ಮಂಗಳವಾರ, ಡಿಸೆಂಬರ್ 10, 2019
21 °C

ಸ್ವಚ್ಛತೆ ಮರೀಚಿಕೆ: ತಪ್ಪದ ಜನರ ಆತಂಕ

ಕೆಂಪೇಗೌಡ ಎನ್. ವೆಂಕಟೇನಹಳ್ಳಿ Updated:

ಅಕ್ಷರ ಗಾತ್ರ : | |

ಸ್ವಚ್ಛತೆ ಮರೀಚಿಕೆ: ತಪ್ಪದ ಜನರ ಆತಂಕ

ಚಿಕ್ಕಬಳ್ಳಾಪುರ: ಇತ್ತೀಚೆಗೆ ಆರಂಭ ಗೊಂಡ ನಗರದ ನೂತನ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದ ಎದುರಿನ ಚರಂಡಿಯಲ್ಲಿ ದಿನೇ ದಿನೇ ತ್ಯಾಜ್ಯದ ರಾಶಿ ದೊಡ್ಡದಾಗುತ್ತಿದೆ. ಚರಂಡಿ ಈಗ ತಿಪ್ಪೆ ಸ್ವರೂಪ ಪಡೆದಿದೆ. ತ್ಯಾಜ್ಯ ವಿಲೇವಾರಿ ಮಾತ್ರ ನಡೆದಿಲ್ಲ.

ಬಸ್‌ ನಿಲ್ದಾಣದ ನಿರ್ಗಮನ ದ್ವಾರದ ಬಳಿ ಕಾಂಪೌಂಡ್ ಮುಂಭಾಗದ ಚರಂಡಿಯು ಸುತ್ತಲಿನ ಬಡಾವಣೆ ನಿವಾಸಿಗಳು, ಅಂಗಡಿಗಳ ವರ್ತಕರಿಗೆ ಕಸ ಸುರಿಯುವ ತೊಟ್ಟಿ ಯಾಗಿದೆ. ಕಸ ತುಂಬಿಕೊಂಡು ಅಸಹ್ಯಕರ, ಅನಾರೋಗ್ಯಕರ ವಾತಾವರಣ ಸುತ್ತಲಿನ ಪರಿಸರವನ್ನೂ ಹಾಳು ಮಾಡಿದೆ. ಕೊಳಚೆ, ಮಳೆ ನೀರು ಹರಿಸುವ ಚರಂಡಿ ಮುಚ್ಚಿ ಕಸದ ತೊಟ್ಟಿಯಾಗಿ ಬದಲಾಗಿದೆ.

ನಗರದ ಪ್ರಮುಖ ರಸ್ತೆಯಲ್ಲಿ ಗಬ್ಬೆದ್ದು ನಾರುವ ಕಸದ ರಾಶಿ ನಿಲ್ದಾಣದ ಸೌಂದರ್ಯಕ್ಕೆ ಕುಂದು ತಂದಿದೆ. ಜತೆಗೆ ಸಮೀಪದ ಮಳಿಗೆಯ ವ್ಯಾಪಾರಸ್ಥರು ಮತ್ತು ಗ್ರಾಹಕರಿಗೆ ಕಿರಿಕಿರಿಯಾಗಿದೆ. ನಿಲ್ದಾಣಕ್ಕೆ ಇದೇ ದಾರಿಯಲ್ಲಿ ನಿತ್ಯ ಸಾವಿರಾರು ಜನರು ಓಡಾಡುತ್ತಾರೆ. ಬಸ್‌ ನಿಲ್ದಾಣದ ಎದುರು ಜಿಲ್ಲಾ ಗ್ರಂಥಾಲಯವಿದೆ. ಇಲ್ಲಿಗೂ ಜನ ಬರುವರು. ಜನದಟ್ಟಣೆ ಪ್ರದೇಶದಲ್ಲಿ ಸಮಸ್ಯೆ ಸೃಷ್ಟಿಯಾಗಿದೆ. ನಗರಸಭೆಯ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿ ಎನ್ನುವುದು ಜನರ ಆರೋಪ.

‘ಮಾತೆತ್ತಿದ್ದರೆ ನಗರಕ್ಕೆ ₹ 100 ಕೋಟಿ ತಂದಿದ್ದೇವೆ ಎಂದು ಕೂಗು ಹಾಕುವವರು ಮೊದಲು ಇಂತಹ ಸಣ್ಣ, ಸಣ್ಣ ಸಮಸ್ಯೆಗಳನ್ನು ಬಗೆಹರಿಸಲಿ. ಇಲ್ಲದಿದ್ದರೆ ನಾಳೆ ಇದೇ ದೊಡ್ಡ ಸ್ವರೂಪ ಪಡೆದು ಊರವರೆಲ್ಲ ಕಸ ಸುರಿಯುವಂತಾಗುತ್ತದೆ. ನಗರದಲ್ಲಿ ಎಲ್ಲಿ ನೋಡಿದರೂ ಸ್ವಚ್ಛತೆ ಮರೀಚಿ ಕೆಯಾಗಿದೆ’ ಎಂದು ವಾಪಸಂದ್ರ ನಿವಾಸಿ ಅವಿನಾಶ್‌ ಬೇಸರ ವ್ಯಕ್ತಪಡಿಸಿದರು.

‘ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಬಸ್‌ ನಿಲ್ದಾಣ ನಿರ್ಮಿಸಲಾಗಿದೆ. ಅದು ಆರಂಭಗೊಂಡ ಕೆಲವೇ ದಿನಗಳಲ್ಲಿ ಅದರ ಮುಂದೆ ಕಸ ಸುರಿಯಲಾಗುತ್ತಿದೆ. ಇದೇ ಪರಿಸ್ಥಿತಿ ಹೀಗೆ ಮುಂದುವರಿದರೆ ನಾಳೆ ನಿಲ್ದಾಣದ ಒಳಗೂ ಕಸ ಸುರಿಯು ತ್ತಾರೆ. ಇದಕ್ಕೆ ಈಗಲೇ ಕಡಿವಾಣ ಹಾಕಬೇಕು. ನಗರಸಭೆ ಮತ್ತು ಕೆ.ಎಸ್‌.ಆರ್‌.ಟಿ.ಸಿ ಅಧಿಕಾರಿಗಳು ತುರ್ತಾಗಿ ಇತ್ತ ಗಮನ ಹರಿಸಬೇಕು’ ಎಂದು ಹೋಟೆಲ್‌ ಮಾಲೀಕ ನಂದೀಶ್‌ ಆಗ್ರಹಿಸುವರು.

‘ನಗರಸಭೆಯವರು ಕಾಟಾಚಾರಕ್ಕೆ ಎಂಬಂತೆ ನಗರದಲ್ಲಿ ಪ್ರಮುಖ ಸ್ಥಳಗಳಲ್ಲಿ ಕಸ ವಿಲೇವಾರಿ ಮಾಲಾಗುತ್ತಿದೆ. ಅದರೆ ಅಲ್ಲಿಯೂ ಕಸ ಹಾಗೇ ಬಿದ್ದಿರುತ್ತದೆ. ಸಮರ್ಪಕ ನಿರ್ವಹಣೆ ಇಲ್ಲದೆ ಕಸ ದಾರಿಯಲ್ಲಿ ಓಡಾಡುವವರಿಗೆ ಮೆತ್ತಿಕೊಳ್ಳುತ್ತದೆ. ಇಂತಹವರಿಂದ ಸ್ವಚ್ಛ ಭಾರತ ಕನಸು ನನಸಾಗುವ ನಿರೀಕ್ಷೆ ಇಲ್ಲ. ನಿಲ್ದಾಣದ ಬಳಿ ನಗರಸಭೆ ಅಧಿಕಾರಿಗಳು ಒಮ್ಮೆ ಭೇಟಿ ನೀಡಿ ಇಲ್ಲಿನ ಸ್ಥಿತಿ ನೋಡಲಿ. ಸ್ಥಳೀಯರ ಸಮಸ್ಯೆ ಅರಿವಾಗುತ್ತದೆ’ ಎಂದು ಹೇಳಿದರು.

‘ನಿಲ್ದಾಣದ ಬಳಿ ಕಸ ಸುರಿಯು ವವರಿಗೆ ಭಯವೇ ಇಲ್ಲದಂತಾಗಿದೆ. ಹೀಗಾಗಿ ಇಲ್ಲಿನ ಬಹುತೇಕ ತಳ್ಳುಗಾಡಿ ವರ್ತಕರು, ಅಂಗಡಿಯವರು ಕಸವನ್ನು ತಂದು ನಿಲ್ದಾಣದ ಎದುರಿನ ಚರಂಡಿಯಲ್ಲಿ ರಾಜಾರೋಷವಾಗಿ ಸುರಿದು ಹೋಗುತ್ತಿದ್ದಾರೆ. ಇಲ್ಲಿ ಕಸ ಸುರಿಯುವುದು ತಪ್ಪಿಸಬೇಕು ಅಥವಾ ಕಸ ಹಾಕಲು ದೊಡ್ಡ ತೊಟ್ಟಿ ಇಟ್ಟು ಅದನ್ನು ನಿತ್ಯ ವಿಲೇವಾರಿ ಮಾಡುವ ವ್ಯವಸ್ಥೆ ರೂಪಿಸಬೇಕು. ಎಂದು ಸ್ಥಳೀಯ ನಿವಾಸಿ ನರಸಿಂಹಮೂರ್ತಿ ತಿಳಿಸಿದರು.

‘ನಿಲ್ದಾಣದ ಸಮೀಪ ಖಾಸಗಿ ವಾಹನ ಗಳು ಸುಳಿಯದಂತೆ ನಿಗಾ ಇಡುವ ಕೆ.ಎಸ್‌.ಆರ್‌.ಟಿ.ಸಿ ಅಧಿ ಕಾರಿಗಳು, ಕಾಂಪೌಂಡ್‌ ಮುಂದೆ ಕಸ ಸುರಿಯದಂತೆ ತಡೆಯಲು ಗಮನ ನೀಡಬೇಕು. ಈಗ ಸ್ವಚ್ಛತೆ ಕಾಪಾಡದಿದ್ದರೆ ಮುಂದೆ ನಿಯಂತ್ರಿಸುವುದು ಕಷ್ಟವಾಗುವುದು. ಅದೇ ರೀತಿ ಎಲ್ಲೆಂದರಲ್ಲಿ ಗೋಡೆಗಳ ಮೇಲೆ ಭಿತ್ತಿಪತ್ರ ಅಂಟಿಸುವುದಕ್ಕೂ ಕಡಿವಾಣ ಹಾಕಬೇಕಿದೆ’ ಎಂದು ಗಂಗಮ್ಮನಗುಡಿ ರಸ್ತೆ ನಿವಾಸಿ ಜಿ. ಚಂದ್ರಶೇಖರ್‌ ಹೇಳುವರು.

* * 

ನಗರಸಭೆಯವರು ಪುಸ್ತಕದ ದಾಖಲೆಗಾಗಿ ಸ್ವಚ್ಛ ಭಾರತ ಕಾರ್ಯಕ್ರಮ ನಡೆಸುತ್ತಾರೆ. ವಾಸ್ತವಾಗಿ ನಗರದ ಎಲ್ಲ ರಸ್ತೆಗಳ ಬದಿ ಕಸದ ರಾಶಿ ಕಣ್ಣಿಗೆ ರಾಚುತ್ತದೆ

ನಂದೀಶ್‌ ಹೋಟೆಲ್‌ ಮಾಲೀಕ

ಪ್ರತಿಕ್ರಿಯಿಸಿ (+)