅಣಿಗೊಳಿ ಸುತ್ತಿಲ್ಲ ಎಂಬುದು ಪ್ರಶ್ನೆಯಾಗಿದೆ. ಕೆಲವು ಮಠಾಧೀಶರೂ ಈ ಬಾರಿ ಚುನಾವಣಾ ಅಖಾಡಕ್ಕೆ ಇಳಿದರೆ ಅಚ್ಚರಿಪಡಬೇಕಿಲ್ಲ.

ಕುಟುಂಬ ರಾಜ್ಯಭಾರ: ದಾವಣಗೆರೆ ಒಂದು ಕಾಲದಲ್ಲಿ ಕಾರ್ಮಿಕರ ಚಳವಳಿಯ ಕೇಂದ್ರ. ಈಗ ಈ ವಾಣಿಜ್ಯ ನಗರಿಗೆ ಸಕ್ರಿಯ ರಾಜಕಾರಣದ ಕೊರತೆ. ಹಿರಿಯ ರಾಜಕಾರಣಿ ಶಾಮನೂರು ಶಿವಶಂಕರಪ್ಪ, ಅವರ ಪುತ್ರ ಹಾಗೂ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಕ್ರಮವಾಗಿ ದಾವಣಗೆರೆ ದಕ್ಷಿಣ, ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ, ಲೋಕಸಭಾ ಕ್ಷೇತ್ರದಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ ಅವರೇ ಆಯ್ಕೆಯಾಗುತ್ತಾ ಬಂದಿದ್ದಾರೆ. ಜಿಲ್ಲೆಯಲ್ಲಿ ಹಲವು ದಶಕಗಳಿಂದ ಈ ಎರಡು ಕುಟುಂಬಗಳದ್ದೇ ರಾಜ್ಯಭಾರ ನಡೆದಿದೆ. ಕೆರೆ ತುಂಬಿಸುವ ಯೋಜನೆ ಈ ಭಾಗದ ಬಹುಕಾಲದ ಬೇಡಿಕೆ.

ಎಸ್.ನಿಜಲಿಂಗಪ್ಪ

ಕಡಿದಾಳು ಮಂಜಪ್ಪ

ಪೂರ್ಣಾವಧಿ ಪೂರೈಸದ ಮುಖ್ಯಮಂತ್ರಿಗಳು

ಕಡಿದಾಳು ಮಂಜಪ್ಪ, ಎಸ್‌.ಬಂಗಾರಪ್ಪ, ಜೆ.ಎಚ್‌.ಪಟೇಲ್ ಹಾಗೂ ಬಿ.ಎಸ್‌.ಯಡಿಯೂರಪ್ಪ ಶಿವಮೊಗ್ಗ ಜಿಲ್ಲೆಯಿಂದ ಮುಖ್ಯಮಂತ್ರಿಯಾಗಿದ್ದರು. ಆದರೆ, ಯಾರೊಬ್ಬರೂ ಐದು ವರ್ಷ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಪೂರೈಸಿಲ್ಲ.

1956ರ ಆ.19ರಂದು ಕಡಿದಾಳು ಮಂಜಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಆದರೆ, ಅವರು ಅಧಿಕಾರದಲ್ಲಿದ್ದದ್ದು ಕೇವಲ 2 ತಿಂಗಳು. 1956ರ ಅಕ್ಟೋಬರ್ 31ರಂದು ರಾಜೀನಾಮೆ ನೀಡಿದರು. ಈ ಎರಡು ತಿಂಗಳಿನಲ್ಲೇ ಭೂಸುಧಾರಣೆ ಕಾನೂನು ಜಾರಿಗೆ ತರಲು ಪ್ರಯತ್ನಿಸಿದರು.

1990ರ ಅಕ್ಟೋಬರ್ 17ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದು ಎಸ್.ಬಂಗಾರಪ್ಪ. ಆದರೆ, ಪಕ್ಷದ ಹೈಕಮಾಂಡ್‌ ಜತೆ ಸಂಬಂಧ ಸರಿಬಾರದ ಕಾರಣ, 1992ರ ನವೆಂಬರ್ 19ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಈ ಎರಡು ವರ್ಷಗಳಲ್ಲೇ ಬಂಗಾರಪ್ಪ ಹಲವು ಜನೋಪಯೋಗಿ ಯೋಜನೆಗಳನ್ನು ರೂಪಿಸಿ, ಜನಪ್ರಿಯರಾಗಿದ್ದರು.

1996ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ದೇವೇಗೌಡರಿಗೆ ಪ್ರಧಾನಿ ಹುದ್ದೆ ಒಲಿದು ಬಂದಿತ್ತು. ಅಂದು ಶಿವಮೊಗ್ಗ ಜಿಲ್ಲೆಗೆ ಸೇರಿದ್ದ ಚನ್ನಗಿರಿ ತಾಲ್ಲೂಕಿನ ಜೆ.ಎಚ್. ಪಟೇಲರು 1996ರ ಮೇ 31ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೂರು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಪಟೇಲರಿಗೆ ಆಂತರಿಕ ಭಿನ್ನಮತ ಬಲವಾಗಿ ಕಾಡಿತು. ಕೊನೆಗೆ 1999ರ ಅಕ್ಟೋಬರ್ 7ರಂದು ಅವರು ಅವಧಿ ಪೂರ್ಣಗೊಳಿಸುವ ಆರು ತಿಂಗಳ ಮೊದಲೇ ವಿಧಾನಸಭೆ ವಿಸರ್ಜನೆಗೆ ಶಿಫಾರಸು ಮಾಡಿದರು.

ಇದಾದ ದಶಕದ ಬಳಿಕ ಜಿಲ್ಲೆಗೆ ಮತ್ತೊಂದು ಅವಕಾಶ ಸಿಕ್ಕಿತು. 2007ರ ನವೆಂಬರ್ 12ರಂದು ಬಿಜೆಪಿ–ಜೆಡಿಎಸ್ ಸಮ್ಮಿಶ್ರ ಸರ್ಕಾರದ ಕಾಲದಲ್ಲಿ ಬಿ.ಎಸ್. ಯಡಿಯೂರಪ್ಪ ಕೇವಲ ಎಂಟು ದಿನ ಮುಖ್ಯಮಂತ್ರಿ ಆಗಿದ್ದರು. ನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜಯ ಗಳಿಸಿ 2008 ಮೇ 31ರಂದು ಮುಖ್ಯಮಂತ್ರಿಯಾದರು. ಲಂಚ ಪಡೆದ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಬೇಕಾದ್ದರಿಂದ 2011ರ ಜುಲೈ 31ರಂದು ಅಧಿಕಾರ ಬಿಡಬೇಕಾಯಿತು.

ಜೆ.ಎಚ್. ಪಟೇಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT