ಜೈಲಿನಿಂದಲೇ ಸಾಕ್ಷಿದಾರನಿಗೆ ಬೆದರಿಕೆ!

7

ಜೈಲಿನಿಂದಲೇ ಸಾಕ್ಷಿದಾರನಿಗೆ ಬೆದರಿಕೆ!

Published:
Updated:

ಬೆಂಗಳೂರು: ‘ನನ್ನ ತಂದೆಯನ್ನು ಕೊಂದವರ ವಿರುದ್ಧ ಸಾಕ್ಷಿ ಹೇಳದಂತೆ ಶ್ರೀನಿವಾಸ್‌ ಅಲಿಯಾಸ್ ರಾಬರಿ ಕಿಟ್ಟಿ ಎಂಬಾತ ಜೈಲಿನಿಂದಲೇ ಫೇಸ್‌ಬುಕ್‌ ಮೂಲಕ ಬೆದರಿಕೆ ಹಾಕುತ್ತಿದ್ದಾನೆ’ ಎಂದು ಆರೋಪಿಸಿ ವಿಜಯ್‌ ಕುಮಾರ್ ಎಂಬುವರು ಕೆಂಗೇರಿ ಠಾಣೆಗೆ ದೂರು ಕೊಟ್ಟಿದ್ದಾರೆ.

ಕಾಂಗ್ರೆಸ್‌ನ ಬೆಂಗಳೂರು ಜಿಲ್ಲಾ ಎಸ್‌ಸಿ/ಎಸ್‌ಟಿ ಘಟಕದ ಉಪಾಧ್ಯಕ್ಷರಾಗಿದ್ದ ವಿಜಯ್‌ ತಂದೆ ಮಾರಹನುಮಯ್ಯ (48), 2016ರ ಜೂನ್ 27ರಂದು ಕೆಂಗೇರಿಯ ಶೆಲ್ ಪೆಟ್ರೋಲ್ ಬಂಕ್ ಬಳಿ ಕೊಲೆಯಾಗಿದ್ದರು. ಈ ಸಂಬಂಧ ಪೊಲೀಸರು ರಾಮೋಹಳ್ಳಿಯ ಕಿರಣ್‌ ಅಲಿಯಾಸ್ ತಮಟೆ, ಸುನೀಲ್ ಅಲಿಯಾಸ್ ಸಿಲಿಂಡರ್, ಚೇತನ್ ಹಾಗೂ ಪ್ರವೀಣ್ ಅಲಿಯಾಸ್ ಸುಬ್ಬ ಎಂಬುವರನ್ನು ಬಂಧಿಸಿದ್ದರು. ಸದ್ಯ ಆರೋಪಿಗಳೆಲ್ಲ ಜೈಲಿನಲ್ಲಿದ್ದಾರೆ.

‘ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುವಂತೆ ಇತ್ತೀಚೆಗೆ ನ್ಯಾಯಾಲಯದಿಂದ ಸಮನ್ಸ್ ಬಂದಿತ್ತು. ಹೇಗೋ ಆ ವಿಚಾರ ತಿಳಿದುಕೊಂಡ ಆರೋಪಿಗಳು, ಜೈಲಿನಲ್ಲೇ ಇರುವ ಶ್ರೀನಿವಾಸ್‌ನ ಮೂಲಕ ಬೆದರಿಕೆ ಹಾಕಿಸಿದ್ದಾರೆ’ ಎಂದು ವಿಜಯ್‌ಕುಮಾರ್ ದೂರಿನಲ್ಲಿ ಹೇಳಿದ್ದಾರೆ.

‘ಫೆ.7ರಂದು ಶ್ರೀನಿವಾಸ್‌ ಫೇಸ್‌ಬುಕ್‌ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ. ಆತನ ಗೆಳೆತನವನ್ನು ಒಪ್ಪಿಕೊಳ್ಳುತ್ತಿದ್ದಂತೆಯೇ ಸಂದೇಶಗಳು ಬರಲು ಶುರುವಾದವು. ‘ನಿನ್ನ ತಂದೆಯ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಸುನೀಲ್‌ ನನ್ನ ಬಾಮೈದ. ಆತನ ವಿರುದ್ಧ ಸಾಕ್ಷಿ ಹೇಳಬೇಡ. ಬಿಡುಗಡೆಯಾಗಿ ಬಂದ ಬಳಿಕ ನಿನ್ನನ್ನು ಭೇಟಿ ಮಾಡುತ್ತೇವೆ. ಯಾವುದಾದರೂ ಒಂದು ಒಪ್ಪಂದ ಮಾಡಿಕೊಂಡು ಬಿಡೋಣ’ ಎಂದು ಮನವಿ ಮಾಡಿದ. ಅದಕ್ಕೆ ಒಪ್ಪದಿದ್ದಾಗ, ಮೂರು ವಾಯ್ಸ್‌ ರೆಕಾರ್ಡ್‌ಗಳನ್ನು ಕಳುಹಿಸಿದ.’

‘ಸಾಕ್ಷಿ ನುಡಿದರೆ ಕೊಲೆ ಮಾಡುವುದಾಗಿ ರೆಕಾರ್ಡ್‌ನಲ್ಲಿ ಹೇಳಿದ್ದಾನೆ. ಹೀಗಾಗಿ, ನನಗೆ ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು. ಬೆದರಿಕೆ ಹಾಕಿದ ಆರೋಪಿ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಶ್ರೀನಿವಾಸ್ ಬೇರೊಂದು ಪ್ರಕರಣದಲ್ಲಿ ಆರು ತಿಂಗಳಿನಿಂದ ಜೈಲಿನಲ್ಲಿದ್ದಾನೆ. ಆತನ ಫೇಸ್‌ಬುಕ್ ಖಾತೆಯಿಂದಲೇ ವಿಜಯ್‌ಕುಮಾರ್‌ಗೆ ಬೆದರಿಕೆ ಸಂದೇಶಗಳು ಹೋಗಿರುವುದು ಸ್ಪಷ್ಟ. ಆದರೆ, ಆ ಖಾತೆಯನ್ನು ಶ್ರೀನಿವಾಸ್‌ನೇ ನಿರ್ವಹಣೆ ಮಾಡುತ್ತಿದ್ದಾನೆಯೇ ಎಂಬುದು ಖಚಿತವಾಗಬೇಕು. ಕಾರಾಗೃಹದಲ್ಲಿ ಅಷ್ಟು ಸುಲಭವಾಗಿ ಇಂಟರ್ನೆಟ್ ಬಳಕೆ ಮಾಡಲು ಸಾಧ್ಯವಿಲ್ಲ. ಹೀಗಾಗಿ, ಬಾಡಿ ವಾರಂಟ್ ಮೇಲೆ ಆತನನ್ನು ಸೋಮವಾರ ವಶಕ್ಕೆ ಪಡೆಯಲಿದ್ದೇವೆ’ ಎಂದು ಕೆಂಗೇರಿ ಪೊಲೀಸರು ಮಾಹಿತಿ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry